ಆಚಾರ್ಯ ಚಾಣಕ್ಯರ ನೀತಿಯ (Chanakya Niti) ಪ್ರಕಾರ, ಗಂಡನು ತನ್ನ ಹೆಂಡತಿಯಿಂದ ಸ್ವರ್ಗಸದೃಶ ಸಂಸಾರವನ್ನು ಹೊಂದಬೇಕಾದರೆ ಆತ 15 ಪ್ರಮುಖ ಸೂತ್ರಗಳನ್ನು ಅನುಸರಿಸಬೇಕಂತೆ. ಅವು ಏನು? 

ಗಂಡ- ಹೆಂಡತಿ ಸಂಬಂಧ ಎಂಬುದು ಜಟಿಲ ಸಂಗತಿ. ಅದರಲ್ಲಿ ಗಂಡನು ಹೆಂಡತಿಗೆ ಒಂದಷ್ಟನ್ನು ನೀಡುತ್ತಲಿದ್ದರೆ ಅವಳು ಆತನಿಗೆ ಸಂಸಾರದ ಸಾರವನ್ನೇ ಮೊಗೆಮೊಗೆದು ನೀಡುತ್ತಾಳೆ. ಹಾಗೆಯೇ ಹೆಂಡತಿ ಮಾತ್ರ ಗಂಡನಿಗೆ ನೀಡುತ್ತಾ ಇದ್ದರೆ, ಅಂಥ ಸಂಸಾರ ತುಂಬ ಕಾಲ ಬಾಳುವುದಿಲ್ಲ. ಗಂಡಸು ಪತ್ನಿಯ ಬೆಲೆಯನ್ನು ಸಾಮಾನ್ಯವಾಗಿ ತಿಳಿದಿರುವುದಿಲ್ಲ. ಬದುಕಿನ ಸಂಕಷ್ಟ ಕಾಲದಲ್ಲಿ ಮಾತ್ರ ಪತ್ನಿಯ ಮೌಲ್ಯ ಆತನಿಗೆ ತಿಳಿಯುತ್ತದೆ. ಅಷ್ಟರವರೆಗೂ ಕಾಯಕೂಡದು. ಆಕೆಗೆ ಸಲ್ಲಬೇಕಾದ್ದನ್ನು ಮೊದಲಿನಿಂದಲೂ ಕೊಡುತ್ತಾ ಇದ್ದರೆ, ಅವಳು ಆತನಿಗೆ ಬೇಕಾದರೆ ಸ್ವರ್ಗವನ್ನೇ ಈ ಬದುಕಿನಲ್ಲಿಯೇ ಕಾಣಿಸುತ್ತಾಳೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ (chanakya niti). ಹಾಗಾದರೆ ಆ 15 ಅಂಶಗಳು ಯಾವುವು?

1) ಪ್ರೀತಿ ಇದ್ದರೆ ಸಾಲದು, ಅದನ್ನು ತೋರಿಸಬೇಕು. ಆಕೆಯ ಕೆಲಸಗಳನ್ನು ಮೆಚ್ಚಿ ಮಾತಾಡಬೇಕು. ಅವಳಿಗೆ ಅಗತ್ಯವಾದ ದೈಹಿಕ ಹಾಗೂ ಮಾನಸಿಕ ಸಾಂಗತ್ಯವನ್ನ ನೀಡಬೇಕು. ಆಕೆಯ ಗುಣಗಳನ್ನು ಎಲ್ಲರ ಎದುರು ಶ್ಲಾಘಿಸಬೇಕು. ಹೊಗಳಿಕೆಗೆ ಮರುಳಾಗದ ಹೆಣ್ಣೇ ಈ ಲೋಕದಲ್ಲಿ ಇಲ್ಲ.

2) ಆಕೆಯ ಮನಸ್ಸಿಗೆ ನೋವಾಗುವಂತೆ ಎಂದಿಗೂ ಮಾತನಾಡಬಾರದು. ಆಕೆಯ ದೋಷಗಳನ್ನು ಎಲ್ಲರ ಎದುರು ಹೇಳಬಾರದು, ಏಕಾಂತದಲ್ಲಿ ಹೇಳಬೇಕು.

3) ಆಕೆಯ ಕೆಲವು ಕೆಲಸಗಳಿಂದ ಕೋಪ ಬರಬಹುದು. ಆದರೆ ಕೋಪ ಮಾಡಿಕೊಳ್ಳಬಾರದು. ಕೋಪದಿಂದ ಬಯ್ಯಬಾರದು. ನಯವಾಗಿ ತಿಳಿಸಿಹೇಳಬೇಕು.

4) ಊಟದಲ್ಲಿ ಕೊರತೆಯನ್ನು ಹೇಳಬಾರದು. ಏನು ತಪ್ಪಿದೆ ಎಂಬುದನ್ನು ಆಕೆಯೇ ಊಟ ಮಾಡಿದಾಗ ಕಂಡುಕೊಳ್ಳುತ್ತಾಳೆ. ರುಚಿಯನ್ನು ಕಾಲಾಂತರದಲ್ಲಿ ಸರಿಪಡಿಸಿಕೊಳ್ಳುತ್ತಾಳೆ.

5) ನಿಮ್ಮ ಸಂತೋಷವನ್ನು ಆಕೆಯ ಜೊತೆಗೆ ಹಂಚಿಕೊಳ್ಳಬೇಕು. ನಿಮಗಾದ ಸಂಬಳ ಏರಿಕೆ, ಬಡ್ತಿ, ದೊರೆತ ಶ್ಲಾಘನೆ ಇವುಗಳನ್ನೆಲ್ಲ ಆಕೆಯ ಜೊತೆ ಹಂಚಿಕೊಂಡರೆ ಅವಳು ಅದರಲ್ಲಿ ಪಾಲ್ಗೊಳ್ಳುತ್ತಾಳೆ.

6) ಯಾವ ಜಾಗದಲ್ಲಿಯೂ ಆಕೆಯನ್ನು ಬಿಟ್ಟು ಕೊಡಬಾರದು. ನಿಮ್ಮ ತಂದೆ ತಾಯಿ ಆಕೆಯನ್ನು ಬೈದು ಭಂಗಿಸಲು ಬಿಡಬಾರದು, ನಿಮ್ಮ ಕುಟುಂಬದವರ ಮುಂದೆ ಆಕೆಯನ್ನು ಕೀಳಾಗಿಸಬಾರದು.

7) ಮುಖ್ಯವಾದ ಸಮಾರಂಭಗಳಿಗೆ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ನಿಮ್ಮ ಕಚೇರಿಯವರ ಪರಿಚಯ ಮಾಡಿಸಬೇಕು. ನಿಮ್ಮ ಗೆಳೆಯರ ಬಗ್ಗೆ ಆಕೆಗೆ ಗೊತ್ತಿರಬೇಕು.

8) ಕುಟುಂಬದ ಮುಖ್ಯವಾದ ವಿಷಯಗಳನ್ನು ಹೆಂಡತಿಯ ಜೊತೆಗೂಡಿ ಆಲೋಚಿಸಬೇಕು. ನೀವೇ ಎಲ್ಲ ನಿರ್ಧಾರಗಳನ್ನೂ ಏಕಪಕ್ಷೀಯವಾಗಿ ತೆಗೆದುಕೊಳ್ಳಬಾರದು. ಆಗ ಆಕೆಯೂ ತನಗೆ ಈ ಮನೆಯಲ್ಲಿ ಅಧಿಕಾರ ಇದೆ ಎಂದು ಸಮಾಧನ ಹೊಂದುತ್ತಾಳೆ.

9) ಆಕೆ ಹೇಳುವುದನ್ನು ಸಮಾಧಾನವಾಗಿ ಕೇಳಬೇಕು. ಪತ್ನಿಯು ಮಂತ್ರಿಯ ಹಾಗೆ. ಆಕೆಯ ಮಂತ್ರಾಲೋಚನೆಯಿಂದ ಸಂಸಾರವೆಂಬ ರಾಜ್ಯಾಡಳಿತ ಸುಗಮವಾಗಿ ಸಾಗುತ್ತದೆ. ಮಂತ್ರಿಯಿಲ್ಲದ ರಾಜ ಸತ್ತಂತೆಯೇ ಸರಿ.

10) ಹೆಂಡತಿಯ ಮಾತನ್ನು ಆದರಿಸಬೇಕು. ಸಾಧ್ಯವಾದರೆ ಅನುಸರಿಸಬೇಕು. ಸಾಧ್ಯವಾಗದಿದ್ದರೆ, ನಿಮ್ಮ ಹಾದಿಗೆ ಆಕೆ ಬರುವಂತೆ ಅನುನಯಿಸಬೇಕು. ಎಂದಿಗೂ ಆಕೆಯ ಮಾತಿಗಾಗಿ ಆಕೆಯನ್ನು ಅಪಮಾನ ಮಾಡಬಾರದು.

11) ಹಣವು ಮಾತ್ರ ಧ್ಯೇಯವಲ್ಲ. ಕಚೇರಿ ಕೆಲಸವೂ ಮುಖ್ಯವೇ. ಆದರೆ ಅದಕ್ಕಾಗಿ ಹೆಂಡತಿಯನ್ನು ಕಡೆಗಣಿಬಾರದು. ಮಕ್ಕಳು ಮತ್ತು ಕುಟುಂಬಕ್ಕೆ ಮುಖ್ಯ ಒತ್ತನ್ನು ನೀಡಬೇಕು.

12) ವಾರಕ್ಕೆ ಒಂದು ಸಲವಾದರು ಒಟ್ಟಿಗೆ ಕೂತು ಮನಸ್ಸು ಬಿಚ್ಚಿ ಮಾತನಾಡಬೇಕು. ಇಬ್ಬರೇ ಎಲ್ಲಿಗಾದರೂ ಒಟ್ಟಾಗಿ ಹೋಗಿ ಮುಕ್ತವಾಗಿ ಮಾತನಾಡಬೇಕು.

13) ವಷ೯ಕ್ಕೆ ಒಂದು ಸಲವಾದರು ಸುದೀರ್ಘ ಪ್ರವಾಸಕ್ಕೆ ಹೋಗಬೇಕು. ಅದು ಆತ್ಮೀಯತೆಯನ್ನು ಹೆಚ್ಚಿಸುತ್ತದೆ. ಸಂಬಂಧವನ್ನು ಗಾಢವಾಗಿಸುತ್ತದೆ.

14) ಮಕ್ಕಳ ಶಿಕ್ಷಣದ ಬಗ್ಗೆ ಅಕ್ಕರೆ ತೋರಿಸಬೇಕು. ತಾನು ಈ ಮಕ್ಕಳ ತಂದೆ ಎಂಬುದು ಸದಾ ಅರಿವಿನಲ್ಲಿರಬೇಕು. ಆಗ ಹೆಂಡತಿಯೂ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುತ್ತಾಳೆ.

15) ಮುಚ್ಚು ಮರೆ ಇರಕೂಡದು. ವಂಚನೆ ಮಾಡಕೂಡದು, ಅದರಲ್ಲೂ ಮುಖ್ಯವಾಗಿ ವಿವಾಹದಾಚೆಯ ಸಂಬಂಧಗೂ ಇರಕೂಡದು. ಅದು ಇದ್ದರೆ ಈ ಸಂಸಾರ ಸರ್ವನಾಶ ಖಚಿತ. ಅಂಥ ಗಂಡನಿಗೆ ಪತ್ನಿಯೇ ಮಾರಿಯಾಗಬಲ್ಲಳು.