ಏಷ್ಯಾಕಪ್ ತಂಡದಿಂದ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿರುವುದಕ್ಕೆ ಎಬಿ ಡಿವಿಲಿಯರ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆಟದಿಂದಲ್ಲದೆ ಬೇರೆ ಕಾರಣಗಳಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.  

ಜೋಹಾನ್ಸ್‌ಬರ್ಗ್: ಏಷ್ಯಾಕಪ್ ತಂಡದಿಂದ ಶ್ರೇಯಸ್ ಅಯ್ಯರ್ ಔಟ್ ಆದ ಬಗ್ಗೆ ಚರ್ಚೆ ಜೋರಾಗಿದೆ. ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ದಿಗ್ಗಜ ಎಬಿ ಡಿವಿಲಿಯರ್ಸ್, ಶ್ರೇಯಸ್‌ರನ್ನ ಏಷ್ಯಾಕಪ್ ತಂಡದಿಂದ ಯಾಕೆ ಕೈಬಿಟ್ಟರೋ ಬಗ್ಗೆ ಅಚ್ಚರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೇಯಸ್ ಅಯ್ಯರ್ ಅವರನ್ನು ಏಷ್ಯಾಕಪ್‌ ಟೂರ್ನಿಗೆ ಭಾರತ ತಂಡಕ್ಕೆ ಆಯ್ಕೆಯಾಗದಿರಲು ಕ್ರಿಕೆಟ್‌ಗಿಂತ ಬೇರೆ ಕಾರಣ ಇರಬಹುದು ಅಂತ ಡಿವಿಲಿಯರ್ಸ್ ಎಕ್ಸ್‌ನಲ್ಲಿ ಹೇಳಿದ್ದಾರೆ.

ಶ್ರೇಯಸ್‌ ಅಯ್ಯರ್ ಅವರನ್ನು ಟಿ20 ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರ. ಈ ತಂಡದಲ್ಲಿ ಶ್ರೇಯಸ್‌ಗೆ ಎಲ್ಲಿ ಜಾಗ ಸಿಗುತ್ತೆ ಅಂತ ನಾನು ಯೋಚಿಸ್ತಿದ್ದೆ. ಕಳೆದ ಕೆಲ ವರ್ಷಗಳಿಂದ ಚೆನ್ನಾಗಿ ಆಡ್ತಿದ್ದ ಶ್ರೇಯಸ್‌ರನ್ನ ಕೈಬಿಟ್ಟಿದ್ದಕ್ಕೆ ಫ್ಯಾನ್ಸ್ ಬೇಸರ ಮಾಡ್ಕೊಂಡಿದ್ದಾರೆ. ನಾಯಕನಾಗಿಯೂ ಶ್ರೇಯಸ್ ಚೆನ್ನಾಗಿ ಆಡಿದ್ದಾರೆ. ಆದ್ರೆ ಶ್ರೇಯಸ್‌ರನ್ನ ಯಾಕೆ ಕೈಬಿಟ್ಟರೋ ಯಾರಿಗೂ ಗೊತ್ತಿಲ್ಲ. ನನಗೂ ಗೊತ್ತಿಲ್ಲ. ಶ್ರೇಯಸ್‌ಗೂ ಗೊತ್ತಿಲ್ಲದಿರಬಹುದು. ನನ್ನ ತಂಡದಲ್ಲಿದ್ರೆ ಶ್ರೇಯಸ್ ಅಯ್ಯರ್‌ ಖಂಡಿತ ಇರ್ತಿದ್ರು. ಆಟದಿಂದಾಗಿ ಶ್ರೇಯಸ್‌ರನ್ನ ಕೈಬಿಟ್ಟಿರಲ್ಲ ಅಂತ ನನಗನ್ನಿಸುತ್ತೆ ಎಂದು ಎಬಿಡಿ ಅಚ್ಚರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನನ್ನ ಅನುಭವದ ಪ್ರಕಾರ, ಆಟಗಾರರ ನಡವಳಿಕೆ, ಡ್ರೆಸ್ಸಿಂಗ್ ರೂಮಿನಲ್ಲಿ ಹೇಗೆ ಇರ್ತಾರೆ, ಇತರ ಆಟಗಾರರ ಮೇಲೆ ಆಟಗಾರನ ಪ್ರಭಾವ ಹೇಗಿದೆ ಅನ್ನೋದೆಲ್ಲ ಆಯ್ಕೆಗೆ ಪರಿಗಣಿಸಬಹುದು. 50-50 ಸಾಧ್ಯತೆ ಇದ್ದಾಗ, ಇಂಥ ಆಟಗಾರರು ತಂಡದಿಂದ ಹೊರಗೆ ಹೋಗ್ತಾರೆ. ಟೀಮ್ ಪ್ಲೇಯರ್‌ಗಳನ್ನ ಆಯ್ಕೆದಾರರು ಮೊದಲು ಪರಿಗಣಿಸ್ತಾರೆ. ಆಟಗಾರ ಡ್ರೆಸ್ಸಿಂಗ್ ರೂಮಲ್ಲಿ ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡ್ತಾನಾ, ಎಲ್ಲರ ಜೊತೆ ಚೆನ್ನಾಗಿ ಇರ್ತಾನಾ, ಇಲ್ಲ ತಂಡದ ಎನರ್ಜಿ ಕಡಿಮೆ ಮಾಡ್ತಾನಾ ಅನ್ನೋದೆಲ್ಲ ಮುಖ್ಯ.

ಶ್ರೇಯಸ್‌ರನ್ನ ಯಾಕೆ ಕೈಬಿಟ್ಟರು ಅಂತ ಊಹೆ ಮಾಡೋದು ಸರಿಯಲ್ಲ. ಆದ್ರೆ ಇಷ್ಟು ಚೆನ್ನಾಗಿ ಆಡೋ ಆಟಗಾರನನ್ನ ಬೇರೆ ಯಾವ ಕಾರಣಕ್ಕೂ ಕೈಬಿಡಲ್ಲ ಅಂತ ನನಗನ್ನಿಸುತ್ತೆ. ಅದ್ರಲ್ಲೂ ನಾಯಕತ್ವದ ಗುಣ ಇದ್ದಾಗ. ತಂಡದಲ್ಲಿ ಈಗಾಗಲೇ ತುಂಬಾ ನಾಯಕರಿದ್ದಾರೆ. ಅದೂ ಒಂದು ಕಾರಣ ಇರಬಹುದು. ಟೀಮ್ ಪ್ಲೇಯರ್ ಆಗಿರೋದು ಮುಖ್ಯ ಅಂತ ಆಯ್ಕೆದಾರರು ಯೋಚಿಸಿರಬಹುದು ಅಂತ ಡಿವಿಲಿಯರ್ಸ್ ಹೇಳಿದ್ದಾರೆ.

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಅದ್ಭುತ ತೋರುವ ಮೂಲಕ ದಶಕದ ಬಳಿಕ ಫೈನಲ್‌ಗೇರಿತ್ತು. ಆದರೆ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ರೋಚಕ ಸೋಲು ಅನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿದ್ದ ಶ್ರೇಯಸ್ 2020ರಲ್ಲಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. 2024ರಲ್ಲಿ ಕೆಕೆಆರ್‌ಗೆ ಚಾಂಪಿಯನ್ ಪಟ್ಟ ತಂದುಕೊಟ್ಟರೂ, ತಂಡದಿಂದ ಕೈಬಿಡಲಾಯಿತು. ಬಳಿಕ ಪಂಜಾಬ್ ಕಿಂಗ್ಸ್‌ ತಂಡ ಸೇರಿದ ಶ್ರೇಯಸ್, 13 ವರ್ಷಗಳ ಬಳಿಕ ಪಂಜಾಬ್ ಕಿಂಗ್ಸ್‌ ತಂಡವನ್ನು ಫೈನಲ್ ತಲುಪಿಸಿದರು. ಕಳೆದ ಐಪಿಎಲ್‌ನಲ್ಲಿ 17 ಪಂದ್ಯಗಳಿಂದ 604 ರನ್ ಗಳಿಸಿದ್ದರೂ, ಏಷ್ಯಾಕಪ್ ತಂಡದಲ್ಲಿ ಸ್ಥಾನ ಸಿಗದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡ ಹೀಗಿದೆ:

ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್‌ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.