ಪರಪ್ಪನ ಅಗ್ರಹಾರದಲ್ಲಿ ಕೈದಿಯಾಗಿರುವ ನಟ ದರ್ಶನ್‌ಗೆ ಮತ್ತೆ ಬೆನ್ನುನೋವು ಹೆಚ್ಚಾದ ಹಿನ್ನೆಲೆಯಲ್ಲಿ ಹೀಟಿಂಗ್ ಬೆಲ್ಟ್ ಒದಗಿಸಲು ಜೈಲಿನ ವೈದ್ಯಾಧಿಕಾರಿಗಳು, ಸಿ.ವಿ.ರಾಮನ್ ನಗರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು (ಅ.20): ಪರಪ್ಪನ ಅಗ್ರಹಾರದಲ್ಲಿ ಕೈದಿಯಾಗಿರುವ ನಟ ದರ್ಶನ್‌ಗೆ ಮತ್ತೆ ಬೆನ್ನುನೋವು ಹೆಚ್ಚಾದ ಹಿನ್ನೆಲೆಯಲ್ಲಿ ಹೀಟಿಂಗ್ ಬೆಲ್ಟ್ ಒದಗಿಸಲು ಜೈಲಿನ ವೈದ್ಯಾಧಿಕಾರಿಗಳು ಪತ್ರ ಬರೆದಿದ್ದಾರೆ. ಕೇಂದ್ರ ಕಾರಾಗೃಹ ಆಸ್ಪತ್ರೆ ಮುಖ್ಯ ವೈದ್ಯರು, ಸಿ.ವಿ.ರಾಮನ್ ನಗರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಗೆ ಹೀಟಿಂಗ್ ಬೆಲ್ಟ್ ಒದಗಿಸಲು ಪತ್ರ ಬರೆದು ಮನವಿ ಮಾಡಿದ್ದಾರೆ. ಜೊತೆಗೆ ಚಿಕಿತ್ಸೆ ಅಗತ್ಯ ಇರುವವರೆಗೂ ಫಿಸಿಯೋಥೆರಪಿ ಚಿಕಿತ್ಸೆ ಒದಗಿಸಲು ಸಹ ಮನವಿ ಮಾಡಿದ್ದಾರೆ. ಇತ್ತೀಚೆಗೆ ಜೈಲಿನಲ್ಲಿ ಬೆನ್ನುನೋವಿಗೆ ನಟ ದರ್ಶನ್ ಒಳಗಾಗಿದ್ದರು.

ಈ ವೇಳೆ ಜೈಲಿನ ವೈದ್ಯರ ತಂಡ ದರ್ಶನ್‌ಗೆ ಮೊದಲು ಚಿಕಿತ್ಸೆ ನೀಡಿದ್ದರು. ಬಳಿಕ ಸಿ.ವಿ.ರಾಮನ್ ಆಸ್ಪತ್ರೆ ಫಿಸಿಯೋಥೆರಪಿ ತಂಡದಿಂದ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೇ ಅಕ್ಟೋಬರ್‌ 10ರಂದು ಜೈಲಿಗೆ ತೆರಳಿ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಇದೀಗ ಪುನಃ ಚಿಕಿತ್ಸೆ ಅಗತ್ಯ ಇರುವವರೆಗೂ ಕಾರಾಗೃಹಕ್ಕೆ ವೈದ್ಯರ ತಂಡ ನಿಯೋಜಿಸಲು ಮನವಿ ಮಾಡಲಾಗಿದೆ. ಕಾನೂನು ಸೇವಾ ಪ್ರಾಧಿಕಾರದ ವರದಿಯಲ್ಲಿ ಬೆನ್ನು ನೋವಿನ ಬಗ್ಗೆಯೂ ಉಲ್ಲೇಖಿಸಲಾಗಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲೇ ನಟ ದರ್ಶನ್‌ಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಕೈದಿಗಳ ಬಳಿ ದರ್ಶನ್‌ ರಂಪಾಟ: ಜೈಲಿನ ನಿಯಮಾನುಸಾರ ಎಲ್ಲ ಸೌಲಭ್ಯ ನೀಡಿರುವ ಬಗ್ಗೆ ಕಾನೂನು ಸೇವಾ ಪ್ರಾಧಿಕಾರವು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಬೆನ್ನಲ್ಲೇ ಕೊಲೆ ಆರೋಪಿ ನಟ ದರ್ಶನ್‌ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ತಮ್ಮ ಸಹ ಕೈದಿಗಳೊಂದಿಗೆ ಕೂಗಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕೊಲೆ ಆರೋಪಿ ದರ್ಶನ್‌ಗೆ ನೀಡಿರುವ ಸೌಲಭ್ಯಗಳನ್ನು ಖುದ್ದು ವೀಕ್ಷಿಸಿದ್ದರು. ಈ ಸಂಬಂಧ ಶನಿವಾರ ನ್ಯಾಯಾಲಯಕ್ಕೆ ವರದಿ ನೀಡಿದ್ದರು. ಈ ವರದಿಯಲ್ಲಿ ನಿಯಾಮಾನುಸಾರ ಆರೋಪಿಗೆ ಸೌಲಭ್ಯ ನೀಡಲಾಗಿದೆ ಎಂದು ಉಲ್ಲೇಖಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದೆ. ಈ ವಿಚಾರ ತಿಳಿದ ಬಳಿಕ ಆರೋಪಿ ದರ್ಶನ್‌ ತನ್ನ ಸಹ ಕೈದಿಗಳೊಂದಿಗೆ ಕೂಗಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನಗೇಕೆ ಈ ಶಿಕ್ಷೆ?

ನಾನು ಹೀಗೆ ಜೈಲಿನಲ್ಲಿ ಸಾಯಬೇಕಾ ಎಂದು ಚೀರಾಡಿದ್ದಾರೆ. ಈ ವೇಳೆ ಸಹ ಕೈದಿ ನಾಗರಾಜ್‌, ದುಃಖತಪ್ತ ದರ್ಶನ್‌ರನ್ನು ಸಮಾಧಾನಪಡಿಸಿದ್ದಾರೆ. ಉಳಿದ ಕೈದಿಗಳು ದರ್ಶನ್‌ ಅವರನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ದರ್ಶನ್‌ ಹತಾಶೆಯಲ್ಲಿ ಇರುವುದನ್ನು ಕಂಡು ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದೆ.