ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಟೇಕಾಫ್‌ಗೆ ಸಿದ್ಧವಾಗುತ್ತಿದ್ದಾಗ ಹಕ್ಕಿಯೊಂದು ಡಿಕ್ಕಿ ಹೊಡೆದ ಪರಿಣಾಮ ವಿಮಾನ ರದ್ದಾಗಿದೆ. 

 ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನ ರದ್ದು:

ವಿಮಾನವೊಂದು ಟೇಕಾಫ್‌ಗೆ ಸಿದ್ಧಗೊಳ್ಳುತ್ತಿದ್ದಾಗ ಹಕ್ಕಿಯೊಂದು ವಿಮಾನ ಮೂಗಿಗೆ(ಮುಂಭಾಗಕ್ಕೆ) ಬಡಿದ ಪರಿಣಾಮ ವಿಮಾನವೊಂದು ರದ್ದಾದ ಘಟನೆ ನಡೆದಿದೆ. ಆಂಧ್ರಪ್ರದೇಶದ ಗನ್ನವರಂ ಪ್ರದೇಶದಲ್ಲಿರುವ ವಿಜಯವಾಡ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವೊಂದು ಇನ್ನೇನು ರನ್‌ವೇಯಲ್ಲಿ ಸಾಗಿ ಟೇಕಾಫ್ ಆಗಬೇಕು ಅನ್ನುವಷ್ಟರಲ್ಲಿ ಹದ್ದೊಂದು ವಿಮಾನದ ಮುಂಭಾಗಕ್ಕೆ ಬಡಿದಿದೆ. ಹೀಗಾಗಿ ಸುರಕ್ಷತೆಯ ಕಾರಣದಿಂದ ಏರ್ ಇಂಡಿಯಾ ಈ ವಿಮಾನಪ್ರಯಾಣವನ್ನು ರದ್ದುಗೊಳಿಸಿತು.

ಹಕ್ಕಿ ಡಿಕ್ಕಿಯಾಗಿ ನಾಗಪುರದಿಂದ ಕೋಲ್ಕತ್ತಾಗೆ ಹೊರಟಿದ್ದ ವಿಮಾನವೂ ರದ್ದು:

ಮಂಗಳವಾರವಷ್ಟೇ ಇಂಡಿಗೋ ಏರ್‌ಲೈನ್ಸ್‌ಗೂ ಇದೇ ರೀತಿಯ ಅನುಭವ ಆಗಿತ್ತು. ನಿನ್ನೆ ನಾಗಪುರದಿಂದ ಕೋಲ್ಕತ್ತಾಗೆ ಹೊರಟಿದ್ದ ಇಂಡಿಗೋ ವಿಮಾನವೊಂದಕ್ಕೆ ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ನಂತರ ಹಕ್ಕಿಯೊಂದು ಡಿಕ್ಕಿ ಹೊಡೆದಿದ್ದು ಹೀಗಾಗಿ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತಾ ದೃಷ್ಟಿಯಿಂದ ವಿಮಾನವನ್ನು ರದ್ದಗೊಳಿಸಲಾಯ್ತು. ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾಗೆ ಹೊರಟಿದ್ದ ಈ ವಿಮಾನದಲ್ಲಿ 165 ಪ್ರಯಾಣಿಕರಿದ್ದರು. ಆದರೆ ವಿಮಾನ ಡಿಕ್ಕಿ ಹೊಡೆದ ನಂತರ ವಿಮಾನ ಪ್ರಯಾಣವನ್ನು ರದ್ದು ಮಾಡಲಾಯ್ತು.

ಅರುಣಾಚಲ ಪ್ರದೇಶದ ಡೊನ್ಯಿ ಪೊಲೊ ಏರ್‌ಪೋರ್ಟ್‌ನಲ್ಲಿ ಹೊಸ ಟರ್ಮಿನಲ್ ಉದ್ಘಾಟನೆ

ಇಟಾನಗರ: ಅರುಣಾಚಲ ಪ್ರದೇಶದ ಡೊನ್ಯಿ ಪೊಲೊ ಏರ್‌ಪೋರ್ಟ್‌ನಲ್ಲಿ ಇಂದು ಹೊಸ ಟರ್ಮಿನಲ್ ಉದ್ಘಾಟನೆ ಮಾಡಲಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಮತ್ತು ಮುಖ್ಯಮಂತ್ರಿ ಪೆಮಾ ಖಂಡು ಈ ಹೊಸ ಟರ್ಮಿನಲ್‌ ಅನ್ನು ಇಂದು ಉದ್ಘಾಟಿಸಿದರು. ಅರುಣಾಚಲ ಪ್ರದೇಶದ ಹೊಲ್ಲೊಂಗಿಯಲ್ಲಿರುವ ಡೊನ್ಯಿ ಪೊಲೊ ವಿಮಾನ ನಿಲ್ದಾಣದಲ್ಲಿ ಈ ಹೊಸ ಟರ್ಮಿನಲ್‌ ಸ್ಥಾಪನೆಯಿಂದ ವಿಮಾನಗಳ ದಟ್ಟಣೆ ಕಡಿಮೆ ಆಗುವುದು ಎಂದು ಅಂದಾಜಿಸಲಾಗಿದೆ. ಅರುಣಾಚಲದಿಂದ ದೆಹಲಿಗೆ ಇಂಡಿಗೋ ವಿಮಾನವೂ ವಾರಕ್ಕೆ 4 ದಿನ ಹಾರಾಟ ನಡೆಸುತ್ತಿತ್ತು. ಆದರೆ ಈ ತಿಂಗಳ ಅಂದರೆ ಸೆಪ್ಟೆಂಬರ್ 17ರಿಂದ ಇಂಡಿಗೋ ಏರ್‌ಲೈನ್ಸ್ ಇಲ್ಲಿಂದ ಪ್ರತಿದಿನವೂ ರಾಷ್ಟ್ರರಾಜಧಾನಿಗೆ ಸಂಚಾರ ನಡೆಸಲಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಗರಿಕ ವಿಮಾನಯಾನ ಸಚಿವ ಅರುಣಾಚಲ ಪ್ರದೇಶಕ್ಕೆ ಇದು ಶುಭ ದಿನ ಎಂದರು. ಕಳೆದ 11 ವರ್ಷಗಳಲ್ಲಿ, ಭಾರತದಲ್ಲಿ ವಿಮಾನ ನಿಲ್ದಾಣಗಳು, ವಿಮಾನಗಳು ಮತ್ತು ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದೆ. ಇದು ಸಂಪರ್ಕ ವ್ಯವಸ್ಥೆಗೆ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು. ಅರುಣಾಚಲ ಸಿಎಂ ಪೆಮಾ ಖಂಡು ಮಾತನಾಡಿ, ಈ ಮೇಲ್ದರ್ಜೆಗೇರಿಸಿದ ಸೌಲಭ್ಯವು ಶಿಕ್ಷಣ, ವ್ಯವಹಾರ ಮತ್ತು ಆರೋಗ್ಯ ಸೇವೆಗಾಗಿ ರಾಜ್ಯದ ಹೊರಗೆ ಪ್ರಯಾಣಿಸುವ ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಕುಟುಂಬಗಳಿಗೆ ಹೆಚ್ಚಿನ ಅನುಕೂಲವನ್ನು ನೀಡುತ್ತದೆ. ಇಲ್ಲಿಯವರೆಗೆ, ಸೇವೆಗಳನ್ನು ತಾತ್ಕಾಲಿಕ ಸೌಲಭ್ಯದಿಂದ ನಿರ್ವಹಿಸಲಾಗುತ್ತಿತ್ತು. ಈ ಹೊಸ ಟರ್ಮಿನಲ್‌ನೊಂದಿಗೆ, ನಾವು ಮೂಲಸೌಕರ್ಯವನ್ನು ಮಾತ್ರ ಸುಧಾರಿಸುತ್ತಿಲ್ಲ, ನಾವು ಜೀವನವನ್ನು ಸುಧಾರಿಸುತ್ತಿದ್ದೇವೆ ಎಂದು ಹೇಳಿದರು.

ಸುಮಾರು 640 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೊಲೊಂಗಿ ವಿಮಾನ ನಿಲ್ದಾಣವೂ ಅರುಣಾಚಲದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾಗಿದೆ. 2022 ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಿದ್ದರು.

ಇದನ್ನೂ ಓದಿ: ಚೊಚ್ಚಲ ಪ್ರಯಾಣ ಆರಂಭಿಸಿದ ಕೆಲ ನಿಮಿಷದಲ್ಲೇ ಮುಳುಗಿದ ಐಷಾರಾಮಿ ಹಡಗು

ಇದನ್ನೂ ಓದಿ: ಕೇರ್‌ ಟೇಕರ್ ಆಟಕ್ಕೆ ಬರ್ತಿಲ್ಲ ಅಂತ ಗುರ್ ಗುರ್ ಎಂದು ಸಿಟ್ಟು ಮಾಡ್ಕೊಂಡ ಆನೆಮರಿ: ವೀಡಿಯೋ ಭಾರಿ ವೈರಲ್