Rapido driver helps woman at night: ತಡರಾತ್ರಿ ಮನೆಗೆ ಬಂದ ಯುವತಿಯೊಬ್ಬಳು ಕೀ ಮರೆತು ಹೊರಗೆ ನಿಲ್ಲುವಂತಾಗುತ್ತದೆ. ಆಕೆಯನ್ನು ಡ್ರಾಪ್ ಮಾಡಿದ ರಾಪಿಡೋ ಚಾಲಕ, ಆಕೆಯ ಸುರಕ್ಷತೆಗಾಗಿ ಆಕೆಯ ಸ್ನೇಹಿತೆ ಬರುವವರೆಗೂ ಕಾದು, ಮಾನವೀಯತೆ ಮೆರೆದ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗಿದೆ.

ಆಟೋ ಡ್ರೈವರ್‌ಗಳು ಅಸಭ್ಯವಾಗಿ ವರ್ತಿಸಿದ್ರು, ಕ್ಯಾಬ್ ಡ್ರೈವರ್‌ ನಾವು ನಿದ್ದೆ ಮಾಡ್ತಿದ್ದಾಗ ಫೋಟೋ ತೆಗೆದ್ರು, ನಮ್ಮ ಮುಂದೆಯೇ ಹೇಗೇಗೋ ವರ್ತಿಸಿದ್ರು ಡ್ರಾಪ್ ಕೊಡಬೇಕಾದಲ್ಲಿ ಡ್ರಾಪ್ ಕೊಡದೇ ಅರ್ಧದಲ್ಲಿ ಬಿಟ್ಟು ಹೋದ್ರು ಎಂದೆಲ್ಲಾ ಹೆಣ್ಣು ಮಕ್ಕಳು ಕಾಲೇಜು ಯುವತಿಯರು ಆರೋಪ ಮಾಡಿದ್ದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಂದು ಕಡೆ ರಾಪಿಡೋ ಚಾಲಕರೊಬ್ಬರು ಯುವತಿಯೊಬ್ಬರ ರಕ್ಷಣೆಗೆ ನಿಂತ ಘಟನೆ ನಡೆದಿದ್ದು, ಇದನ್ನು ಸ್ವತಃ ಯುವತಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಯುವತಿಯ ಸುರಕ್ಷತೆಗಾಗಿ ಆಕೆಯ ಸ್ನೇಹಿತೆ ಬರುವವರೆಗೂ ಕಾದ ರಾಪಿಡೋ ಚಾಲಕ

ಪ್ರಸ್ತುತ ಎಲ್ಲೆಡೆ ನವರಾತ್ರಿ ಹಬ್ಬ ನಡೆಯುತ್ತಿದೆ. ನವರಾತ್ರಿ ಅಂಗವಾಗಿ ಗಾರ್ಭ ನೃತ್ಯಗಳನ್ನು ನಗರದ ಹಲವು ಕಡೆಗಳಲ್ಲಿ ಆಯೋಜನೆ ಮಾಡಲಾಗುತ್ತದೆ. ಅನೇಕ ಕಡೆಗಳಲ್ಲಿ ಗಾರ್ಭ ನೈಟ್ಸ್ ಹೆಸರಿನಲ್ಲಿ ತಡರಾತ್ರಿಯವರೆಗೆ ನೃತ್ಯಗಳು ನಡೆಯುತ್ತಿರುತ್ತದೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಗಾರ್ಭ ನೈಟ್‌ ಕಾರ್ಯಕ್ರಮಕ್ಕೆ ಹೋಗಿದ್ದು, ತಡವಾಗಿ ಬಂದಿದ್ದಾರೆ. ಆದರೆ ಹೋಗುವ ವೇಳೆ ಯುವತಿ ಕೀ ಬಿಟ್ಟು ಹೋಗಿದ್ದು, ಅವರ ರೂಮ್‌ಮೇಟ್ಸ್ ರೂಮ್ ಲಾಕ್ ಮಾಡ್ಕೊಂಡು ಹೊರಗಡೆ ಹೋಗಿದ್ದಾರೆ. ಇತ್ತ ಮನೆಗೆ ಬಂದ ನಂತರವಷ್ಟೇ ಯುವತಿಗೆ ತಾನು ಕೀ ಮರೆತು ಹೋಗಿರುವುದು ಗೊತ್ತಾಗಿದೆ. ಈ ವಿಚಾರ ಅರಿತ ಆಟೋ ಚಾಲಕ ಸ್ವಂತ ಅಣ್ಣನಂತೆ ಆಕೆಯ ಸ್ನೇಹಿತೆ ಬರುವವರೆಗೂ ಕಾದು ಆಕೆ ಬಂದು ಈ ಹುಡುಗಿ ಒಳಗೆ ಹೋದ ನಂತರವಷ್ಟೇ ಅಲ್ಲಿಂದ ಹೋಗಿದ್ದಾನೆ.

ವೀಡಿಯೋ ಪೋಸ್ಟ್ ಮಾಡಿ ಧನ್ಯವಾದ ಹೇಳಿದ ಯುವತಿ

ಈ ವಿಚಾರವನ್ನು ಸ್ವತಃ ಆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ನಾನು ಕೀ ಬಿಟ್ಟು ಹೋಗಿದೆ. ಇತ್ತ ನನ್ನ ಸ್ನೇಹಿತೆ ಲಾಕ್ ಮಾಡ್ಕೊಂಡು ಹೋಗಿದ್ದು, ಹೊರಗೆ ನಿಲ್ಲುವಂತಾಯಿತು. ಈ ವಿಚಾರ ತಿಳಿದ ರಾಪಿಡೋ ಡ್ರೈವರ್ ನಿಮ್ಮ ಸ್ನೇಹಿತೆ ಬಂದು ನೀವು ಒಳಗೆ ಹೋಗುವವರೆಗೂ ನಾನು ಇಲ್ಲೇ ನಿಂತಿರುತ್ತೇನೆ ಎಂದು ಹೇಳಿದ್ದ ಬಹುತೇಕ ಮಧ್ಯರಾತ್ರಿಯ ಸಮಯ. ನಾನು ಅವರಿಗೆ ಹೋಗಿ ಎಂದು ಹೇಳಿದರೂ ಆತ ಇಲ್ಲಿ ನನ್ನ ಸುರಕ್ಷತೆಗಾಗಿ ನಿಂತಿರುವುದನ್ನು ನೀವು ನೋಡಬಹುದು. ತುಂಬಾ ಒಳ್ಳೆಯ ವ್ಯಕ್ತಿ ಎಂದು ಆ ಯುವತಿ ವೀಡಿಯೋವನ್ನು ಪೋಸ್ಟ್ ಮಾಡಿದ್ದಾಳೆ. ವೀಡಿಯೋ ನೋಡಿದ ಬಹುತೇಕರು ರಾಪಿಡೋ ಚಾಲಕ ಯುವತಿ ಬಗ್ಗೆ ತೋರಿದ ಕಾಳಜಿಗೆ ಧನ್ಯವಾದ ಹೇಳಿದ್ದಾರೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ರಾಪಿಡೋ ಚಾಲಕನ ದೊಡ್ಡತನಕ್ಕೆ ಧನ್ಯವಾದ ತಿಳಿಸಿದ್ದಾರೆ. ಮತ್ತೆ ಕೆಲವರು ತಮಗಾದ ಅನುಭವ ಹೇಳಿಕೊಂಡಿದ್ದಾರೆ. ಈ ವೀಡಿಯೋಗೆ ಒಬ್ಬರು ಕಾಮೆಂಟ್ ಮಾಡಿದ್ದು, ತಮಗೂ ಸಿಕ್ಕಿದ ಒಳ್ಳೆಯ ಚಾಲಜನ ಬಗ್ಗೆ ಹೇಳಿಕೊಂಡಿದ್ದಾರೆ.

ಒಮ್ಮೆ, ನನಗೆ ಬೆಳಗಿನ ನಸುಕಿನ ಜಾವದ ಬಸ್ ಹಿಡಿಯಬೇಕಿತ್ತು, ಆದರೆ ಆ ಬಸ್ ಎರಡು ಗಂಟೆ ತಡವಾಗಿ ಬಂತು. ನನ್ನನ್ನು ಇಳಿಸಿದ ಕ್ಯಾಬ್ ಚಾಲಕ ಇಡೀ ಸಮಯ ನನ್ನೊಂದಿಗೆ ಕಾಯುತ್ತಿದ್ದ. ಅವನು, 'ಮೇಡಂ, ಆಪ್ ಗಾಡಿ ಮೇ ಬೈಟ್ ಜಾವೋ, ಮೈ ಬಹರ್ ಬೈಟ್ತಾ ಹೂಂ' ಎಂದನು. (ಅಂದರೆ ನೀವು ಗಾಡಿಯೊಳಗೆ ಕುಳಿತುಕೊಳ್ಳಿ ನಾನು ಹೊರಗೆ ಇರುತ್ತೇನೆ) ಆತನೂ ತುಂಬಾ ಒಳ್ಳೆಯವನಾಗಿದ್ದ. ಸ್ವಲ್ಪ ಸಮಯದ ನಂತರ ಅವನು, 'ಮೇಡಂ, ನೀವು ಚೆನ್ನಾಗಿದ್ದೀರಾ? ನಿಮಗೆ ಚಹಾ ಬೇಕಾ ಅಥವಾ ಏನಾದರೂ ಬೇಕಾ?' ಎಂದು ಕೇಳಿದನು. 2 ಗಂಟೆಗಳ ಕಾಲ, ಅವನು ಕಾರಿನ ಹೊರಗೆ ನಿಂತು, ನಾನು ಸುರಕ್ಷಿತವಾಗಿದ್ದೇನೆ ಎಂದು ಖಚಿತಪಡಿಸಿಕೊಂಡನು. ನಾನು ಎಂದಿಗೂ ಮರೆಯದಷ್ಟು ಒಳ್ಳೆಯ ಘಟನೆ ಅದು ಎಂದು ಒಬ್ಬರು ತಮ್ಮ ಬದುಕಿನಲ್ಲಾದ ಅನುಭವ ಹೇಳಿಕೊಂಡಿದ್ದಾರೆ.

ಅಂತಹ ಒಳ್ಳೆಯ ವ್ಯಕ್ತಿಗಳು ಬೇಕಾದಷ್ಟು ಜನ ಇರುತ್ತಾರೆ. ನನಗೂ ಒಮ್ಮೆ ಇದೇ ರೀತಿಯ ಅನುಭವ ಆಗಿತ್ತು, ನನ್ನ ಸ್ನೇಹಿತ ನನ್ನನ್ನು ಕರೆದುಕೊಂಡು ಬರುವವರೆಗೂ ಡ್ರೈವರ್ ಸ್ವಯಂಪ್ರೇರಣೆಯಿಂದ ಅಲ್ಲೇ ಇದ್ದ ಅವರಲ್ಲಿ ಕೆಲವರು ನಿಜವಾಗಿಯೂ ಒಳ್ಳೆಯ ಮನುಷ್ಯರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದೇನೆ ಇರಲಿ, ಪ್ರಪಂಚ ಅಂದ ಮೇಲೆ ಒಳ್ಳೆಯವರು ಕೆಟ್ಟವರು ಇದ್ದೇ ಇರುತ್ತಾರೆ. ಆಟೋ ಚಾಲಕರಾಗಲಿ, ಕ್ಯಾಬ್ ಚಾಲಕರಾಗಲಿ, ಅವರು ಕೂಡ ಮನುಷ್ಯರೇ. ಅಕ್ಕ ತಂಗಿಯರು ಅಣ್ಣ ತಮ್ಮಂದಿರೂ ಅವರಿಗೂ ಇರುತ್ತಾರೆ. ಈ ಘಟನೆ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

ಇದನ್ನೂ ಓದಿ: ಹಿಂದೆಗೂ ಮುಂದೆಗೂ ಅಜಗಜಾಂತರ: ಮುಂದೆಯಿಂದ ನೋಡಿದ್ರೆ ಫ್ಯಾಷನ್ ಐಕಾನ್... ಹಿಂದಿನಿಂದ ನೋಡಿದ್ರೆ.

ಇದನ್ನೂ ಓದಿ: ಕುವೆಂಪು ಅವರ ಮಲೆಮಗಳಲ್ಲಿ ಮದುಮಗಳು ಕಾದಂಬರಿ ನೆನಪಿಸಿದ ಮಲೆನಾಡ ವಿಡಿಯೋ

View post on Instagram