ಹೆಲಿನಾ ಮತ್ತು ಧ್ರುವಾಸ್ತ್ರ ಕ್ಷಿಪಣಿಗಳು ಭಾರತೀಯ ಸೇನೆಯ ಆಧುನಿಕ ಮುಖ. ಈ 'ಫೈರ್ ಆ್ಯಂಡ್ ಫರ್ಗೆಟ್' ತಂತ್ರಜ್ಞಾನ ಶತ್ರು ಟ್ಯಾಂಕ್‌ಗಳನ್ನು ಮೇಲಿನಿಂದ ನಾಶಪಡಿಸುವ ಸಾಮರ್ಥ್ಯ ಹೊಂದಿದೆ. 7 ಕಿಲೋಮೀಟರ್ ದೂರದಿಂದಲೇ ಶತ್ರು ಟ್ಯಾಂಕ್‌ಗಳನ್ನು ನಾಶಪಡಿಸಬಲ್ಲ ದೇಶೀಯ ನಿರ್ಮಾಣದ ಕ್ಷಿಪಣಿ
ಪೋಖ್ರಾನಿನ ಮರುಭೂಮಿಯ ಗಾಳಿಯನ್ನು ಸೀಳುತ್ತಾ ಸಾಗುವ ಹೆಲಿಕಾಪ್ಟರ್‌ಗಳ ರೋಟಾರ್ ಸದ್ದು ಹೆಚ್ಚುತ್ತಿರುವ ಭಾರತೀಯ ಮಿಲಿಟರಿ ಸಾಮರ್ಥ್ಯದ ಸದ್ದನ್ನು ಸೂಚಿಸುತ್ತಿದೆ. ಆದರೆ, ನಿಜಕ್ಕೂ ಭಾರತದ ಸಾಧಿಸಿರುವ ತಾಂತ್ರಿಕ ಪ್ರಗತಿಯ ಕಥೆಯನ್ನು ಹೇಳುವುದು ಈ ಹೆಲಿಕಾಪ್ಟರ್‌ಗಳು ತಮ್ಮ ಹೊಟ್ಟೆಯ ಕೆಳಗೆ ಹೊತ್ತು ಸಾಗುತ್ತಿರುವ ಆಯುಧಗಳು. ಹಾಗಾದರೆ ಯಾವುವು ಈ ಆಯುಧಗಳು? ಅವೇ ಹೆಲಿನಾ ಮತ್ತು ಅದರ ಅವಳಿ ಆಯುಧ ವ್ಯವಸ್ಥೆಯಾದ ಧ್ರುವಾಸ್ತ್ರ, ಅಥವಾ ಹೆಲಿಕಾಪ್ಟರ್ ಲಾಂಚ್ಡ್ ನಾಗ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ಸ್! ಈ ಆಯುಧ ವ್ಯವಸ್ಥೆಗಳು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಮಹತ್ವಾಕಾಂಕ್ಷೆಗಳಾದ ಸ್ವಾವಲಂಬನೆ, ತಾಂತ್ರಿಕ ಪ್ರಗತಿ ಮತ್ತು ಕಾರ್ಯತಂತ್ರದ ಸಾಮರ್ಥ್ಯಗಳ ಪ್ರತಿನಿಧಿಗಳಾಗಿವೆ.
ಹೆಲಿನಾ ಯಾಕೆ ವಿಶೇಷವಾಗಿದೆ?
ಹೆಲಿನಾ ಮತ್ತು ಧ್ರುವಾಸ್ತ್ರಗಳು ನಮ್ಮ ಬತ್ತಳಿಕೆಯಲ್ಲಿರುವ ಹತ್ತರಲ್ಲಿ ಹನ್ನೊಂದು ಎನ್ನುವಂತಹ ಆಯುಧಗಳಲ್ಲ. ಅವುಗಳನ್ನು ಮಿಲಿಟರಿ ತಜ್ಞರು 'ಮೂರನೇ ತಲೆಮಾರಿನ ಫೈರ್ ಆಂಡ್ ಫಾರ್ಗೆಟ್' ಆಯುಧಗಳು ಎಂದು ಬಣ್ಣಿಸುತ್ತಾರೆ. ಇವೆರಡು ಆಯುಧಗಳಲ್ಲಿನ ಪ್ರಮುಖ ವ್ಯತ್ಯಾಸ ಎಂದರೆ, ಅವುಗಳನ್ನು ಯಾರು ಬಳಸುತ್ತಾರೆ ಎನ್ನುವುದು. ಹೆಲಿನಾ ಎನ್ನುವುದು ಭೂ ಸೇನೆಯ ಆವೃತ್ತಿಯಾಗಿದ್ದರೆ, ಧ್ರುವಾಸ್ತ್ರವನ್ನು ಭಾರತೀಯ ವಾಯು ಸೇನೆಗಾಗಿ ವಿಶೇಷವಾಗಿ ಅಭಿವೃದ್ಧಿ ಪಡಿಸಲಾಗಿದೆ. ಎರಡೂ ಆಯುಧಗಳ ಅಂತರ್ಗತ ತಂತ್ರಜ್ಞಾನ ಒಂದೇ ರೀತಿಯಾಗಿದ್ದರೂ, ಅವುಗಳ ಉದ್ದೇಶಿತ ಸೇವೆಗಳಿಗೆ ಅನುಸಾರವಾಗಿ ಅವುಗಳನ್ನು ಇನ್ನಷ್ಟು ಉತ್ತಮಗೊಳಿಸಲಾಗಿದೆ. ನಮ್ಮ ಯೋಧರು ಈ ಕ್ಷಿಪಣಿಗಳನ್ನು ಒಂದು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್ಎಚ್) ನಿಂದ ಪ್ರಯೋಗಿಸಿದಾಗ, ಅವರು ಅದನ್ನು ಗುರಿಯತ್ತ ನಿರ್ದೇಶಿಸುತ್ತಾ ಇರುವ ಅಗತ್ಯವಿಲ್ಲ. ಒಂದು ಬಾರಿ ಉಡಾವಣೆಗೊಳಿಸಿದರೆ, ಹೆಲಿನಾ ಮತ್ತು ಧ್ರುವಾಸ್ತ್ರ ಎರಡೂ ತಮ್ಮದೇ ಆದ ಅತ್ಯಾಧುನಿಕ ಕಂಪ್ಯೂಟರ್ ಮೆದುಳುಗಳನ್ನು ಬಳಸಿಕೊಂಡು, ಶತ್ರು ಯುದ್ಧ ಟ್ಯಾಂಕ್‌ಗಳನ್ನು ವೀಕ್ಷಿಸಲು ಇನ್‌ಫ್ರಾರೆಡ್ ಇಮೇಜಿಂಗ್ ತಂತ್ರಜ್ಞಾನವನ್ನು ಬಳಸಿ, ಅತ್ಯಂತ ನಿಖರವಾಗಿ ಗುರಿಯ ಮೇಲೆ ದಾಳಿ ನಡೆಸುತ್ತವೆ. ಈ ಫೈರ್ ಆಂಡ್ ಫಾರ್ಗೆಟ್ ಸಾಮರ್ಥ್ಯದ ಕಾರಣದಿಂದ, ಕ್ಷಿಪಣಿಯನ್ನು ಪ್ರಯೋಗಿಸಿದ ಬಳಿಕ ಕ್ಷಿಪಣಿಗೆ ನಿರ್ದೇಶನ ನೀಡಲು ಅಲ್ಲೇ ಉಳಿದು ಶತ್ರುಗಳ ಕಣ್ಣಿಗೆ ಬೀಳುವ ಅಗತ್ಯವಿಲ್ಲದ್ದರಿಂದ, ನಮ್ಮ ಹೆಲಿಕಾಪ್ಟರ್‌ಗಳು ಕ್ಷಿಪಣಿ ಉಡಾಯಿಸಿದ ನಂತರ ಸುರಕ್ಷಿತ ಸ್ಥಳಕ್ಕೆ ಮರಳಬಹುದು.
ಈ ಆಯುಧಗಳ ಕುರಿತ ಅಂಕಿ ಅಂಶಗಳೂ ಕುತೂಹಲಕರವಾಗಿವೆ. ಹೆಲಿನಾ 500 ಮೀಟರ್‌ನಿಂದ 7 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಅಂದಾಜು 45 ಕೆಜಿ ತೂಕ ಹೊಂದಿದೆ. ಇದು ಬಹುತೇಕ 6 ಅಡಿ ಉದ್ದವಿದ್ದು, 8 ಕೆಜಿಯಷ್ಟು ಸ್ಫೋಟಕಗಳನ್ನು ಒಯ್ಯುತ್ತದೆ. ಈ ತಾಂತ್ರಿಕ ವೈಶಿಷ್ಟ್ಯಗಳು ಭಾರತೀಯ ರಕ್ಷಣಾ ತಂತ್ರಕ್ಕೆ ಕ್ಷಿಪಣಿಗಳು ಯಾಕೆ ಕ್ರಾಂತಿಕಾರಕವಾಗಿವೆ ಎಂಬುದರ ಮೇಲ್ನೋಟವನ್ನಷ್ಟೇ ನೀಡುತ್ತವೆ.
ಎರಡು ವ್ಯವಸ್ಥೆಗಳು, ಒಂದು ತಂತ್ರಜ್ಞಾನ
ಹೆಲಿನಾ ಮತ್ತು ಧ್ರುವಾಸ್ತ್ರ ಹೊಂದಿರುವ ಡ್ಯುಯಲ್ ಅಟ್ಯಾಕ್ ಸಾಮರ್ಥ್ಯ ಅವುಗಳನ್ನು ಸಾಂಪ್ರದಾಯಿಕ ಕ್ಷಿಪಣಿಗಳಿಂದ ಭಿನ್ನವಾಗಿಸಿದೆ. ಎರಡೂ ಕ್ಷಿಪಣಿ ವ್ಯವಸ್ಥೆಗಳು ನೇರ ದಾಳಿ ಮತ್ತು ಮೇಲಿನಿಂದ ದಾಳಿ ನಡೆಸುವ ರೀತಿಗಳಲ್ಲಿ ಗುರಿಗಳ ಮೇಲೆ ಆಕ್ರಮಣ ಮಾಡಬಲ್ಲವು. ಎರಡರ ಮೂಲಭೂತ ತಂತ್ರಜ್ಞಾನ ಒಂದೇ ರೀತಿಯಾಗಿದ್ದರೂ, ಪ್ರತಿಯೊಂದು ಆಯುಧವೂ ಅದರ ಸೇನಾ ವಿಭಾಗದ ಬಳಕೆಯ ಅನುಗುಣವಾಗಿ ಸೂಕ್ತ ಮಾರ್ಪಾಡುಗಳನ್ನು ಹೊಂದಿದೆ. ನೇರ ದಾಳಿ ವಿಧಾನದಲ್ಲಿ, ಕ್ಷಿಪಣಿ ಕಡಿಮೆ ಎತ್ತರದಲ್ಲಿ ನೇರವಾಗಿ ತನ್ನ ಗುರಿಯತ್ತ ಸಾಗುತ್ತದೆ. ಇದು ಒಂದು ರೀತಿ ನಿಖರವಾಗಿ ಗುರಿಯತ್ತ ಸಾಗುವ ಬಾಣದಂತೆ ಚಲಿಸುತ್ತದೆ. ನೈಜವಾಗಿ ಇಲ್ಲಿನ ಗೇಮ್ ಚೇಂಜರ್ ಎಂದರೆ ಮೇಲಿನಿಂದ ದಾಳಿ ನಡೆಸುವ (ಟಾಪ್ ಅಟ್ಯಾಕ್) ವಿಧಾನ.
ಮೇಲಿನಿಂದ ದಾಳಿ ನಡೆಸುವ ವಿಧಾನದಲ್ಲಿ, ಹೆಲಿನಾ ಮತ್ತು ಧ್ರುವಾಸ್ತ್ರ ಎರಡೂ ಕ್ಷಿಪಣಿಗಳು ಉಡಾವಣೆಗೊಂಡ ಕೂಡಲೇ ಮೇಲೆ ಮೇಲೆ ಏರುತ್ತಾ, ಹೆಚ್ಚು ಎತ್ತರಕ್ಕೆ ಕ್ಷಿಪ್ರವಾಗಿ ಸಾಗುತ್ತವೆ. ಬಳಿಕ ಶತ್ರು ಟ್ಯಾಂಕ್ ಮೇಲೆ ದಾಳಿ ನಡೆಸಲು ಮೇಲಿನಿಂದ ಕೆಳಕ್ಕೆ ನೆಗೆಯುತ್ತವೆ. ಇದು ಯಾಕೆ ಮಹತ್ವದ್ದು? ಆಧುನಿಜ ಯುದ್ಧ ಟ್ಯಾಂಕ್‌ಗಳು ತಮ್ಮ ಮುಂಭಾಗ ಮತ್ತು ಬದಿಗಳಲ್ಲಿ ಬಹಳಷ್ಟು ಆಯುಧಗಳನ್ನು ಹೊಂದಿರುತ್ತವೆ. ಆದರೆ, ಅವುಗಳ ಮೇಲ್ಭಾಗ ಇದಕ್ಕೆ ಹೋಲಿಸಿದರೆ ದುರ್ಬಲವಾಗಿರುತ್ತವೆ. ಮೇಲಿನಿಂದ ದಾಳಿ ನಡೆಸುವ ಮೂಲಕ, ಕ್ಷಿಪಣಿಗಳು ಸಾಂಪ್ರದಾಯಿಕ ಕ್ಷಿಪಣಿಗಳನ್ನು ತಡೆಯುವ ವಿನ್ಯಾಸ ಹೊಂದಿರುವ ಎಕ್ಸ್‌ಪ್ಲೋಸಿವ್ ರಿಯಾಕ್ಟಿವ್ ಆರ್ಮರ್ ನಂತಹ ಅತ್ಯಾಧುನಿಕ ಟ್ಯಾಂಕ್‌ಗಳ ಮೂಲಕವೂ ಒಳಗೆ ತೂರಬಲ್ಲವು.
ಭಾರತಕ್ಕಾಗಿ ಮತ್ತು ಭಾರತದಲ್ಲಿ ನಿರ್ಮಾಣ
ಹೆಲಿನಾ ಮತ್ತು ಧ್ರುವಾಸ್ತ್ರ ಎರಡನ್ನೂ ಡಿಆರ್‌ಡಿಒದ ಮಿಸೈಲ್ಸ್ ಆ್ಯಂಡ್ ಸ್ಟ್ರಾಟೆಜಿಕ್ ಸಿಸ್ಟಮ್ಸ್ (ಎಂಎಸ್ಎಸ್) ಕ್ಲಸ್ಟರ್ ಅಡಿಯಲ್ಲಿ ಹೈದರಾಬಾದಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿಆರ್‌ಡಿಎಲ್) ಅಭಿವೃದ್ಧಿ ಪಡಿಸಿದೆ. ಉಭಯ ಕ್ಷಿಪಣಿಗಳ ಜಂಟಿ ಬಳಕೆದಾರ ಪ್ರಯೋಗಗಳನ್ನು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್ಎಚ್) ಮೂಲಕ ಮರುಭೂಮಿ ಪ್ರದೇಶಗಳಲ್ಲಿ ನಡೆಸಲಾಗಿದ್ದು, ಕ್ಷಿಪಣಿಗಳು ವಿವಿಧ ಸೇನಾ ವಿಭಾಗಗಳಲ್ಲಿ ತಮ್ಮ ಕಾರ್ಯಾಚರಣಾ ಸಿದ್ಧತೆಯನ್ನು ಪ್ರದರ್ಶಿಸಿವೆ. ಇವು ಕೇವಲ ರಾಷ್ಟ್ರೀಯ ಹೆಮ್ಮೆಯ ವಿಚಾರವಷ್ಟೇ ಅಲ್ಲ. ಬದಲಿಗೆ, ಕಾರ್ಯತಂತ್ರದ ಸ್ವಾತಂತ್ರ್ಯದ ವಿಚಾರವೂ ಹೌದು. ನಾವು ದೇಶೀಯವಾಗಿ ಆಯುಧಗಳನ್ನು ಅಭಿವೃದ್ಧಿ ಪಡಿಸುವಾಗ, ನಮಗೆ ಅವುಗಳ ವಿನ್ಯಾಸ ಮಾರ್ಪಾಡುಗಳಿಂದ ಉತ್ಪಾದನಾ ವೇಳಾಪಟ್ಟಿ, ಉತ್ಪಾದನಾ ವೆಚ್ಚ ನಿರ್ವಹಣೆಯಿಂದ ತಂತ್ರಜ್ಞಾನ ಅಭಿವೃದ್ಧಿಯ ತನಕ ಎಲ್ಲದರ ಮೇಲೂ ನಿಯಂತ್ರಣ ಇರುತ್ತದೆ.
ಎರಡೂ ಆಯುಧಗಳು ಎಲ್ಲ ಹವಾಮಾನಗಳಲ್ಲಿ, ಹಗಲು ಮತ್ತು ರಾತ್ರಿಗಳಲ್ಲಿ ಕಾರ್ಯಾಚರಿಸಿ, ಸಾಂಪ್ರದಾಯಿಕ ಶಸ್ತ್ರಗಳು ಮತ್ತು ಎಕ್ಸ್‌ಪ್ಲೋಸಿವ್ ರಿಯಾಕ್ಟಿವ್ ಆರ್ಮರ್ ಹೊಂದಿರುವ ಟ್ಯಾಂಕ್‌ಗಳನ್ನೂ ಮಣಿಸಬಲ್ಲವು. ಇಂತಹ ಎಲ್ಲ ಹವಾಗುಣದಲ್ಲೂ ಕಾರ್ಯಾಚರಿಸುವ ಸಾಧ್ಯತೆಯಿಂದ, ನಮ್ಮ ಸೇನೆ ಮತ್ತು ವಾಯುಪಡೆಗಳು ವಾತಾವರಣ ಮತ್ತು ಸಮಯದ ಕುರಿತು ಚಿಂತಿಸದೆ ಇವುಗಳನ್ನು ಬಳಸಲು ಸಾಧ್ಯವಾಗುತ್ತದೆ.
ಕಾರ್ಯತಂತ್ರದ ಮಹತ್ವ
ನಮ್ಮ ನೆರೆಹೊರೆಯಲ್ಲಿ ಉದ್ವಿಗ್ನತೆಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಭಾರತ ಹೆಲಿನಾ ಮೇಲೆ ಹೂಡಿಕೆ ನಡೆಸಿದೆ. ಭಾರತದ ರಕ್ಷಣಾ ಬಜೆಟ್ ಸಹ ಹೆಚ್ಚಳ ಕಾಣುತ್ತಿದ್ದು, ಇದರೊಡನೆ ಕ್ಷಿಪ್ರ ಆಯುಧ ಖರೀದಿ, ಎಫ್‌ಡಿಐ ಅನುಮತಿ, ಮತ್ತು ಸುವ್ಯವಸ್ಥಿತ ಪರೀಕ್ಷಾ ಪ್ರಕ್ರಿಯೆಗಳಂತಹ ಸುಧಾರಣೆಗಳು ಕ್ಷಿಪಣಿ ಕ್ಷೇತ್ರ ದಾಪುಗಾಲಿಡಲು ನೆರವಾಗಿವೆ. ಇತ್ತೀಚಿಗೆ ನಡೆದಿರುವ ಚಕಮಕಿಗಳಂತೂ ಆಧುನಿಕ ಕದನಗಳು ಬಹುತೇಕ ನಿಖರ ನಿರ್ದೇಶಿತ ಆಯುಧಗಳು ಮತ್ತು ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳ ಮೇಲೆ ಅಪಾರವಾಗಿ ಅವಲಂಬಿತವಾಗಿರುವುದನ್ನು ಪ್ರದರ್ಶಿಸಿವೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಪ್ರತಿಕ್ರಿಯೆಯ ರೂಪದಲ್ಲಿ, ಭಾರತ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ಡ್ರೋನ್‌ಗಳು ಮತ್ತು ಕ್ಷಿಪಣಿ ದಾಳಿಗಳನ್ನು ತಡೆಗಟ್ಟಲು ಹೆಲಿನಾ ಮತ್ತು ಧ್ರುವಾಸ್ತ್ರ ಎರಡೂ ಕ್ಷಿಪಣಿಗಳು ಮುಖ್ಯ ಪಾತ್ರ ವಹಿಸಿದ್ದವು. ಇವುಗಳು ಮೂಲತಃ ಟ್ಯಾಂಕ್ ನಿರೋಧಕ ಕ್ಷಿಪಣಿಗಳಾಗಿದ್ದರೂ, ಅವುಗಳನ್ನು ವಿಶಾಲವಾದ ದೇಶೀಯ ರಕ್ಷಣಾ ವ್ಯವಸ್ಥೆಗೆ ಸೂಕ್ತವಾಗುವಂತೆ ಅಭಿವೃದ್ಧಿ ಪಡಿಸಿರುವುದು ನೈಜ ಯುದ್ಧದ ಸನ್ನಿವೇಶದಲ್ಲಿ ನೆರವಿಗೆ ಬಂದಿದೆ.
ರಾಷ್ಟ್ರೀಯ ಭದ್ರತೆಯನ್ನೂ ಮೀರಿ: ಆರ್ಥಿಕ ಪರಿಣಾಮಗಳು
ಹೆಲಿನಾ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ 'ಆತ್ಮನಿರ್ಭರ ಭಾರತ' ಯೋಜನೆಗೆ ಶಕ್ತಿ ನೀಡಿದೆ. ಡಿಆರ್‌ಡಿಒ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ನಂತಹ ಸಂಸ್ಥೆಗಳು ಭಾರತದ ಸ್ವಾವಲಂಬಿ ಕ್ಷಿಪಣಿ ವ್ಯವಸ್ಥೆಗಳ ರೂವಾರಿಗಳಾಗಿವೆ. ನಾವು ದೇಶೀಯವಾಗಿ ಆಯುಧಗಳ ನಿರ್ಮಾಣ ನಡೆಸುವಾಗ, ನಾವು ಅತ್ಯಂತ ಕೌಶಲಯುತ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ. ಅದರೊಡನೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ, ಮಹತ್ವದ ಸಮಯದಲ್ಲಿ ಆಯುಧ ಪೂರೈಕೆ ವ್ಯತ್ಯಯ ಉಂಟುಮಾಡಬಲ್ಲ ವಿದೇಶೀ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುತ್ತೇವೆ.
2018ರ ವರದಿಯ ಪ್ರಕಾರ, ಭಾರತೀಯ ಸೇನೆಗೆ ಭೂಮಿಯಿಂದ ಉಡಾವಣೆಗೊಳಿಸುವ 3,000 ನಾಗ್ ಕ್ಷಿಪಣಿಗಳ ಅವಶ್ಯಕತೆ ಇತ್ತು. ಇದು ಕೇವಲ ಸೇನಾ ಖರೀದಿ ಮಾತ್ರವಲ್ಲದೆ, ಮಹತ್ವದ ಔದ್ಯಮಿಕ ಅವಕಾಶವನ್ನೂ ಸೃಷ್ಟಿಸಿದೆ. ನಿರ್ಮಾಣಗೊಳ್ಳುವ ಪ್ರತಿಯೊಂದು ಹೆಲಿನಾ ಕ್ಷಿಪಣಿಯೂ ನಮ್ಮ ರಕ್ಷಣಾ ಔದ್ಯಮಿಕ ನೆಲೆಯನ್ನು ಬಲಪಡಿಸಿ, ತಾಂತ್ರಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.
ಎಎಲ್ಎಚ್ ಸಂಬಂಧ: ಸಂಪೂರ್ಣ ದೇಶೀಯ ವ್ಯವಸ್ಥೆ
ಹೆಲಿನಾ ಮತ್ತು ಧ್ರುವಾಸ್ತ್ರ ಎರಡು ಕ್ಷಿಪಣಿಗಳನ್ನು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಜೊತೆ ಅಳವಡಿಸುವುದರಿಂದ, ಭಾರತೀಯ ಭೂ ಸೇನೆ ಮತ್ತು ವಾಯು ಸೇನೆಗಳ ಅವಶ್ಯಕತೆಗೆ ಪೂರಕವಾದ ಸಂಪೂರ್ಣ ದೇಶೀಯ ಆಯುಧ ವ್ಯವಸ್ಥೆ ನಿರ್ಮಾಣವಾಗುತ್ತದೆ. ಪ್ರತಿಯೊಂದು ಎಎಲ್ಎಚ್ ಸಹ ಈ ಕ್ಷಿಪಣಿಗಳನ್ನು ಹೊಂದಿದ್ದು, 4 ಟ್ವಿನ್ ಲಾಂಚರ್‌ಗಳನ್ನು ಬಳಸಿಕೊಂಡು, 8 ಕ್ಷಿಪಣಿಗಳನ್ನು ಒಯ್ಯುತ್ತವೆ. ಅಂದರೆ, ಪ್ರತಿಯೊಂದು ಹೆಲಿಕಾಪ್ಟರ್ ಸಹ ಟ್ಯಾಂಕ್‌ಗಳನ್ನು ಬೇಟೆಯಾಡುವ ಶಕ್ತಿಶಾಲಿ ಆಯುಧವಾಗುತ್ತದೆ. ಇದು ಹಲವು ಸಶಸ್ತ್ರ ಗುರಿಗಳತ್ತ ವಾಯುಪಡೆ ಅಥವಾ ಭೂ ಸೇನೆಯ ಒಂದೇ ಕಾರ್ಯಾಚರಣೆಯಲ್ಲಿ ದಾಳಿ ನಡೆಸಬಲ್ಲದಾಗಿದೆ.
ಹಾಗೆಂದು ಈ ಆಯುಧಗಳು ಬೀರುವ ಮಾನಸಿಕ ಪರಿಣಾಮಗಳನ್ನೂ ಕಡಿಮೆಯಾಗಿ ಪರಿಗಣಿಸಲು ಸಾಧ್ಯವಿಲ್ಲ! ತಮ್ಮ ಸಶಸ್ತ್ರ ವಾಹನಗಳಲ್ಲಿ ಸುರಕ್ಷಿತ ಭಾವನೆ ಹೊಂದಿದ್ದ ಶತ್ರು ಟ್ಯಾಂಕ್‌ಗಳ ಕಮಾಂಡರ್‌ಗಳು ಈಗ ಹೆಲಿಕಾಪ್ಟರ್‌ಗಳಿಂದ ಎರಗಬಲ್ಲ ನಿಖರ ದಾಳಿಯ ಕುರಿತು ನಿರಂತರವಾಗಿ ಆತಂಕ ಹೊಂದಿರಬೇಕಿದೆ. ಇದು ಭೂ ಯುದ್ಧದ ಸಮಗ್ರ ಆಯಾಮವನ್ನೇ ಬದಲಾಯಿಸಿದೆ.
ಸವಾಲುಗಳು ಮತ್ತು ಭವಿಷ್ಯದ ಅಭಿವೃದ್ಧಿ
ಯಾವುದೇ ಆಧುನಿಕ ಆಯುಧ ವ್ಯವಸ್ಥೆಯ ರೀತಿ, ಹೆಲಿನಾ ಮತ್ತು ಧ್ರುವಾಸ್ತ್ರಗಳು ಸಹ ಅಭಿವೃದ್ಧಿ ಸವಾಲುಗಳನ್ನು ಎದುರಿಸಿವೆ. 2015ರಲ್ಲಿ ನಡೆಸಿದ ಪರೀಕ್ಷೆಗಳ ಸಂದರ್ಭದಲ್ಲಿ ಮೂರು ಕ್ಷಿಪಣಿ ಪ್ರಯೋಗಗಳನ್ನು ನಡೆಸಲಾಯಿತು. ಎರಡು ಕ್ಷಿಪಣಿಗಳು 7 ಕಿಲೋಮೀಟರ್ ದೂರದಲ್ಲಿದ್ದ ಗುರಿಗಳ ಮೇಲೆ ನಿಖರವಾಗಿ ದಾಳಿ ನಡೆಸಿದರೆ, ಒಂದು ಕ್ಷಿಪಣಿ ಗುರಿ ತಪ್ಪಿತ್ತು. ಆದರೆ, ನಿರಂತರ ಸುಧಾರಣೆಗಳ ಪರಿಣಾಮವಾಗಿ, ಕ್ಷಿಪಣಿಗಳ ನಂಬಿಕಾರ್ಹತೆ ಮತ್ತು ನಿಖರತೆ ಬಹಳಷ್ಟು ಸುಧಾರಿಸಿದೆ. ಎರಡೂ ಕ್ಷಿಪಣಿ ವ್ಯವಸ್ಥೆಗಳ ಬಳಕೆದಾರ ಪ್ರಯೋಗಗಳನ್ನು 2018ರಿಂದ ನಡೆಸಲಾಗುತ್ತಿದ್ದು, ಅವುಗಳ ಕಾರ್ಯಾಚರಣಾ ಸಿದ್ಧತೆಗೆ ಸಾಕ್ಷಿಯಾಗಿವೆ.
ಕ್ಷಿಪಣಿಯ ಸುಧಾರಿತ ಆವೃತ್ತಿ ಇಲೆಕ್ಟ್ರೋ - ಆಪ್ಟಿಕಲ್ ಥರ್ಮಲ್ ಇಮೇಜರ್ (ಇಒ/ಐಆರ್) ವ್ಯವಸ್ಥೆ ಮತ್ತು ಕ್ಷಿಪಣಿಯ ತುದಿಗೆ ಒಂದು ಹೊಸದಾದ, 15ರಿಂದ 25 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಮಿಲಿಮೀಟರ್ ವೇವ್ ಆ್ಯಕ್ಟಿವ್ ರೇಡಾರ್ ಹೋಮಿಂಗ್ (ಎಂಎಂಡಬ್ಲ್ಯು) ಶೋಧಕವನ್ನು ಅಳವಡಿಸಲಾಗಿದೆ. ಈ ಅಭಿವೃದ್ಧಿಗಳ ಮೂಲಕ, ಹೆಲಿನಾ ಈಗ ಕೇವಲ ಒಂದು ಹಾಗೆಯೇ ಉಳಿಯುವ ವ್ಯವಸ್ಥೆಯಾಗದೆ, ನಿರಂತರವಾಗಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಆಯುಧವಾಗಿದೆ.
* ಇಲೆಕ್ಟ್ರೋ ಆಪ್ಟಿಕಲ್ ಥರ್ಮಲ್ ಇಮೇಜರ್ (ಇಒ/ಐಆರ್): ಈ ವ್ಯವಸ್ಥೆ ದೃಗ್ಗೋಚರ ಬೆಳಕು (ಇಲೆಕ್ಟ್ರೋ ಆಪ್ಟಿಕಲ್) ಮತ್ತು ಹೀಟ್ ಸಿಗ್ನೇಚರ್ (ಇನ್‌ಫ್ರಾರೆಡ್) ಎರಡನ್ನೂ ಬಳಸಿಕೊಂಡು ಗುರಿಗಳನ್ನು ಗುರುತಿಸಿ ಹಿಂಬಾಲಿಸುತ್ತದೆ. ಇದು ಕ್ಷಿಪಣಿಗೆ ಹಗಲು, ರಾತ್ರಿ ಮತ್ತು ವೀಕ್ಷಣೆ ಕಷ್ಟಕರವಾದ ಸಂದರ್ಭದಲ್ಲೂ ಶತ್ರು ಕ್ಷಿಪಣಿಗಳನ್ನು ಗುರುತಿಸಿ, ದಾಳಿ ನಡೆಸಲು ನೆರವಾಗುತ್ತದೆ.
* ಮಿಲಿಮೀಟರ್ ವೇವ್ ಆ್ಯಕ್ಟಿವ್ ರೇಡಾರ್ ಹೋಮಿಂಗ್ (ಎಂಎಂಡಬ್ಲ್ಯು) ಸೀಕರ್:
ಈ ರೇಡಾರ್ ವ್ಯವಸ್ಥೆ ಹೈ ಫ್ರೀಕ್ವೆನ್ಸಿ ಸಂಕೇತಗಳನ್ನು ರವಾನಿಸುತ್ತದೆ. ಅವುಗಳು ಗುರಿಗೆ ತಲುಪಿ, ಹಿಂದಕ್ಕೆ ಮರಳುತ್ತವೆ. ಸೀಕರ್ ಈ ಪ್ರತಿಫಲನಗಳನ್ನು ಬಳಸಿಕೊಂಡು, ಕ್ಷಿಪಣಿ ಸ್ವಯಂಚಾಲಿತವಾಗಿ ಚಲಿಸುವಂತೆ ಮಾಡುತ್ತದೆ. ಇದು ದಟ್ಟ ಮಂಜು, ಹೊಗೆ ಅಥವಾ ಯುದ್ಧ ಭೂಮಿಯ ಅಡೆತಡೆಗಳ ನಡುವೆಯೂ ಕ್ಷಿಪಣಿ ಅತ್ಯಂತ ನಿಖರವಾಗಿ ಸಾಗಲು ಪೂರಕವಾಗಿದೆ.
ಪ್ರಾದೇಶಿಕ ಬಳಕೆಗಳು
ಭಾರತದ ನೆರೆಹೊರೆಯಲ್ಲಿ ಇಂದಿಗೂ ಟ್ಯಾಂಕ್ ಯುದ್ಧಗಳು ವಾಸ್ತವವಾಗಿ ಅಪಾಯಕಾರಿಯಾಗಿವೆ. ಇಂತಹ ಸಂದರ್ಭಗಳಲ್ಲಿ, ಹೆಲಿನಾ ಭಾರತಕ್ಕೆ ಮೇಲುಗೈ ಕಲ್ಪಿಸುತ್ತದೆ. ಸಾಂಪ್ರದಾಯಿಕ ಆ್ಯಂಟಿ ಟ್ಯಾಂಕ್ ಕಾರ್ಯಾಚರಣೆಗಳಲ್ಲಿ ಭೂ ಸೇನಾ ಪಡೆಗಳು ಶತ್ರು ಟ್ಯಾಂಕ್‌ಗಳಿಗೆ ಸಾಕಷ್ಟು ಸನಿಹ ಸಾಗಬೇಕಾಗುತ್ತದೆ. ಹೆಲಿನಾ ನಮ್ಮ ಪಡೆಗಳಿಗೆ ಸಾಕಷ್ಟು ದೂರದಿಂದಲೇ ಶತ್ರು ಟ್ಯಾಂಕ್‌ಗಳ ಮೇಲೆ ದಾಳಿ ನಡೆಸಲು ಅನುಕೂಲ ಮಾಡಿಕೊಟ್ಟು, ಕದನದ ಚಿತ್ರಣವನ್ನೇ ಬದಲಾಯಿಸುತ್ತದೆ.
ಆ್ಯಂಟಿ ಟ್ಯಾಂಕ್ ಕ್ಷಿಪಣಿಗಳು ನಿಖರ ನಿರ್ದೇಶಿತ ಕ್ಷಿಪಣಿಗಳಾಗಿದ್ದು, ಸಶಸ್ತ್ರ ವಾಹನಗಳು ಮತ್ತು ಟ್ಯಾಂಕ್‌ಗಳನ್ನು ನಾಶಪಡಿಸಲು ವಿನ್ಯಾಸಗೊಂಡಿವೆ. ಈ ಕ್ಷಿಪಣಿಗಳು ಸಶಸ್ತ್ರ ಗುರಿಗಳ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿದ್ದು, ಸಾಮಾನ್ಯವಾಗಿ ನೆಲದಲ್ಲಿನ ವೇದಿಕೆಗಳಿಂದ ಅಥವಾ ಹೆಲಿಕಾಪ್ಟರ್‌ಗಳಿಂದ ಉಡಾವಣೆಗೊಳಿಸಲಾಗುತ್ತದೆ. ಹೆಲಿನಾ ಈ ಅತ್ಯಾಧುನಿಕ ತಂತ್ರಜ್ಞಾನದ ಪ್ರತಿನಿಧಿಯಾಗಿದ್ದು, ಭಾರತಕ್ಕೆ ಸಂಭಾವ್ಯ ಯುದ್ಧ ಸನ್ನಿವೇಶದಲ್ಲಿ ಬಹಳಷ್ಟು ಅನುಕೂಲ ಕಲ್ಪಿಸುತ್ತದೆ.
ಮುಂದಿನ ಹಾದಿ: ದೊಡ್ಡ ಚಿತ್ರಣದ ಭಾಗ
ಹೆಲಿನಾ ಯಾವುದೋ ಒಂದು ಕ್ಷಿಪಣಿ ಯೋಜನೆಯಲ್ಲ. ಬದಲಿಗೆ, ಭಾರತದ ಸಮಗ್ರ ರಕ್ಷಣಾ ಆಧುನೀಕರಣದ ಭಾಗವೂ ಹೌದು. 2030ರ ವೇಳೆಗೆ, ಭಾರತ ಕ್ಷಿಪಣಿ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವ ಜೊತೆಗೆ, ಜಾಗತಿಕ ಕ್ಷಿಪಣಿ ರಪ್ತು ಮಾರುಕಟ್ಟೆಯಲ್ಲೂ ತನ್ನ ಛಾಪು ಮೂಡಿಸುವ ಗುರಿ ಹೊಂದಿದೆ. ನಮ್ಮ ದೇಶೀಯ ಆಯುಧ ವ್ಯವಸ್ಥೆಗಳು ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿದ್ದು, ಹೊಸ ರಫ್ತು ಮಾರುಕಟ್ಟೆಗಳನ್ನು ಭಾರತಕ್ಕೆ ತೆರೆಯುವ ಸಾಧ್ಯತೆಗಳಿವೆ.
ಹೆಲಿನಾ ಕ್ಷಿಪಣಿಯ ಯಶಸ್ಸು ಭಾರತದ ಬೆಳೆಯುತ್ತಿರುವ ತಾಂತ್ರಿಕ ಆಧುನೀಕರಣವನ್ನು ತೋರಿಸಿಕೊಟ್ಟಿದೆ. ಭಾರತದ ಕ್ಷಿಪಣಿ ಯೋಜನೆಗಳು ಡಿಆರ್‌ಡಿಒ ಸ್ಥಾಪನೆಗೊಂಡ ಬೆನ್ನಲ್ಲೇ ಆರಂಭಗೊಂಡಿದ್ದವು. ಐಜಿಎಂಡಿಪಿ ಭಾರತದ ರಕ್ಷಣೆ ಮತ್ತು ದಾಳಿ ಉದ್ದೇಶಕ್ಕಾಗಿ ಕ್ಷಿಪಣಿ ಅಭಿವೃದ್ಧಿಯ ಪ್ರಥಮ ಮಹತ್ವದ ಕ್ರಮವಾಗಿತ್ತು. ಈ ಆರಂಭಿಕ ಯೋಜನೆಗಳಿಂದ, ಇಂದಿನ ಅತ್ಯಾಧುನಿಕ ಹೆಲಿನಾ ಕ್ಷಿಪಣಿಯ ತನಕ ಭಾರತ ಅಸಾಧಾರಣ ತಾಂತ್ರಿಕ ಪ್ರಗತಿಯ ಹಾದಿಯಲ್ಲಿ ಸಾಗಿ ಬಂದಿದೆ.
ಹೆಲಿನಾ ಮತ್ತು ಧ್ರುವಾಸ್ತ್ರಗಳು ಕೇವಲ ಕ್ಷಿಪಣಿ ವ್ಯವಸ್ಥೆಗಳು ಮಾತ್ರವಲ್ಲ. ಅವು ಭಾರತದ ತಾಂತ್ರಿಕ ಪರಿಪಕ್ವತೆ ಮತ್ತು ಕಾರ್ಯತಂತ್ರದ ದೂರದೃಷ್ಟಿಯ ಸಂಕೇತಗಳಾಗಿವೆ. ಇಂದಿನ ಮಿಲಿಟರಿ ಚಕಮಕಿಗಳ ಫಲಿತಾಂಶ ನಿಖರತೆ, ತಂತ್ರಜ್ಞಾನ ಮತ್ತು ವೇಗದಿಂದ ನಿರ್ಧರಿಸಲ್ಪಡುತ್ತಿದ್ದು, ಇಂತಹ ದೇಶೀಯ ತಂತ್ರಜ್ಞಾನ ಸಾಮರ್ಥ್ಯದ ಅವಳಿ ಆಯುಧಗಳನ್ನು ಹೊಂದುವುದು ಭಾರತೀಯ ಸೇನೆ ಮತ್ತು ವಾಯುಪಡೆ ಎರಡಕ್ಕೂ ದೇಶ ರಕ್ಷಣೆಗೆ ಅವಶ್ಯಕ ಶಕ್ತಿ ನೀಡಿದಂತಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಪ್ರಕಾರ, ಇದು ಜಗತ್ತಿನಲ್ಲೇ ಅತ್ಯಾಧುನಿಕ ಆ್ಯಂಟಿ ಟ್ಯಾಂಕ್ ಕ್ಷಿಪಣಿಗಳಲ್ಲಿ ಒಂದಾಗಿದೆ. ಇದು ಡಿಆರ್‌ಡಿಒಗೆ ಹೆಮ್ಮೆ ಮಾತ್ರವಲ್ಲದೆ, ಭಾರತದ ತಾಂತ್ರಿಕ ಸಾಮರ್ಥ್ಯ ವೃದ್ಧಿಸಲು ನೆರವಾದ ಕಠಿಣ ಪರಿಶ್ರಮ, ನಾವೀನ್ಯತೆ, ಮತ್ತು ಕಾರ್ಯತಂತ್ರದ ಯೋಚನೆಗಳನ್ನೂ ಪ್ರದರ್ಶಿಸಿದೆ.
ಭೌಗೋಳಿಕ ರಾಜಕಾರಣದ ಭವಿಷ್ಯ ಅನಿಶ್ಚಿತವಾಗಿದ್ದು, ಹೆಲಿನಾದಂತಹ ಆಯುಧಗಳು ಕೇವಲ ಮಿಲಿಟರಿ ಸಾಮರ್ಥ್ಯವನ್ನು ಮಾತ್ರ ಒದಗಿಸುತ್ತಿಲ್ಲ. ಬದಲಿಗೆ, ಸ್ವಾವಲಂಬನೆಯಿಂದ ಲಭಿಸುವ ಆತ್ಮವಿಶ್ವಾಸವನ್ನೂ ನೀಡುತ್ತಿವೆ. ನಾವು ನಮ್ಮದೇ ಆದ ಆಧುನಿಕ ಆಯುಧ ವ್ಯವಸ್ಥೆಗಳ ವಿನ್ಯಾಸ, ಅಭಿವೃದ್ಧಿ ಮತ್ತು ನಿಯೋಜನೆ ನಡೆಸಲು ಸಮರ್ಥರಾದಾಗ, ನಾವು ರಾಷ್ಟ್ರೀಯ ಭದ್ರತೆ ನಮ್ಮ ಕೈಯಲ್ಲಿದೆ ಎಂದು ಸಾಬೀತುಪಡಿಸುತ್ತೇವೆ.
ಭಾರತದ ಆಗಸ ಬೇಟೆಗಾರರು ಸಿದ್ಧರಾಗಿದ್ದಾರೆ. ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ, ಭಾರತ ಸಾಧಿಸುವ ನಾವೀನ್ಯತೆಗಳನ್ನು ಎದುರಿಸಲು ನಮ್ಮ ವಿರೋಧಿಗಳು ಸಜ್ಜಾಗಿದ್ದಾರೆಯೇ?
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
