ನಟ ದರ್ಶನ್‌ಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಇದನ್ನು ಸ್ವಾಗತಿಸಿದ್ದಾರೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದುದರಿಂದ ಜಾಮೀನು ರದ್ದತಿಯು ತನಿಖೆಗೆ ಪೂರಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು (ಆ.14): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸ್ವಾಗತಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಈ ತೀರ್ಪು ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗೆ ಪೂರಕವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಪೊನ್ನಣ್ಣ, ದರ್ಶನ್ ಹೊರಗಿದ್ದ ಕಾರಣ ತನಿಖೆಗೆ ತೊಂದರೆಯಾಗುತ್ತಿತ್ತು ಎಂಬುದು ನಮ್ಮ ಆಶಯವಾಗಿತ್ತು. ಜಾಮೀನಿನ ಮೇಲೆ ಹೊರಗಿದ್ದಾಗ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇತ್ತು. ಆದರೆ, ಈಗ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ಈ ಎಲ್ಲ ಸವಾಲುಗಳು ಬಗೆಹರಿಯಲಿದೆ.

ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಐಷಾರಾಮಿ ವ್ಯವಸ್ಥೆ ಸಿಗುತ್ತಿದೆ ಎಂಬ ಮಾಹಿತಿ ಬಂದಾಗ ಸರ್ಕಾರವೇ ಮಧ್ಯಪ್ರವೇಶಿಸಿ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಿತ್ತು ಎಂದು ಪೊನ್ನಣ್ಣ ತಿಳಿಸಿದ್ದಾರೆ. ಮೆಡಿಕಲ್ ಬೇಲ್ ನೀಡುವಾಗ ನ್ಯಾಯಾಲಯವು ಬೇರೆ ರೀತಿ ಪರಿಗಣಿಸುತ್ತದೆ. ಆದರೆ, ದರ್ಶನ್‌ಗೆ ವಿಶೇಷ ಟ್ರೀಟ್‌ಮೆಂಟ್‌ಗಾಗಿ ಬೇಲ್ ನೀಡಲಾಗಿತ್ತು ಮತ್ತು ಅದನ್ನು ಅವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನನಗೆ ಅನ್ನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಸುಪ್ರೀಂ ಕೋರ್ಟ್‌ನ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದ ಪೊನ್ನಣ್ಣ, ಇದು ನ್ಯಾಯಸಮ್ಮತ ವಿಚಾರಣೆಗೆ ಪೂರಕವಾಗಿದೆ ಎಂದು ತಿಳಿಸಿದರು.

ಕಾನೂನು ಪ್ರಕ್ರಿಯೆ ಪಾಲಿಸಿ ಎಂದ ಗೃಹ ಸಚಿವ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ವಿಧಾನಸೌಧದ ಲಾಂಜ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದ ಸಚಿವರು, ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, "ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ ಕೂಡಲೇ ಆರೋಪಿಗಳು ಶರಣಾಗಬೇಕು ಎಂದು ನ್ಯಾಯಾಲಯ ಹೇಳಿದೆ. ಒಂದು ವೇಳೆ ಅವರು ಹಾಜರಾಗದೆ ಹೋದರೆ, ಕೋರ್ಟ್ ವಾರೆಂಟ್ ಜಾರಿ ಮಾಡುತ್ತದೆ. ಹಾಗಾಗಿ, ಕಾನೂನು ಪ್ರಕ್ರಿಯೆಗಳು ಏನಿವೆಯೋ ಅದನ್ನೇ ಕಟ್ಟುನಿಟ್ಟಾಗಿ ಪಾಲನೆ ಮಾಡಿ" ಎಂದು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು. ಈ ನಿರ್ಧಾರದ ಮೂಲಕ ಸರ್ಕಾರವು ನ್ಯಾಯಾಲಯದ ಆದೇಶಕ್ಕೆ ಗೌರವ ನೀಡುವುದಲ್ಲದೆ, ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಕಾನೂನು ತನ್ನ ಕ್ರಮ ಕೈಗೊಳ್ಳಲು ಅವಕಾಶ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.