2 ವರ್ಷ ಮಕ್ಕಳಿಗೆ ಕಾಫ್ ಸಿರಪ್ ನೀಡಬೇಡಿ, ಸತತ ಸಾವಿನ ಬೆನ್ನಲ್ಲೇ ಕೇಂದ್ರದ ಮಾರ್ಗಸೂಚಿ ಪ್ರಕಟಿಸಲಾಗಿದೆ. ಇನ್ನು ಐದು ವರ್ಷದ ಮಕ್ಕಳಿಗೆ ಸಿರಪ್ ನೀಡುವಾಗ ಎಚ್ಚರವಹಿಸುವಂತೆ ಸೂಚಿಸಿದೆ. 11 ಕ್ಕೂ ಹೆಚ್ಚು ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ ಕೇಂದ್ರ ಮಾರ್ಗಸೂಚಿ ಪ್ರಕಟಿಸಿದೆ.
ನವದೆಹಲಿ (ಅ.03) ಭಾರತದಲ್ಲಿ ಮಕ್ಕಳಿಗೆ ನೀಡುವ ಕಾಫ್ ಸಿರಪ್ ಔಷಧಿ ಕುರಿತು ಭಾರಿ ಆತಂಕ ಎದುರಾಗಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಒಟ್ಟು 11 ಮಕ್ಕಳು ಮೃತಪಟ್ಟ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕಾಫ್ ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟಿದ್ದಾರೆ ಅನ್ನೋ ಗಂಭೀರ ಆರೋಪ ಕುರಿತು ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಅವಾಂತರ ತಪ್ಪಸಲು ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. 2 ವರ್ಷದೊಳಗಿನ ಮಕ್ಕಳಿಗೆ ಕಾಫ್ ಸಿರಪ್ ನೀಡಬೇಡಿ ಎಂದು ಎಚ್ಚರಿಕೆ ನೀಡಿದೆ. ಇಷ್ಟೇ ಅಲ್ಲ ಐದು ವರ್ಷದೊಳಗಿನ ಮಕ್ಕಳಿಗೆ ಕಾಫ್ ಸಿರಪ್ ನೀಡುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ವೈದ್ಯರ ಪ್ರಿಸ್ಕ್ರಿಪ್ಶನ್, ಸೂಚನೆ ಇಲ್ಲದೆ ಔಷಧಿ ಕೇಂದ್ರಗಳಿಂದ ಸಿರಪ್ ಪಡೆದು ಮಕ್ಕಳಿಗೆ ನೀಡಬೇಡಿ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಸೂಚಿಸಿದೆ.
ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ
ಕಿಡ್ನಿ ವೈಫಲ್ಯದಿಂದ 11 ಮಕ್ಕಳು ಮೃತಪಟ್ಟ ಘಟನೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಸಭೆ ಸೇರಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 2 ವರ್ಷದ ಮಕ್ಕಳಿಗೆ ಶೀತ, ಕೆಮ್ಮುಗೆ ಸಿರಪ್ ನೀಡದಂತೆ ಎಚ್ಚರಿಕೆ ನೀಡಿದೆ. ಶೀತ, ಕೆಮ್ಮು ಇದ್ದರೆ ಮೊದಲೈ ಹೈಡ್ರೇಷನ್, ವಿಶ್ರಾಂತಿ ಮೊದಲ ಆದ್ಯತೆಯಾಗಿರಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.ಕಾಫ್ ಸಿರಪ್ ಬಗ್ಗೆ ಎಲ್ಲಾ ಜಿಲ್ಲಾ, ನಗರ, ತಾಲ್ಲೂಕು, ಪಾಲಿಕೆ ಆಸ್ಪತ್ರೆಗಳಲ್ಲಿ ಅಗತ್ಯ ಕ್ರಮ ವಹಿಸಲು ಸೂಚನೆ ನೀಡಲಾಗಿದೆ.
ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಮಕ್ಕಳಿಗೆ ಔಷದಿ ನೀಡುವಾಗ ಅತೀವ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ವೈದ್ಯರ ಸಲಹೆ ಹಾಗೂ ಸೂಚನೆಗಳನ್ನು ತಪ್ಪದೇ ಪಾಲಿಸುವಂತೆ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಕಿಡ್ನಿ ವಿಫಲ ಅಂಶ ಪತ್ತೆಯಾಗಿಲ್ಲ
11 ಮಕ್ಕಳು ಮರಣೋತ್ತರ ಪರೀಕ್ಷೆಯಲ್ಲಿ ಕಿಡ್ನಿ ವೈಫಲ್ಯ ಪತ್ತೆಯಾಗಿದೆ. ಆದರೆ ಈ ಮಕ್ಕಳು ಸೇವಿಸಿದ ಸಿರಪ್‌ನಲ್ಲಿ ಕಿಡ್ನಿ ವೈಫಲ್ಯವಾಗುವ DEG ಹಾಗೂ EG ಅಂಶಗಳು ಈ ಸಿರಪ್‌ನಲ್ಲಿ ಪತ್ತೆಯಾಗಿಲ್ಲ. ಸಿರಪ್‌ನಲ್ಲಿ DEG ಹಾಗೂ EG ಅಂಶಗಳಿದ್ದರೆ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಲ್ಲದು. ವೈದ್ಯರ ಸೂಚಿಸದ ಔಷಧಿಗಳನ್ನು ಮಕ್ಕಳಿಗೆ ನೀಡುವುದು ಗಂಭೀರ ಪರಿಣಾಮ ಸೃಷ್ಟಿಸಲಿದೆ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಮಕ್ಕಳ ಸಾವಿನ ಕುರಿತು ತೀವ್ರಗೊಂಡ ತಿನಿಖೆ
ಕೇಂದ್ರ ಆರೋಗ್ಯ ಇಲಾಖೆ, ನ್ಯಾಷನಲ್ ಸೆಂಟರ್ ಫಾರ್ ಡೀಸೀಸ್ ಕಂಟ್ರೋಲ್ ( NCDC), NIV, ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್(CDSCO) ಜಂಟಿಯಾಗಿ ತನಿಖೆ ನಡೆಸುತ್ತಿದೆ. ಮಕ್ಕಳ ಸಾವಿನ ಕುರಿತು ವೈದ್ಯಕೀಯ ವರದಿಗಳನ್ನು ಮುಂದಿಟ್ಟು ವೈದ್ಯರ ತಂಡ ಮಹತ್ವದ ಚರ್ಚೆ ನಡೆಸಿದೆ. ಎಲ್ಲಾ ರಾಜ್ಯಗಳ ಆರೋಗ್ಯ ಕೇಂದ್ರಗಳು ಈ ಕುರಿತು ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
