ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನಿಗೂಢ ಸಾವು ಪ್ರಕರಣದ ತನಿಖೆ ತ್ವರಿತಗೊಳಿಸುವಂತೆ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಡಿ.ಎಸ್‌.ಅರುಣ್‌ ಆಗ್ರಹಿಸಿದ್ದಾರೆ. ಸುಳ್ಳು ಆರೋಪಗಳಿಂದ ಹಿಂದೂ ಭಕ್ತರ ಭಾವನೆಗೆ ಧಕ್ಕೆಯಾಗಿದ್ದು, ಧರ್ಮವಿರೋಧಿ ಶಕ್ತಿಗಳ ಕೃತ್ಯ ಇದಾಗಿದೆ ಎಂದು ಆರೋಪಿಸಿದ್ದಾರೆ.

ವಿಧಾನ ಪರಿಷತ್: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ನಿಗೂಢ ಸಾವು ಪ್ರಕರಣವನ್ನು ಬಿಜೆಪಿ ಸದಸ್ಯ ಡಿ.ಎಸ್‌.ಅರುಣ್‌ ಅವರು ಸೋಮವಾರ ಸದನದಲ್ಲಿ ಪ್ರಸ್ತಾಪಿಸಿ, ಸರ್ಕಾರ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿ ಆರೋಪದ ಹಿಂದಿರುವ ನಿಜ ಸ್ವರೂಪ ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರ ಧರ್ಮಸ್ಥಳ ಲಕ್ಷಾಂತರ ಹಿಂದು ಭಕ್ತರ ಭಾವನೆಯ ಕೇಂದ್ರವಾಗಿದೆ. ಇಂತಹ ಪವಿತ್ರ ಸ್ಥಳದ ವಿರುದ್ಧ ಅನಾಮಿಕ ವ್ಯಕ್ತಿಯೊಬ್ಬ ದೃಢ ಸಾಕ್ಷ್ಯಾಧಾರವಿಲ್ಲದೆ ಮಾಡಿರುವ ಆರೋಪವು ಕೆಲ ಮಾಧ್ಯಮಗಳಲ್ಲಿ, ಡಿಜಿಟಲ್‌ ವೇದಿಕೆಗಳಲ್ಲಿ ವರದಿಯಾಗಿದೆ. ಇಂತಹ ಸಂಗತಿ ಖಂಡನೀಯ. ಇದರಿಂದ ಹಿಂದು ಸಮಾಜದ ಭಾವನೆಗೆ ಅವಮಾನವಾಗಿದೆ ಎಂದರು.

ಸುಳ್ಳು ಮತ್ತು ದುರುದ್ದೇಶಪೂರ್ವಕ ಆರೋಪಗಳಿಂದ ಸನಾತನ ಧರ್ಮದ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡುವುದು ಧರ್ಮವಿರೋಧಿ ಶಕ್ತಿಗಳ ಹಳೆಯ ಕ್ರಮ. ಧರ್ಮಸ್ಥಳದ ಹೆಗ್ಗಳಿಕೆ ಹಾಳು ಮಾಡುವ ಯತ್ನಗಳು ನಡೆಯುತ್ತಾ ಬಂದಿವೆ. ಜನರ ಭಕ್ತಿ ಭಾವಗಳಿಗೆ ಧಕ್ಕೆಯುಂಟು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿರಬೇಕು. ತನಿಖೆ ತ್ವರಿತಗೊಳಿಸಿ ಆರೋಪದ ಹಿಂದಿರುವ ನಿಜ ಸ್ವರೂಪ ಬಹಿರಂಗಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.