ಕೇರಳದ ಸಿಪಿಎಂ ನಾಯಕ ಪಿ.ವಿ ಭಾಸ್ಕರನ್, ತಮ್ಮ ಪಾರ್ಶ್ವವಾಯು ಪೀಡಿತ ಮಗಳು ಮುಸ್ಲಿಂ ವಿವಾಹಿತನ ಪ್ರಭಾವಕ್ಕೆ ಒಳಗಾಗಿದ್ದಾಳೆಂದು ಕಣ್ಣೀರು ಇಡುತ್ತಿದ್ದಾರೆ.  ಮಗಳು ಮಾತ್ರ ತಂದೆಯ ವಿರುದ್ಧವೇ ಆರೋಪ ಮಾಡಿರುವುದು ಪ್ರಕರಣಕ್ಕೆ ತಿರುವು ನೀಡಿದೆ.

ಕೇರಳದ ಕಾಸರಗೋಡಿನ ಉದುಮದಲ್ಲಿ ಸಿಪಿಎಂ ನಾಯಕರಾಗಿರುವ ಪಿ.ವಿ ಭಾಸ್ಕರನ್ ಅವರ ಸ್ಥಿತಿ ಈಗ ಅಯೋಮಯವಾಗಿದೆ. ಮುಸ್ಲಿಂ ವಿವಾಹಿತನೊಬ್ಬ ತನ್ನ ಮಗಳ ತಲೆಕೆಡಿಸಿ, ಆಕೆಯನ್ನು ತನ್ನ ವಿರುದ್ಧವೇ ಎತ್ತಿ ಕಟ್ಟಿರುವ ಬಗ್ಗೆ ಕಣ್ಣೀರು ಇಡುತ್ತಿದ್ದಾರೆ ಭಾಸ್ಕರನ್​. ಸೊಂಟದ ಕೆಳಭಾಗದಿಂದ ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುವ ತಮ್ಮ ವಿಚ್ಛೇದಿತ ಪುತ್ರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಬಂದ ನಕಲಿ ವೈದ್ಯ ರಶೀದ್ ಆಕೆಯ ತಲೆ ಕೆಡಿಸಿದ್ದು, ಆಕೆ ಈಗ ತಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದು ಕಣ್ಣೀರಾಗಿದ್ದಾ ಭಾಸ್ಕರನ್​. ಒಂದೆಡೆ ರಶೀದ್​ ಪತ್ನಿಯೇ ಪತಿಯ ವಿರುದ್ಧ ಕೇಸ್​ ದಾಖಲಿಸಿದ್ದರೂ, ಆತನ ಅಸಲಿಯತ್ತು ತಮ್ಮ ಮಗಳ ಕಣ್ಣಿಗೆ ಕಾಣದಾಗಿದೆ. ದಯವಿಟ್ಟು ಈ ಬಗ್ಗೆ ಏನಾದರೂ ಮಾಡಬೇಕಾಗಿದೆ ಎಂದು ಸಿಪಿಎಂ ನಾಯಕ ಪಿ.ವಿ ಭಾಸ್ಕರನ್ ಅಳಲು ತೋಡಿಕೊಂಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಭಾಸ್ಕರನ್​ ಅವರ ಪುತ್ರಿ ಸಂಗೀತಾ ವಿಚ್ಛೇದಿತೆ. ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಸೊಂಟದ ಕೆಳಗಿನ ಭಾಗವನ್ನು ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದಾಗಲೇ ತಮ್ಮ ಪುತ್ರಿಯ ಚಿಕಿತ್ಸೆಗಾಗಿ 50 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಭಾಸ್ಕರನ್​ ಅವರು ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿಯೇ ಎಂಟ್ರಿ ಕೊಟ್ಟಿದ್ದು ರಶೀದ್​. ಈತ ನಕಲಿ ವೈದ್ಯ ಎನ್ನುವುದು ಆರಂಭದಲ್ಲಿ ತಮಗೆ ತಿಳಿದಿರಲಿಲ್ಲ ಎನ್ನುತ್ತಾರೆ ಭಾಸ್ಕರನ್​. ಮನೆಯಲ್ಲಿ ಪತ್ನಿ, ಮಕ್ಕಳು ಇದ್ದರೂ ಸಂಪೂರ್ಣವಾಗಿ ನಿತ್ರಾಣವಾಗಿರುವ ತನ್ನ ಮೇಲೆ ಆತ ಇಷ್ಟಪಟ್ಟಿದ್ದು ಏಕೆ ಎನ್ನುವ ಯೋಚನೆ ಮಾಡುವ ಸ್ಥಿತಿಯಲ್ಲಿಯೂ ಆಕೆ ಇಲ್ಲ. ಅವಳು ಸಂಪೂರ್ಣವಾಗಿ ಆತನ ಸ್ವಾಧೀನಕ್ಕೆ ಒಳಗಾಗಿದ್ದಾಳೆ. ಅವನಿಗೆ ಬೇಕಿರುವುದು ನನ್ನ ಮಗಳ ಇನ್ಶುರೆನ್ಸ್​ ಹಣ. ಆದರೆ ಅವಳಿಗೆ ಏನೂ ಅರ್ಥವಾಗುತ್ತಿಲ್ಲ ಎಂದು ಭಾಸ್ಕರನ್​ ಎಲ್ಲರ ಎದುರು ನೋವಿನಿಂದ ನುಡಿಯುತ್ತಿದ್ದಾರೆ.

ತಂದೆಯ ವಿರುದ್ಧ ತಿರುಗಿ ಬಿದ್ದ ಸಂಗೀತಾ

ಭಾಸ್ಕರನ್​ ಅವರು ಸಿಪಿಎಂ ನಾಯಕ ಆಗಿರುವ ಕಾರಣ, ಈ ವಿಷಯ ಬೆಳಕಿಗೆ ಬರುತ್ತಿರಲಿಲ್ಲ. ಆದರೆ, ವಿವಾಹಿತನಾಗಿರುವ ಆ ಮುಸ್ಲಿಂ ವ್ಯಕ್ತಿಯ ಉದ್ದೇಶ ತಿಳಿದಿರುವ ಕಾರಣದಿಂದ ಅವರು ತಮ್ಮ ಪುತ್ರಿಯನ್ನು ಆತನಿಂದ ದೂರ ಇರುವಂತೆ ಹೇಳಿದಾಗ, ಸಂಗೀತಾ ಅವರು ಪತ್ರ ಒಂದನ್ನು ಬರೆದು ತಮ್ಮ ತಂದೆಯ ವಿರುದ್ಧ ಗಂಭೀರ ಆರೋಪ ಮಾಡಿರುವ ಕಾರಣದಿಂದ ವಿಷಯ ಬೆಳಕಿಗೆ ಬಂದಿದೆ. ಸೂಪರೆಂಟೆಂಡೆಂಟ್​ ಆಫ್​ ಪೊಲೀಸ್​ ಅವರನ್ನು ಉಲ್ಲೇಖಿಸಿ ಈ ಪತ್ರವನ್ನು ಅವರು ಬರೆದಿದ್ದಾರೆ. 

ಈ ಪತ್ರದಲ್ಲಿ ಸಂಗೀತಾ ಅವರು, ನಾನು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದರಿಂದ ನನ್ನ ಕುಟುಂಬದವರು ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಿರುವುದಾಗಿ ಹೇಳಿದ್ದಾರೆ. ನಾನು ಈಗ ಗೃಹಬಂಧನದಲ್ಲಿದ್ದೇನೆ. ನನಗೆ ಸರಿಯಾದ ಚಿಕಿತ್ಸೆ ನೀಡಲಾಗುತ್ತಿಲ್ಲ. ವಿಚ್ಛೇದನದ ನಂತರ ನನ್ನ ತಂದೆ ಮತ್ತು ಸಹೋದರ ಜೀವನಾಂಶವಾಗಿ ಪಡೆದ ಎಲ್ಲಾ ಹಣವನ್ನು ತೆಗೆದುಕೊಂಡಿದ್ದಾರೆ, ಈಗ ನಾನು ರಶೀದ್ ಜೊತೆಗೆ ಹೋದರೆ ಸಾಯಿಸುವುದಾಗಿ ಹೇಳಿದ್ದಾರೆ ಎಂದು ಸಂಗೀತಾ ಅದರಲ್ಲಿ ಆರೋಪಿಸಿದ್ದಾರೆ. ಇದರ ಬಗ್ಗೆ ಪೊಲೀಸರ ಗಮನಕ್ಕೆ ಬಂದಾಗ ಭಾಸ್ಕರನ್​ ತತ್ತರಿಸಿ ಹೋಗಿದ್ದಾರೆ.

ಮಾದಕ ದ್ರವ್ಯ ವ್ಯಸನಿ?

ಇದು ಯಾವಾಗ ವೈರಲ್​ ಆಯಿತೋ ಪತ್ರಿಕಾಗೋಷ್ಠಿ ಕರೆದ ಭಾಸ್ಕರನ್​ ಅವರು, ನನಗೆ ಧರ್ಮದ ವಿಷಯದಲ್ಲಿ ಯಾವುದೇ ಭೇದಭಾವವಿಲ್ಲ. ನನ್ನ ಮಗಳ ಹೇಳಿಕೆಗಳು ನಿಜವಲ್ಲ. ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೇ ಆಕೆಯ ಮದುವೆಯನ್ನು ಬೆಂಬಲಿಸುತ್ತಿದ್ದೆ. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ. ನನಗೆ ಅತ್ಯಂತ ಮುಖ್ಯವಾದದ್ದು ನನ್ನ ಮಗಳ ಜೀವನ ಮತ್ತು ಯೋಗಕ್ಷೇಮ. ಅವಳು ಸೊಂಟದ ಕೆಳಗೆ ಪಾರ್ಶ್ವವಾಯುವಿಗೆ ಒಳಗಾಗಿದ್ದಾಳೆ, ಅದು ನನ್ನ ಕಾಳಜಿ ಎಂದಿದ್ದಾರೆ.

"ನನ್ನ ಮಗಳ ಚಿಕಿತ್ಸೆ ಮತ್ತು ಸೌಕರ್ಯಕ್ಕಾಗಿ ನಾನು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದೇನೆ. ಇದಾಗಲೇ ಸಾಕಷ್ಟು ಹಣವನ್ನು ಖರ್ಚಾಗಿದೆ. ಆದರೂ ಆಕೆ ಇನ್ನೂ ಸರಿಯಾಗಿಲ್ಲ ಎನ್ನುವ ನೋವು ನನಗಿದೆ. ಆದರೆ ರಶೀದ್ ಬಂದ ಮೇಲೆ ಪರಿಸ್ಥಿತಿಯೇ ಬುಡಮೇಲಾಗಿ ಹೋಗಿದೆ. ಖುದ್ದು ಅವರ ಪತ್ನಿ ಆತನ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಆತ ಮಾದಕವಸ್ತು ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನಗಳೂ ಇವೆ. ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾನು ಅವರ ಮನೆ ಕೊಟ್ಟಪುರಂಗೆ ಹೋಗಿದ್ದೆ, ಆದರೆ ಅಲ್ಲಿ ಯಾರಿಗೂ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ ಎಂದು ಭಾಸ್ಕರನ್ ಹೇಳಿದ್ದಾರೆ.

ಆತನ ಜೊತೆ ಹೇಗೆ ಕಳುಹಿಸಲಿ?

"ನನ್ನ ಮಗಳನ್ನು ತನ್ನ ಸ್ವಂತ ಕುಟುಂಬ ಅಥವಾ ಸಮುದಾಯದಿಂದ ಗೌರವಿಸಲ್ಪಡದ ವ್ಯಕ್ತಿಯ ಜೊತೆ ಹೇಗೆ ಕಳುಹಿಸಲು ಸಾಧ್ಯ? ನಾನು ಸ್ಥಳೀಯ ಜಮಾತ್ ನಾಯಕರೊಂದಿಗೆ ಅವರ ಸ್ಥಳಕ್ಕೆ ಭೇಟಿ ನೀಡಿ ಸತ್ಯಗಳನ್ನು ದೃಢಪಡಿಸಿದೆ. ಅಪಘಾತದ ನಂತರ ನನ್ನ ಮಗಳು ಸಂಗೀತಾ ಸೊಂಟದ ಕೆಳಗೆ ಪಾರ್ಶ್ವವಾಯುವಿಗೆ ಒಳಗಾಗಿದ್ದಳು. ಅವಳಿಗೆ 1.5 ಕೋಟಿ ರೂ. ಪರಿಹಾರ ನೀಡಲಾಗಿದೆ ಮತ್ತು ರಶೀದ್‌ನ ನಿಜವಾದ ಉದ್ದೇಶ ಆ ಹಣವನ್ನು ಪಡೆಯುವುದು. ಆ ಕಾರಣಕ್ಕಾಗಿಯೇ ಅವನು ಸ್ನೇಹಿತನ ಮೂಲಕ ನ್ಯಾಯಾಲಯವನ್ನು ಸಂಪರ್ಕಿಸಿ, ನನ್ನ ಮಗಳನ್ನು ಕೂಡಿ ಹಾಕಿರುವುದಾಗಿ ದೂರಿ ಅರ್ಜಿ ಸಲ್ಲಿಸಿದ್ದಾನೆ ಎಂದಿದ್ದಾರೆ. ಇದೀಗ ಈ ಕೇಸ್​ ಯಾವ ಟರ್ನ್​ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.

ಇದನ್ನೂ ಓದಿ: ಚಿನ್ನದ ಪ್ರಚಾರಕ್ಕೆ ಭಾರತದ ವಿರೋಧಿ ಪಾಕ್​ ಮಾಡೆಲ್ ರಾಯಭಾರಿ? ಏನಿದು ವಿವಾದ? ಕೋರ್ಟ್ ಎಚ್ಚರಿಕೆ ಏನು?