ಪಹಲ್ಗಾಂ ಘಟನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯ ಆಯೋಜಿಸಿರುವುದಕ್ಕೆ ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೇಶಕ್ಕಿಂತ ಕ್ರಿಕೆಟ್ ಮುಖ್ಯವೇ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು (ಸೆ.14): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಿಂದ ದೇಶವೇ ಆಘಾತಕ್ಕೆ ಒಳಗಾಗಿರುವಾಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿರುವುದು ಸಿಲಿಕಾನ್ ಸಿಟಿಯ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ರಾಜಾಜಿನಗರದ ಶ್ರೀ ರಾಮಮಂದಿರ ಮೈದಾನದಲ್ಲಿ ಜನರು ಒಟ್ಟಾಗಿ ಸೇರಿ, ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದು ದೇಶಕ್ಕೆ, ಹುತಾತ್ಮ ಸೈನಿಕರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಸಿಸಿಐಗೆ ದೇಶಕ್ಕಿಂತ ಕ್ರಿಕೆಟ್ ಮುಖ್ಯವಾಯ್ತಾ?

ನಮ್ಮ ಸೈನಿಕರು ಮತ್ತು ಜನರು ಭಯೋತ್ಪಾದಕರ ದಾಳಿಯಲ್ಲಿ ಸಾಯುತ್ತಿದ್ದಾರೆ, ಪಹಲ್ಗಾಂನಲ್ಲಿ ಭಾರತೀಯರನ್ನ ಪಾಕಿಸ್ತಾನ ಉಗ್ರರು ಕೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಲು ಬಿಸಿಸಿಐಗೆ ಹೇಗೆ ಮನಸು ಬಂತು? ನಾವು ಇವತ್ತಿನ ಮ್ಯಾಚ್ ನೋಡುವುದಿಲ್ಲ. ಬಿಸಿಸಿಐ ಕೇವಲ ಹಣ ಮಾಡುವ ಉದ್ದೇಶಕ್ಕಾಗಿ ಈ ಪಂದ್ಯ ಆಯೋಜಿಸಿದೆ. ದೇಶದ ಗೌರವಕ್ಕಿಂತ ಕ್ರಿಕೆಟ್ ಮುಖ್ಯವೇ? ಎಂದು ರಾಜಾಜಿನಗರದಲ್ಲಿ ಜನರ ಆಕ್ರೋಶದ ಧ್ವನಿಗಳು ಕೇಳಿಬಂದಿವೆ.

ನಮ್ಮ ಸೈನಿಕರ ಗೌರವಾರ್ಥವಾಗಿ ಪಾಕಿಸ್ತಾನದೊಂದಿಗಿನ ಕ್ರಿಕೆಟ್ ಸಂಬಂಧವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಘಟನೆಯಿಂದಾಗಿ ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳ ಆಕ್ರೋಶ ಮತ್ತಷ್ಟು ತೀವ್ರಗೊಂಡಿದ್ದು ಭಾರತ-ಪಾಕಿಸ್ತಾನ ಪಂದ್ಯ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.