Odisha School Horror: ವಸತಿ ಶಾಲೆಯೊಂದರಲ್ಲಿ ಮಲಗಿದ್ದ ಮಕ್ಕಳ ಕಣ್ಣಿಗೆ ಸಹಪಾಠಿಗಳೇ ಫೆವಿಕ್ವಿಕ್ ಹಾಕಿ ದುಷ್ಕೃತ್ಯ ಎಸಗಿದ್ದಾರೆ. ಈ ಘಟನೆಯಲ್ಲಿ ಎಂಟು ಮಕ್ಕಳ ಕಣ್ಣಿಗೆ ಹಾನಿಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಶಾಲಾ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿದೆ.
ಮಲಗಿದ್ದ ಮಕ್ಕಳ ಕಣ್ಣಿಗೆ ಪೆವಿಕ್ವಿಕ್ ಗಮ್ ಹಾಕಿದ ಸಹಪಾಠಿಗಳು
ಭುವನೇಶ್ವರ: ಅನೇಕರು ತಮ್ಮ ಪುಟ್ಟ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ದೂರ ದೂರದಲ್ಲಿರುವ ಹಾಸ್ಟೆಲ್‌ಗಳಿಗೆ ಸೇರಿಸಿ ಓದಿಸುತ್ತಾರೆ. ಆದರೆ ವಸತಿ ಶಾಲೆಗಳಲ್ಲಿ ನಡೆಯುವ ಕೆಲ ಘಟನೆಗಳನ್ನು ನೋಡಿದರೆ ಹಾಸ್ಟೆಲ್‌ನಲ್ಲಿ ಮಕ್ಕಳನ್ನು ಓದಿಸುವ ಪೋಷಕರು ಬೆಚ್ಚಿ ಬೀಳುವಂತಾಗಿದೆ. ಕೆಲ ದಿನಗಳ ಹಿಂದಷ್ಟೇ ತೆಲಂಗಾಣದ ವಸತಿ ಶಾಲೆಯೊಂದರಲ್ಲಿ ಬಾಲಕನೋರ್ವನಿಗೆ ಆತನ ಸಹಪಾಠಿಗಳೇ ತಮ್ಮ ಬಗ್ಗೆ ಶಿಕ್ಷಕರಿಗೆ ದೂರು ಹೇಳಿದ ಎಂದು ಹಾಸ್ಟೆಲ್ ತರಗತಿಯಲ್ಲಿ ಐರನ್ ಬಾಕ್ಸ್ ಬಿಸಿ ಮಾಡಿ ಹೊಟ್ಟೆ ಹಾಗೂ ಕೈಗೆ ಇಟ್ಟಂತಹ ಭಯಾನಕ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಒಡಿಶಾದಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ. ಹಾಸ್ಟೆಲ್‌ನಲ್ಲಿ ನಿದ್ದೆ ಮಾಡುತ್ತಿದ್ದ ಮಕ್ಕಳ ಕಣ್ಣಿಗೆ ಬೇರೆ ಮಕ್ಕಳು ಪೆವಿಕ್ವಿಕ್ ಹಾಕಿ ಕಣ್ಣು ತೆರೆಯಲಾಗದಂತೆ ಮಾಡಿದ ಭಯಾನಕ ಘಟನೆ ನಡೆದಿದ್ದು, ಇದರಿಂದ ಮಕ್ಕಳ ಕಣ್ಣಿಗೆ ಹಾನಿಯಾಗಿದೆ ಎಂದು ತಪಾಸಣೆ ಮಾಡಿದ ವೈದ್ಯರು ಹೇಳಿದ್ದಾರೆ.
ಒಡಿಶಾದ ಕಂಧಮಾಲ್‌ನಲ್ಲಿ ಈ ಭಯಾನಕ ಘಟನೆ:
ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದ್ದು ಪೋಷಕರು ಹಾಗೂ ಹಾಸ್ಟೆಲ್ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದೆ. ಅತ್ಯಂತ ಅಪಾಯಕಾರಿ ಆಗಿರುವ ಒಮ್ಮೆ ಕೈಗೆ ಅಂಟಿಕೊಂಡರೆ ಚರ್ಮ ಸಹಿತ ಬರುವಂತಹ ಈ ಗಮ್ ಅಥವಾ ಅಂಟನ್ನು ಕೆಲ ಮಕ್ಕಳು ಮಲಗಿದ್ದ ವೇಳೆ ಅವರ ಸಹಪಾಠಿಗಳೇ ಮಲಗಿದ್ದ ಮಕ್ಕಳ ಕಣ್ಣಿಗೆ ಹಾಕಿ ದುಷ್ಕೃತ್ಯ ಮೆರೆದಿದ್ದಾರೆ. ಇದರಿಂದ ಮಕ್ಕಳಿಗೆ ನಿದ್ದೆಯ ನಂತರವೂ ಕಣ್ಣು ತೆರೆಯಲು ಆಗದೇ ಅಳಲು ಶುರು ಮಾಡಿದ್ದಾರೆ. ಫಿರಿಂಗಿಯಾ ಬ್ಲಾಕ್‌ನ ಸಲಗುಡದಲ್ಲಿರುವ ಸೆಬಾಶ್ರಮ್ ಶಾಲೆಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ.
ಸಹಪಾಠಿಗಳ ಕೃತ್ಯದಿಂದ 8 ಮಕ್ಕಳ ಕಣ್ಣಿಗೆ ಹಾನಿ
ಕೂಡಲೇ ಮಕ್ಕಳನ್ನು ಸಮೀಪದ ಆಸ್ಪತ್ರೆಗೆ ಹಾಸ್ಟೆಲ್ ಸಿಬ್ಬಂದಿ ಕರೆದೊಯ್ದಿದ್ದಾರೆ. ಹೀಗೆ ಪೇವಿಕ್ವಿಕ್‌ನಿಂದ ಕಣ್ಣು ತೆರೆಯಲಾಗದೇ ಕಷ್ಟಪಡುತ್ತಿದ್ದ 8 ಮಕ್ಕಳನ್ನು ಮೊದಲು ಗೋಚಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಫುಲ್ಬಾನಿಯಲ್ಲಿರುವ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.ಭಯಾನಕವಾದ ಈ ಅಂಟು ಮಕ್ಕಳ ಕಣ್ಣಿಗೆ ಹಾನಿ ಮಾಡಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಸಮಯೋಚಿತ ವೈದ್ಯಕೀಯ ಚಿಕಿತ್ಸೆಯಿಂದಾಗಿಕಣ್ಣಿಗೆ ಹೆಚ್ಚಿನ ಹಾನಿಯಾಗುವುದನ್ನು ತಡೆಯಲು ಸಾಧ್ಯವಾಗಿದೆ. ಹೀಗೆ ಪೇವಿಕ್ವಿಕ್ ಹಾಕಿದ ಪರಿಣಾಮ ಚಿಕಿತ್ಸೆ ಪಡೆದ ಒಬ್ಬ ವಿದ್ಯಾರ್ಥಿಯನ್ನು ಆಸ್ಪ್ರತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇತರ ಏಳು ಮಂದಿ ವೈದ್ಯರ ವೀಕ್ಷಣೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಮಕ್ಕಳ ಕಿತಾಪತಿಗೆ ಮುಖ್ಯೋಪಾಧ್ಯಾಯರ ಅಮಾನತು:
ಘಟನೆಯ ನಂತರ ಮಕ್ಕಳು ಮಾಡಿದ ಕಿತಾಪತಿಗೆ ಜಿಲ್ಲಾಡಳಿತವು ಶಾಲಾ ಮುಖ್ಯೋಪಾಧ್ಯಾಯ ಮನೋರಂಜನ್ ಸಾಹು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಹಾಸ್ಟೆಲ್ ಒಳಗೆ ಘಟನೆ ಹೇಗೆ ಸಂಭವಿಸಿತು ಎಂಬುದನ್ನು ನಿರ್ಧರಿಸಲು ಮತ್ತು ವಾರ್ಡನ್‌ಗಳು ಮತ್ತು ಸೂಪರಿಂಟೆಂಡೆಂಟ್ ಸೇರಿದಂತೆ ಸಿಬ್ಬಂದಿ ಸದಸ್ಯರ ಪಾತ್ರವನ್ನು ಪರಿಶೀಲಿಸಲು ತನಿಖೆ ಪ್ರಾರಂಭಿಸಲಾಗಿದೆ. ಮಕ್ಕಳು ಶಾಲೆಯ ಕ್ಯಾಂಪಸ್ ಒಳಗೆ ಅಂಟು ತಂದರು ಮತ್ತು ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಘಟನೆಯ ಬಳಿಕ ಕಂಧಮಲ್‌ನ ಕಲ್ಯಾಣ ಅಧಿಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಹಾಗೂ ಜಿಲ್ಲಾಧಿಕಾರಿ ಈ ವಿಷಯದ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಜಗತ್ತನ್ನು ತೊರೆಯುತ್ತಿದ್ದೇವೆ ಕ್ಷಮಿಸಿಬಿಡಿ... ಮಾನಸಿಕ ಅಸ್ವಸ್ಥ ಮಗನೊಂದಿಗೆ 13ನೇ ಮಹಡಿಯಿಂದ ಕೆಳಗೆ ಹಾರಿದ ತಾಯಿ
ಇದನ್ನೂ ಓದಿ: ಪತಿಯ ಶವಪೆಟ್ಟಿಗೆಯ ಮೇಲೆ ಬಿದ್ದು ಬಿಕ್ಕಳಿಸಿದ ರಾಷ್ಟ್ರೀಯವಾದಿ ಚಾರ್ಲಿ ಕಿರ್ಕ್ ಪತ್ನಿ
