ಭಾರತ ವಿರೋಧಿ ಹೇಳಿಕೆ ನೀಡಿದ್ದ ಪಾಕಿಸ್ತಾನಿ ಮಾಡೆಲ್ ಅಲಿಶ್ಬಾ ಖಾಲಿದ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಿದ್ದಕ್ಕಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತೀವ್ರ ವಿವಾದಕ್ಕೆ ಸಿಲುಕಿದೆ. ಕಂಪನಿಯು ಬಾಂಬೆ ಹೈಕೋರ್ಟ್ ಮೊರೆ ಹೋಗಿ ತಾತ್ಕಾಲಿಕ ತಡೆಯಾಜ್ಞೆ ಪಡೆದಿದೆ.

ಕೇರಳ ಮೂಲದ ಎಂ. ಪಿ. ಅಹಮ್ಮದ್ ಎನ್ನುವವರು 1993ರಲ್ಲಿ ಸ್ಥಾಪಿಸಿರುವ ಸುಪ್ರಸಿದ್ಧ ಮಲಬಾರ್ ಗೋಲ್ಡ್ & ಡೈಮಂಡ್ಸ್ ಭಾರಿ ವಿವಾದ ಸೃಷ್ಟಿಸಿದೆ. 13 ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಬಹುರಾಷ್ಟ್ರೀಯ ಕಂಪೆನಿಯಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಬೈಕಾಟ್​ ಟ್ರೆಂಡ್​ ಶುರುವಾಗಿದ್ದು, ಸದ್ಯ ಕೋರ್ಟ್​ ಆದೇಶದಿಂದ ತಾತ್ಕಾಲಿಕವಾಗಿ ಈ ವಿಷಯ ತಣ್ಣಗಾಗಿದೆ. ಭಾರತದ ವಿರುದ್ಧ ಮಾತನಾಡಿದ್ದ ಪಾಕಿಸ್ತಾನದ ಮಾಡೆಲ್​ ಒಬ್ಬರನ್ನು ಚಿನ್ನದ ಪ್ರಚಾರಕ್ಕಾಗಿ ರಾಯಭಾರಿಯನ್ನಾಗಿ ನೇಮಿಸಲಾಗಿದೆ ಎನ್ನುವುದು ಭಾರಿ ಕೋಲಾಹಲ ಸೃಷ್ಟಿಸಿದೆ. ಆಪರೇಷನ್​ ಸಿಂದೂರ್​ ಸಮಯದಲ್ಲಿ ಇದನ್ನು ಬಲವಾಗಿ ಖಂಡಿಸಿ ಪಾಕಿಸ್ತಾನದ ಪರವಾಗಿ ಜೈ ಎಂದಿದ್ದ ಪಾಕಿಸ್ತಾನದ ಮಾಡೆಲ್​ ಇನ್‌ಸ್ಟಾಗ್ರಾಮ್ ಪ್ರಭಾವಿ ಅಲಿಶ್ಬಾ ಖಾಲಿದ್ ಅವರನ್ನು ನೇಮಕ ಮಾಡಿರುವುದೇ ಇಷ್ಟೆಲ್ಲಾ ಗಲಾಟೆಗೆ ಕಾರಣವಾಗಿದೆ.

ಕರೀನಾ ಕಪೂರ್​ ಖಾನ್​ ಕೂಡ ರಾಯಭಾರಿ

ಬಾಲಿವುಡ್​ ನಟಿ ಕರೀನಾ ಕಪೂರ್​ ಖಾನ್​ (Kareena Kapoor Khan) ಕೂಡ ಇದರ ರಾಯಭಾರಿ ಎನ್ನುವುದು ವಿಶೇಷ. ಅಷ್ಟಕ್ಕೂ ಆಗಿದ್ದೇನೆಂದರೆ, ಪಾಕಿಸ್ತಾನದ ಮಾಡೆಲ್​ ಅನ್ನು ಭಾರತದಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಲವರು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು. ಮಲಬಾರ್ ಗೋಲ್ಡ್​ನಿಂದ ಚಿನ್ನವನ್ನು ಖರೀದಿಸದಂತೆ ತಾಕೀತು ಮಾಡಿದ್ದರು. ಕೊನೆಗೆ ಇದರ ವಿರುದ್ಧ ಮಲಬಾರ್ ಗೋಲ್ಡ್ & ಡೈಮಂಡ್ಸ್ ಬಾಂಬೆ ಹೈಕೋರ್ಟ್​ ಮೊರೆ ಹೋಗಿತ್ತು.

ಕೋರ್ಟ್​ನಲ್ಲಿ ಕಂಪೆನಿ ವಾದಿಸಿದ್ದು ಏನು?

ಕೋರ್ಟ್​ನಲ್ಲಿ ಕಂಪೆನಿ ವಾದಿಸಿದ್ದು ಏನೆಂದರೆ, ಪೆಹಲ್ಗಾಮ್​ ದಾಳಿ, ಆಪರೇಷನ್​ ಸಿಂದೂರ್​ಗೂ ಮೊದಲೇ ಈಕೆಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈಕೆಯ ಹಿನ್ನೆಲೆ ಏನು ಎಂದು ತಿಳಿದಿರಲಿಲ್ಲ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ. ಹಿಂದೂಗಳ ಹಬ್ಬದ ಸಮಯದಲ್ಲಿ, ತಮ್ಮ ಕಂಪೆನಿಗೆ ಕೆಟ್ಟ ಹೆಸರು ಬರಬೇಕೆನ್ನುವ ಕಾರಣದಿಂದ ಮತ್ತು ಇಲ್ಲಿ ಚಿನ್ನ-ವಜ್ರಾಭರಣ ಖರೀದಿ ಮಾಡಬಾರದು ಎನ್ನುವ ಕಾರಣದಿಂದ ಉದ್ದೇಶಪೂರ್ವಕವಾಗಿ ನಮ್ಮ ಹೆಸರನ್ನು ಕೆಲವರು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಇಂಥ ಹೇಳಿಕೆಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಪ್ರಸಾರ ಮಾಡದಂತೆ ತಡೆಯಬೇಕು ಎಂದು ಕೋರಿಕೊಂಡಿದ್ದರು. ತಾತ್ಕಾಲಿಕವಾಗಿ ಈ ಕಂಪೆನಿಗೆ ಬಾಂಬೆ ಹೈಕೋರ್ಟ್​ ರಿಲೀಫ್​ ಕೊಟ್ಟಿದೆ. ಸದ್ಯದ ಮಟ್ಟಿಗೆ ಕಂಪೆನಿಗೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳುವ ಪೋಸ್ಟ್​ ಹಾಕಬಾರದು ಎಂದು ಕೋರ್ಟ್​ ಹೇಳಿದ್ದು, ವಿಚಾರಣೆಯನ್ನು ನವೆಂಬರ್​ 11ಕ್ಕೆ ಮುಂದೂಡಿದೆ. ಅಂತಿಮವಾಗಿ ಕೋರ್ಟ್​ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆಯೋ ನೋಡಬೇಕಿದೆ.

ಯಾರೀ ಪ್ರಭಾವಿ?

ಸದ್ಯ ಲಂಡನ್​ನಲ್ಲಿ ವಾಸವಿರುವ ಅಲಿಶಾ/ಅಲಿಶ್ಬಾ ಪಾಕಿಸ್ತಾನಿ ಇನ್‌ಸ್ಟಾಗ್ರಾಮ್ ಪ್ರಭಾವಿ ವ್ಯಕ್ತಿ. ಅವರು ವಿವಿಧ ಬ್ರ್ಯಾಂಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೇ 2025 ರಲ್ಲಿ ಆಪರೇಷನ್ ಸಿಂದೂರ್​ ಬಗ್ಗೆ ಅವರ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಆ ಪೋಸ್ಟ್‌ಗಳಲ್ಲಿ ಒಂದರಲ್ಲಿ, ಅವರು ಭಾರತದ ಈ ಕಾರ್ಯಾಚರಣೆ "ಹೇಡಿತನ" ಎಂದು ಹೇಳಿದ್ದರು. ಮತ್ತು ತನ್ನ ಭಾರತೀಯ ಅನುಯಾಯಿಗಳ ಬಗ್ಗೆ ತನಗೆ ಯಾವುದೇ ಗೌರವವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೀಗ ವೈರಲ್​ ಆಗುತ್ತಿದೆ. ಆದರೆ ಮಲಬಾರ್​ ಗೋಲ್ಡ್​ ಜೊತೆ ಈ ವಿಷಯವನ್ನು ಲಿಂಕ್​ ಮಾಡ್ತಿರೋದು ಸರಿಯಲ್ಲ ಎಂದು ಕಂಪೆನಿ ವಾದಿಸಿತ್ತು ಹಾಗೂ ತಮಗೆ ಈ ಬಗ್ಗೆ ಅರಿವಿಲ್ಲ ಎಂದು ಹೇಳಿದ್ದರಿಂದ ತಾತ್ಕಾಲಿಕವಾಗಿ ಕೋರ್ಟ್​ ತಡೆ ನೀಡಿದೆ.