ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಪುತ್ರನಿಗೆ ಕೃಷ್ಣನ ವೇಷ ತೊಡಿಸಿ, ದೃಷ್ಟಿ ತೆಗೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ಧಾರ್ಮಿಕ ಸಾಮರಸ್ಯವನ್ನು ಸಾರುತ್ತಿದೆ.

ಜಗದೋದ್ದಾರಕ ಶೀಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸದವರಿಲ್ಲ, ಸಂಭ್ರಮಿಸಿದವರಿಲ್ಲ, ಜಗತ್ತಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ರೋಹಿಣಿ ನಕ್ಷತ್ರದ ದಿನ ಬರುವ ಅಷ್ಟಮಿಯ ದಿನ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ಅಷ್ಟಮಿ ನಿನ್ನೆ ಕಳೆದಿದೆ. ಆದರೆ ಈ ಬಾರಿ ಅಷ್ಟಮಿ ಸ್ವಾತಂತ್ರ ದಿನಾಚರಣೆಯಂದು ಬಂದಿದ್ದರೆ ರೋಹಿಣಿ ನಕ್ಷತ್ರ ಭಾನುವಾರ ಬಂದಿದೆ. ಹೀಗಾಗಿ ಒಂದೊಂದು ಕಡೆ ಒಂದೊಂದು ದಿನ ಶ್ರೀಕೃಷ್ಣ ಜನ್ಮಾಷ್ಮಮಿಯನ್ನು ಆಚರಣೆ ಮಾಡಲಾಗಿದೆ. ಇನ್ನು ಕೆಲವೆಡೆ ಆಚರಣೆ ಇನ್ನೂ ಬಾಕಿ ಇದೆ. ಕೆಲವು ನಗರಗಳಲ್ಲಿ ದಾರಿಯುದ್ಧಕ್ಕೂ ಮೊಸರು ಕುಡಿಕೆಗಳನ್ನು ಕಟ್ಟಿ ಅವುಗಳನ್ನು ಒಡೆಯುವ ಕಾರ್ಯಕ್ರಮವನ್ನು ಆಚರಿಸುತ್ತಾರೆ. ಈ ಕಾರ್ಯಕ್ರಮಗಳಲ್ಲಿ ಸಾವಿರಾರು ಯುವಕರು ಭಾಗವಹಿಸುತ್ತಾರೆ. ಈ ಬಾರಿ ಪಿರಾಮಿಡ್‌ ಆಕಾರದಲ್ಲಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯಲ್ಲಿ ಹೆಣ್ಣು ಮಕ್ಕಳು ಕೂಡ ಭಾಗಿಯಾಗಿದ್ದನ್ನು ನೀವು ನೋಡಿರಬಹುದು. ಹಲವು ನಗರಗಳಲ್ಲಿ ಇನ್ನೂ ಶ್ರೀಕೃಷ್ಣನ ಸಂಭ್ರಮಾಚರಣೆ ಮುಗಿದಿಲ್ಲ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿನ ಶ್ರೀಕೃಷ್ಣ ಜನ್ಮಾಷ್ಟಮಿಯ ಮನಮುಟ್ಟುವ ವೀಡಿಯೋವೊಂದು ವೈರಲ್ ಆಗಿದೆ.

ಮಗನಿಗೆ ಕೃಷ್ಣನ ವೇಷ ಹಾಕಿದ ಮುಸ್ಲಿಂ ತಾಯಿ:

ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶಾಲಾ ಕಾಲೇಜುಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶಾಲೆಗಳಲ್ಲಿ ಮಕ್ಕಳು ಜಾತಿ ಧರ್ಮದ ಬೇಧವಿಲ್ಲದೇ ಕೃಷ್ಣನ ವೇಷ ಹಾಕಿ ಸಂಭ್ರಮಿಸುವುದನ್ನು ನೋಡಬಹುದು. ಪ್ರತಿಯೊಬ್ಬ ತಾಯಿಯೂ ತನ್ನ ಮುದ್ದು ಮಗನಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸುತ್ತಾಳೆ. ಹೆಣ್ಣು ಮಕ್ಕಳಾದರೆ ರಾಧೆಯ ವೇಸ ಹಾಕುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಪುತ್ರನಿಗೆ ಕೃಷ್ಣನ ವೇಷ ಹಾಕಿ ದೃಷ್ಟಿ ತೆಗೆಯುತ್ತಿರುವ ವೀಡಿಯೋವೊಂದು ಈಗ ಭಾರಿ ವೈರಲ್ ಆಗಿದೆ. ಬಾಲ್ಯವೂ ಧರ್ಮ ಭಾಷೆಗಳ ಜಾತಿ ಬೇಧಗಳ ಹಂಗಿಲ್ಲದ ನಾವೆಲ್ಲರೂ ಒಂದೇ ಎಂದು ಸಾರುವ ಒಂದು ಸುಂದರ ಕ್ಷಣ, ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳು ಧರ್ಮ, ರಾಜಕೀಯ ವೈಚಾರಿಕ ಸಿದ್ದಾಂತಗಳತ್ತ ವಾಲುತ್ತಾ ಮಾನವೀಯ ಧರ್ಮವನ್ನು ಮರೆತು ಬಿಡುತ್ತಾರೆ. ಹಾಗೆಯೇ ಇಲ್ಲಿ ಪುಟ್ಟ ಮುಸ್ಲಿಂ ಬಾಲಕ ಕೃಷ್ಣನ ವೇಷಧರಿಸಿ ಸಂಭ್ರಮಿಸಿದ್ದಾನೆ. ಆತನ ತಾಯಿಯೂ ಸೊಗಸಾಗಿ ಕಾಣುತ್ತಿರುವ ಮಗನ ದೃಷ್ಟಿ ತೆಗೆದು ಸಂಭ್ರಮಿಸುತ್ತಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಜನ ಈ ಕೃಷ್ಣ ವೇಷಧಾರಿ ಮಗ ಹಾಗೂ ಆತನ ಮುಸ್ಲಿಂ ತಾಯಿಯ ಖುಷಿ ನೋಡಿ ತಾವು ಸಂಭ್ರಮಿಸಿದ್ದಾರೆ.

ಮುದ್ದು ಮಗನ ದೃಷ್ಟಿ ತೆಗೆದ ತಾಯಿ

ವೀಡಯೋದಲ್ಲಿ ಕೃಷ್ಣನ ವೇಷ ಹಾಕಿ ಕತ್ತಿಗೆ ಹೂವಿನ ಮಾಲೆ ಹಾಕಿದ ಮಗನನ್ನು ತಾಯಿ ಕರೆದುಕೊಂಡು ಬಂದು ಆತನ ಚಂದ ನೋಡಿ ದೃಷ್ಟಿ ತೆಗೆಯುತ್ತಾಳೆ. ಹಾಗೆಯೇ ಅದೇ ವೀಡಿಯೋದಲ್ಲಿ ಮುಸ್ಲಿಂ ತಾಯಿಯೊಬ್ಬಳು ತನ್ನ ಮಗಳನ್ನು ರಾಧೆಯಂತೆ ಸಿದ್ಧಪಡಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಪುಟ್ಟ ಮಗಳಿಗೆ ರಾಧೆಯಂತೆ ತಲೆಗೆ ಕೆಂಪು ಶಾಲನ್ನು ಹೊದಿಸಿ ಮೂಗಿಗೆ ದೊಡ್ಡದಾದ ರಿಂಗ್‌ನಂತಹ ನತ್ತೊಂದನ್ನು ಇಡುವುದನ್ನು ವೀಡಿಯೋದಲ್ಲಿ ಕಾಣಬಹುದು. ನಂತರ ಫೋಟೋ ಸೆಷನ್ ನಡೆದಿದ್ದು, ತರಗತಿಯ ಎಲ್ಲಾ ಮಕ್ಕಳು ಕೃಷ್ಣನ ವೇಷ ತೊಟ್ಟು ಪೋಟೋಗೆ ಪೋಸ್‌ ಕೊಟ್ಟಿದ್ದನ್ನು ನೋಡಬಹುದು.

sbnrmschools ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ನಮ್ಮ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಇದೊಂದು ಶಾಲೆಯಲ್ಲಿ ಆಚರಿಸಿದ ಶ್ರೀಕೃಷ್ಣ ಜನ್ಮಾಷ್ಟಮಿಯ ವೀಡಿಯೋ ಆಗಿದ್ದು, ವೀಡಿಯೋ ನೋಡಿದ ಅನೇಕರು ಇದು ನನ್ನ ಭಾರತ ದೇಶ, ಇದು ಹೀಗೆಯೇ ಇರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ವೀಡಿಯೋ ನೋಡಿದ ಹಿಂದೂಗಳು ಅಲ್ಲಾಹು ಅಕ್ಬರ್ ಎಂದಿದ್ದಾರೆ ಮುಸ್ಲಿಂ ತರುಣರು ಜೈಶ್ರೀರಾಮ್ ಜೈ ಶ್ರೀಕೃಷ್ಣ ಎಂದು ಕಾಮೆಂಟ್ ಮಾಡಿದ್ದಾರೆ. ನಮ್ಮ ಭಾರತ ಎಂದರೆ ಇದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

ಇದನ್ನೂ ಓದಿ:ಪತ್ನಿ ನೀಡಿದ ವಿಚಿತ್ರ ಚಿಕಿತ್ಸೆಯಿಂದ ಮತ್ತೆ ನಡೆದಾಡಲು ಶುರು ಮಾಡಿದ ಪಾರ್ಶ್ವವಾಯು ಪೀಡಿತ ಪತಿ
ಇದನ್ನೂ ಓದಿ: ಮೊದಲು ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದು, ಬ್ರಿಟಿಷ್ ಡಾಕ್ಟರ್ ಅಲ್ಲ, ಭಾರತೀಯ ಕುಂಬಾರ

View post on Instagram