ಬಿಜೆಪಿಯವರು 4 ವರ್ಷ ಅಧಿಕಾರದಲ್ಲಿದ್ರು, ಮೊನ್ನೆವರೆಗೂ ಅವರೇ ಇದ್ರು. ಯಾಕೆ ಸರಿಯಾದ ತನಿಖೆ ಮಾಡಿಸಲಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬೆಂಗಳೂರು (ಆ.11): ನಮ್ಮ ಸರ್ಕಾರ ಅತ್ಯಂತ ಪಾರದರ್ಶಕವಾಗಿದೆ. ಈ ಹಿಂದೆ ಇದನ್ನು ಸಿಬಿಐ ತನಿಖೆಗೆ ಕೊಡಲಾಗಿತ್ತು. ಈಗ SIT ಕೊಡಲಾಗಿದೆ ಎಂದು ಧರ್ಮಸ್ಥಳ ವಿಚಾರವಾಗಿ ಕಾಂಗ್ರೆಸ್ ಬಗ್ಗೆ ಬಿಜೆಪಿ ಆರೋಪ ಮಾಡಿರುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಬಿಜೆಪಿಯವರು 4 ವರ್ಷ ಅಧಿಕಾರದಲ್ಲಿದ್ರು, ಮೊನ್ನೆವರೆಗೂ ಅವರೇ ಇದ್ರು. ಯಾಕೆ ಸರಿಯಾದ ತನಿಖೆ ಮಾಡಿಸಲಿಲ್ಲ?. ಈಗ ತನಿಖೆ ಆಗ್ತಾ ಇದೆ, ಈಗ ಅದರ ಬಗ್ಗೆ ಮಾತಾಡೋದು ಸರಿಯಲ್ಲ. ಬಿಜೆಪಿಯವರ ಮಾತಿಗೆ ಬೆಲೆ ಕೊಡೋಕೆ ಹೋಗ್ಬೇಡಿ. ತನಿಖೆ ಆಗ್ತಿರುವಾಗ ಅದರ ಬಗ್ಗೆ ಮಾತಾಡೋದು ತಪ್ಪಾಗುತ್ತೆ. ತನಿಖೆ ಆಗಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಹೇಳಿದರು.
ಮತಕಳ್ಳತನದ ಬಗ್ಗೆ ರಾಹುಲ್ ಗಾಂಧಿ ದಾಖಲೆ ಸಮೇತ ಹೇಳಿದ್ದಾರೆ. ಕೊಟ್ಟಿರುವ ದಾಖಲೆ ಪರಿಶೀಲಿಸಿ ಕ್ರಮತೆಗೆದುಕೊಳ್ತೇವೆ ಎಂದಿದ್ರು. ಅದನ್ನ ಬಿಟ್ಟು ಈಗ ನಮಗೆ ನೋಟೀಸ್ ಕೊಟ್ಟಿದ್ದಾರೆ. ದೇಶದಲ್ಲಿ ಸ್ವಾಯತ್ತ ಸಂಸ್ಥೆಯ ದುರುಪಯೋಗ ಆಗ್ತಿದೆ. ಇಡಿ, ಐಟಿ, ಎಲೆಕ್ಷನ್ ಕಮೀಷನ್ ದುರುಪಯೋಗ ಆಗ್ತಿದೆ. ಆ ಸಂಸ್ಥೆಗಳಿಗೆ ಇವರೇ ಅಲ್ಲವಾ ನೇಮಕ ಮಾಡೋದು. ಟಿ ಎನ್ ಶೇಷನ್ ಅವರು ಈ ಹಿಂದೆ ಇದ್ರು. ಅವರು ಚುನಾವಣೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ರು. ಅವರಂತಹ ಅಧಿಕಾರಿಗಳಿರಬೇಕು. ಅಂತವರಿದ್ದರೆ ಪಕ್ಷಾತೀತವಾಗಿ ನಡೆದುಕೊಳ್ತಾರೆ ಎಂದರು. ಒಳಮೀಸಲಾತಿ ಅನುಷ್ಠಾನ ವಿಚಾರವಾಗಿ ಆಗಸ್ಟ್ 16ರಂದು ಕ್ಯಾಬಿನೆಟ್ ಇದೆ. ಈ ಒಂದೇ ವಿಚಾರವಾಗಿ ಅಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಬಿಜೆಪಿ ನಾಯಕರಿಗೆ ಪ್ರಚಾರದ ಹುಚ್ಚು ಜಾಸ್ತಿ: ಬಿಜೆಪಿ ನಾಯಕರಿಗೆ ಕೆಲಸಕ್ಕಿಂತ ಪ್ರಚಾರದ ಹುಚ್ಚು ಆಸ್ತಿ. ಏನೂ ಮಾಡದಿದ್ದರೂ ಪ್ರಚಾರ ಪಡೆಯುತ್ತಾರೆ. ಬೇರೆಯವರ ಕೆಲಸ ತಾವೇ ಮಾಡಿದ್ದಾಗಿ ಹೇಳುತ್ತಾರೆ. ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲೂ ಅದನ್ನೇ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು ಇಡೀ ಮೆಟ್ರೋ ಯೋಜನೆಯನ್ನೇ ಕೇಂದ್ರದ ಬಿಜೆಪಿ ಸರ್ಕಾರ ಮಾಡಿದೆ ಎಂದು ಪ್ರಚಾರ ಮಾಡುತ್ತಾ, ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಆದರೆ, 2006ರಲ್ಲಿ ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಶಂಕುಸ್ಥಾಪನೆ ನೆರವೇರಿಸಿದ್ದರು. ಮೆಟ್ರೋ ಸಂಸ್ಥೆ ಯಾವುದೇ ಪಕ್ಷದ ಸ್ವತ್ತಲ್ಲ. ಆದರೆ, ಬಿಜೆಪಿ ನಾಯಕರಿಗೆ ಪ್ರಚಾರ ಹುಚ್ಚಿದ್ದು, ಕೆಲಸ ಮಾಡದಿದ್ದರೂ ಪ್ರಚಾರ ಪಡೆಯುತ್ತಾರೆ ಎಂದರು.
ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲು ದೊಡ್ಡದಿದೆ. ಮೆಟ್ರೋ 1ನೇ ಹಂತದಲ್ಲಿ ರಾಜ್ಯ ಸರ್ಕಾರ ಭೂಮಿ ಸೇರಿ ಶೇ.30ರಷ್ಟು ಅನುದಾನ ನೀಡಿದೆ. ಇನ್ನು ಕೇಂದ್ರ ಸರ್ಕಾರ ಶೇ.25 ಮತ್ತು ಉಳಿದ ಶೇ.45ರಷ್ಟು ಹಣವನ್ನು ಸಾಲದ ರೂಪದಲ್ಲಿ ಬಿಎಂಆರ್‌ಸಿಎಲ್ ಪಡೆದಿತ್ತು. ಉಳಿದೆರಡು ಹಂತದ ಯೋಜನೆಯಲ್ಲೂ ರಾಜ್ಯ ಸರ್ಕಾರ ಭೂಮಿ ಜತೆಗೆ ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಅನುದಾನ ನೀಡಿದೆ. ಮೆಟ್ರೋ ಯೋಜನೆಗೆ ಈವರೆಗೆ ರಾಜ್ಯ ಸರ್ಕಾರ 24 ಸಾವಿರ ಕೋಟಿ ರು. ನೀಡಿದ್ದರೆ, ಕೇಂದ್ರ ಸರ್ಕಾರ 17,803 ಕೋಟಿ ರು. ಮತ್ತು 4.35 ಲಕ್ಷ ಕೋಟಿ ರು. ಸಾಲದ ರೂಪದಲ್ಲಿ ಪಡೆಯಲಾಗಿದೆ. ಮೆಟ್ರೋ ಸಂಸ್ಥೆ ಯೋಜನೆಗಾಗಿ ಪಡೆದಿರುವ ಸಾಲಕ್ಕೆ ರಾಜ್ಯ ಸರ್ಕಾರ ಗ್ಯಾರಂಟಿ ನೀಡಿದೆ. ಬಿಎಂಆರ್‌ಸಿಎಲ್ ಸಾಲ ಮರು ಪಾವತಿಸದಿದ್ದರೆ ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ ಎಂದು ಹೇಳಿದರು.
