ದಸರಾ ಉದ್ಘಾಟನೆಗೆ ಆಯ್ಕೆಯಾದ ಬಗ್ಗೆ ಟೀಕಿಸಿದವರಿಗೆ ಸಾಹಿತಿ ಬಾನು ಮುಷ್ತಾಕ್ ತಿರುಗೇಟು ನೀಡಿದ್ದಾರೆ. ಕೋಟಿಗಟ್ಟಲೆ ಕನ್ನಡಿಗರ ಪ್ರೀತಿ-ಅಭಿಮಾನವನ್ನು ಪಡೆದಿರುವ ನಾನು, ಒಂದಿಬ್ಬರ ಟೀಕೆಗಳಿಗೆ ಉತ್ತರ ನೀಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ. ಜನರೇ ಇಂಥವರಿಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಹೇಳಿದರು.
ಹಾಸನ (ಆ.26): ಕೋಟಿಗಟ್ಟಲೆ ಕನ್ನಡಿಗರ ಪ್ರೀತಿ-ಅಭಿಮಾನವನ್ನು ಪಡೆದಿರುವ ನಾನು, ಒಂದಿಬ್ಬರ ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ಉತ್ತರ ನೀಡಬೇಕಾದ ಅಗತ್ಯವಿಲ್ಲ. ಜನರೇ ಇಂತಹ ಟೀಕೆಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಬಿಜೆಪಿಯಲ್ಲಿ ಮೈಸೂರು ಸಂಸದ ಯದುವೀರ್ ಅವರಂತಹ ಸುಸಂಸ್ಕೃತ, ವಿದ್ಯಾವಂತ ಮನಸ್ಸುಗಳು ಹೆಚ್ಚಾಗಬೇಕು ಎಂದು ದಸರಾ ಉದ್ಘಾಟನೆಗೆ ಆಯ್ಕೆಯಾದ ಬಗ್ಗೆ ಟೀಕಿಸಿದವರಿಗೆ ಸಾಹಿತಿ ಬಾನು ಮುಷ್ತಾಕ್ ಅವರು ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಟ್ಯಾಂತರ ಕನ್ನಡಿಗರು ಎಷ್ಟೊಂದು ಪ್ರೀತಿ ಅಭಿಮಾನ ಕೊಡ್ತಿದ್ದಾರೆ. ಒಬ್ಬರು ಅಥವಾ ಇಬ್ಬರ ನೆಗೆಟಿವಿಟಿಗೆ ಯಾಕೆ ಪ್ರತಿಕ್ರಿಯೆ ಕೊಡಬೇಕು. ಅದರ ಅಗತ್ಯ ಇಲ್ಲ ಎನ್ನಿಸುತ್ತದೆ. ಈ ಟೀಕೆಗೆ ಜನರೆ ಪ್ರತಿಕ್ರಿಯೆ ಕೊಡುತ್ತಾರೆ ಅಂತ ಹೇಳಿದ್ದೇನೆ. ರಾಜಕೀಯ ಮಾಡಲು ವಿರೋಧ ಪಕ್ಷ, ಆಡಳಿತ ಪಕ್ಷ ಇರಬೇಕು. ಆದರೆ ಯಾವ ವಿಚಾರದಲ್ಲಿ ರಾಜಕೀಯ ಮಾಡಬೇಕು, ಯಾವುದರಲ್ಲಿ ಮಾಡಬಾರದು ಎನ್ನುವ ಪ್ರಜ್ಞೆ ಸಕ್ರಿಯ ರಾಜಕಾರಣಿಗಳಿಗೆ ಇರಬೇಕಾಗುತ್ತದೆ ಎಂದು ಪರೋಕ್ಷವಾಗಿ ಟೀಕಾಕಾರರಿಗೆ ಚಾಟಿ ಬೀಸಿದರು.
ಬಿಜೆಪಿ ಪಕ್ಷದಲ್ಲಿ ಮೈಸೂರಿನ ಸಂಸದ ಯದುವೀರ್ ಅಂತಹವರ ಸಂತತಿ ಹೆಚ್ಚಾಗಲಿ ಎಂದು ಅಪೇಕ್ಷೆ ಪಡುತ್ತೇನೆ. ಒಂದು ಸಮತೋಲನದಿಂದ ವಿಷಯ ಅನ್ವೇಷಣೆ ಮಾಡಿ ಆ ಬಗ್ಗೆ ದ್ವಂದ್ವ ಇಲ್ಲದೆ ಹೇಳಿಕೆ ನೀಡಬೇಕು. ಅಂತಹ ವಿದ್ಯಾವಂತ ಸುಸಂಸ್ಕೃತ ಮನಸುಗಳಿಗೆ ಮಾತ್ರ ಸಾಧ್ಯ. ಬೂಕರ್ ಅಂತಹ ಪ್ರಶಸ್ತಿ ಸಿಗೋದು ಸುಲಭದ ಮಾತಲ್ಲ. ಅದರ ಬಗ್ಗೆಯೂ ಒಂದಿಬ್ಬರು ಬಹಳ ಕೇವಲವಾಗಿ ಮಾತನಾಡುತ್ತಾರೆ. ಅದರ ಬಗ್ಗೆ ನನಗೆ ಬೇಜಾರಿಲ್ಲ ಮಾತಾಡಲಿ. ಅವರವರ ಮಟ್ಟಕ್ಕೆ ತಕ್ಕಹಾಗೆ ಮಾತಾಡ್ತಾರೆ ಮಾತಾಡಲಿ ಎಂದು ಹೇಳಿದರು.
2023ರಲ್ಲಿ ಜನ ಸಾಹಿತ್ಯ ಸಮ್ಮೇಳನದ ದಲ್ಲಿ ನಾನು ಆಡಿದ ಮಾತಿನ ತುಣುಕು ಹಾಕಿ ನನ್ನ ವಿರುದ್ದ ಕೆಲವರು ಆರೋಪ ಮಾಡಿದ್ದಾರೆ. ಅಲ್ಲಿ ನಡೆದ ವಿಚಾರವೇ ಹಾಗಿತ್ತು. ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನ ದೂರ ಇಟ್ಟಿದ್ದಕ್ಕೆ ಆಯೋಜನೆಗೊಂಡಿದ್ದ ಸಮ್ಮೇಳನ ಅದು. ಅದರ ಅಧ್ಯಕ್ಷತೆವಹಿಸಿ ನಾನು ಮಾತಾಡಿದ್ದೇನೆ. ನನಗೆ ನೇರವಾಗಿ ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿ ಬಗ್ಗೆ ಮುಸ್ಲಿಂ ಅಲ್ಪ ಸಂಖ್ಯಾತರು, ದಲಿತರು, ಮಹಿಳೆಯರು ದನಿಯಾಗಿ ಮಾತಾಡಿದ್ದೇನೆ. ಅದರಲ್ಲಿ ಹೇಳಿರುವ ವಿಚಾರ ಎಲ್ಲರಿಗೂ ಅರ್ಥ ಆಗಿದೆ. ಹಾವೇರಿ ಸಮ್ಮೇಳನದಿಂದ ದೂರ ಇಟ್ಟಿರುವ ಅನೇಕ ಅಲ್ಪ ಸಂಖ್ಯಾತರನ್ನ ಎಲ್ಲಿ ನಿಲ್ಲಬೇಕು ಎನ್ನೋ ಅರ್ಥದಲ್ಲಿ, ದೂರ ನಿಲ್ಲಬೇಡಿ ಹತ್ತಿರ ನಿಲ್ಲಿ ಎನ್ನೊ ಆತ್ಮವಿಶ್ವಾಸದ ಸಂಕೇತವಾಗಿ ಹೇಳಿದ್ದೀನಿ ಎಂದು ಸ್ಪಷ್ಟನೆ ನೀಡಿದರು.
ಗೋಕಾಕ್ ಸಮಿತಿ ವರದಿ ಬಂದಾಗ ಹಾಸನದಲ್ಲಿ ದೊಡ್ಡ ಕಾರ್ಯಕ್ರಮ ನಡೆದಿತ್ತು. ಸಾಮಾನ್ಯ ಮಹಿಳೆಯಾಗಿ ಹೋಗಿದ್ದ ನಾನು, ಅಲ್ಲಿ ಮಾತನಾಡಲು ಯಾರು ತಮ್ಮ ಮಕ್ಕಳನ್ನ ಕನ್ನಡ ಶಾಲೆಗೆ ಕಳಿಸುತ್ತಿದ್ದೀರೊ ಅವರು ಮಾತ್ರ ಮಾತನಾಡಿ ಎಂದಿದ್ದರು. ಆಗ ಮಾತನಾಡಿದ ಏಕೈಕ ಮಹಿಳೆ ನಾನು. ವೇದಿಕೆಗೆ ಬಂದವಳು ನಾನೊಬ್ಬಳೆ. ಯಾಕೆಂದರೆ ನನ್ನ ಮೂವರು ಹೆಣ್ಣು ಮಕ್ಕಳು ಕನ್ನಡ ಶಾಲೆಯಲ್ಲಿ ಓದುತ್ತಿದ್ದರು. ಹಾಗಾಗಿ ನಾನು ಅಂದಿನ ಸಭೆಯಲ್ಲಿ ಮಾತನಾಡಿದ್ದು ನಾನು ಮಾತ್ರ. ಹಾಗಾಗಿ ನಾನು ಹೇಳಿದ ಮಾತು ತಿರುಚೊ ಅಗತ್ಯ ಇಲ್ಲ. ನನ್ನ ಮಾತನ್ನ ಸಹೃದಯದಿಂದ ಅರ್ಥ ಮಾಡಿಕೊಳ್ಳಬೇಕು ಎಂದರು.
ನಂಬಿದವರನ್ನು ಕನ್ನಡ ಯಾವತ್ತೂ ಕೈ ಬಿಡಲ್ಲ, ಇದಕ್ಕೆ ನಾನೇ ಸಾಕ್ಷಿ
ಕನ್ನಡದ ಜೊತೆಗಿನ ನನ್ನ ನಂಟನ್ನು ಸಂದೇಹಾಸ್ಪದವಾಗಿ ಬಿಂಬಿಸುವ ಕೆಲವರಿಗೆ ಯಾರು ಇದನ್ನ ಮುಂಚೂಣಿಗೆ ತರುತ್ತಿದ್ದಾರೋ ಅವರಿಗೆ ನಾನು ಹೇಳುತ್ತೇನೆ. ಕನ್ನಡವನ್ನು ನನ್ನಷ್ಟು ಪ್ರೀತಿಸಿ, ಕನ್ನಡವನ್ನ ನನ್ನಷ್ಟು ಬಳಕೆ ಮಾಡಿ. ಕನ್ನಡವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿನವರ ಬಾಯಲ್ಲಿ ಕನ್ನಡ ಎಂದು ಹೇಳಿಸುತ್ತಿದ್ದೇನೆ. ಅಲ್ಲಿ ಹೋಗಿ ಕನ್ನಡದ ಒಂದೊಂದು ಪುಟ ಓದುತ್ತಿದ್ದೇನೆ. ಅವರೂ ಬಾಯಿ ಬಿಟ್ಟು ಕೊಂಡು ನೋಡ್ತಾ ಇದಾರೆ. ನೀವೂ ಕೂಡ ಇಷ್ಟು ಸಾಧನೆ ಮಾಡಿದರೆ, ನಿಮಗೆ ನನ್ನಮೇಲೆ ಕೆಸರೆರೆಚಾಟ ಮಾಡಲು ಅರ್ಹತೆ ಸಿಗುತ್ತದೆ. ಇಲ್ಲದೆ ಹೋದರೆ ನಿಮ್ಮ ಯಾವುದೇ ಮಾತಿನಲ್ಲಿ ಸ್ಪಷ್ಟತೆ ಇರಲ್ಲ. ನಂಬಿದವರನ್ನು ಕನ್ನಡ ಯಾವತ್ತೂ ಕೈ ಬಿಡಲ್ಲ, ಇದಕ್ಕೆ ನಾನೇ ಸಾಕ್ಷಿ ಎಂದು ಸಾಹಿತಿ ಬಾನು ಮುಷ್ತಾಕ್ ಹೇಳಿದರು.
