ರಷ್ಯಾ ತೈಲ ಖರೀದಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಟ್ರಂಪ್‌ಗೆ ಹೆದರುತ್ತಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ತೀವ್ರವಾಗಿ ಖಂಡಿಸಿದ್ದಾರೆ. ಪ್ರಧಾನಿ ಮೋದಿಯವರ ರಾಜತಾಂತ್ರಿಕತೆಯನ್ನು ಶ್ಲಾಘಿಸಿದ ಅವರು, ರಾಹುಲ್ ಗಾಂಧಿಯ ನಾಯಕತ್ವದ ಗುಣ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿದೇಶಗಳಿಗೆ ಹೋಗಿ ಭಾರತದ ವಿರುದ್ಧ ಮಾತನಾಡುವುದು ಹೊಸ ವಿಷಯವೇನಲ್ಲ. ರಾಜಕೀಯ ನಾಯಕರ ನಡುವೆ ಪಕ್ಷದ ದೆಸೆಯಿಂದಾಗಿ ಹಲವಾರು ರೀತಿಯ ವೈರುಧ್ಯಗಳು, ರಾಜಕೀಯ ವೈಷಮ್ಯಗಳು ಇರುವುದು ನಿಜವಾದರೂ, ಕೆಲವೊಮ್ಮೆ ವೈಕ್ತಿಗತ ದ್ವೇಷದಿಂದ ಇಡೀ ರಾಷ್ಟ್ರಕ್ಕೆ ಕಪ್ಪುಚುಕ್ಕೆ ಬರುವಂಥ ಮಾತನಾಡುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಾಗಿದೆ. ಅದೇ ಇನ್ನೊಂದೆಡೆ ಭಾರತಕ್ಕೆ ಏನೇ ಆದರೂ ಅದನ್ನು ತಾನೇ ಮಾಡಿಸಿದ್ದು ಎಂದು ಹೇಳಿಕೊಳ್ಳುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಿಂದೆ ಬೀಳುವುದಿಲ್ಲ. ಆಪರೇಷನ್​ ಸಿಂದೂರ್​ ಅನ್ನು ತಾವೇ ನಿಲ್ಲಿಸಿದ್ದು ಎಂದು ಹಸಿಹಸಿ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡಿದ್ದರೂ ಭಾರತದ ಬಗ್ಗೆ ಅವರು ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಕೆಲ ದಿನಗಳ ಇಂದೆ ಅವರು, ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಪ್ರಧಾನಿ ಮೋದಿ ವಿರುದ್ಧ ರಾಹುಲ್​ ಗಾಂಧಿ

ಅವರು ಇಷ್ಟು ಹೇಳುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು "ಟ್ರಂಪ್ ಬಗ್ಗೆ ಭಯಭೀತರಾಗಿದ್ದಾರೆ" ಎಂದು ಹೇಳಿಕೆ ನೀಡಿದ್ದರು. ಇದನ್ನು ಈಗ ಅಮೆರಿಕದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್ ತೀವ್ರವಾಗಿ ಖಂಡಿಸಿದ್ದಾರೆ. ಅವರು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ರಾಹುಲ್​ ಗಾಂಧಿ ವಿರುದ್ಧ ಚಾಟಿ ಬೀಸಿದ್ದಾರೆಎ. ಎಕ್ಸ್ ಖಾತೆಯಲ್ಲಿ ಅವರು, ರಾಹುಲ್ ಗಾಂಧಿಯವರನ್ನು ನೇರವಾಗಿ ಉದ್ದೇಶಿಸಿ, "ನೀವು ತಪ್ಪು ರಾಹುಲ್ ಗಾಂಧಿ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷ ಟ್ರಂಪ್‌ಗೆ ಹೆದರುವುದಿಲ್ಲ. ಪ್ರಧಾನಿ ಮೋದಿ ದೀರ್ಘ ಆಟವನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅಮೆರಿಕದೊಂದಿಗಿನ ಅವರ ರಾಜತಾಂತ್ರಿಕತೆಯು ಕಾರ್ಯತಂತ್ರದ್ದಾಗಿದೆ ಎಂದಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸದಾ ಭಾರತಕ್ಕೆ ಉತ್ತಮವಾದದ್ದನ್ನು ಮಾಡುತ್ತಾರೆ. ನಾನು ಅದನ್ನು ಶ್ಲಾಘಿಸುತ್ತೇನೆ. ಒಂದು ದೇಶದ ನಾಯಕನಾಗಿ ಆ ದೇಶಕ್ಕೆ ಏನು ಬೇಕು ಎನ್ನುವುದು ಮೋದಿ ಅವರಿಗೆ ಚೆನ್ನಾಗಿ ಅರಿವಿದೆ' ಎಂದಿದ್ದಾರೆ.

ರಾಹುಲ್ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ

ಅಷ್ಟೇ ಅಲ್ಲದೇ, ರಾಹುಲ್​ ಗಾಂಧಿ ಅವರನ್ನು ಉದ್ದೇಶಿಸಿದ ಗಾಯಕಿ, ತೀಕ್ಷ್ಣವಾದ ಟೀಕೆಯನ್ನು ಸೇರಿಸಿದ್ದಾರೆ. ದೇಶವನ್ನು ಮುನ್ನಡೆಸಲು ನಿಮಗೆ ಯಾವುದೇ ಅರ್ಹತೆ, ಕೌಶಲುಗಳು ಇಲ್ಲ. ಓರ್ವ ನಾಯಕನ ಬಗ್ಗೆ ನೀವು ಆಡುವ ಮಾತುಗಳನ್ನು ನೋಡಿದಾಗ ಆ ನಾಯಕತ್ವವನ್ನು ನೀವು ಹೇಗೆ ಅರ್ಥ ಮಾಡಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆಯೇ ನಿಮ್ಮ ಮನಸ್ಥಿತಿ ಅರ್ಥವಾಗುತ್ತದೆ. ನೀವು ಭಾರತದ ಪ್ರಧಾನಿಯಾಗಲು ಕುಶಾಗ್ರಮತಿ ಹೊಂದಿಲ್ಲ. ನೀವು ಏನಿದ್ದರೂ 'ಐ ಹೇಟ್ ಇಂಡಿಯಾ' ಪ್ರವಾಸಕ್ಕೆ ಹಿಂತಿರುಗುವುದು ಉತ್ತಮ ಎಂದು ಬರೆದುಕೊಂಡಿದ್ದಾರೆ.

ರಷ್ಯಾದ ತೈಲ ಖರೀದಿ ವಿವರ

ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪುವುದು ಸೇರಿದಂತೆ ಷರತ್ತುಗಳನ್ನು ನಿರ್ದೇಶಿಸಲು ಅಮೆರಿಕಕ್ಕೆ ಪ್ರಧಾನಿ ಮೋದಿ ಪದೇ ಪದೇ ಅನುಮತಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ಆರೋಪಿಸಿದ್ದರು. ಪದೇ ಪದೇ ಕಡೆಗಣಿಸಲ್ಪಟ್ಟಿದ್ದರೂ ಗಾಜಾ ಒಪ್ಪಂದದ ಕುರಿತು ಟ್ರಂಪ್‌ಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ, ಹಣಕಾಸು ಸಚಿವರ ಅಮೆರಿಕ ಭೇಟಿಯನ್ನು ರದ್ದುಗೊಳಿಸಿದ್ದಕ್ಕಾಗಿ ಮತ್ತು ಆಪರೇಷನ್ ಸಿಂದೂರ್​ ಸಮಯದಲ್ಲಿ ಪಾಕಿಸ್ತಾನದೊಂದಿಗೆ ಕದನ ವಿರಾಮಕ್ಕೆ ಕಾರಣವೆಂದು ಟ್ರಂಪ್ ಹೇಳಿಕೊಂಡಿರುವುದನ್ನು ವಿರೋಧಿಸಿದ್ದಕ್ಕಾಗಿ ಅವರು ಪ್ರಧಾನಿಯನ್ನು ಟೀಕಿಸಿದರು. ಈ ವಾರದ ಆರಂಭದಲ್ಲಿ ಡೊನಾಲ್ಡ್ ಟ್ರಂಪ್, ಶ್ವೇತಭವನದ ಮಾಧ್ಯಮಗೋಷ್ಠಿಯಲ್ಲಿ ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆಯಲ್ಲಿ ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸುವುದಾಗಿ ಭರವಸೆ ನೀಡಿದ್ದರು ಮತ್ತು ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಮಾಸ್ಕೋವನ್ನು ಪ್ರತ್ಯೇಕಿಸುವ ಪ್ರಯತ್ನದಲ್ಲಿ ಇದು "ದೊಡ್ಡ ಹೆಜ್ಜೆ" ಎಂದು ಕರೆದಿದ್ದ ಬೆನ್ನಲ್ಲೇ ರಾಹುಲ್​ ಗಾಂಧಿ ಈ ರೀತಿ ಹೇಳಿಕೆ ನೀಡಿದ್ದರು. ಅದಕ್ಕೆ ಈಗ ಅಮೆರಿಕ ಗಾಯಕಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.