ಬಾನು ಮುಷ್ತಾಕ್ ಅವರ ದಸರಾ ಉದ್ಘಾಟನೆ ಆಯ್ಕೆ ಕುರಿತು ಯದುವೀರ್ ಒಡೆಯರ್ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ತಾಯಿ ಭುವನೇಶ್ವರಿ ಮತ್ತು ಚಾಮುಂಡೇಶ್ವರಿ ಬಗ್ಗೆ ಗೌರವ ಸ್ಪಷ್ಟಪಡಿಸುವಂತೆ ಮುಷ್ತಾಕ್ ಅವರಿಗೆ ಒತ್ತಾಯಿಸಿದ್ದಾರೆ.
ಬೆಂಗಳೂರು: ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಯದುವೀರ್ ಒಡೆಯರ್ ಮತ್ತೊಮ್ಮೆ ಸ್ಪಷ್ಟನೆಯನ್ನು ನೀಡಿದ್ದಾರೆ. ತಾಯಿ ಭುವನೇಶ್ವರಿ ಮತ್ತು ತಾಯಿ ಚಾಮುಂಡೇಶ್ವರಿಯ ಬಗ್ಗೆ ಅವರ ಗೌರವವನ್ನು ಶ್ರೀಮತಿ ಮುಷ್ತಾಕ್ ಸ್ಪಷ್ಟಪಡಿಸುವುದು ಸೂಕ್ತವಾಗಿದೆ ಎಂದು ಯದುವೀರ್ ಒಡೆಯರ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಬಾನು ಮುಷ್ತಾಕ್ ಆಯ್ಕೆಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಮೈಸೂರು ರಾಜಮನೆತನದವರಾಗಿರುವ ಯದುವೀರ್ ಒಡೆಯರ್, ಈ ಹಿಂದಿನ ಹೇಳಿಕೆ ಕುರಿತು ಬಾನು ಮುಷ್ತಾಕ್ ಸ್ಪಷ್ಟನೆ ನೀಡಲಿ ಎಂದು ಎಕ್ಸ್ ಖಾತೆ ಮೂಲಕ ಒತ್ತಾಯಿಸಿದ್ದಾರೆ.
ಯದುವೀರ್ ಒಡೆಯರ್ ಪೋಸ್ಟ್ ಹೀಗಿದೆ
ಶ್ರೀಮತಿ ಭಾನು ಮುಷ್ತಾಕ್ ಅವರು ವಿಶಿಷ್ಟ ಬರಹಗಾರ್ತಿ ಮತ್ತು ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡ ಲೇಖಕಿಯಾಗಿ, ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಹೆಮ್ಮೆಯನ್ನು ತಂದಿದ್ದಾರೆ. ಆದಾಗ್ಯೂ, ತಾಯಿ ಭುವನೇಶ್ವರಿಯ ಬಗ್ಗೆ ಅವರು ಹಿಂದಿನ ಕೆಲವು ಹೇಳಿಕೆಗಳನ್ನು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದಿದ್ದಾರೆ
ದಸರಾ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಬದಲಾಗಿ ಶಾಸ್ತ್ರ ಮತ್ತು ಪುರಾಣಗಳಲ್ಲಿ ಬೇರೂರಿರುವ ಮತ್ತು ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ಸಂಸ್ಥಾನದ ಕಾಲದಿಂದಲೂ ವೈಭವದಿಂದ ಆಚರಿಸಲ್ಪಡುವ ಹಿಂದೂ ಧಾರ್ಮಿಕ ಉತ್ಸವವಾಗಿದೆ. ಈ ಪವಿತ್ರ ಪರಂಪರೆಯನ್ನು ಗಮನಿಸಿದರೆ, ಈ ವರ್ಷದ ದಸರಾ ಆಚರಣೆಯ ಮುಖ್ಯ ಅತಿಥಿಯಾಗಿ ಅಧ್ಯಕ್ಷತೆ ವಹಿಸುವ ಮೊದಲು ತಾಯಿ ಭುವನೇಶ್ವರಿ ಮತ್ತು ತಾಯಿ ಚಾಮುಂಡೇಶ್ವರಿಯ ಬಗ್ಗೆ ಅವರ ಗೌರವವನ್ನು ಶ್ರೀಮತಿ ಮುಷ್ತಾಕ್ ಸ್ಪಷ್ಟಪಡಿಸುವುದು ಸೂಕ್ತವಾಗಿದೆ ಎಂದು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಶ್ರೀಮತಿ ಭಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ಬರಹಗಾರ್ತಿ ಮತ್ತು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡ ಲೇಖಕಿಯಾಗಿ, ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಹೆಮ್ಮೆಯನ್ನು ತಂದಿದ್ದಾರೆ ನಿಜ ಆದರೆ ಈ ಹಿಂದೆ ಕನ್ನಡ ತಾಯಿ ಭುವನೇಶ್ವರಿಯ ಬಗ್ಗೆ ಅವರು ಕೆಲವು ಹೇಳಿಕೆಗಳನ್ನು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ.
ದಸರಾ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಬದಲಾಗಿ ಶಾಸ್ತ್ರ ಮತ್ತು ಪುರಾಣಗಳಲ್ಲಿ ಉಲ್ಲೇಖಗೊಂಡಿರುವ ಮತ್ತು ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ಸಂಸ್ಥಾನದ ಕಾಲದಿಂದಲೂ ವೈಭವದಿಂದ ಆಚರಿಸಲ್ಪಡುವ ಹಿಂದೂ ಧಾರ್ಮಿಕ ಉತ್ಸವವಾಗಿದೆ. ಈ ಪವಿತ್ರ ಪರಂಪರೆಯನ್ನು ಗಮನಿಸಿದರೆ, ಈ ವರ್ಷದ ದಸರಾ ಆಚರಣೆಯ ಮುಖ್ಯ ಅತಿಥಿಯಾಗಿ ಉದ್ಘಾಟಿಸುವ ಮೊದಲು ಅವರು ತಾಯಿ ಭುವನೇಶ್ವರಿ ಮತ್ತು ತಾಯಿ ಚಾಮುಂಡೇಶ್ವರಿಯ ಬಗ್ಗೆ ಅವರ ಗೌರವವನ್ನು ಶ್ರೀಮತಿ ಭಾನು ಮುಷ್ತಾಕ್ ಸ್ಪಷ್ಟಪಡಿಸುವುದು ಈ ಸಮಯದಲ್ಲಿ ಅತ್ಯಂತ ಅಗತ್ಯ.
ಈ ಮೊದಲು ಹೇಳಿದ್ದೇನು?
ಬಾನು ಮುಷ್ತಾಕ್ ಕನ್ನಡ ಭಾಷೆಗೆ ನೀಡಿದ ಕೊಡುಗೆ ಅಪಾರ. ಸಾಮಾಜಿಕ ಹೋರಾಟವನ್ನು ಕೂಡ ಬಾನು ಮುಷ್ತಾಕ್ ಮಾಡಿದ್ದಾರೆ. ಬಾನು ಮುಷ್ತಾಕ್ ದಸರಾಗೆ ಆಹ್ವಾನ ನೀಡಿರುವುದಕ್ಕೆ ಯಾವ ಸಮಸ್ಯೆಯೂ ಇಲ್ಲ. ಯಾವ ಭಿನ್ನಾಭಿಪ್ರಾಯ ಇಲ್ಲ. ದಸರಾ ಧಾರ್ಮಿಕ ಪರಂಪರೆ. ಈ ಪರಂಪರೆಯ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಉದ್ಘಾಟನೆ ಮಾಡಿದರೆ ನಮಗೆ ಯಾವ ಸಮಸ್ಯೆಯು ಇಲ್ಲ. ತಾಯಿ ಚಾಮುಂಡಿಗೆ ಬಾನು ಮುಷ್ತಾಕ್ ಗೌರವ ಕೊಡುತ್ತೇನೆ ಎಂದು ಹೇಳಿದ್ದರೆ ಅಲ್ಲಿಗೆ ನಮ್ಮದು ಸಮಸ್ಯೆ ಇಲ್ಲ. ಬೂಕರ್ ಪ್ರಶಸ್ತಿ ಗೆ ಪುಸ್ತಕ ಭಾಷಾಂತರ ಮಾಡಿದವರು ಕೂಡ ಕಾರಣ. ಹಾಗಾಗಿ ಅವರನ್ನು ಸಹ ದಸರಾಗೆ ಆಹ್ವಾನಿಸಿ ಎಂದು ಹೇಳಿದ್ದರು.
ದೀಪಾಬಸ್ತಿಯವರನ್ನೂ ಕೂಡ ಆಹ್ವಾನಿಸಬೇಕು. ದೀಪಾಬಸ್ತಿ ಕೊಡಗಿನ ಹೆಣ್ಣು ಮಗಳು, ಕೊಡಗಿನವರಿಗೆ ಅವಕಾಶಗಳು ಸಿಗುವುದೇ ಕಡಿಮೆ. ದೀಪಾಬಸ್ತಿಯವರಿಗೂ ಬೂಕರ್ ಪ್ರಶಸ್ತಿ ಲಭಿಸಿದೆ. ಬಾನು ಮುಷ್ತಾಕ್ ಅವರ ಕನ್ನಡ ಕೃತಿಯನ್ನು ದೀಪಾಬಸ್ತಿ ಇಂಗ್ಲಿಷ್ ಗೆ ಭಾಷಾಂತರ ಮಾಡಿದ್ದಾರೆ. ಇಬ್ಬರಿಗೂ ಬೂಕರ್ ಪ್ರಶಸ್ತಿ ಲಭಿಸಿದೆ. ಹಾಗಾಗಿ ದೀಪಾಬಸ್ತಿಯವರನ್ನು ಈ ಬಾರಿಯ ದಸರಾ ಮಹೋತ್ಸವದ ಉದ್ಘಾಟನೆಗೆ ಆಹ್ವಾನಿಸಬೇಕು ಎಂದು ಹೇಳಿದ್ದರು.
