ಸುಪ್ರೀಂ ಕೋರ್ಟ್ ನಟ ದರ್ಶನ್ ಮತ್ತು ಅವರ ಸಹಚರರ ಜಾಮೀನು ರದ್ದುಗೊಳಿಸಿದ್ದು, ಪೊಲೀಸರು ಮರು ಬಂಧನಕ್ಕೆ ಸಿದ್ಧತೆ ನಡೆಸಿದ್ದಾರೆ. ಒಟ್ಟು 200 ಸಾಕ್ಷಿಗಳ ವಿಚಾರಣೆ ಬಾಕಿ ಇದ್ದು, ಅಂತಿಮ ತೀರ್ಪಿಗೆ ಎರಡು ವರ್ಷಗಳಷ್ಟು ಸಮಯ ಹಿಡಿಯಬಹುದು.
ಬೆಂಗಳೂರು (ಆ.14): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಟ ದರ್ಶನ್ ಮತ್ತು ಅವರ ಸಹಚರರ ಜಾಮೀನನ್ನು ರದ್ದುಗೊಳಿಸಿದ ಬೆನ್ನಲ್ಲೇ, ಆರೋಪಿಗಳನ್ನು ಮತ್ತೆ ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇದರೊಂದಿಗೆ ಸುಪ್ರೀಂ ಕೋರ್ಟ್ ಇಡೀ ಪ್ರಕರಣದ ವಿಚಾರಣೆಯನ್ನು ಬೇಗನೇ ಮುಗಿಸುವಂತೆ ತಿಳಿಸಿದೆ. ಆದರೆ, ಈ ಪ್ರಕರಣದಲ್ಲಿ ಒಟ್ಟು 200 ಸಾಕ್ಷಿಗಳಿದ್ದು, ಇವರ ವಿಚಾರಣೆಗೇ ಹಲವು ದಿನಗಳು ಹಿಡಿಯಲಿದೆ. ಇದೆಲ್ಲ ಸೇರಿ ಅಂತಿಮ ತೀರ್ಪು ಬರೆವವರೆಗೂ ಅಂದಾಜು ಎರಡು ವರ್ಷಗಳಾದರೂ ಆಗಬಹುದು. ಅಲ್ಲಿಯವರೆಗೂ ಕಿಲ್ಲಿಂಗ್ ಸ್ಟಾರ್‌ಗೆ ಜೈಲೇ ಗತಿಯಾಗಲಿದೆ.ಸುಪ್ರೀಂ ಕೋರ್ಟ್ ಆದೇಶದ ನಂತರ ಮುಂದಿನ ಕಾನೂನು ಪ್ರಕ್ರಿಯೆಗಳು ಹೇಗೆ ನಡೆಯಲಿವೆ ಎಂಬ ವಿವರ ಇಲ್ಲಿದೆ.
ಪೊಲೀಸರ ಮುಂದಿರುವ ಮುಂದಿನ ಕ್ರಮಗಳು ಹೀಗಿವೆ
ಆದೇಶದ ಪ್ರತಿ ಸಂಗ್ರಹಣೆ: ಮೊದಲಿಗೆ, ಪ್ರಕರಣದ ತನಿಖಾಧಿಕಾರಿಯಾದ ಎಸಿಪಿ ಚಂದನ್ ಕುಮಾರ್ ಅವರು ಸುಪ್ರೀಂ ಕೋರ್ಟ್‌ನ ಜಾಮೀನು ರದ್ದತಿ ಆದೇಶದ ಪ್ರತಿಯನ್ನು ಪಡೆಯಲಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಕೆ: ಈ ಆದೇಶದ ಪ್ರತಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಅಲ್ಲಿ ಜಾಮೀನು ರದ್ದಾಗಿರುವ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿ, ಆರೋಪಿಗಳ ಬಂಧನಕ್ಕೆ 'ಅರೆಸ್ಟ್ ವಾರೆಂಟ್' ಪಡೆಯಲಾಗುತ್ತದೆ.
ಅರೆಸ್ಟ್ ವಾರೆಂಟ್ ಮತ್ತು ಬಂಧನ: ನ್ಯಾಯಾಲಯದಿಂದ ಬಂಧನ ವಾರಂಟ್ ಪಡೆದ ನಂತರ, ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಮತ್ತು ಇತರ ಆರೋಪಿಗಳನ್ನು ಬಂಧಿಸಲಿದ್ದಾರೆ.
ಸ್ವಯಂ ಶರಣಾಗತಿ: ಒಂದು ವೇಳೆ, ಬಂಧನ ವಾರಂಟ್ ಜಾರಿಯಾಗುವ ಮೊದಲೇ ಆರೋಪಿಗಳು ಸ್ವಯಂಪ್ರೇರಿತರಾಗಿ ಶರಣಾದರೆ, ಪ್ರತ್ಯೇಕವಾಗಿ ವಾರೆಂಟ್ ಪಡೆಯುವ ಅಗತ್ಯವಿರುವುದಿಲ್ಲ.
ಜೈಲಿಗೆ ಶಿಫ್ಟ್: ಬಂಧನದ ನಂತರ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಈ ಹಿಂದೆ ಯಾವ ಜೈಲಿನಲ್ಲಿದ್ದರೋ ಅದೇ ಜೈಲುಗಳಿಗೆ ಅವರನ್ನು ವರ್ಗಾಯಿಸಲಾಗುತ್ತದೆ.
ಸದ್ಯಕ್ಕೆ, ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ಅವರು ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದಾರೆ. ಹಾಗಾಗಿ, ಎಸಿಪಿ ಭರತ್ ರೆಡ್ಡಿಗೆ ಈ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಸದ್ಯ ಡಿಸಿಪಿ ಜೊತೆ ಮುಂದೇನು ಮಾಡಬೇಕೆನ್ನುವುದರ ಬಗ್ಗೆ ಭರತ್ ರೆಡ್ಡಿ ಚರ್ಚಿಸುತ್ತಿದ್ದಾರೆ.
ದರ್ಶನ್ ಬಂಧನಕ್ಕೆ ಸೂಚನೆ ನೀಡಿದ್ದ ದಯಾನಂದ್ ಈಗ ಜೈಲಿನ ಎಡಿಜಿಪಿ
ಈ ಸಂದರ್ಭದಲ್ಲಿ ಒಂದು ಆಸಕ್ತಿದಾಯಕ ಅಂಶ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವುದು ಖಚಿತವಾಗುತ್ತಿದ್ದಂತೆ, ಅವರ ಬಂಧನಕ್ಕೆ ಮುಲಾಜಿಲ್ಲದೆ ಆದೇಶ ನೀಡಿದ್ದ ಹಿರಿಯ ಪೊಲೀಸ್ ಅಧಿಕಾರಿಯೇ ಈಗ ಜೈಲು ಇಲಾಖೆಯ ಮುಖ್ಯಸ್ಥರಾಗಿದ್ದಾರೆ. ಅಂದು ದರ್ಶನ್ ಬಂಧನಕ್ಕೆ ಆದೇಶ ನೀಡಿದ್ದ ಎಡಿಜಿಪಿ ದಯಾನಂದ್ ಅವರು, ಪ್ರಸ್ತುತ ಜೈಲು ಮತ್ತು ಸುಧಾರಣಾ ಸೇವೆಗಳ ಎಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ದಯಾನಂದ್ ಅವರ ನಿರ್ದೇಶನದ ಮೇರೆಗೆ ದರ್ಶನ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಈಗ ಜಾಮೀನು ರದ್ದಾದ ಕಾರಣ, ಅದೇ ದಯಾನಂದ್ ಅವರ ಆಡಳಿತ ವ್ಯಾಪ್ತಿಯಲ್ಲಿ ದರ್ಶನ್ ಮತ್ತೆ ಜೈಲು ಜೀವನ ಕಳೆಯಬೇಕಾಗಿದೆ.ಪ್ರಕರಣದ ಆರಂಭಿಕ ಹಂತದಲ್ಲಿ ಪ್ರಭಾವಿ ನಟನ ಬಂಧನಕ್ಕೆ ಧೈರ್ಯದಿಂದ ಆದೇಶ ನೀಡಿದ್ದ ದಯಾನಂದ್, ಈಗ ಜೈಲು ಇಲಾಖೆಯ ಮುಖ್ಯಸ್ಥರಾಗಿರುವುದು ಹಲವರ ಗಮನ ಸೆಳೆದಿದೆ.
