Apple stock value increase: ಐಫೋನ್ ಮೇಲಿನ ಜನರ ಅಪಾರ ಕ್ರೇಜ್‌ನಿಂದಾಗಿ, ಆಪಲ್ ಸಂಸ್ಥೆಯು ಇದೇ ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ದಾಟಿದೆ. ಇತ್ತೀಚೆಗೆ ಬಿಡುಗಡೆಯಾದ ಐಫೋನ್ 17 ಮತ್ತು ಐಫೋನ್ ಏರ್ ಮಾದರಿಗಳ ಭರ್ಜರಿ ಮಾರಾಟವು ಕಂಪನಿಯ ಷೇರು ಮೌಲ್ಯವನ್ನು ಹೆಚ್ಚಿಸಿದೆ.

ಆಪಲ್ ಸಂಸ್ಥೆಯ ಕಳವಳ ದೂರ ಮಾಡಿದ ಜನರ ಐಫೋನ್ ಕ್ರೇಜ್

ಜನರಿಗಿರುವ ಐಫೋನ್ ಬಗೆಗಿನ ಕ್ರೇಜ್ ಅಷ್ಟಿಷ್ಟಲ್ಲ, ಕೆಲವರು ಕಿಡ್ನಿ ಮಾರಿಯಾದರೂ ಸರಿ ಐಫೋನೆ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ. ಐಫೋನ್ ಮೇಲಿನ ಕ್ರೇಜ್ ಆ ರೀತಿಯದ್ದು. ಜನರ ಈ ಹುಚ್ಚೇ ಈಗ ಐಫೋನ್ ಸಂಸ್ಥೆ ಭರ್ಜರಿ ಲಾಭಗಳಿಸುವುದಕ್ಕೆ ಸಹಾಯ ಮಾಡಿದೆ. ಇದೇ ಕಾರಣಕ್ಕೆ ಈಗ ಐಫೋನ್ ನಿರ್ಮಾಣ ಮಾಡುವ ಆಪಲ್ ಸಂಸ್ಥೆ ಇದೇ ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯದ ಗುರಿ ದಾಟಿ ಮುನ್ನುಗಿದೆ.

ಸೆಪ್ಟೆಂಬರ್ 9 ರಂದು ಆಪಲ್‌ ಸಂಸ್ಥೆಯ ಲೇಟೆಸ್ಟ್‌ ಐಫೋನ್ ಮಾಡೆಲ್‌ಗಳು ಭರ್ಜರಿ ಸೇಲ್ ಆದ ಹಿನ್ನೆಲೆಯಲ್ಲಿ ಆಪಲ್ ಸಂಸ್ಥೆಯ ಷೇರು ಶೇಕಡಾ 13ರಷ್ಟು ಏರಿಕೆ ಕಂಡಿದೆ. ಇದರಿಂದ ಈ ವರ್ಷ ಮೊದಲ ಬಾರಿಗೆ ಆಪಲ್ ಸಂಸ್ಥೆ ಷೇರುಪೇಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದ್ದು, ಗಮನಾರ್ಹ ಬದಲಾವಣೆಯಾಗಿದೆ.

4 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯದ ಗುರಿ ತಲುಪಿದ 3ನೇ ಸಂಸ್ಥೆ ಆಪಲ್

ಮಂಗಳವಾರ ಆಪಲ್ ಸಂಸ್ಥೆ ಮೊದಲ ಬಾರಿಗೆ $4 ಟ್ರಿಲಿಯನ್ ಮಾರುಕಟ್ಟೆ ಮೌಲ್ಯವನ್ನು ತಲುಪಿತು. ಈ ಮೈಲಿಗಲ್ಲನ್ನು ತಲುಪಿದ ಮೂರನೇ ದೊಡ್ಡ ಟೆಕ್ ಕಂಪನಿ ಆಪಲ್ ಆಗಿದೆ. ಆಪಲ್‌ನ ಇತ್ತೀಚಿನ ಐಫೋನ್ ಮಾದರಿಗಳಿಗೆ ಬಲವಾದ ಬೇಡಿಕೆ ಬಂದಿದ್ದರಿಂದ AI ರೇಸ್‌ನಲ್ಲಿ ಅದರ ನಿಧಾನಗತಿಯ ಪ್ರಗತಿಯ ಬಗ್ಗೆ ಭಯವನ್ನು ಈ ಬೇಡಿಕೆ ನಿವಾರಿಸಿದ್ದು, ಶೇರ್‌ನ ಮೌಲ್ಯ ಹೆಚ್ಚುವಂತೆ ಮಾಡಿದೆ. ಆಪಲ್‌ನ ಲಾಭ ಮತ್ತು ಆದಾಯದ ಅರ್ಧಕ್ಕಿಂತ ಹೆಚ್ಚಿನದನ್ನು ಐಫೋನ್ ಹೊಂದಿದೆ. ಅದು ಜನರ ಕೈಗೆ ಹೆಚ್ಚು ತಲುಪಿದಷ್ಟು, ಅವುಜನರನ್ನು ತಮ್ಮ ಪರಿಸರ ವ್ಯವಸ್ಥೆಯೊಳಗೆ ಹೆಚ್ಚು ತಳ್ಳಬಹುದು ಎಂದು ನಾರ್ತ್‌ಲೈಟ್ ಆಸ್ತಿ ನಿರ್ವಹಣೆಯ ಮುಖ್ಯ ಹೂಡಿಕೆ ಅಧಿಕಾರಿ ಕ್ರಿಸ್ ಜಕ್ಕರೆಲ್ಲಿ ಹೇಳಿದ್ದಾರೆ.

ವರ್ಷದ ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಆಪಲ್ ಷೇರುಗಳು

ಈ ವರ್ಷದ ಆರಂಭದಲ್ಲಿ ಚೀನಾದಲ್ಲಿನ ಕಠಿಣ ಸ್ಪರ್ಧೆ ಮತ್ತು ಅದರ ಪ್ರಮುಖ ಉತ್ಪಾದನಾ ಕೇಂದ್ರಗಳಾದ ಚೀನಾ ಮತ್ತು ಭಾರತದಂತಹ ಏಷ್ಯಾದ ಆರ್ಥಿಕತೆಗಳ ಮೇಲೆ ಅಮೆರಿಕದ ಹೆಚ್ಚಿನ ಸುಂಕಗಳನ್ನು ವಿಧಿಸಿದ್ದರಿಂದ, ಕಂಪನಿಯು ಅದನ್ನು ಹೇಗೆ ನಿಭಾಯಿಸುತ್ತದೆ ಎಂಬುದರ ಬಗ್ಗೆ ಅನಿಶ್ಚಿತತೆಯಿಂದಾಗಿ ಆಪಲ್ ಷೇರುಗಳು ಭಾರಿ ಸಂಕಷ್ಟಕ್ಕೆ ಸಿಲುಕಿದ್ದವು. ಆದರೆ ಇತ್ತೀಚೆಗೆ ಬಿಡುಗಡೆಯಾದ ಆಪಲ್‌ನ ಐಫೋನ್ 17 ಹಾಗೂ ಐಫೋನ್ ಏರ್ ಸೇರಿದಂತೆ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಆಪಲ್‌ನ ಚಿಂತೆಯನ್ನು ದೂರ ಮಾಡಿದೆ. ಬಿಡುಗಡೆಯಾದ ಮೊದಲ ಕೆಲವು ವಾರಗಳಲ್ಲಿಯೇ ಬೀಜಿಂಗ್‌ನಿಂದ ಮಾಸ್ಕೋವರೆಗೆ ಈ ಐಫೋನ್‌ಗಳು ಗ್ರಾಹಕರನ್ನು ಆಕರ್ಷಿಸಿದವು.

ಸಂಸ್ಥೆಯ ಕಳವಳ ದೂರ ಮಾಡಿದ ಗ್ರಾಹಕರು

ಐಫೋನ್ ಏರ್‌ನ ಸ್ಲಿಮ್ ವಿನ್ಯಾಸವು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನಂತಹ ಅದರ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಲು ಸಹಾಯ ಮಾಡುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಹಾಗೆಯೇ ಐಫೋನ್ 17 ರ ಆರಂಭಿಕ ಮಾರಾಟವು ಯುಎಸ್ ಮತ್ತು ಚೀನಾದಲ್ಲಿ ಅದರ ಹಿಂದಿನ ಮಾರಾಟಕ್ಕಿಂತಲೂ ಶೇ. 14% ರಷ್ಟು ಉತ್ತಮ ಪ್ರದರ್ಶನ ನೀಡಿದೆ ಎಂದು ಸಂಶೋಧನಾ ಸಂಸ್ಥೆ ಕೌಂಟರ್‌ ಪಾಯಿಂಟ್‌ನ ದತ್ತಾಂಶ ತೋರಿಸಿದೆ.

ಆಪಲ್‌ನ ಇತ್ತೀಚಿನ ಐಫೋನ್‌ಗಳಿಗೆ ಇರುವ ಬಲವಾದ ಬೇಡಿಕೆಯು ಮೂರು ತಿಂಗಳ ಅವಧಿಗೆ ಮಾರುಕಟ್ಟೆ ನಿರೀಕ್ಷೆಗಳನ್ನು ಮೀರಲು ಸಹಾಯ ಮಾಡುತ್ತದೆ ಮತ್ತು ಡಿಸೆಂಬರ್‌ನಲ್ಲಿ ಕೊನೆಗೊಳ್ಳುವ ತ್ರೈಮಾಸಿಕಕ್ಕೆ ಆಶಾದಾಯಕ ಮುನ್ಸೂಚನೆಗಳನ್ನು ನೀಡುತ್ತದೆ ಎಂದು ಬ್ರೋಕರೇಜ್ ಎವರ್‌ಕೋರ್ ಐಎಸ್‌ಐ ವಿಶ್ಲೇಷಿಸಿದೆ. ಎನ್ವಿಡಿಯಾ ಮತ್ತು ಮೈಕ್ರೋಸಾಫ್ಟ್ ನಂತರ $4 ಟ್ರಿಲಿಯನ್ ಗಡಿ ತಲುಪಿದ ಮೂರನೇ ಕಂಪನಿ ಆಪಲ್ ಆಗಿದೆ. ಎನ್ವಿಡಿಯಾ ಪ್ರಸ್ತುತ $4.5 ಟ್ರಿಲಿಯನ್ ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿದೆ.

AI ಬಗ್ಗೆ ಆಪಲ್‌ನ ಎಚ್ಚರಿಕೆಯ ವಿಧಾನವು ದಶಕಗಳಲ್ಲಿ ಉದ್ಯಮದ ಅತಿದೊಡ್ಡ ಬೆಳವಣಿಗೆಯ ವೇಗವರ್ಧಕವನ್ನು ಕಳೆದುಕೊಳ್ಳಬಹುದೆಂಬ ಕಳವಳವನ್ನು ಹುಟ್ಟು ಹಾಕಿತ್ತು. ಇದರ ಜೊತೆಗೆ ಕಂಪನಿಯು ತನ್ನ ಹಲವಾರು ಹಿರಿಯ ಕೃತಕ ಬುದ್ಧಿಮತ್ತೆ ಕಾರ್ಯನಿರ್ವಾಹಕರನ್ನು ಮೆಟಾದಿಂದಾಗಿ ಕಳೆದುಕೊಂಡಿತ್ತು. ಕಂಪನಿಯು ತನ್ನ ಆಪಲ್ ಇಂಟೆಲಿಜೆನ್ಸ್ ಸೂಟ್ ಅನ್ನು ಹೊರತರಲು ನಿಧಾನವಾಗಿತ್ತು, ಇದರಲ್ಲಿ ಚಾಟ್‌ಜಿಪಿಟಿ ಏಕೀಕರಣವೂ ಸೇರಿತ್ತು, ಆದರೆ ಅದರ ಧ್ವನಿ ಸಹಾಯಕ ಸಿರಿಗೆ ಎಐ ಅಪ್‌ಗ್ರೇಡ್ ಮುಂದಿನ ವರ್ಷದವರೆಗೂ ವಿಳಂಬವಾಗಲಿದೆ. ವರದಿಗಳ ಪ್ರಕಾರ, ಆಪಲ್ ಕಂಪನಿಯು ಆಲ್ಫಾಬೆಟ್‌ನ ಜೆಮಿನಿ AI, ಆಂಥ್ರಾಪಿಕ್ ಮತ್ತು ಓಪನ್‌AI ಜೊತೆ ಹಲವಾರು ಒಪ್ಪಂದಗಳನ್ನು ಮಾಡಿಕೊಂಡಿದೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಹುಲಿಯ ಮುದ್ದು ಮಾಡಿದ ಹುಲಿಯಾ..!
ಇದನ್ನೂ ಓದಿ: ಕೆನಡಾದಲ್ಲಿ ಬಿಷ್ಣೋಯ್ ಗ್ಯಾಂಗ್‌ನಿಂದ ಭಾರತೀಯ ಉದ್ಯಮಿಯ ಹತ್ಯೆ