ಆಚಾರ್ಯ ಚಾಣಕ್ಯರ ನೀತಿಗಳು (Chanakya Niti) ಜೀವನದಲ್ಲಿ ಯಶಸ್ಸು ಸಾಧಿಸಲು ದಾರಿದೀಪ. ಪ್ರಾಮಾಣಿಕತೆ, ಶಿಕ್ಷಣ, ಕಾರ್ಯತಂತ್ರ ಮತ್ತು ಮಾನವ ಸ್ವಭಾವದ ಕುರಿತಾದ ಅವರ 20 ಪ್ರಮುಖ ಮತ್ತು ಅರ್ಥಗರ್ಭಿತ ಸೂಕ್ತಿಗಳನ್ನು ಇಲ್ಲಿ ವಿವರಿಸಲಾಗಿದೆ. 

ಆಚಾರ್ಯ ಚಾಣಕ್ಯರ (Chanakya Niti) ಕೆಲವು ಮಾತುಗಳು ಹಾರ್ಡ್‌ ಹಿಟ್ಟಿಂಗ್‌ ಅಥವಾ ತುಂಬಾ ನೇರ. ಆದರೆ ಅವು ನಾವು ಜೀವನದಲ್ಲಿ ಪಾಲಿಸಲೇಬೇಕಾದ ತುಂಬಾ ಅರ್ಥಗರ್ಭಿತವಾದ ಸಂಗತಿಗಳನ್ನು ಒಳಗೊಂಡಿವೆ. ಚಾಣಕ್ಯರ ನೀತಿಗಳನ್ನು ಪಾಲಿಸಿದರೆ ಜೀವನದಲ್ಲಿ ತೊಂದರೆ ಎಂಬುದಿಲ್ಲ. ಆದರೆ ಕಡೆಗಣಿಸಿದರೆ ಅಪಾಯ ಉಂಟಾಗಬಹುದು. ಅಂಥ ಕೆಲವು ಸೂಕ್ತಿಗಳನ್ನು ಇಲ್ಲಿ ನೋಡೋಣ.

1) ಒಬ್ಬ ವ್ಯಕ್ತಿ ಹೆಚ್ಚು ಪ್ರಾಮಾಣಿಕನಾಗಿರಬಾರದು. ಯಾಕೆಂದರೆ ಜನರು ಕಾಡಿನಲ್ಲಿ ವಕ್ರವಾಗಿರುವ ಮರಗಳನ್ನು ಬಿಟ್ಟು ನೇರವಾಗಿರುವ ಮರಗಳನ್ನು ಮೊದಲು ಕಡಿಯುತ್ತಾರೆ. ಅದು ಸುಲಭ. ಪ್ರಾಮಾಣಿಕರನ್ನು ಮೊದಲು ಕೆಡವಲಾಗುತ್ತದೆ.

2) ಬಿಲ್ಲುಗಾರ ಹೊಡೆದ ಬಾಣವು ಒಬ್ಬ ವ್ಯಕ್ತಿಯನ್ನು ಕೊಲ್ಲಬಹುದು ಅಥವಾ ಕೊಲ್ಲದಿರಬಹುದು. ಆದರೆ ಬುದ್ಧಿವಂತರು ರೂಪಿಸಿದ ತಂತ್ರಗಳು ಗರ್ಭದಲ್ಲಿರುವ ಶಿಶುಗಳನ್ನು ಸಹ ಕೊಲ್ಲಬಹುದು.

3) ನಾವು ಹಿಂದಿನದಕ್ಕಾಗಿ ಚಿಂತಿಸಬಾರದು, ಭವಿಷ್ಯದ ಬಗ್ಗೆ ನಾವು ಚಿಂತಿಸಬಾರದು; ವಿವೇಚನಾಶೀಲ ಪುರುಷರು ವರ್ತಮಾನದ ಕ್ಷಣದೊಂದಿಗೆ ಮಾತ್ರ ವ್ಯವಹರಿಸುತ್ತಾರೆ.

4) ಕುರುಡನಿಗೆ ಕನ್ನಡಿ ಹೇಗೆ ಉಪಯುಕ್ತವೋ ಹಾಗೆಯೇ ಮೂರ್ಖನಿಗೆ ಪುಸ್ತಕಗಳು ಉಪಯುಕ್ತ.

5) ಭಯ ಹತ್ತಿರ ಬಂದ ತಕ್ಷಣ, ಅದನ್ನು ಆಕ್ರಮಿಸಿ ನಾಶಮಾಡಿ.

6) ಶಿಕ್ಷಣವು ಅತ್ಯುತ್ತಮ ಸ್ನೇಹಿತ. ವಿದ್ಯಾವಂತ ವ್ಯಕ್ತಿಯನ್ನು ಎಲ್ಲೆಡೆ ಗೌರವಿಸಲಾಗುತ್ತದೆ. ಶಿಕ್ಷಣವು ಸೌಂದರ್ಯ ಮತ್ತು ಯವ್ವನವನ್ನು ಮೀರಿಸುತ್ತದೆ.

7) ಈಜುವ ಮೀನು ಯಾವಾಗ ನೀರು ಕುಡಿಯುತ್ತದೆ ಎಂದು ತಿಳಿಯುವುದು ಅಸಾಧ್ಯ. ಹಾಗೆಯೇ ಸರ್ಕಾರಿ ಸೇವಕ ಯಾವಾಗ ಹಣ ಕದಿಯುತ್ತಿದ್ದಾನೆ ಎಂದು ಕಂಡುಹಿಡಿಯುವುದು ಅಸಾಧ್ಯ.

8) ಮನುಷ್ಯನು ಒಂಟಿಯಾಗಿ ಹುಟ್ಟಿ ಒಂಟಿಯಾಗಿ ಸಾಯುತ್ತಾನೆ. ತನ್ನ ಕರ್ಮದ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಒಂಟಿಯಾಗಿ ಅನುಭವಿಸುತ್ತಾನೆ. ಮತ್ತು ಒಂಟಿಯಾಗಿ ನರಕಕ್ಕೆ ಅಥವಾ ಸ್ವರ್ಗಕ್ಕೆ ಅಥವಾ ಮೋಕ್ಷಕ್ಕೆ ಹೋಗುತ್ತಾನೆ.

9) ಪ್ರತಿಯೊಂದು ನೆರೆಯ ರಾಜ್ಯವೂ ಶತ್ರು, ಮತ್ತು ಶತ್ರುವಿನ ಶತ್ರು ಸ್ನೇಹಿತ.

10) ಯಾವುದೇ ಕೆಲಸ ಪ್ರಾರಂಭಿಸುವ ಮೊದಲು, ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಿ - ನಾನು ಅದನ್ನು ಏಕೆ ಮಾಡುತ್ತಿದ್ದೇನೆ, ಫಲಿತಾಂಶ ಏನಾಗಬಹುದು ಮತ್ತು ನಾನು ಯಶಸ್ವಿಯಾಗುತ್ತೇನೆಯೇ? ಈ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರ ಕಂಡುಕೊಂಡಾಗ ಮಾತ್ರ ಮುಂದುವರಿಯಿರಿ.

11) ನೀವು ಏನು ಮಾಡಬೇಕೆಂದು ಯೋಚಿಸಿದ್ದೀರಿ ಎಂಬುದನ್ನು ಬಹಿರಂಗಪಡಿಸಬೇಡಿ. ಕಾರ್ಯಗತ ಆಗುವವರೆಗೆ ದೃಢನಿಶ್ಚಯದಿಂದ ರಹಸ್ಯವಾಗಿಡಿ.

12) ಅಶಿಕ್ಷಿತ ಮನುಷ್ಯನ ಜೀವನ ನಾಯಿಯ ಬಾಲದಂತೆ ನಿಷ್ಪ್ರಯೋಜಕ. ಅದು ಅದರ ಹಿಂಭಾಗವನ್ನೂ ಮುಚ್ಚುವುದಿಲ್ಲ ಅಥವಾ ಕೀಟಗಳ ಕಡಿತದಿಂದಲೂ ರಕ್ಷಿಸುವುದಿಲ್ಲ.

13) ಸ್ಥಾನಮಾನದಲ್ಲಿ ನಿಮಗಿಂತ ಮೇಲಿರುವವರು ಅಥವಾ ಕೆಳಗಿರುವ ಜನರೊಂದಿಗೆ ಎಂದಿಗೂ ಸ್ನೇಹ ಬೆಳೆಸಬೇಡಿ. ಅಂತಹ ಸ್ನೇಹಗಳು ನಿಮಗೆ ಯಾವುದೇ ಸಂತೋಷವನ್ನು ನೀಡುವುದಿಲ್ಲ.

14) ದಂಡಧಾರಿಗಳ ಅನುಪಸ್ಥಿತಿಯಲ್ಲಿ ಬಲಿಷ್ಠರು ದುರ್ಬಲರನ್ನು ನುಂಗುತ್ತಾರೆ; ಆದರೆ ಅವರ ರಕ್ಷಣೆಯಿದ್ದಾಗ ದುರ್ಬಲರು ಬಲಿಷ್ಠರನ್ನು ವಿರೋಧಿಸುತ್ತಾರೆ.

15) ಸರ್ಪದ ಕೋರೆಹಲ್ಲು, ನೊಣದ ಬಾಯಿ ಮತ್ತು ಚೇಳಿನ ಕುಟುಕಿನಲ್ಲಿ ವಿಷವಿದೆ; ಆದರೆ ದುಷ್ಟ ಮನುಷ್ಯನು ವಿಷದಿಂದಲೇ ತುಂಬಿರುತ್ತಾನೆ.

16) ಧರ್ಮ ಮತ್ತು ಕರುಣೆ ಇಲ್ಲದ ವ್ಯಕ್ತಿಯನ್ನು ತಿರಸ್ಕರಿಸಬೇಕು. ಆಧ್ಯಾತ್ಮಿಕ ಜ್ಞಾನವಿಲ್ಲದ ಗುರುವನ್ನು ತಿರಸ್ಕರಿಸಬೇಕು. ಪ್ರೀತಿ ಇಲ್ಲದ ಸಂಬಂಧಿಕರನ್ನು ತ್ಯಜಿಸಬೇಕು.

17) ಮೋಹದಂತಹ ಶತ್ರುವಿಲ್ಲ. ಕ್ರೋಧದಂತಹ ಬೆಂಕಿಯೂ ಇಲ್ಲ.

18) ದೇವರು ವಿಗ್ರಹಗಳಲ್ಲಿ ಇರುವುದಿಲ್ಲ. ನಿಮ್ಮ ಭಾವನೆಗಳು ನಿಮ್ಮ ದೇವರು. ಆತ್ಮವೇ ನಿಮ್ಮ ದೇವಾಲಯ.

19) ಒಬ್ಬ ವ್ಯಕ್ತಿಗೆ ವಿನಯ ಇದ್ದರೆ ಬೇರೆ ಯಾವ ಸದ್ಗುಣದ ಅಗತ್ಯವೂ ಇಲ್ಲ. ಒಬ್ಬ ಮನುಷ್ಯನಿಗೆ ಖ್ಯಾತಿ ಇದ್ದರೆ, ಇತರ ಅಲಂಕಾರಗಳ ಅಗತ್ಯವೂ ಇಲ್ಲ.

20) ಸರ್ಪ, ರಾಜ, ಹುಲಿ, ಕಣಜ, ಚಿಕ್ಕ ಮಗು, ಇತರರ ಒಡೆತನದ ನಾಯಿ ಮತ್ತು ಮೂರ್ಖ- ಈ ಏಳು ಜನರನ್ನು ಅರ್ಧನಿದ್ರೆಯಿಂದ ಎಬ್ಬಿಸಬಾರದು.