ಪೊಲೀಸ್ ಶ್ವಾನದಳ ಎಂದರೆ ಅಲ್ಲಿರೋದೆಲ್ಲಾ ವಿದೇಶಿ ತಳಿಯ ಶ್ವಾನಗಳೇ. ಆದರೆ ಇಲ್ಲೊಂದು ಬೀದಿನಾಯಿ ತಾನ್ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿದ್ದು, ತನ್ನ ಬುದ್ಧಿವಂತಿಕೆಯಿಂದಲೇ ಪೊಲೀಸ್‌ ಶ್ವಾನದಳವನ್ನು ಸೇರಿದೆ. ಆ ಬೀದಿನಾಯಿಯ ಕತೆ ಇಲ್ಲಿದೆ. 

ಬೀದಿನಾಯಿ ಬಗ್ಗೆ ಈಗ ದೇಶದೆಲ್ಲೆಡೆ ಸಾಕಷ್ಟು ವಿಚಾರಗಳು ಚರ್ಚೆಯಲ್ಲಿವೆ. ಕೆಲವರು ಬೀದಿನಾಯಿಗಳನ್ನು ವಿರೋಧಿಸಿದ್ದರೆ ಮತ್ತೆ ಕೆಲವರು ಬೀದಿನಾಯಿಗಳ ರಕ್ಷಣೆಯ ಪರ ಚರ್ಚೆಯಲ್ಲಿ ತೊಡಗಿದ್ದಾರೆ. ಹೀಗಿರುವಾಗ ಬೀದಿಯಲ್ಲಿ ಹುಟ್ಟಿ ರಾಜ್ಯದ ಭದ್ರತಾ ಪಡೆಗೆ ಸೇರಿದ ಉತ್ತರಾಖಂಡ್‌ನ ಬೀದಿನಾಯಿಯೊಂದರ ಕತೆ ಇಲ್ಲಿದೆ. ಹಳೆಯ ಎಲ್ಲಾ ದಾಖಲೆಗಳನ್ನು ಮುರಿದು ಈ ಬೀದಿನಾಯಿಯೊಂದು ಉತ್ತರಾಖಂಡ್ ಪೊಲೀಸ್ ಪಡೆಯ ಭಾಗವಾಗಿದೆ. ಉತ್ತರಾಖಂಡ್‌ನ ಬೀದಿಯಲ್ಲಿ ಜನಿಸಿ ಅಲ್ಲೇ ಅಲೆದಾಡುತ್ತಿದ್ದ ಈ ಬೀದಿನಾಯಿಯ ಹೆಸರು ಟೆಂಗಾ. ಈ ಶ್ವಾನವೀಗ ಉತ್ತರಾಖಂಡ್ ಪೊಲೀಸ್ ಪಡೆಯ ರೈಸಿಂಗ್ ಸ್ಟಾರ್ ಎನಿಸಿದೆ.

ಬೀದಿಯಲ್ಲಿ ಹುಟ್ಟಿದ ಟೆಂಗಾ ಪೊಲೀಸ್ ಶ್ವಾನದಳ ಸೇರಿದ:

ಉತ್ತರಾಖಂಡ್‌ನಲ್ಲಿ ಆಗ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಕಮಲೇಶ್ ಪಂತ್ ಅವರ ಪುತ್ರಿ ಬೀದಿಯಲ್ಲಿ ಆಡುತ್ತಿದ್ದ ಈ ನಾಯಿಮರಿಯನ್ನು ಮನೆಗೆ ಕರೆದುಕೊಂಡು ಬಂದ ನಂತರ ಈ ಟೆಂಗಾನ ಅದೃಷ್ಟ ಬದಲಾಯ್ತು. ಎತ್ತರವಾಗಿ ಮುದ್ದುಮುದ್ದಾಗಿದ್ದ ಈ ನಾಯಿಗೊಂದು ಅವಕಾಶ ನೀಡಲು ಕಮಲೇಶ್ ಪಂತ್ ನಿರ್ಧರಿಸಿದರು. ಸಣ್ಣದೊಂದು ಪರೀಕ್ಷೆಯ ಮೂಲಕ ಆರಂಭವಾದ ಈ ಪ್ರಯೋಗ ಕೆಲ ದಿನಗಳಲ್ಲೇ ಮಹತ್ವದ ತಿರುವು ಪಡೆದುಕೊಂಡಿತು. ತರಬೇತಿಯ ಪ್ರಾರಂಭದ ದಿನಗಳಲ್ಲೇ ಶ್ವಾನ ಟೆಂಗಾ ಸರಿಸಾಟಿಯಿಲ್ಲದ ಶಕ್ತಿ ಹಾಗೂ ಬುದ್ಧಿವಂತಿಕೆಯನ್ನು ತೋರಿಸಲು ಶುರು ಮಾಡಿತ್ತು. ಯಾವುದೇ ತಳಿಯ ಶ್ವಾನಗಳಿಗಿಂತಲೂ ವೇಗವಾಗಿ ಇದು ಕಮಾಂಡ್‌ಗಳನ್ನು ಕಲಿಯಲು ಶುರು ಮಾಡಿತು. ಕೇವಲ ವಾರದಲ್ಲಿ ಅದು, ಕಲಿಯುವುದಕ್ಕೆ ಕೆಲವು ತಿಂಗಳುಗಳೇ ಬೇಕಾಗುವಂತಹ ಕೆಲವು ಕೌಶಲ್ಯಗಳನ್ನು ಪ್ರದರ್ಶಿಸಲು ಶುರು ಮಾಡಿತು.

ಯಶಸ್ವಿಯಾಯ್ತು ಉತ್ತರಾಖಂಡ್ ಪೊಲೀಸರ ಪ್ರಯೋಗ:

ಅದು ಜನರನ್ನು ನಮಸ್ತೆಯೊಂದಿಗೆ ಸ್ವಾಗತಿಸುತ್ತಿತ್ತು. ಇತರ ಪೊಲೀಸ್ ಶ್ವಾನಗಳಂತೆ ಸಲೀಸಾಗಿ ಮೂರು ಎತ್ತರದಲ್ಲಿ ಫಿಕ್ಸ್ ಮಾಡಲಾದ ವೃತ್ತಗಳಲ್ಲಿ ಸಲೀಸಾಗಿ ಹಾದು ಹೋಗುತ್ತಿತ್ತು. ಸುಲಭವಾಗಿ 5 ಅಡಿಗೂ ಎತ್ತರದ ಗೋಡೆಯನ್ನು ಏರುತ್ತಿತ್ತು. ಅಲ್ಲದೇ ಟ್ರ್ಯಾಕ್‌ನ ವಾಸನೆಯನ್ನು ಸುಲಭವಾಗಿ ಗುರುತಿಸುತ್ತಿತ್ತು. ಬೀದಿನಾಯಿಯ ಈ ಬುದ್ಧಿವಂತಿಕೆ ನೋಡಿ ಪೊಲೀಸ್ ಶ್ವಾನಗಳಿಗೆ ತರಬೇತಿ ನೀಡುವ ರಾಮ್‌ ದತ್ ಪಾಂಡೆಯವರೇ ಸ್ವತಃ ಅಚ್ಚರಿಪಟ್ಟಿದ್ದರು. ಈ ರೀತಿ ಎತ್ತರದಲ್ಲಿ ನಿರ್ಮಿತವಾದ ವೃತ್ತಗಳನ್ನು ಹಾದು ಹೋಗುವುದನ್ನು ಶ್ವಾನಗಳು ಮಾಡುವುದಕ್ಕೆ ಕನಿಷ್ಠ 3 ತಿಂಗಳ ತರಬೇತಿ ಬೇಕಾಗುತ್ತದೆ. ಆದರೆ ಈ ಬೀದಿನಾಯಿ ಟೆಂಗಾ ಕೇವಲ 20 ದಿನದಲ್ಲಿ ಈ ಕಲೆಯನ್ನು ಕರಗತ ಮಾಡಿಕೊಂಡಿತ್ತು. ತನ್ನ ತರಬೇತಿಯ ನಂತ ಟೆಂಗಾ ಈಗ ನಿಜವಾದ ಕೆಲಸವನ್ನು ವಹಿಸಿಕೊಳ್ಳಲು ಸಿದ್ಧವಾಗಿದೆ. ನಾಪತ್ತೆಯಾದವರನ್ನು ಪತ್ತೆ ಮಾಡುವುದರಿಂದ ಹಿಡಿದು ಅಪತ್ತು ನಿರ್ವಹಣಾ ಪಡೆಗೆ ಸಹಾಯ ಮಾಡುವುದರ ಜೊತೆಗೆ ಈ ಟೆಂಗಾ ಬಹಳ ಜವಾಬ್ದಾರಿಯೊಂದಿಗೆ ಕೆಲಸ ಮಾಡುತ್ತಿದ್ದು ಉತ್ತರಾಖಂಡ್‌ನ ಪೊಲೀಸ್ ಶ್ವಾನಪಡೆಯನ್ನು ಸೇರಿದೆ.

ಪೊಲೀಸ್ ಇಲಾಖೆಯ ಶ್ವಾನದಳದಲ್ಲಿ ಇಲ್ಲಿಯವರೆಗೆ ಜರ್ಮನ್ ಶೆಫರ್ಡ್, ಲ್ಯಾಬ್ರಡಾರ್, ಗೋಲ್ಡನ್ ರಿಟ್ರೈವರ್‌ನಂತಹ ವಿದೇಶಿ ತಳಿಯ ಶ್ವಾನಗಳನ್ನು ಬಳಸಲಾಗುತ್ತಿತ್ತು. ಇವುಗಳನ್ನು ಲಕ್ಷಗಟ್ಟಲೆ ರೂಪಾಯಿಗಳಿಗೆ ಖರೀದಿಸಲಾಗುತ್ತಿತ್ತು ಮತ್ತು ಪೊಲೀಸರು ಅವುಗಳ ತರಬೇತಿ ಮತ್ತು ನಿರ್ವಹಣೆಗಾಗಿ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರು. ಆದರೆ ಈಗ ಬೀದಿನಾಯಿ ಟೆಂಗಾ ಪೊಲೀಸ್ ಇಲಾಖೆಗೆ ಸೇರಿದ ನಂತರ ಪೊಲೀಸ್ ಇಲಾಖೆಯಲ್ಲಿ ಬೀದಿನಾಯಿಗಳನ್ನು ಸೇರಿಸುವ ಬಗ್ಗೆ ಒಂದು ಹೊಸ ಚಿಂತನೆ ಹುಟ್ಟಿದೆ.

ಅಲ್ಲದೇ ಇಂಡಿ ತಳಿಯ ಈ ಬೀದಿನಾಯಿಗಳ ನಿರ್ವಹಣೆ ತುಂಬಾ ಸುಲಭ ಹಾಗೂ ಅವುಗಳು ಸ್ವಯಂ ಶಕ್ತಿಶಾಲಿ ಅವುಗಳಿಗೆ ಅಂತಹ ವಿಶೇಷವಾದ ಆಹಾರಗಳ ಅಗತ್ಯವಿರುವುದಿಲ್ಲ. ಹೀಗಾಗಿ ಟೆಂಗಾ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವುದರೊಂದಿಗೆ ಉತ್ತರಾಖಂಡ್ ಪೊಲೀಸರ ಈ ಪ್ರಯೋಗ ಯಶಸ್ವಿಯಾಗಿದ್ದು, ಬೀದಿ ನಾಯಿಗಳು ಕೇವಲ ಸಮಸ್ಯೆಯಲ್ಲ, ಬದಲಿಗೆ ಸಾಧ್ಯತೆಯೂ ಆಗಬಹುದು ಎಂಬುದನ್ನು ಈ ಘಟನೆ ತೋರಿಸಿದೆ.

ಇದನ್ನೂ ಓದಿ: ದಂತವೈದ್ಯರ ಇಕ್ಕಳ ನೋಡಿ ಓಟಕಿತ್ತ ಬಾಲಕ: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಭಾರಿ ವೈರಲ್

ಇದನ್ನೂ ಓದಿ: ಗಣೇಶನ ತೋಳಲ್ಲಿ ಸುಖ ನಿದ್ದೆಗೆ ಜಾರಿದ ಬೆಕ್ಕು: ಮಾಲೀಕನ ಮುದ್ದಾಡಲು ಮಗುವಿನೊಂದಿಗೆ ಶ್ವಾನದ ಸ್ಪರ್ಧೆ

View post on Instagram