ಈ ವರ್ಷದ ಬಾಹ್ಯಾಕಾಶ ದಿನವನ್ನು 'ಭೂತ ಮತ್ತು ಭವಿಷ್ಯದ ಸೇತುವೆ: ಸಾಂಪ್ರದಾಯಿಕ ಖಗೋಳಶಾಸ್ತ್ರವನ್ನು ಗೌರವಿಸುತ್ತಾ, ಆಧುನಿಕ ಬಾಹ್ಯಾಕಾಶ ಸಾಧನೆಗಳ ಪ್ರದರ್ಶನ' ಎಂಬ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತದೆ.
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಪ್ರತಿವರ್ಷವೂ ಆಗಸ್ಟ್ 23ರಂದು ಭಾರತ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸುತ್ತದೆ. ಈ ವಿಶೇಷ ದಿನ ನಮಗೆ ಬಾಹ್ಯಾಕಾಶ ರಂಗದಲ್ಲಿ ಭಾರತದ ಅಸಾಧಾರಣ ಸಾಧನೆಗಳನ್ನು ನೆನಪಿಸಿ, ಸಣ್ಣ ಪುಟ್ಟ ಹೆಜ್ಜೆಗಳಿಂದ ಆರಂಭಿಸಿದ ನಮ್ಮ ವಿಜ್ಞಾನಿಗಳ ಅಸಾಧಾರಣ ಪ್ರಯಾಣವನ್ನು ಸ್ಮರಿಸುವಂತೆ ಮಾಡುತ್ತದೆ. ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಗಸ್ಟ್ 23, 2024ರಂದು ಆಚರಿಸಲಾಯಿತು. 2023ರ ಈ ದಿನದಂದು ಭಾರತ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡಿಂಗ್ ನಡೆಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ರಾಷ್ಟ್ರೀಯ ಬಾಹ್ಯಾಕಾಶ ದಿನ ಭಾರತೀಯ ವಿದ್ಯಾರ್ಥಿಗಳು ಮತ್ತು ಯುವ ಮನಸ್ಸುಗಳಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಮೂಡಿಸಲು, ಸ್ಫೂರ್ತಿ ತುಂಬಲು ಪೂರಕವಾಗಿದೆ.
ಈ ವರ್ಷದ ಬಾಹ್ಯಾಕಾಶ ದಿನವನ್ನು 'ಭೂತ ಮತ್ತು ಭವಿಷ್ಯದ ಸೇತುವೆ: ಸಾಂಪ್ರದಾಯಿಕ ಖಗೋಳಶಾಸ್ತ್ರವನ್ನು ಗೌರವಿಸುತ್ತಾ, ಆಧುನಿಕ ಬಾಹ್ಯಾಕಾಶ ಸಾಧನೆಗಳ ಪ್ರದರ್ಶನ' ಎಂಬ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತದೆ. ಈ ಸಂಭ್ರಮದ ಭಾಗವಾಗಿ, ವಿಜ್ಞಾನ ಮೇಳಗಳು, ತಾರಾಲಯ ಪ್ರದರ್ಶನಗಳು, ಮತ್ತು ಇಸ್ರೋ ವಿಜ್ಞಾನಿಗಳೊಡನೆ ಸಂವಾದಗಳನ್ನು ಏರ್ಪಡಿಸಲಾಗುತ್ತದೆ. ಭಾರತದ ಬಾಹ್ಯಾಕಾಶ ಯಾತ್ರೆ 1962ರಲ್ಲಿ, ಭಾರತೀಯ ಬಾಹ್ಯಾಕಾಶ ಯೋಜನೆಯ ಪಿತಾಮಹ ಎನಿಸಿಕೊಂಡ ಡಾ. ವಿಕ್ರಮ್ ಸಾರಾಭಾಯಿ ಅವರ ನೇತೃತ್ವದಲ್ಲಿ ಆರಂಭಗೊಂಡಿತು. ವಿಕ್ರಮ್ ಸಾರಾಭಾಯಿ ಕೇರಳದ ತುಂಬಾ ಪ್ರದೇಶವನ್ನು ಭಾರತದ ಮೊದಲ ರಾಕೆಟ್ ಉಡಾವಣಾ ತಾಣವನ್ನಾಗಿ ಆರಿಸಿದರು. 1969ರಲ್ಲಿ ಸಂಸ್ಥೆಗೆ ಇಸ್ರೋ ಎಂದು ಮರುನಾಮಕರಣ ಮಾಡಲಾಯಿತು. ಈಗ ಇಸ್ರೋ ಜಗತ್ತಿನ ಅತ್ಯಂತ ಗೌರವಾನ್ವಿತ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ.
ಭಾರತದ ಬಾಹ್ಯಾಕಾಶ ಯಾನ 1975ರಲ್ಲಿ ಆರ್ಯಭಟ ಉಪಗ್ರಹದ ಮೂಲಕ ಆರಂಭಗೊಂಡಿತು. ಬಳಿಕ 1979ರಲ್ಲಿ ಭಾಸ್ಕರ, 1980ರಲ್ಲಿ ರೋಹಿಣಿ-1 ಉಪಗ್ರಹಗಳು ಉಡಾವಣೆಗೊಂಡವು. 1984ರಲ್ಲಿ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಭಾರತೀಯ ಎನಿಸಿದರು. ಇಸ್ರೋ ತನ್ನ ರಾಕೆಟ್ ಕುಟುಂಬವನ್ನು ನಿರ್ಮಿಸಿದ್ದು, ನಂಬಿಕಾರ್ಹ ಪಿಎಸ್ಎಲ್‌ವಿ, ಶಕ್ತಿಶಾಲಿ ಜಿಎಸ್ಎಲ್‌ವಿ, ಮತ್ತು ಸಮರ್ಥವಾದ ಎಲ್‌ವಿಎಂ3 ರಾಕೆಟ್‌ಗಳನ್ನು ಒಳಗೊಂಡಿದೆ. ಇನ್ನು ಗ್ರಹಗಳ ಅನ್ವೇಷಣೆ ಭಾರತದ ಇನ್ನೊಂದು ಮಹತ್ವದ ಅಧ್ಯಾಯವಾಯಿತು. ಚಂದ್ರಯಾನ 1 ಚಂದ್ರನ ಮೇಲ್ಮೈಯಲ್ಲಿ ನೀರು ಇರುವುದನ್ನು 2008ರಲ್ಲಿ ಪತ್ತೆಹಚ್ಚಿತು.
2014ರ ಮಾರ್ಸ್ ಆರ್ಬಿಟರ್ ಮಿಷನ್ ಮೂಲಕ ಭಾರತ ಮಂಗಳ ಗ್ರಹ ತಲುಪಿದ ಮೊದಲ ಏಷ್ಯನ್ ದೇಶ ಎನಿಸಿಕೊಂಡಿತು. ಚಂದ್ರಯಾನ 3 ಯೋಜನೆ 2023ರಲ್ಲಿ ಯಶಸ್ವಿ ಲ್ಯಾಂಡಿಂಗ್ ನಡೆಸಿದ್ದು, ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಮತ್ತು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಎಂಬ ಗೌರವವನ್ನು ಭಾರತಕ್ಕೆ ಒದಗಿಸಿತು. ಆದರೆ, ಇಸ್ರೋದ ಕಾರ್ಯಗಳು ನಮ್ಮ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುತ್ತಲೇ ಇವೆ. ಸಂವಹನ ಉಪಗ್ರಹಗಳು ಜನರನ್ನು ಪರಸ್ಪರ ಸಂಪರ್ಕಿಸಿದರೆ, ಹವಾಮಾನ ಉಪಗ್ರಹಗಳು ನೈಸರ್ಗಿಕ ವಿಕೋಪಗಳನ್ನು ಅಂದಾಜಿಸಲು ನೆರವಾಗುತ್ತಿವೆ. ನಾವಿಕ್ ವಾಹನಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರೆ, ಟೆಲಿಮೆಡಿಸಿನ್ ನಗರಗಳ ವೈದ್ಯರು ಮತ್ತು ದುರ್ಗಮ ಪ್ರದೇಶಗಳ ರೋಗಿಗಳ ನಡುವೆ ಸಂಪರ್ಕ ಏರ್ಪಡಿಸುತ್ತದೆ.
ಭಾರತದ ಭವಿಷ್ಯ ಅತ್ಯಂತ ಆಸಕ್ತಿಕರವಾಗಿ ತೋರುತ್ತಿದೆ. ಗಗನಯಾನ ಯೋಜನೆಯಡಿ 2027ರ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿ ಹಾಕಿಕೊಳ್ಳಲಾಗಿದೆ. 2035ರ ವೇಳೆಗೆ ಭಾರತದ ಬಾಹ್ಯಾಕಾಶ ನಿಲ್ದಾಣ ನಿರ್ಮಾಣಗೊಳ್ಳುವ ನಿರೀಕ್ಷೆಗಳಿವೆ. 2040ರಲ್ಲಿ ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಅಂಗಳಕ್ಕೆ ಕಳುಹಿಸುವುದು ಇಸ್ರೋ ಗುರಿ. ಇಸ್ರೋದ ಯಶಸ್ಸಿಗೆ ಅದು ಕಡಿಮೆ ವೆಚ್ಚದಲ್ಲಿ ಯೋಜನೆಗಳನ್ನು ರೂಪಿಸುವುದು ಪ್ರಮುಖ ಕಾರಣವಾಗಿದೆ. ಮಂಗಳಯಾನ ಯೋಜನೆಯನ್ನು ಭಾರತ ಕೇವಲ 74 ಮಿಲಿಯನ್ ಡಾಲರ್‌ನಲ್ಲಿ ಕೈಗೊಂಡಿದ್ದು, ಇದು ಬಹುತೇಕ ಎಲ್ಲ ಹಾಲಿವುಡ್ ಚಲನಚಿತ್ರಗಳ ನಿರ್ಮಾಣಕ್ಕಿಂತಲೂ ಕಡಿಮೆ ವೆಚ್ಚವಾಗಿದೆ. ಭಾರತ ಅನುಸರಿಸುತ್ತಿರುವ ಈ ವಿಧಾನ ಅದನ್ನು ಜಗತ್ತಿನ ವಿವಿಧ ದೇಶಗಳಿಗೆ ಉಪಗ್ರಹ ಉಡಾವಣೆಗೆ ಆದ್ಯತೆಯ ಸಹಯೋಗಿಯನ್ನಾಗಿಸಿದೆ.
ಇಸ್ರೋದ ಯಶಸ್ಸು ಬಾಹ್ಯಾಕಾಶ ಅನ್ವೇಷಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಭೂ ವೀಕ್ಷಣಾ ಉಪಗ್ರಹಗಳು ಬೆಳೆಗಳನ್ನು ಗಮನಿಸುತ್ತಾ, ಅರಣ್ಯನಾಶವನ್ನು ದಾಖಲಿಸುತ್ತಿದ್ದು, ಜಲ ಸಂಪನ್ಮೂಲಗಳ ನಿರ್ವಹಣೆಗೆ ನೆರವಾಗುತ್ತಿವೆ. ವಿಕೋಪಗಳ ಸಂದರ್ಭಗಳಲ್ಲಿ ಇಸ್ರೋ ಉಪಗ್ರಹಗಳು ರಕ್ಷಣಾ ಕಾರ್ಯಾಚರಣೆಗಳಿಗೆ ಅವಶ್ಯಕ ನೆರವು ನೀಡುತ್ತವೆ. ಇಂದು ಯುವ ಭಾರತೀಯರು ಬಾಹ್ಯಾಕಾಶ ವೃತ್ತಿಗಳನ್ನೂ ಸಾಧ್ಯತೆಗಳನ್ನಾಗಿ ಪರಿಗಣಿಸುತ್ತಿದ್ದಾರೆ. ಇಸ್ರೋ ವಿವಿಧ ಶಾಲೆಗಳಲ್ಲಿ ವಿಸ್ತರಣಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಮುಂದಿನ ತಲೆಮಾರಿನ ವಿಜ್ಞಾನಿಗಳಿಗೆ ಸ್ಫೂರ್ತಿ ನೀಡುತ್ತಿದೆ. ವಿದ್ಯಾರ್ಥಿ ಉಪಗ್ರಹ ಯೋಜನೆಯಡಿ ವಿಶ್ವವಿದ್ಯಾಲಯಗಳ ತಂಡಗಳಿಗೆ ತಮ್ಮ ಸಣ್ಣ ಉಪಗ್ರಹಗಳನ್ನು ಉಡಾವಣೆಗೊಳಿಸಲು ಅವಕಾಶ ಮಾಡಿಕೊಡುತ್ತದೆ.
ಖಾಸಗಿ ಬಾಹ್ಯಾಕಾಶ ವಲಯವೂ ಈಗ ಪ್ರಗತಿ ಸಾಧಿಸುತ್ತಿದೆ. ಸ್ಕೈರೂಟ್ ಏರೋಸ್ಪೇಸ್ ಮತ್ತು ಅಗ್ನಿಕುಲ್ ಕಾಸ್ಮೋಸ್‌ನಂತಹ ಖಾಸಗಿ ಸಂಸ್ಥೆಗಳು ನವೀನ ಬಾಹ್ಯಾಕಾಶ ಯೋಜನೆಗಳನ್ನು ರೂಪಿಸುತ್ತಿವೆ. ಸರ್ಕಾರಿ ಸುಧಾರಣೆಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಿವೆ. ಅಂತಾರಾಷ್ಟ್ರೀಯ ಸಹಯೋಗಗಳು ಜಾಗತಿಕವಾಗಿ ಭಾರತದ ಸ್ಥಾನವನ್ನು ಬಲಪಡಿಸಿವೆ. ಫ್ರಾನ್ಸ್, ಜಪಾನ್, ಅಮೆರಿಕಾಗಳ ಜೊತೆಗಿನ ಜಂಟಿ ಯೋಜನೆಗಳು ಭಾರತದ ವೈಜ್ಞಾನಿಕ ಜ್ಞಾನವನ್ನು ಹೆಚ್ಚಿಸಿವೆ. ಈ ಸಹಭಾಗಿತ್ವಗಳು ಬಾಹ್ಯಾಕಾಶ ನೀತಿಯ ಮೇಲೆ ಭಾರತದ ಪ್ರಭಾವ ಹೆಚ್ಚುವಂತೆ ಮಾಡಿವೆ. ಇಸ್ರೋದ ಯಶಸ್ಸಿನಲ್ಲಿ ಮಹಿಳೆಯರೂ ಮುಖ್ಯಪಾತ್ರ ವಹಿಸಿದ್ದಾರೆ. ಭಾರತದ ರಾಕೆಟ್ ಮಹಿಳೆ ಎಂದು ಹೆಸರಾದ ಋತು ಕರಿಧಾಲ್ ಸೇರಿದಂತೆ, ಅಸಂಖ್ಯಾತ ಮಹಿಳಾ ವೃತ್ತಿಪರ ಮಹಿಳೆಯರು ಭಾರತದ ಬಾಹ್ಯಾಕಾಶ ಸಾಧನೆಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಬಾಹ್ಯಾಕಾಶ ಯೋಜನೆಗಳು ಈಗ ಭಾರತದ ರಾಷ್ಟ್ರೀಯ ಹೆಮ್ಮೆಗೆ ಕಾರಣವಾಗಿವೆ. ಚಂದ್ರಯಾನ 3 ಯೋಜನೆ ಚಂದ್ರನ ಮೇಲ್ಮೈಯಲ್ಲಿ ಇಳಿಯುವಾಗ ಕೋಟ್ಯಂತರ ಭಾರತೀಯರು ಉತ್ಸುಕತೆಯಿಂದ ಅದನ್ನು ವೀಕ್ಷಿಸುತ್ತಿದ್ದರು. ಈ ಯಶಸ್ಸು ಯುವ ಭಾರತೀಯರ ಮನಸ್ಸುಗಳಲ್ಲಿ ಅಚ್ಚೊತ್ತಿ ನಿಂತಿವೆ. ರಾಷ್ಟ್ರೀಯ ಬಾಹ್ಯಾಕಾಶ ದಿನ 2025 ಕೇವಲ ಚಂದ್ರಯಾನ 3ರ ಯಶಸ್ಸಿನ ಸಂಭ್ರಮಕ್ಕೆ ಸೀಮಿತವಾಗಿಲ್ಲ. ಬದಲಿಗೆ, ಇಸ್ರೋ ಮತ್ತು ಅದರ ಸಿಬ್ಬಂದಿಗಳು ಸಾಗಿಬಂದ ಹಾದಿಯನ್ನು ಸಂಭ್ರಮಿಸುತ್ತದೆ. ಮೀನುಗಾರಿಕಾ ಗ್ರಾಮವಾದ ತುಂಬಾದಲ್ಲಿ ಸಣ್ಣ ರಾಕೆಟ್‌ಗಳನ್ನು ಉಡಾಯಿಸುವುದರಿಂದ ಆರಂಭಗೊಂಡ ಯಾತ್ರೆ ಈಗ ಚಂದ್ರನ ಅಂಗಳದಲ್ಲಿ ಇಳಿಯುವ ತನಕ ಸಾಗಿದೆ. ಕನಸುಗಳಿಗೆ ಬೆಂಬಲವಾಗಿ ಕಠಿಣ ಪರಿಶ್ರಮ, ವೈಜ್ಞಾನಿಕ ಮನೋಭಾವ, ಮತ್ತು ದೃಢ ನಿಶ್ಚಯಗಳಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಭಾರತ ಸಾಬೀತುಪಡಿಸಿದೆ.
ಬಾಹ್ಯಾಕಾಶ ದಿನ ನಮಗೆ ಬಾಹ್ಯಾಕಾಶ ಅನ್ವೇಷಣೆ ನಮ್ಮ ಜೀವನದಿಂದ ದೂರದಲ್ಲಿ ನಡೆಯುತ್ತಿರುವ ಪ್ರಕ್ರಿಯೆಯಲ್ಲ, ಬದಲಿಗೆ ಅದು ನಮ್ಮ ಶಿಕ್ಷಣ, ಕೃಷಿ, ಸಂವಹನ ಮತ್ತು ವಿಪತ್ತು ನಿರ್ವಹಣೆಯನ್ನು ಉತ್ತಮಪಡಿಸುವ, ಜೀವನಕ್ಕೆ ಹತ್ತಿರವಾದ ವಿಚಾರ ಎನ್ನುವುದನ್ನು ನೆನಪಿಸುತ್ತದೆ. ಭಾರತೀಯ ಬಾಹ್ಯಾಕಾಶ ದಿನ ಭಾರತ ತನ್ನ ಕಾಲುಗಳನ್ನು ಸ್ಥಿರವಾಗಿ ನೆಲದಲ್ಲಿ ಊರಿದ್ದರೂ, ನಕ್ಷತ್ರಗಳನ್ನು ತಲುಪುವ ಪ್ರಯತ್ನ ನಡೆಸುತ್ತಿರುವ ಕಥೆಯನ್ನು ಸಾರುತ್ತಾ, ದೂರದೃಷ್ಟಿ ಮತ್ತು ಪ್ರಯತ್ನಗಳಿಗೆ ಆಕಾಶವೂ ಮಿತಿಯಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತ ತನ್ನ ಬಾಹ್ಯಾಕಾಶ ಯಾನವನ್ನು ಮುಂದುವರಿಸಿದ್ದು, ರಾಷ್ಟ್ರೀಯ ಬಾಹ್ಯಾಕಾಶ ದಿನ ದೇಶಕ್ಕೆ ಸ್ಫೂರ್ತಿ ನೀಡಿ, ಪ್ರತಿಯೊಬ್ಬ ಪ್ರಜೆಗೂ ಅನ್ವೇಷಿಸುವ ಧೈರ್ಯ ಇರುವವರಿಗೆ ಮತ್ತು ಕನಸುಗಳನ್ನು ನನಸಾಗಿಸುವ ಬದ್ಧತೆ ಹೊಂದಿರುವವರಿಗೆ ಜಗತ್ತು ಮಿತಿಯಿಲ್ಲದ ಸಾಧ್ಯತೆಗಳನ್ನು ಒದಗಿಸುತ್ತದೆ ಎಂದು ನೆನಪಿಸುತ್ತಿದೆ.
