ವಿಜಯಪುರದ ಬಾಲಕಿಯರ ವಸತಿ ನಿಲಯದಲ್ಲಿ ರಾತ್ರಿ ಪಾರ್ಟಿ ಹಾಗೂ ಡಾನ್ಸ್ ಕಾರ್ಯಕ್ರಮ ಆಯೋಜಿಸಿದ ಆರೋಪದ ಮೇಲೆ ವಾರ್ಡನ್ ಮತ್ತು ಅಡುಗೆಯವರ ವಿರುದ್ಧ ತನಿಖೆ ನಡೆಯುತ್ತಿದೆ. ಹಾಸ್ಟೆಲ್ ನಿಯಮಗಳನ್ನು ಉಲ್ಲಂಘಿಸಿ ವಿದ್ಯಾರ್ಥಿನಿಯರನ್ನು ಹೊಟೇಲ್‌ಗೆ ಕರೆದೊಯ್ದ ಆರೋಪ ಕೇಳಿಬಂದಿದೆ.
ವಿಜಯಪುರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹೊಟೇಲ್ ಪಾರ್ಟಿ ಕುರಿತಾಗಿ ದೊಡ್ಡ ವಿವಾದ ಉದ್ಭವಿಸಿದೆ. ನಗರದ ಮಾರುತಿ ಕಾಲೋನಿಯಲ್ಲಿ ಇರುವ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದ ವಾರ್ಡನ್ ಶಕುಂತಲಾ ರಜಪೂತ್ ಹಾಗೂ ಹಾಸ್ಟೆಲ್ ಕುಕ್ ರಿಜ್ವಾನ್ ಮುಲ್ಲಾ ಮೇಲೆ ಗಂಭೀರ ಆರೋಪಗಳು ಹೊರ ಬಂದಿವೆ.
ವರದಿ ಪ್ರಕಾರ ಹಾಸ್ಟೆಲ್‌ನ ಅಡುಗೆಯವನಾದ ರಿಜ್ವಾನ್ ಮುಲ್ಲಾ ಎಂಬಾತನ ಹುಟ್ಟುಹಬ್ಬದ ಅಂಗವಾಗಿ ರಾತ್ರಿ ವೇಳೆ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಬಾಲಕಿಯರನ್ನ ಹೊಟೇಲ್‌ಗೆ ಕರೆದೊಯ್ದು ಪಾರ್ಟಿ, ಡಾನ್ಸ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತಂತೆ. ವಿದ್ಯಾರ್ಥಿನಿಯರನ್ನು ರಾತ್ರಿ ಹೊರಗೆ ಕರೆದೊಯ್ಯುವುದು ನಿಷಿದ್ಧವಾಗಿದ್ದರೂ, ಈ ನಿಯಮ ಉಲ್ಲಂಘಿಸಲಾಗಿದೆ ಎಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿಯರನ್ನ ಪಾರ್ಟಿಗೆ ಕರೆದೊಯ್ದ ವಾರ್ಡನ್ ಶಕುಂತಲಾ ರಜಪೂತ ಎಂಬುದು ತಿಳಿದುಬಂದಿದೆ
ಗಮನಾರ್ಹ ವಿಷ್ಯವೆಂದರೆ ಇದೇ ರಿಜ್ವಾನ್ ಮುಲ್ಲಾ ಮುನ್ನ ಇಂಡಿ ಹಾಸ್ಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೂ ಈ ರೀತಿಯ ಘಟನೆ ನಡೆಸಿದ್ದಕ್ಕಾಗಿ ಅಮಾನತುಗೊಳಿಸಲ್ಪಟ್ಟಿದ್ದರು. ಆದರೂ ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಸವಾಲಾಗಿ ಪರಿಣಮಿಸಿದೆ.
ಸಂಜೆ ಹಾಸ್ಟೇಲ್ ವಿದ್ಯಾರ್ಥಿನಿಯರನ್ನ ಹೊರಗೆ ಕಳುಹಿಸುವಂತಿಲ್ಲ ಹಾಸ್ಟೆಲ್ ವಿದ್ಯಾರ್ಥಿನಿಯರು ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಡಿಡಿಗೆ ದೂರು ನೀಡಲು ಯತ್ನಿಸಿದರೂ, ಅವರಿಗೆ ಸಮಾಧಾನ ನೀಡಿದ ಡಿಡಿ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ವಾರ್ಡನ್ ಮತ್ತು ಕುಕ್ ವಿರುದ್ಧ ಕಠಿಣ ಕ್ರಮಕ್ಕಾಗಿ ಒತ್ತಾಯಿಸುತ್ತಿದ್ದಾರೆ.
