ಅಗ್ನಿ-5 ಕ್ಷಿಪಣಿ 1.5 ಟನ್ ತನಕ ಅಣ್ವಸ್ತ್ರ ಸಿಡಿತಲೆಗಳನ್ನು ಒಯ್ಯಬಲ್ಲದಾಗಿದ್ದು, ಹಗುರವಾದ, ಸಂಯುಕ್ತ ವಸ್ತುಗಳಿಂದ ನಿರ್ಮಿತವಾಗಿದೆ. ಇದು ಕ್ಷಿಪಣಿಯನ್ನು ಹೆಚ್ಚು ದಕ್ಷ ಮತ್ತು ನಂಬಿಕಾರ್ಹವಾಗಿಸಿದೆ.

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಆಗಸ್ಟ್ 20, ಬುಧವಾರದಂದು ಭಾರತ ಒಡಿಶಾದ ಚಂಡೀಪುರದಲ್ಲಿರುವ ಇಂಟಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ತನ್ನ ಅಗ್ನಿ-5 ಕ್ಷಿಪಣಿಯ ಪರೀಕ್ಷೆ ನಡೆಸಿತು. ಇದು ಭಾರತದ ರಕ್ಷಣಾ ಸಾಮರ್ಥ್ಯದಲ್ಲಿ ಬಹುದೊಡ್ಡ ಹೆಜ್ಜೆಯಾಗಿದೆ. "ಅಗ್ನಿ-5 ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಕ್ಷಿಪಣಿ ತನ್ನೆಲ್ಲ ಕಾರ್ಯಾಚರಣಾ ಮತ್ತು ತಾಂತ್ರಿಕ ನಿಯತಾಂಕಗಳನ್ನು ಪೂರ್ಣವಾಗಿ ಪೂರೈಸಿದೆ" ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಅಗ್ನಿ-5 ಕ್ಷಿಪಣಿ ಪರಮಾಣು ಸಾಮರ್ಥ್ಯ ಹೊಂದಿದ್ದು, 5,000 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಅಗ್ನಿ-5 ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿದೆ. ಇದು ಅಗ್ನಿ ಸರಣಿಯ ಅತ್ಯಂತ ಆಧುನಿಕ ಕ್ಷಿಪಣಿಯಾಗಿದ್ದು, ಭಾರತದ ಭೂ ಆಧಾರಿತ ಅಣ್ವಸ್ತ್ರ ರಕ್ಷಣಾ ವ್ಯವಸ್ಥೆಯ ಪ್ರಮುಖ ಶಕ್ತಿಯಾಗಿದೆ.

ಅಗ್ನಿ-5 ಕ್ಷಿಪಣಿ 1.5 ಟನ್ ತನಕ ಅಣ್ವಸ್ತ್ರ ಸಿಡಿತಲೆಗಳನ್ನು ಒಯ್ಯಬಲ್ಲದಾಗಿದ್ದು, ಹಗುರವಾದ, ಸಂಯುಕ್ತ ವಸ್ತುಗಳಿಂದ ನಿರ್ಮಿತವಾಗಿದೆ. ಇದು ಕ್ಷಿಪಣಿಯನ್ನು ಹೆಚ್ಚು ದಕ್ಷ ಮತ್ತು ನಂಬಿಕಾರ್ಹವಾಗಿಸಿದೆ. ಅಗ್ನಿ-5 ಎಂಐಆರ್‌ವಿ (ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೇಬಲ್ ರಿಎಂಟ್ರಿ ವೆಹಿಕಲ್) ತಂತ್ರಜ್ಞಾನವನ್ನೂ ಹೊಂದಿದೆ. ಅಂದರೆ, ಒಂದೇ ಕ್ಷಿಪಣಿ ಹಲವು ಸಿಡಿತಲೆಗಳ ಮೂಲಕ ವಿವಿಧ ಗುರಿಗಳ ಮೇಲೆ ದಾಳಿ ನಡೆಸಬಲ್ಲದು. ಇದು ಕ್ಷಿಪಣಿಯ ಕಾರ್ಯತಂತ್ರದ ಶಕ್ತಿಯನ್ನೂ ಹೆಚ್ಚಿಸಿದೆ. ನಿಖರ ದಾಳಿ ನಡೆಸುವ ಸಲುವಾಗಿ, ಅಗ್ನಿ-5 ಕ್ಷಿಪಣಿ ರಿಂಗ್ ಲೇಸರ್ ಗೈರೋಸ್ಕೋಪ್ ಆಧಾರಿತ ಸಂಚರಣಾ (ನ್ಯಾವಿಗೇಶನ್) ವ್ಯವಸ್ಥೆಯನ್ನು (ಆರ್‌ಎಲ್‌ಜಿ-ಐಎನ್ಎಸ್) ಮತ್ತು ಮೈಕ್ರೋ ಇನರ್ಷ್ಯಲ್ ನ್ಯಾವಿಗೇಶನ್ ಸಿಸ್ಟಮ್ (ಎಂಐಎನ್‌ಜಿಎಸ್) ಹೊಂದಿದ್ದು, ಇದಕ್ಕೆ ಭಾರತದ ನಾವಿಕ್ ಮತ್ತು ಅಮೆರಿಕಾದ ಜಿಪಿಎಸ್‌ನಂತಹ ಉಪಗ್ರಹ ವ್ಯವಸ್ಥೆಗಳು ಬೆಂಬಲ ನೀಡುತ್ತಿವೆ.

ಆರ್‌ಎಲ್‌ಜಿ-ಐಎನ್ಎಸ್ (ರಿಂಗ್ ಲೇಸರ್ ಗೈರೋಸ್ಕೋಪ್ ಬೇಸ್ಡ್ ಇನರ್ಷ್ಯಲ್ ನ್ಯಾವಿಗೇಶನ್ ಸಿಸ್ಟಮ್): ಇದು ಲೇಸರ್ ಕಿರಣಗಳನ್ನು ಬಳಸಿಕೊಂಡು, ಚಲನವಲನಗಳು ಮತ್ತು ದಿಕ್ಕುಗಳನ್ನು ಅತ್ಯಂತ ನಿಖರವಾಗಿ ಗುರುತಿಸುವ ವ್ಯವಸ್ಥೆಯಾಗಿದೆ. ಅಗ್ನಿ-5 ಕ್ಷಿಪಣಿಯಲ್ಲಿ, ಈ ವ್ಯವಸ್ಥೆ ಕ್ಷಿಪಣಿ ಬಾಹ್ಯ ಸಂಕೇತಗಳ ಮೇಲೆ ಅವಲಂಬಿತವಾಗದೆ, ಸರಿಯಾದ ಪಥದಲ್ಲಿ ಸಾಗುವಂತೆ ಮಾಡಲು ನೆರವಾಗುತ್ತದೆ. ಎಂಐಎನ್‌ಜಿಎಸ್ (ಮೈಕ್ರೋ - ಇನರ್ಷ್ಯಲ್ ನ್ಯಾವಿಗೇಶನ್ ಸಿಸ್ಟಮ್): ಇದೊಂದು ಸಣ್ಣದಾದ, ಆದರೆ ಆಧುನಿಕವಾದ ಸಂಚರಣಾ ವ್ಯವಸ್ಥೆಯಾಗಿದ್ದು, ವೇಗ ಮತ್ತು ಸ್ಥಾನಗಳನ್ನು ಗುರುತಿಸಲು ಸೆನ್ಸರ್‌ಗಳನ್ನು ಬಳಸಿಕೊಳ್ಳುತ್ತದೆ. ಅಗ್ನಿ-5 ಕ್ಷಿಪಣಿಯಲ್ಲಿ, ಈ ವ್ಯವಸ್ಥೆ ಹಾರಾಟದ ಸಂದರ್ಭದಲ್ಲಿ ಹೆಚ್ಚುವರಿ ನಿರ್ದೇಶನ ಮತ್ತು ನಿಖರತೆಗಾಗಿ‌ ಸೂಕ್ಷ್ಮ ಹೊಂದಾಣಿಕೆಗಳನ್ನು ನಡೆಸುತ್ತದೆ. ನಾವಿಕ್ (NavIC - ನ್ಯಾವಿಗೇಶನ್ ವಿದ್ ಇಂಡಿಯನ್ ಕಾನ್ಸ್ಟಲೇಶನ್): ಇದು ಭಾರತದ ಸ್ವಂತ ಉಪಗ್ರಹ ಸಂಚರಣಾ ವ್ಯವಸ್ಥೆಯಾಗಿದೆ. ಅಗ್ನಿ-5 ಕ್ಷಿಪಣಿಯಲ್ಲಿ, ನಾವಿಕ್ ನೈಜ ಸಮಯದಲ್ಲಿ ಸ್ಥಾನೀಯ ಬೆಂಬಲ ನೀಡುವುದರಿಂದ, ಕ್ಷಿಪಣಿ ತನ್ನ ಗುರಿಗಳ ಮೇಲೆ ಅತ್ಯಂತ ನಿಖರವಾಗಿ ಮತ್ತು ವಿದೇಶೀ ವ್ಯವಸ್ಥೆಗಳ ಮೇಲೆ ಅವಲಂಬಿತವಾಗದೆ ದಾಳಿ ನಡೆಸಲು ಸಾಧ್ಯವಾಗುತ್ತದೆ.

ಅಮೆರಿಕಾದ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್): ಜಿಪಿಎಸ್ ಎನ್ನುವುದು ಅಮೆರಿಕಾ ನಿರ್ವಹಿಸುತ್ತಿರುವ ಉಪಗ್ರಹ ಸಂಚರಣಾ ವ್ಯವಸ್ಥೆಯಾಗಿದೆ. ಅಗ್ನಿ-5 ಕ್ಷಿಪಣಿಯಲ್ಲಿ ನಿಖರತೆಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಜಿಪಿಎಸ್ ಅನ್ನು ಹೆಚ್ಚುವರಿ ಆಯ್ಕೆಯಾಗಿ ಬಳಸಲಾಗುತ್ತದೆ. ಇದರಿಂದಾಗಿ ಕ್ಷಿಪಣಿ ಅತ್ಯಂತ ನಿಖರವಾಗಿ ತನ್ನ ಉದ್ದೇಶಿತ ಗುರಿಯ ಮೇಲೆ ದಾಳಿ ನಡೆಸುತ್ತದೆ. ಅಗ್ನಿ-5 ಕ್ಷಿಪಣಿ ಮೂರು ಹಂತಗಳ ಘನ ಇಂಧನ ವ್ಯವಸ್ಥೆಯನ್ನು ಹೊಂದಿದ್ದು, ಕ್ಯಾನಿಸ್ಟರ್ (ಸಂಗ್ರಾಹಕ) ಉಡಾವಣೆಗೊಳಿಸಬಹುದು. ಇದರಿಂದ ಕ್ಷಿಪಣಿಯನ್ನು ಸಂಗ್ರಹಿಸುವುದು, ಸಾಗಿಸುವುದು ಮತ್ತು ಕ್ಷಿಪ್ರವಾಗಿ ಉಡಾವಣೆಗೊಳಿಸುವುದು ಸುಲಭವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕ್ಷಿಪಣಿ ಹೆಚ್ಚು ಉತ್ತಮ ಏವಿಯಾನಿಕ್ಸ್, ಮರು ಪ್ರವೇಶಿಸಲು ಬಲವಾದ ಉಷ್ಣ ನಿರೋಧಕ ವ್ಯವಸ್ಥೆ ಮತ್ತು ಆಧುನಿಕ ನಿರ್ದೇಶನ ವ್ಯವಸ್ಥೆಗಳನ್ನು ಹೊಂದಿದೆ.

ಕಾರ್ಯತಂತ್ರದ ಮಹತ್ವ ಮತ್ತು ಇತ್ತೀಚಿನ ಬೆಳವಣಿಗೆಗಳು: ಅಗ್ನಿ-5 ಕ್ಷಿಪಣಿಯನ್ನು 2018ರಿಂದ ಭಾರತದ ಸ್ಟ್ರಾಟಜಿಕ್ ಫೋರ್ಸಸ್ ಕಮಾಂಡ್ ನಿರ್ವಹಿಸುತ್ತಿದ್ದು, ಇದು ಅಭಿವೃದ್ಧಿಯ ಹಂತದಿಂದ ಭಾರತೀಯ ಸೇನೆಯ ಮೂರೂ ವಿಭಾಗಗಳ ಪರಮಾಣು ವ್ಯವಸ್ಥೆಯ ಮುಖ್ಯ ಆಯುಧವಾಗಿದೆ. ಡಿಆರ್‌ಡಿಒ ಈಗ ಅಗ್ನಿ-5 ಕ್ಷಿಪಣಿಯ ಇನ್ನಷ್ಟು ಆಧುನಿಕ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದ್ದು, ಇದರಲ್ಲಿ ಬಂಕರ್ ಬಸ್ಟರ್ ಮತ್ತು ಏರ್‌ಬಸ್ಟ್ ಆವೃತ್ತಿಗಳು ಸೇರಿವೆ. ಇವುಗಳು 7,500ರಿಂದ 8,000 ಕೆಜಿ ತನಕ ಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದ್ದು, 2,500ರಿಂದ 3,000 ಕಿಲೋಮೀಟರ್ ವ್ಯಾಪ್ತಿ ಹೊಂದಿವೆ. ಇವುಗಳನ್ನು ಕಷ್ಟಕರ ಗುರಿಗಳಾದ ಶತ್ರು ಸೇನಾ ನೆಲೆಗಳು ಮತ್ತು ಕಮಾಂಡ್ ಕೇಂದ್ರಗಳ ಮೇಲೆ ದಾಳಿ ನಡೆಸುವ ಸಲುವಾಗಿ ಅಭಿವೃದ್ಧಿ ಪಡಿಸಲಾಗಿದೆ. ಮಾರ್ಚ್ 2024ರಲ್ಲಿ, ಎಂಐಆರ್‌ವಿ ತಂತ್ರಜ್ಞಾನವನ್ನು ಹೊಂದಿರುವ ಅಗ್ನಿ-5 ಕ್ಷಿಪಣಿಯನ್ನು ಪರೀಕ್ಷಿಸಲಾಯಿತು. ಇದು ಸ್ವತಂತ್ರವಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಹಲವಾರು ಸಿಡಿತಲೆಗಳನ್ನು ಪ್ರಯೋಗಿಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಇದು ಕ್ಷಿಪಣಿಯ ಕಾರ್ಯತಂತ್ರದ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿ, ಸಂಭಾವ್ಯ ಶತ್ರುಗಳ ವಿರುದ್ಧ ಭಾರತದ ರಕ್ಷಣೆಯನ್ನು ಸುಭದ್ರಗೊಳಿಸಿತು.

ಕಾರ್ಯಾಚರಣೆ ಮಹತ್ವ ಮತ್ತು ಕಾರ್ಯತಂತ್ರದ ಶಕ್ತಿ: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮಿಲಿಟರಿ ಉದ್ವಿಗ್ನತೆಗಳು ತಲೆದೋರಿದ ಮೂರೂವರೆ ತಿಂಗಳ ಬಳಿಕ ಇತ್ತೀಚಿನ ಕ್ಷಿಪಣಿ ಪರೀಕ್ಷೆ ನಡೆದಿದೆ. ಇದು ತನ್ನ ಕಾರ್ಯತಂತ್ರದ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ. ಅಗ್ನಿ-5 ಕ್ಷಿಪಣಿಯ ಕ್ಯಾನಿಸ್ಟರ್ ಆಧಾರಿತ ರೋಡ್ ಮೊಬೈಲ್ ಉಡಾವಣಾ ವ್ಯವಸ್ಥೆ ಭಾರತಕ್ಕೆ ಸುಧಾರಿತ ಉಳಿಯುವಿಕೆ ಕ್ಷಿಪ್ರ ಉಡಾವಣಾ ಸಾಮರ್ಥ್ಯ ಕಲ್ಪಿಸಿದ್ದು, ಮೊದಲು ದಾಳಿ ನಡೆಸಬೇಕಾದ ಸಂದರ್ಭದಲ್ಲಿ ಎದುರಾಗುವ ದೌರ್ಬಲ್ಯವನ್ನು ಇಲ್ಲವಾಗಿಸಿದೆ. 5,000 ಕಿಲೋಮೀಟರ್ ಗಳಿಗೂ ಹೆಚ್ಚಿನ ವ್ಯಾಪ್ತಿಯಲ್ಲಿ ದಾಳಿ ನಡೆಸುವ ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇಂದು ಜಗತ್ತಿನಲ್ಲಿ ಕೆಲವು ರಾಷ್ಟ್ರಗಳು ಮಾತ್ರವೇ ಹೊಂದಿದ್ದು, ಈಗ ಭಾರತವೂ ಈ ದೇಶಗಳ ಸಾಲಿಗೆ ಸೇರ್ಪಡೆಯಾಗಿದೆ. ಅಗ್ನಿ-5 ಕ್ಷಿಪಣಿ ಬಹುತೇಕ ಸಂಪೂರ್ಣ ಏಷ್ಯಾ ಖಂಡವನ್ನು ವ್ಯಾಪಿಸಬಲ್ಲದಾಗಿದ್ದು, ಚೀನಾದ ಉತ್ತರದ ತುತ್ತತುದಿ ಮತ್ತು ಯುರೋಪಿನ ಭಾಗಗಳಿಗೂ ತಲುಪಬಲ್ಲದು. ಇದು ಭಾರತದ ಕಾರ್ಯತಂತ್ರದ ವ್ಯಾಪ್ತಿಯನ್ನು ವೃದ್ಧಿಸಿದ್ದು, ನಂಬಿಕಾರ್ಹ ದಾಳಿ ತಡೆ ನೀತಿಗೆ ಇನ್ನಷ್ಟು ಶಕ್ತಿ ನೀಡಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)