Thane student confronts police: ಯುವಕನೋರ್ವನಿಗೆ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಿದ್ದಾರೆ. ಆದರೆ ಸ್ವಲ್ಪ ಹೊತ್ತಲ್ಲಿ ಆ ದಂಡ ವಿಧಿಸಿದ ಪೊಲೀಸರೇ ಸಂಚಾರ ನಿಯಮ ಬ್ರೇಕ್ ಮಾಡಿದ್ದು, ಕಾಲೇಜು ವಿದ್ಯಾರ್ಥಿಯೋರ್ವ ಆ ಪೊಲೀಸರನ್ನು ಬೆನ್ನಟ್ಟಿ ಹಿಡಿದಿದ್ದಾನೆ.
ಸಂಚಾರ ನಿಯಮ ಉಲ್ಲಂಘಿಸಿದ ಟ್ರಾಫಿಕ್ ಪೊಲೀಸರ ಹಿಡಿದ ವಿದ್ಯಾರ್ಥಿ
ಥಾಣೆ: ಟ್ರಾಫಿಕ್ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವ ಎಲ್ಲರ ಹಿಡಿದು ದಂಡ ವಿಧಿಸುವುದನ್ನು ನೀವು ನೋಡಿರಬಹುದು. ಹಾಗೆಯೇ ಇಲ್ಲೊಂದು ಕಡೆ ಯುವಕನೋರ್ವನಿಗೆ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಆ ದಂಡ ವಿಧಿಸಿದ ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸುವುದು ಕಂಡು ಬಂದಿದ್ದು, ಕಾಲೇಿಜು ವಿದ್ಯಾರ್ಥಿಯೋರ್ವ ಆ ಪೊಲೀಸರನ್ನು ಹಿಡಿದು ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ಪ್ರಶ್ನೆ ಮಾಡಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಮಾಹಾರಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದೆ. ಯುವಕನ ಕಾರ್ಯಕ್ಕೆ ಅನೇಕರು ಬೆನ್ನು ತಟ್ಟಿದ್ದು, ಈಗ ಸಮಾಧಾನ ಆಯ್ತು ಎಂದು ಖುಷಿ ಪಟ್ಟಿದ್ದಾರೆ.
ವಿದ್ಯಾರ್ಥಿಗೆ 2 ಸಾವಿರ ದಂಡ ವಿಧಿಸಿದ್ದ ಪೊಲೀಸರಿಂದಲೇ ರೂಲ್ಸ್ ಬ್ರೇಕ್
ಸೋಮವಾರ ಥಾಣೆಯ ವಾಗ್ಲೆ ಎಸ್ಟೇಟ್ ಬಳಿ ಘಟನೆ ನಡೆದಿದ್ದು, ವಿದ್ಯಾರ್ಥಿ ಹಾಗೂ ಪೊಲೀಸರ ಮಧ್ಯೆ ಬಿರುಸಿನ ವಾಕ್ಸಮರ ನಡೆದಿದೆ. ವೈರಲ್ ಆದ ವೀಡಿಯೋದಲ್ಲಿ ಯುವಕ ಟ್ರಾಫಿಕ್ ಪೊಲೀಸರು ಪ್ರಯಾಣಿಸುತ್ತಿದ್ದ ಸ್ಕೂಟರ್‌ನ್ನು ಓಡುತ್ತಲೇ ಚೇಸ್ ಮಾಡಿ ಹಿಡಿದಿದ್ದಾನೆ. ಯುವಕ ಸ್ಕೂಟರ್‌ನ ಹಿಂದಿನ ಹಿಡಿದುಕೊಳ್ಳುವ ಹ್ಯಾಂಡಲ್ ಅನ್ನು ಹಿಡಿದಿದ್ದಾನೆ. ಈ ವೇಳೆ ಹಿಂದೆ ಕುಳಿತಿದ್ದ ಟ್ರಾಫಿಕ್ ಪೊಲೀಸ್ ಹೆಲ್ಮೆಟ್ ಧರಿಸಿರಲಿಲ್ಲ, ಅವರು ಪ್ರಯಾಣಿಸುತ್ತಿದ್ದ ಸ್ಕೂಟರ್‌ನ ನಂಬರ್ ಪ್ಲೇಟ್ ಕೂಡ ಸರಿ ಇರಲಿಲ್ಲ, ನಂಬರ್ ಪ್ಲೇಟ್ ಮೇಲೆ ನಂಬರ್ ಸರಿಯಾಗಿ ಕಾಣಿಸುತ್ತಿರಲಿಲ್ಲ, ಆರಂಭದಲ್ಲಿ ವೇಗವಾಗಿ ಹೋಗುವ ಪ್ರಯತ್ನ ಮಾಡಿದರಾದರೂ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದರಿಂದ ಈ ಪೊಲೀಸರಿಗೆ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಿಲ್ಲ.
ವಿದ್ಯಾರ್ಥಿ ಹಾಗೂ ಪೊಲೀಸರ ಮಧ್ಯೆ ಭಾರಿ ಚಕಮಕಿ
ನಂತರ ತಾವು ಪ್ರಯಾಣಿಸುತ್ತಿದ್ದ ಸ್ಕೂಟರ್‌ನ್ನು ಪಕ್ಕಕ್ಕೆ ನಿಲ್ಲಿಸಿದ ಟ್ರಾಫಿಕ್ ಪೊಲೀಸರು ಏನೆಂದು ಕೇಳಿದಾಗ ಆತ ವಾಹನದ ನಂಬರ್ ಪ್ಲೇಟ್ ಸರಿ ಇಲ್ಲದಿರುವುದರ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಇದಕ್ಕೂ ಮೊದಲು ಇವರನ್ನು ಹಿಡಿದ ಇದೇ ಯುವಕನಿಗೆ ಈ ಟ್ರಾಫಿಕ್ ಪೊಲೀಸರು 2000 ರೂಪಾಯಿ ದಂಡ ವಿಧಿಸಿದ್ದರು ಎಂದು ವರದಿಯಾಗಿದೆ. ಹೆಲ್ಮೆಟ್ ಧರಿಸದೇ ಪ್ರಯಾಣಿಸಿದ ಕಾರಣಕ್ಕೆ ಈ ದಂಡ ವಿಧಿಸಲಾಗಿತ್ತು ಎಂದು ವರದಿಯಾಗಿದೆ. ವಿದ್ಯಾರ್ಥಿ ಹಾಗೂ ಪೊಲೀಸರ ನಡುವಿನ ವಾಗ್ವಾದವನ್ನು ಜೊತೆಗಿದ್ದವರು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ.
ನಂಬರ್ ಪ್ಲೇಟ್ ಸರಿ ಇಲ್ಲದ ಬಗ್ಗೆ ಆ ವಿದ್ಯಾರ್ಥಿ ಪ್ರಶ್ನಿಸಿದಾಗ, ಈ ವಾಹನ ನಮ್ಮದಲ್ಲ ಇದನ್ನು ಮುಟ್ಟುಗೋಲು ಹಾಕಿಕೊಳ್ಳಲು ನಾವು ಇಲ್ಲಿಗೆ ತಂದಿದ್ದೇವೆ ಎಂದು ಪೊಲೀಸರು ಹೇಳುವುದನ್ನು ಕೇಳಬಹುದು. ಆದರೆ ಘಟನೆಯ ವೀಡಿಯೋ ವೈರಲ್ ಆದ ನಂತರ ವಿದ್ಯಾರ್ಥಿ ಹಾಗೂ ಪೊಲೀಸರು ಇಬ್ಬರಿಗೂ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ. ಸರಿಯಾದ ನಿಯಮ ಪಾಲಿಸದೆ ಸ್ನೇಹಿತನ ಸ್ಕೂಟರ್ ಬಳಸಿದ್ದಕ್ಕಾಗಿ ಸಂಚಾರ ಪೊಲೀಸರಿಗೆ 2,000 ರೂ. ದಂಡ ವಿಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಎರಡೂ ಕಡೆಗೂ ದಂಡ: ಮಿಸ್‌ಲೀಡಿಂಗ್ ವೀಡಿಯೋ ಎಂದ ಥಾಣೆ ಪೊಲೀಸರು
ಎರಡೂ ಕಡೆಗೂ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ವೀಡಿಯೊ ಸಾಕ್ಷ್ಯಗಳ ಆಧಾರದ ಮೇಲೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಥಾಣೆ ಪೊಲೀಸರು ಟ್ವಿಟ್ಟರ್‌ನಲ್ಲಿ ವಿಚಾರ ಹಂಚಿಕೊಂಡಿದ್ದು, ಈ ವೀಡಿಯೋ ಮಿಸ್‌ಲೀಡ್ ಮಾಡ್ತಿದೆ ಎಂದಿದ್ದಾರೆ.
ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಮೋಟಾರ್ ಸೈಕಲ್‌ನಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿರುವುದು ಕಂಡುಬಂದಿದ್ದು, ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ಕ್ರಮದಿಂದ ಅಸಮಾಧಾನಗೊಂಡ ಆ ಯುವಕರು, ಪೊಲೀಸರು ಸಂಚರಿಸುತ್ತಿದ್ದ ನಂಬರ್ ಪ್ಲೇಟ್ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ ಎಂದು ವಾದಿಸಿದರು. ಸಂಚಾರ ನಿಯಮಗಳ ಪ್ರಕಾರ ಮೋಟಾರ್ ಸ್ಕೂಟರ್‌ಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಈ ವಿಡಿಯೋ ದಾರಿ ತಪ್ಪಿಸುವಂತಿದೆ ಮತ್ತು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳುವಲ್ಲಿ ಪೊಲೀಸರೊಂದಿಗೆ ಸಹಕರಿಸುವಂತೆ ನಾಗರಿಕರಲ್ಲಿ ಮನವಿ ಮಾಡಲಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಥಾಣೆ ಪೊಲೀಸರು ಹೇಳಿದ್ದಾರೆ.
ಆದರೆ ಈ ವೀಡಿಯೋ ನೋಡಿದ ನೆಟ್ಟಿಗರು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹಲವು ಕಾಮೆಂಟ್ ಮಾಡುತ್ತಿದ್ದು, ಟ್ರಾಫಿಕ್ ಪೊಲೀಸರ ಎದುರಿಸಿದ ಯುವಕನಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮೈಮುರಿದು ದುಡಿದ ಹಣದ ತಾಕತ್ತು ಇದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ರೂಲ್ಸ್ ಒಂದೇ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಆಪಲ್ ಕಂಪನಿಗೆ ಭರ್ಜರಿ ಲಾಭ: 4 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಗುರಿ ದಾಟಿದ 3ನೇ ಸಂಸ್ಥೆ ಎಂಬ ಹೆಗ್ಗಳಿಕೆಗೆ
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಹುಲಿಯ ಮುದ್ದು ಮಾಡಿದ ಹುಲಿಯಾ..!
