24 ಕಂದಮ್ಮಗಳ ಸಾವಿಗೆ ಕಾರಣವಾದ ಕಿಲ್ಲರ್‌ ಕೋಲ್ಡ್ರಿಫ್‌ ಕೆಮ್ಮಿನ ಸಿರಪ್ ತಯಾರಕ ಸಂಸ್ಥೆ ಶ್ರೀಶನ್‌ ಫಾರ್ಮಾ ಕಂಪನಿಗೆ ಉತ್ಪಾದನಾ ಪರವಾನಗಿಯನ್ನು ತಮಿಳುನಾಡು ಸರ್ಕಾರ ರದ್ದುಗೊಳಿಸಿದೆ. ಇದರ ಜತೆಗೆ ಕಂಪನಿ ಮುಚ್ಚುವುದಕ್ಕೂ ಆದೇಶಿಸಿದೆ.

ಚೆನ್ನೈ: 24 ಕಂದಮ್ಮಗಳ ಸಾವಿಗೆ ಕಾರಣವಾದ ಕಿಲ್ಲರ್‌ ಕೋಲ್ಡ್ರಿಫ್‌ ಕೆಮ್ಮಿನ ಸಿರಪ್ ತಯಾರಕ ಸಂಸ್ಥೆ ಶ್ರೀಶನ್‌ ಫಾರ್ಮಾ ಕಂಪನಿಗೆ ಉತ್ಪಾದನಾ ಪರವಾನಗಿಯನ್ನು ತಮಿಳುನಾಡು ಸರ್ಕಾರ ರದ್ದುಗೊಳಿಸಿದೆ. ಇದರ ಜತೆಗೆ ಕಂಪನಿ ಮುಚ್ಚುವುದಕ್ಕೂ ಆದೇಶಿಸಿದೆ.

ರಾಜ್ಯ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಈ ಕಂಪನಿಯ ಕೆಮ್ಮಿನ ಸಿರಪ್‌ನಲ್ಲಿ ಶೇ.48.5ರಷ್ಟು ಡೈಎಥಿಲೀನ್‌ ಗ್ಲೈಕಾಲ್‌ ಅಂಶವಿರುವುದು ಪತ್ತೆ ಹಾಗೂ ಅದರಿಂದ ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ ಸ್ಟಾಲಿನ್‌ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜತೆಗೆ ಕಂಪನಿಯು ಸರಿಯಾದ ಉತ್ಪಾದನಾ ವ್ಯವಸ್ಥೆ ಮತ್ತು ಪ್ರಯೋಗಾಲಯವನ್ನು ಹೊಂದಿಲ್ಲ, 300ಕ್ಕೂ ಹೆಚ್ಚು ಪ್ರಮುಖ ನಿಯಮಗಳ ಉಲ್ಲಂಘನೆ ಆಗಿರುವುದು ಕಂಡು ಬಂದಿದೆ.

ಕಂಪನಿಯ ಮಾಲೀಕ ಜಿ. ರಂಗನಾಥನ್ ಅವರನ್ನು ಇತ್ತೀಚೆಗಷ್ಟೇ ಮಧ್ಯಪ್ರದೇಶದ ವಿಶೇಷ ತನಿಖಾ ತಂಡ ಬಂಧಿಸಿತ್ತು.

ಮಾರಕ ಸಿರಪ್‌ ಕಂಪನಿ, ಅಧಿಕಾರಿಗಳ ಮನೆ ಸೇರಿ 7 ಸ್ಥಳಗಳಲ್ಲಿ ಇ.ಡಿ ದಾಳಿ

ಚೆನ್ನೈ: 24 ಮಕ್ಕಳನ್ನು ಬಲಿ ಪಡೆದು, ಹಲವು ರಾಜ್ಯಗಳಲ್ಲಿ ನಿಷೇಧಿಸಲ್ಪಟ್ಟಿರುವ ಮಾರಕ ಕೋಲ್ಡ್ರಿಫ್ ಕೆಮ್ಮಿನೌಷಧಿ ತಯಾರಿಸಿದ್ದ ತಮಿಳುನಾಡಿನ ಶ್ರೀಶನ್‌ ಫಾರ್ಮಾಸ್ಯುಟಿಕಲ್‌ ಕಂಪನಿ ಹಾಗೂ ತಮಿಳುನಾಡು ಆಹಾರ ಮತ್ತು ಔಷಧ ಆಡಳಿತದ (ಎಫ್‌ಡಿಎ) ಉನ್ನತ ಅಧಿಕಾರಿಗಳ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಚೆನ್ನೈನ 7 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಇವುಗಳಲ್ಲಿ ಕಂಪನಿಯ ಪ್ರಮುಖ ಉದ್ಯೋಗಿಗಳು ಮತ್ತು ಎಫ್‌ಡಿಎ ಪ್ರಭಾರಿ ನಿರ್ದೇಶಕ ಪಿ.ಯು. ಕಾರ್ತಿಕೇಯನ್‌ ಅವರಿಗೆ ಸೇರಿದ ಮನೆಗಳು ಸೇರಿವೆ. ಕಾರ್ತಿಕೇಯನ್‌ರನ್ನು ಲಂಚ ಪ್ರಕರಣದಲ್ಲಿ ಜುಲೈನಲ್ಲೇ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀಶನ್‌ ಕಂಪನಿ ವಿರುದ್ಧ ಈಗಾಗಲೇ ಎಫ್‌ಐಆರ್‌ ಮತ್ತು ಕ್ರಮಿನಲ್‌ ಪ್ರಕರಣ ದಾಖಲಾಗಿದೆ. ಅದರ ಬೆನ್ನಲ್ಲೇ ಇ.ಡಿ.ಯಿಂದ ದಾಳಿ ನಡೆದಿದೆ.