Droupadi Murmu Rafale flight: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಫೆಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಹಾರಾಟದಲ್ಲಿ, ಮೊದಲ ಮಹಿಳಾ ರಾಫೆಲ್ ಪೈಲಟ್ ಶಿವಾಂಗಿ ಸಿಂಗ್ ಅವರ ಜೊತೆಗಿದ್ದರು. 

ರಾಫೆಲ್‌ನಲ್ಲಿ ಹಾರಿದ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು: ಶಿವಾಂಗಿ ಸಿಂಗ್ ಸಾಥ್

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಯುದ್ಧ ವಿಮಾನ ರಾಫೆಲ್‌ನಲ್ಲಿ ಹಾರುವ ಮೂಲಕ ರಾಫೆಲ್ ಯುದ್ಧ ವಿಮಾನದಲ್ಲಿ ಹಾರಿದ ಮೊದಲ ರಾಷ್ಟ್ರಪತಿ ಎಂಬ ಇತಿಹಾಸ ನಿರ್ಮಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾರಿದ ಈ ಯುದ್ಧ ವಿಮಾನದಲ್ಲಿ ರಾಫೆಲ್ ಹಾರಿಸಿದ ಮೊದಲ ಮಹಿಳಾ ಫೈಲಟ್ ಶಿವಾಂಗಿ ಸಿಂಗ್ ಜೊತೆಗಿದ್ದರು. ಈ ಮೂಲಕ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಶಿವಾಂಗಿ ಸಿಂಗ್ ಅವರನ್ನು ಸೆರೆ ಹಿಡಿಯಲಾಗಿದೆ ಎಂದು ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಹಬ್ಬಿಸಿದ ಊಹಾಪೋಹಾಗಳಿಗೆ ತೆರೆ ಎಳೆಯಲಾಯ್ತು.

ದೇಶದ ಎರಡು ಯುದ್ಧ ವಿಮಾನದಲ್ಲಿ ಹಾರಿದ ಮೊದಲ ರಾಷ್ಟ್ರಪತಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹರಿಯಾಣದ ಅಂಬಾಲಾದಲ್ಲಿರುವ ವಾಯುಪಡೆ ನಿಲ್ದಾಣದಿಂದ ರಫೇಲ್ ವಿಮಾನದಲ್ಲಿ ಹಾರಾಟ ನಡೆಸಿದರು. ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ದ್ರೌಪದಿ ಮುರ್ಮು ಪಾತ್ರರಾದರು. ಇದಕ್ಕೂ ಮೊದಲು, ಅವರು 2023 ರಲ್ಲಿ ಸುಖೋಯ್ 30 ಎಂಕೆಐನಲ್ಲಿಯೂ ಹಾರಾಟ ನಡೆಸಿ ಸುದ್ದಿಯಾಗಿದ್ದರು. ದ್ರೌಪದಿ ಮುರ್ಮು ಅವರು ಏರ್ ಪೋರ್ಸ್‌ನ ಸಮವಸ್ತ್ರದಲ್ಲಿ ಕಂಗೊಳಿಸುತ್ತಿರುವ ಹಾಗೂ ಪೈಲಟ್ ಶಿವಾಂಗಿ ಸಿಂಗ್ ಸೇರಿದಂತೆ ಭಾರತದ ಏರ್‌ಪೋರ್ಸ್‌ನ ಅಧಿಕಾರಿಗಳ ಜೊತೆ ನಿಂತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬುಧವಾರ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಬಾಲಾ ವಾಯುಪಡೆ ನಿಲ್ದಾಣದಿಂದ ಹಾರಾಟ ಆರಂಭಿಸಿದ ರಫೇಲ್ ಯುದ್ಧ ವಿಮಾನವನ್ನು ಗ್ರೂಪ್ ಕ್ಯಾಪ್ಟನ್ ಅಮಿತ್ ಗೆಹಾನಿ ಅವರು ಪೈಲಟ್ ಮಾಡಿದರು, ಅವರು ಗೋಲ್ಡನ್ ಆರೋಸ್ ಎಂದು ಕರೆಯಲ್ಪಡುವ ಭಾರತೀಯ ವಾಯುಪಡೆಯ ನಂ. 17 ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರಪತಿಗಳ ಜೆಟ್‌ನ ಬೆಂಗಾವಲಾಗಿ, ಭಾರತೀಯ ವಾಯುಪಡೆಯ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ಪ್ರತ್ಯೇಕ ವಿಮಾನದಲ್ಲಿ ಹಾರಾಟ ನಡೆಸಿದರು. ಇಡೀ ಹಾರಾಟ ಸುಮಾರು 30 ರಿಂದ 35 ನಿಮಿಷಗಳ ಕಾಲ ನಡೆಯಿತು.

ಪಾಕಿಸ್ತಾನದ ದೊಡ್ಡ ಸುಳ್ಳು ಬಯಲು

ಈ ಘಟನೆಯಿಂದಾಗಿ ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ದೊಡ್ಡ ಸುಳ್ಳು ಬಯಲಾಗಿದೆ. ಜಮ್ಮು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಲ್ಲಿದ್ದ ಹಲವು ಉಗ್ರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಆದರೆ ಪಾಕಿಸ್ತಾನವೂ ಕೂಡ ಭಾರತದ ಹಲವು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಹೇಳಿಕೊಂಡಿದ್ದಲ್ಲದೇ ಸಿಯಾಲ್ ಕೋಟ್ ಸಮೀಪ ಶಿವಾಂಗಿ ಸಿಂಗ್ ಅವರು ಹಾರಿಸುತ್ತಿದ್ದ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೇ ಅವರನ್ನು ವಶಕ್ಕೆ ಪಡೆದಿದ್ದಾಗಿ ಹೇಳಿಕೊಂಡಿತ್ತು.

ಸಾಕ್ಷ್ಯ ಸಮೇತ ಪಾಕಿಸ್ತಾನದ ಸುಳ್ಳು ಬಹಿರಂಗಪಡಿಸಿದ ಪಾಕಿಸ್ತಾನ

ಭಾರತ ಹೊಸದಾಗಿ ಖರೀದಿಸಿದ ಮತ್ತು ದುಬಾರಿ ಫ್ರೆಂಚ್ ನಿರ್ಮಿತ ರಫೇಲ್ ಫೈಟರ್ ಜೆಟ್‌ಗಳಲ್ಲಿ ಒಂದನ್ನು ಒಳಗೊಂಡಂತೆ ಆರು ಭಾರತೀಯ ಮಿಲಿಟರಿ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಪಾಕಿಸ್ತಾನ ಹೇಳಿತ್ತು. ಪಾಕ್ ಒಂದೇ ಒಂದು ಭಾರತೀಯ ವಿಮಾನವನ್ನು ಹೊಡೆದುರುಳಿಸಿಲ್ಲ, ಬದಲಾಗಿ ಅದು ತನ್ನದೇ ಆದ ಆರು ವಿಮಾನಗಳನ್ನು ಕಳೆದುಕೊಂಡಿದೆ ಎಂಬುದನ್ನು ದೃಢಪಡಿಸಲು ಸೇನೆ ಮತ್ತು ಸರ್ಕಾರವು ಸಾಕ್ಷ್ಯ ಸಹಿತ ವಿವರ ನೀಡಿದ್ದವು.

ಪಾಕಿಸ್ತಾನಕ್ಕೆ ಆದ ನಷ್ಟಗಳಲ್ಲಿ ಕನಿಷ್ಠ ನಾಲ್ಕು ಅಮೆರಿಕ ನಿರ್ಮಿತ ಎಫ್ -16 ಮತ್ತು ಚೀನಾದ ಜೆಎಫ್ -17 ಯುದ್ಧ ವಿಮಾನಗಳು ಸೇರಿವೆ ಎಂದು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ಹೇಳಿದ್ದರು. ಇದೇ ವೇಳೆ ಶಿವಾಂಗಿ ಸಿಂಗ್ ಇದ್ದ ವಿಮಾನವನ್ನು ಹೊಡೆದುರುಳಿಸಿ ಅವರನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಭಾರತೀಯ ವಾಯುಪಡೆಯ ಮಾರ್ಷಲ್ ಶಿವಾಂಗಿ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳುತ್ತಿರುವ ಫೇಕ್ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ಕೂಡಲೇ ಪ್ರತಿಕ್ರಿಯಿಸಿ ಇದೆಲ್ಲವೂ ಸುಳ್ಳು ಎಂಬುದನ್ನು ಸಾಬೀತುಪಡಿಸಿತ್ತು.

ಪಾಕಿಸ್ತಾನದ ಈ ಸುಳ್ಳನ್ನು ಭಾರತದ ಆಗಲೇ ಬಯಲು ಮಾಡಿತ್ತು. ಶಿವಾಂಗಿ ಸಿಂಗ್ ಅವರನ್ನು ಸನ್ಮಾನಿಸುತ್ತಿರುವ ಫೋಟೋಗಳನ್ನು ಬಿಡುಗಡೆ ಮಾಡಿತ್ತು.ಅಕ್ಟೋಬರ್ 10 ರಂದು ಭಾರತೀಯ ವಾಯುಸೇನೆಯಲ್ಲಿ ಅವರ ಸಾಧನೆಯ ಫೋಟೋಗಳನ್ನು ಬಿಡುಗಡೆ ಮಾಡಿತು.ಇದರಲ್ಲಿ ಶಿವಾಂಗಿ ಅವರಿಗೆ ಕ್ವಾಲಿಫೈಡ್ ಫ್ಲೈಯಿಂಗ್ ಇನ್ಸ್ಟ್ರಕ್ಟರ್ (QFI) ಬ್ಯಾಡ್ಜ್ ಅನ್ನು ನೀಡಲಾಯಿತು. ಅಕ್ಟೋಬರ್ 9 ರಂದು ವಾಯುಪಡೆ ಸ್ಟೇಷನ್ ತಂಬರಂನ ಫ್ಲೈಯಿಂಗ್ ಇನ್ಸ್ಟ್ರಕ್ಟರ್ಸ್ ಶಾಲೆಯಲ್ಲಿ ನಡೆದ 159 ನೇ ಕ್ವಾಲಿಫೈಡ್ ಫ್ಲೈಯಿಂಗ್ ಇನ್ಸ್ಟ್ರಕ್ಟರ್ ಕೋರ್ಸ್ (QFIC) ನ ಸಮಾರೋಪ ಸಮಾರಂಭದಲ್ಲಿ ಅವರಿಗೆ ಸನ್ಮಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ SASO ತರಬೇತಿ ಕಮಾಂಡ್‌ನ ಏರ್ ಮಾರ್ಷಲ್ ತೇಜ್‌ಬೀರ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕ್ಯೂಎಫ್‌ಐ ಬ್ಯಾಡ್ಜ್ ನೀಡಿರುವುದು ಸಿಂಗ್ ಅವರ ವೃತ್ತಿಜೀವನದಲ್ಲಿ ಒಂದು ಪ್ರಮುಖ ಕ್ಷಣವಾಗಿದೆ. ಇದು ಅವರ ಕೌಶಲ್ಯ, ಸಮರ್ಪಣೆ ಮತ್ತು ಭಾರತದ ವಾಯುಪಡೆಯಲ್ಲಿ ಮಹಿಳೆಯರ ಬೆಳೆಯುತ್ತಿರುವ ಪಾತ್ರವನ್ನು ಎತ್ತಿ ತೋರಿಸುತ್ತದೆ.

ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ಯಾರು?

ರಫೇಲ್ ಯುದ್ಧ ವಿಮಾನವನ್ನು ಹಾರಿಸಿದ ಭಾರತದ ಮೊದಲ ಮಹಿಳಾ ಪೈಲಟ್ ಎಂಬ ಇತಿಹಾಸವನ್ನು ಶಿವಾಂಗಿ ಸಿಂಗ್ ನಿರ್ಮಿಸಿದ್ದಾರೆ. ಇದಕ್ಕೂ ಮೊದಲು, ಅವರು ಅಂಬಾಲಾದ ಗೋಲ್ಡನ್ ಆರೋಸ್ ಸ್ಕ್ವಾಡ್ರನ್‌ನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದರು. ಆಪರೇಷನ್ ಸಿಂಧೂರ್ ಸಮಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ಇದನ್ನೂ ಓದಿ: ರೂಲ್ಸ್ ಬ್ರೇಕ್ ಮಾಡಿದ ಟ್ರಾಫಿಕ್ ಪೊಲೀಸರ ಬೆನ್ನಟ್ಟಿ ಹಿಡಿದ ವಿದ್ಯಾರ್ಥಿ

ಇದನ್ನೂ ಓದಿ: ಆಪಲ್ ಕಂಪನಿಗೆ ಭರ್ಜರಿ ಲಾಭ: 4 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಗುರಿ ದಾಟಿದ 3ನೇ ಸಂಸ್ಥೆ ಎಂಬ ಹೆಗ್ಗಳಿಕೆ

Scroll to load tweet…