ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡುವ ಭಾರತದ ನಿರ್ಧಾರದ ಬಗ್ಗೆ ಲೇಖನ ಪ್ರಶ್ನಿಸುತ್ತದೆ. ದೇಶಭಕ್ತಿ ಮತ್ತು ಕ್ರಿಕೆಟ್ ನಡುವಿನ ಸಂಘರ್ಷವನ್ನು ಚರ್ಚಿಸುತ್ತದೆ 

  • ವಿರಾಟ್‌ ಚಿರಾನಿಯಾ

ಲೇಖಕ, ಮೆಡಿಟೇಶನ್‌ ತರಬೇತುದಾರ

ಭೂಮಿ ಮೇಲಿನ ಸ್ವರ್ಗ ಎಂಬಂತಿರುವ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ಭೀಕರ ಹತ್ಯಾಕಾಂಡ ನಡೆಸಿ, 26 ಪ್ರವಾಸಿಗರನ್ನು ಹತ್ಯೆಗೈದಿದ್ದಾರೆ. ದೇಶದ ಜನರ ಮನಸ್ಸು ಕುದಿಯುತ್ತಿದೆ. ಉಗ್ರರ ನಿರ್ನಾಮಕ್ಕೆ ಹಾತೊರೆಯುತ್ತಿದೆ. ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನ ವಿರುದ್ಧ ಎಲ್ಲಾ ರೀತಿಯ ಸಂಬಂಧ ಕಡಿದುಕೊಳ್ಳಲು ಒತ್ತಾಯಿಸುತ್ತಿದ್ದಾರೆ. ಆದರೆ ಭಾರತ ಕ್ರಿಕೆಟ್‌ ತಂಡ ಮಾತ್ರ ಪಾಕಿಸ್ತಾನ ವಿರುದ್ಧ ಕ್ರಿಕೆಟ್‌ ಆಡಲು ಸಜ್ಜಾಗುತ್ತಿದೆ!

ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿವೆ. ಈ ಎರಡು ತಂಡಗಳು ಒಂದೇ ಗುಂಪಿನಲ್ಲಿದ್ದು, ಪರಸ್ಪರ ಆಡಿದರಷ್ಟೇ ಆಯೋಜಕರಿಗೆ ಲಾಭ. ಹೀಗಾಗಿ ಸಹಜ ಎಂಬಂತೆ ಗುಂಪು ಹಂತದಲ್ಲಿ ಸೆ.14ರಂದು ದುಬೈನಲ್ಲಿ ಭಾರತ-ಪಾಕಿಸ್ತಾನ ಸೆಣಸಾಡಲಿವೆ. ಬಳಿಕ ಸೂಪರ್‌-4 ಹಂತ, ಫೈನಲ್‌ಗೇರಿದರೆ ಅಲ್ಲೂ ಈ ಎರಡು ತಂಡಗಳು ಮುಖಾಮುಖಿಯಾಗಬಹುದು. ಅಂದರೆ ಒಂದೇ ಟೂರ್ನಿಯಲ್ಲಿ ಭಾರತ ತನ್ನ ಬದ್ಧವೈರಿ ಪಾಕಿಸ್ತಾನ ವಿರುದ್ಧ 3 ಬಾರಿ ಆಡಬಹುದು.

ಭಾರತದ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ಕೂಡ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡುವುದಕ್ಕೆ ಬೆಂಬಲ ಸೂಚಿಸಿದ್ದಾರೆ. ಹಲವು ಮಾಜಿ ಕ್ರಿಕೆಟಿಗರು, ತಜ್ಞರು ಬಿಸಿಸಿಐ ನಿರ್ಧಾರಕ್ಕೆ ಬದ್ಧ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ. ಕ್ರಿಕೆಟ್‌ ಬೇರೆ, ದೇಶವೇ ಬೇರೆ ಎಂದಿದ್ದಾರೆ. ಆದರೆ ಇವೆರಡೂ ಒಂದೇ ಆಗಲು ಹೇಗೆ ಸಾಧ್ಯ?

ಪಾಕ್‌ನೊಂದಿಗೆ ದ್ವಿಪಕ್ಷೀಯ ಕ್ರೀಡಾಕೂಟಕ್ಕೆ ಅವಕಾಶವಿಲ್ಲ ಎಂಬ ನೀತಿಯಲ್ಲಿ ಭಾರತ ಬದಲಾವಣೆ ಮಾಡಿಲ್ಲವಾದರೂ, ಭವಿಷ್ಯದಲ್ಲಿ ಜಾಗತಿಕ ಕ್ರೀಡಾಕೂಟ ಕ್ಷೇತ್ರದಲ್ಲಿ ಬಹುದೊಡ್ಡ ಆಯೋಜಕನಾಗಿ ಹೊರಹೊಮ್ಮಲು ಯೋಚಿಸುತ್ತಿರುವ, ಆದಷ್ಟು ಶೀಘ್ರ ಕಾಮನ್‌ವೆಲ್ತ್‌, ಒಲಿಂಪಿಕ್ಸ್ ಆಯೋಜನೆ ಕನಸು ಕಾಣುತ್ತಿರುವ ಭಾರತ, ಆ ಕನಸಿಗಾಗಿ ಮಡಿದ ಯೋಧರ ಕುಟುಂಬದ ಕಣ್ಣೀರನ್ನು ಬದಿಗೊತ್ತಿತೇ ಎಂಬ ಪ್ರಶ್ನೆಗಳು ದೇಶಾಭಿಮಾನಿಗಳಿಂದ ಕೇಳಿಬರುತ್ತಿದೆ. ಇನ್ನೊಂದೆಡೆ ಬಿಸಿಸಿಐ ಕೂಡ ಬ್ಲಡ್‌ ಮನಿಗೆ ಹಸಿದಿತ್ತೇ ಎಂಬ ಕಟು ಪ್ರಶ್ನೆಗಳನ್ನು ಎದುರಿಸುವಂತಾಗಿದೆ.

ಕ್ರಿಕೆಟ್‌ ಅನ್ನು ನಾನು ಇಷ್ಟಪಡುತ್ತೇನೆ. ಆದರೆ ನನ್ನ ಧರ್ಮ ದೇಶವೇ ಹೊರತು ಕ್ರಿಕೆಟ್‌ ಅಲ್ಲ. ದೇಶಕ್ಕಿಂತ ದೊಡ್ಡದು ಯಾವುದೂ ಅಲ್ಲ. ಗಡಿಯಲ್ಲಿ ನಮ್ಮ ಸೈನಿಕರು ಉಗ್ರರಿಂದ ಗುಂಡೇಟು ತಿಂದು ಹುತಾತ್ಮರಾಗುತ್ತಿದ್ದಾರೆ. ಅದೇ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನ ವಿರುದ್ಧ ಕ್ರಿಕೆಟ್‌ ಹೇಗೆ ಸಾಧ್ಯ? ಪಾಕಿಸ್ತಾನ ವಿರುದ್ಧ ಆಡಿ ಗೆದ್ದು, ಸಂಭ್ರಮಿಸಬಹುದು ಎಂದು ಸಮಜಾಯಿಷಿ ಕೊಡಬಹುದು ನೀವು. ಆದರೆ ಉಗ್ರರ ದಾಳಿಯನ್ನು ಖಂಡಿಸದ ಮತ್ತು ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಅದನ್ನು ಬೆಂಬಲಿಸಿದ ಪಾಕಿಸ್ತಾನದ ಆಟಗಾರರ ಜೊತೆ ಪಂದ್ಯ ಮುಗಿದು ಕೈ ಕುಲುಕಲು, ಫೋಟೋಗೆ ಪೋಸ್‌ ಕೊಡಲು ನಮ್ಮ ಆಟಗಾರರಿಗೆ ಸಾಧ್ಯವಾಗುತ್ತದೆಯಲ್ಲವೇ. ಇದು ಹೇಗೆ ಸಾಧ್ಯ? ದೇಶಕ್ಕಿಂತ ಕ್ರಿಕೆಟ್‌ ಬೇರೆ ಎಂದ ತಕ್ಷಣ ಇದೆಲ್ಲವೂ ಸರಿ ಎನಿಸುತ್ತದೆಯೇ?

ನಾವು ಪಾಕಿಸ್ತಾನ ಜೊತೆಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿದ್ದೇವೆ. ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿದ್ದೇವೆ. ಕ್ರಿಕೆಟ್‌ ಮಾತ್ರ ಯಾಕೆ ನಡೆಯುತ್ತಿರಬೇಕು? ದೇಶದ ಮೇಲಿನ ಬದ್ಧತೆಗಿಂತ ಕ್ರಿಕೆಟ್‌ ದೊಡ್ಡದಾಯಿತೇ? ಕ್ರಿಕೆಟ್‌ ಎಂಬುದು ಈಗ ವ್ಯಾಪಾರವಾಗಿರುವುದರಿಂದಲೇ ಅದು ನಡೆಯುತ್ತಿದೆ. ನಮಗೆ ಗಡಿಗೆ ಹೋಗಿ ಯುದ್ಧ ಮಾಡಲು ಸಾಧ್ಯವಿಲ್ಲ. ಆದರೆ ನಮ್ಮ ಸೈನಿಕರಿಗಾಗಿ ಕನಿಷ್ಠ ಭಾರತೀಯರಾಗಿ ಆದರೂ ಇರಲು ಸಾಧ್ಯವಿಲ್ಲವೇ? ಭಾರತೀಯರನ್ನು ಕೊಂದವರ ಜೊತೆಗೆ ಕ್ರಿಕೆಟ್‌ ಆಡುವುದನ್ನು ನೋಡಿ ನಮ್ಮ ಸೈನಿಕರಿಗೆ ಹೇಗಾಗಬಹುದು? ಎಲ್ಲಾ ತ್ಯಾಗವೂ ಸೈನಿಕರಿಗೆ ಮಾತ್ರ ಮೀಸಲಾಯಿತೇ? ನಾವೇನೂ ಮಾಡಲಿಕ್ಕಿಲ್ಲವೇ?

ಭಾರತೀಯ ಸೈನ್ಯದಲ್ಲಿ 25ರಿಂದ 30 ಲಕ್ಷ ಯೋಧರಿದ್ದಾರೆ. ಆದರೆ ಯಾರೊಬ್ಬರೂ ಕೂಡ ಪಾಕಿಸ್ತಾನ ವಿರುದ್ಧ ಆಡುವುದನ್ನು ಒಪ್ಪಲು ಸಾಧ್ಯವಿಲ್ಲ. 26 ಮಂದಿ ಪ್ರವಾಸಿಗರನ್ನು ಹತ್ಯೆಗೈದಿದ್ದಕ್ಕೆ ಭಾರತ ‘ಆಪರೇಷನ್‌ ಸಿಂದೂರ’ ನಡೆಸಿದೆ. ಉಗ್ರರ ವಿರುದ್ಧ ಕಾರ್ಯಾಚರಣೆ ಈಗಲೂ ನಡೆಯುತ್ತಿದೆ. ಆದರೆ ಬಿಸಿಸಿಐ ಮಾತ್ರ ಪಾಕಿಸ್ತಾನದ ಜೊತೆ ಕ್ರಿಕೆಟ್‌ಗೆ ಸಜ್ಜಾಗುತ್ತಿದೆ.

ನಾವು ಒಂದು ಸಂದೇಶವನ್ನು ಗಟ್ಟಿ ಹಾಗೂ ಸ್ಪಷ್ಟವಾಗಿ ಹೇಳಬೇಕಿದೆ. ಪಾಕಿಸ್ತಾನದ ಜೊತೆಗೆ ಕ್ರಿಕೆಟ್‌ ಇಲ್ಲ. ಇದು ಬರೀ ಕ್ರಿಕೆಟ್‌ ವಿಷಯವಲ್ಲ, ಇದು ಸೈನಿಕರ ಮೇಲಿನ ಗೌರವದ ವಿಚಾರ. ಕಾರ್ಗಿಲ್‌, ಉರಿ, ಪುಲ್ವಾಮ, ಪಹಲ್ಗಾಂ...ಹೀಗೆ ಲೆಕ್ಕವಿಲ್ಲಷ್ಟು ಉಗ್ರ ದಾಳಿಯಾಗಿದೆ. ಈಗಾದರೂ ದೇಶದ ಮೇಲೆ ಬದ್ಧತೆ ಉಳ್ಳವರಾಗೋಣ. ದೇಶ ಮೊದಲು. ಕ್ರಿಕೆಟ್‌ ಆಮೇಲೆ. ಜೈ ಹಿಂದ್‌

--