ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ, ತಮ್ಮನ ಅನಾರೋಗ್ಯದಿಂದಾದ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ದುರಂತದಿಂದ ಮೃತನ ಗರ್ಭಿಣಿ ಪತ್ನಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ಮನೆಮಾಡಿದೆ.

ಗೋಕಾಕ (ಅ.5): ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.

10ನೇ ತರಗತಿಯಲ್ಲಿ ಓದುತ್ತಿದ್ದ ತಮ್ಮ ಸತೀಶ ಬಾಗನ್ನವರ (16) ಆರೋಗ್ಯದಲ್ಲಿ ಶನಿವಾರ ಬೆಳಗ್ಗೆ ಏರುಪೇರು ಉಂಟಾಗಿದೆ. ತಮ್ಮ ಬದುಕುಳಿಯುವುದಿಲ್ಲ ಎಂಬ ಸುದ್ದಿ ಅಣ್ಣ ಬಸವರಾಜ ಬಾಗನ್ನವರ (24)ಗೆ ತಿಳಿದು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ತಮ್ಮನ ಸಾವಿನ ಸುದ್ದಿ ಕೇಳಿ ಬಸವರಾಜ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ; ಪತಿಯ ಸಾವಿನ ಆಘಾತದಿಂದ ಪತ್ನಿಗೂ ಹೃದಯಾಘಾತ!

ಈ ದುರಂತದಿಂದ ಗ್ರಾಮದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ.ಇದೇ ವೇಳೆ, ಮೈದುನ ಮತ್ತು ಗಂಡನ ಸಾವಿನ ಸುದ್ದಿಯಿಂದ ಬಸವರಾಜ ಅವರ ಗರ್ಭಿಣಿ ಪತ್ನಿ ಕುಸಿದು ಬಿದ್ದರು. ತಕ್ಷಣ ಅವರನ್ನು ಗೋಕಾಕ ನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದ ಕುಟುಂಬ ಹಾಗೂ ಗ್ರಾಮಸ್ಥರು ತೀವ್ರ ದುಃಖದಲ್ಲಿದ್ದಾರೆ.