ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಿ ಬುಧವಾರ ದೇವರ ದರ್ಶನ ಪಡೆದರು. ಈ ಮೂಲಕ ಶಬರಿಮಲೆಗೆ ಭೇಟಿ ನೀಡಿದ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಇತಿಹಾಸ ಬರೆದರು.

ಪಟ್ಟಣಂತಿಟ್ಟ (ಕೇರಳ) : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಿ ಬುಧವಾರ ದೇವರ ದರ್ಶನ ಪಡೆದರು. ಈ ಮೂಲಕ ಶಬರಿಮಲೆಗೆ ಭೇಟಿ ನೀಡಿದ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಇತಿಹಾಸ ಬರೆದರು.

ಈ ಹಿಂದೆ 1970ರಲ್ಲಿ ಅಂದಿನ ರಾಷ್ಟ್ರಪತಿ ವಿ.ವಿ. ಗಿರಿಯವರು ದೇಗುಲಕ್ಕೆ ಭೇಟಿ ನೀಡಿದ್ದರು.

ಬುಧವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಕಪ್ಪು ಬಣ್ಣದ ಸೀರೆಯುಟ್ಟು ಶಬರಿಮಲೆಗೆ ಆಗಮಿಸಿದ ಮುರ್ಮು ಪಂಪಾ ನದಿಯಲ್ಲಿ ಕಾಲು ತೊಳೆದು, ಸಮೀಪದ ಹಲವು ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಗಣಪತಿ ಮಂದಿರದ ಮುಖ್ಯ ಅರ್ಚಕ ವಿಷ್ಣು ನಂಬೂದರಿಯವರು ಪವಿತ್ರ ಇರುಮುಡಿಯನ್ನು ಕಟ್ಟಿ ರಾಷ್ಟ್ರಪತಿಯವರಿಗೆ ನೀಡಿದರು. ರಾಷ್ಟ್ರಪತಿಯವರ ಜೊತೆಯಲ್ಲಿ ಅವರ ಸಹಾಯಕ ಸಿಬ್ಬಂದಿ ಸೌರಭ್‌ ನಾಯರ್‌, ವೈಯಕ್ತಿಕ ಭದ್ರತಾ ಅಧಿಕಾರಿ ವಿನಯ್‌ ಮತ್ತೂರ್‌ ಹಾಗೂ ಅಳಿಯ ಗಣೇಶ್ ಹೆಂಬ್ರಮ್‌ ಸಹ ಇರುಮುಡಿ ಸ್ವೀಕರಿಸಿದರು.

ನಂತರ 4.5 ಕಿ.ಮೀ. ದೂರದ ಅಯ್ಯಪ್ಪನ ಸನ್ನಿಧಾನಕ್ಕೆ ವಾಹನದಲ್ಲಿ ತೆರಳಿದ ಮುರ್ಮು ಅವರನ್ನು ದೇವಸ್ವಂ ಸಚಿವ ವಿ.ಎನ್‌. ವಾಸವನ್‌ ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಪಿ.ಎಸ್‌. ಪ್ರಶಾಂತ್‌ ಅಭಿನಂದಿಸಿದರು. ತಂತ್ರಿ ಕುಂದರಾರು ಮಹೇಶ್‌ ಮೋಹನಾರು ಪೂರ್ಣಕುಂಭ ಸ್ವಾಗತ ಕೋರಿದರು.

ರಾಷ್ಟ್ರಪತಿಗಳು ತಲೆಯ ಮೇಲೆ ಇರುಮುಡಿ ಹೊತ್ತು, 18 ಪವಿತ್ರ ಮೆಟ್ಟಿಲುಗಳನ್ನೇರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ಟಿಡಿಬಿ ಅಧಿಕಾರಿಗಳು ಅಯ್ಯಪ್ಪನ ವಿಗ್ರಹವನ್ನು ನೀಡಿ ಗೌರವಿಸಿದರು. ಭೋಜನ ಸ್ವೀಕರಿಸಿದ ನಂತರ 2.20ರ ಸುಮಾರಿಗೆ ದೇಗುಲದಿಂದ ತೆರಳಿದರು.