ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯಾಗಿ ತಮನ್ನಾ ಆಯ್ಕೆ ವಿವಾದದ ನಂತರ, ಕನ್ನಡ ನಟಿ ಐಶಾನಿ ಶೆಟ್ಟಿ ಅವರನ್ನು ಹೊಸ ರಾಯಭಾರಿಯನ್ನಾಗಿ ಆಯ್ಕೆ ಮಾಡಿದಂತಾಗಿದೆ. ಹಬ್ಬದ ಋತುವಿನಲ್ಲಿ ಉಡುಗೊರೆಗಳಿಗಾಗಿ ಮೈಸೂರು ಸ್ಯಾಂಡಲ್ ಸೋಪ್‌ಗಳನ್ನು ಪ್ರಚಾರ ಮಾಡುವ ಜಾಹೀರಾತಿನಲ್ಲಿ ಐಶಾನಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು (ಸೆ.01): ರಾಜ್ಯದ ಹೆಮ್ಮೆಯಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್) ಉತ್ಪಾದನೆಯಾಗಿರುವ ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯಾಗಿ ಬಾಲಿವುಡ್ ನಟಿ ತಮನ್ನಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ರಾಜ್ಯದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೂ ಲೆಕ್ಕಿಸದೇ, ಇದು ಉದ್ಯಮ ಬೆಳವಣಿಗೆಗೆ ಪೂರಕವಾದ ತೀರ್ಮಾನ ಎಂದು ಸರ್ಕಾರ ಘೋಷಣೆ ಮಾಡಿತ್ತು. ಇದೀಗ ತಮನ್ನಾ ಅವರ ಬದಲಿಗೆ ಕನ್ನಡ ನಟಿಯನ್ನು ರಾಯಭಾರಿಯನ್ನಾಗಿ ಮಾಡಿ ಮೈಸೂರು ಸ್ಯಾಂಡಲ್ ಸೋಪಿನ ಜಾಹೀರಾತನ್ನು ಹಂಚಿಕೊಂಡಿದೆ.
ರಾಜ್ಯದಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಪ್ರಯತ್ನದಿಂದಾಗಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಉತ್ಪನ್ನಗಳ ಪ್ರಮಾಣ ಮತ್ತು ಮಾರಾಟ ಹೆಚ್ಚಳವಾಗಿದೆ. ರಾಜ್ಯ ಸರ್ಕಾರದ ಅತ್ಯಂತ ಲಾಭದಾಯಕ ಉದ್ಯಮಗಳಲ್ಲಿ ಒಂದಾಗಿ ಬೆಳದು ನಿಂತಿದೆ. ಇನ್ನು ಕೆಎಸ್‌ಡಿಎಲ್‌ನಿಂದ ಹಲವಾರು ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದ್ದರೂ, ಮೈಸೂರು ಸ್ಯಾಂಡಲ್ ಸೋಪು ತಯಾರಿಕೆ ಮಾತ್ರ ನಮ್ಮ ರಾಜ್ಯದ ಹೆಮ್ಮೆಯನ್ನು ಪ್ರತಿನಿಧಿಸುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರ್ ಸ್ಯಾಂಡಲ್ ಸೋಪನ್ನು ಜಾಗತಿಕ ಮಟ್ಟದ ಬ್ರ್ಯಾಂಡ್ ಆಗಿ ಮಾಡುವ ಉದ್ದೇಶದಿಂದ ರಾಷ್ಟ್ರಮಟ್ಟದ ನಾಯಕಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ಮಾಡಲಾಯಿತು. ಆದರೆ, ಇದಕ್ಕೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಯಿತು.
Mysore Sandal Soap: ತಮನ್ನಾ ವಿವಾದದಿಂದಾಗಿ ಮೈಸೂರು ಸ್ಯಾಂಡಲ್ ವುಡ್ ಸೋಪ್ ಮಾರಾಟದಲ್ಲಿ ಭಾರೀ ಏರಿಕೆ!
ರಾಜ್ಯದಲ್ಲಿ ಹಲವಾರು ಶ್ರೇಷ್ಠ ನಟಿಯರು ಇರುವಾಗ ಹಾಗೂ ಬಾಲಿವುಡ್ ಸೇರಿ ವಿವಿಧ ಚಿತ್ರರಂಗಗಳಲ್ಲಿ ಕನ್ನಡದ ನಟಿಯರೇ ಮಿಂಚುತ್ತಿರುವಾಗ ಬಾಲಿವುಡ್ ಮೂಲದ ತಮನ್ನಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ರಾಜ್ಯದಾದ್ಯಂತ ಈ ಬಗ್ಗೆ ವಿಪಕ್ಷ ಬಿಜೆಪಿ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪಿಗೆ ರಾಯಭಾರಿ ಮಾಡದಂತೆ ಆಗ್ರಹ ಕೇಳಿಬಂದಿತ್ತು. ವಿವಿಧ ರೀತಿಯಲ್ಲಿ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಆದರೂ, ಸರ್ಕಾರ ಮೈಸೂರು ಸ್ಯಾಂಡಲ್ ಸೋಪನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕಾದರೆ ಬಾಲಿವುಡ್ ನಟಿಯ ಆಯ್ಕೆ ಸೂಕ್ತವೆಂದು ಸ್ಪಷ್ಟನೆಯನ್ನೂ ನೀಡಿತ್ತು.
ಇದೀಗ ಮೈಸೂರು ಸ್ಯಾಂಡಲ್ ಸೋಪಿಗೆ ಕನ್ನಡ ಚಿತ್ರರಂಗದಲ್ಲಿ ಶಾಕುಂತಲೆ ಎಂದೇ ಖ್ಯಾತರಾಗಿರುವ ನಟಿ ಐಶಾನಿ ಶೆಟ್ಟಿ ಅವರಿಂದ ಮೈಸೂರು ಸ್ಯಾಂಡಲ್ ಸೋಪಿಗೆ ಪ್ರಮೋಷನ್ ಜಾಹೀರಾತು ಮಾಡಿಸಲಾಗಿದೆ. ಇದರಿಂದ ತಮನ್ನಾ ಅವರನ್ನು ಕೈಬಿಟ್ಟು ಐಶಾನಿ ಶೆಟ್ಟಿ ಅವರನ್ನೇ ರಾಯಭಾರಿಯನ್ನಾಗಿ ಮಾಡಲಾಗಿದೆ ಎಂದು ಕಂಡುಬರುತ್ತಿದೆ. ಇನ್ನು ಕೆಎಸ್‌ಡಿಎಲ್‌ನ ಮಾರ್ಕೆಟಿಂಗ್ ವಿಭಾಗದ ಅಧಿಕೃತ ಸಾಮಾಜಿಕಮ ಜಾಲತಾಣದ ಇನ್‌ಸ್ಟಾಗ್ರಾಮ್‌ನ @houseofmysoresandal ಖಾತೆಯಿಂದ ಐಶಾನಿ ಶೆಟ್ಟಿ ಅವರೇ ರಾಯಭಾರಿ ಎಂಬಂತೆ ಜಾಹೀರಾತು ನೀಡಿದ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.
ಹಬ್ಬದ ಋತುಮಾನದಲ್ಲಿ ಉಡುಗೊರೆಗಳ ವಿಷಯಕ್ಕೆ ಬಂದರೆ, ಮೈಸೂರು ಸ್ಯಾಂಡಲ್ ಸೋಪ್‌ಗಳು ಸೂಕ್ತ ಆಯ್ಕೆಯಾಗಿದೆ. 100 ವರ್ಷಗಳ ಪರಂಪರೆಯೊಂದಿಗೆ, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸ್ಯಾಂಡಲ್ ಮಿಲೇನಿಯಮ್ ಮತ್ತು ಮೈಸೂರು ಸ್ಯಾಂಡಲ್ ಗೋಲ್ಡ್ ಶುದ್ಧ ಶ್ರೀಗಂಧದ ಎಣ್ಣೆಯಿಂದ ಸಮೃದ್ಧವಾಗಿವೆ. ಇದು ಚರ್ಮವನ್ನು ಪೋಷಿಸುತ್ತದೆ, ಮೃದುಗೊಳಿಸುತ್ತದೆ ಮತ್ತು ತೇವಗೊಳಿಸುತ್ತದೆ. ಇದು ಚರ್ಮವನ್ನು ಆರೈಕೆ ಮತ್ತು ಸಂಪ್ರದಾಯದ ಶಾಶ್ವತ ಉಡುಗೊರೆಯನ್ನಾಗಿ ಮಾಡುತ್ತದೆ ಎಂದು ನಟಿ ಐಶಾನಿ ಶೆಟ್ಟಿ ಇರುವ ಫೋಟೋ ಹಂಚಿಕೊಂಡಿದೆ.
