ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಎಫ್‌ಐಆರ್ ದಾಖಲು. ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ಕೊಡುವ ಘೋಷಣೆ ವಿವಾದಕ್ಕೆ ಕಾರಣ.

ಕಲಬುರಗಿ (ಆ.14): ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕಲಬುರಗಿಯ ರೋಜಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ಕೊಡುವುದಾಗಿ ಯತ್ನಾಳ್ ಕೊಪ್ಪಳದಲ್ಲಿ ಘೋಷಿಸಿದ್ದರು. ಈ ಹೇಳಿಕೆಯನ್ನು ಖಿದ್ಮತ್-ಎ-ಮಿಲ್ಲತ್ ಕಮಿಟಿಯ ಅಧ್ಯಕ್ಷ ಜುನೈದ್ ಖುರೇಶಿ ಖಂಡಿಸಿ, ಶಾಸಕರ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಯತ್ನಾಳ್‌ರ ಹೇಳಿಕೆ ಸಮುದಾಯಗಳ ನಡುವೆ ವಿಭಜನೆ, ಒಂದು ಧರ್ಮದ ವಿರುದ್ಧ ದ್ವೇಷ ಹರಡುವಿಕೆ ಮತ್ತು ಸಾಮಾಜಿಕ ಶಾಂತಿಗೆ ಭಂಗ ತರುವಂತಿದೆ ಎಂದು ಆರೋಪಿಸಲಾಗಿದೆ. ಪ್ರಕರಣವನ್ನು ಬಿಎನ್‌ಎಸ್ ಕಾಯ್ದೆಯ ಕಲಂ 196, 299, 353(1)(c), ಮತ್ತು 353(2) ಅಡಿ ದಾಖಲಿಸಲಾಗಿದೆ.

ಕೊಪ್ಪಳದಲ್ಲಿ ಯತ್ನಾಳ್ ಹೇಳಿದ್ದೇನು?

ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ಕೊಡಲಾಗುವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಪ್ಪಳದಲ್ಲಿ ಘೋಷಿಸಿದ್ದರು. ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಹಿಂದೂ ಯುವಕ ಗವಿಸಿದ್ದಪ್ಪ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೀತಿಯ ಅಭಿಯಾನ ಆರಂಭಿಸುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಘೋಷಣೆ ಮಾಡಿದ್ದರು.

ಗವಿಸಿದ್ದಪ್ಪ ಪ್ರೀತಿಸಿದ್ದ ಹುಡುಗಿಯನ್ನೂ ಅರೆಸ್ಟ್ ಮಾಡಬೇಕು. ಲವ್ ಜಿಹಾದ್ ಮಾಡಿದಾಗ ಮುಸ್ಲಿಮರಿಗೆ ರಕ್ಷಣೆ ನೀಡಲಾಗುತ್ತೆ. ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಕಿಡಿಕಾರಿದ್ದರು. ಮಚ್ಚು ತೆಗೆದುಕೊಂಡು ಓಡಾಡುವವರಿಗೆ ರಾಜ್ಯ ಸರ್ಕಾರದ ಬೆಂಬಲವಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಹಿಂದೂ ಯುವಕ ಗವಿಸಪ್ಪ ನಾಯಕ್ ಹತ್ಯೆ ಪ್ರಕರಣದಲ್ಲಿ ಗಂಭೀರ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಇದೀಗ ಯತ್ನಾಳರ ಮೇಲೆ ಎಫ್‌ಐಆರ್ ದಾಖಲಾಗಿದೆ.