ಎಸ್.ಎಲ್. ಭೈರಪ್ಪನವರ 'ಆವರಣ' ಕಾದಂಬರಿಯು ಬಿಡುಗಡೆಗೂ ಮುನ್ನವೇ ಮಾರಾಟವಾಗಿ ದಾಖಲೆ ಬರೆದಿದೆ. ಈ ಕೃತಿಯು ಮೊಘಲ್ ಕಾಲದ ಇತಿಹಾಸದ ಮರೆಮಾಚಿದ ಸತ್ಯಗಳನ್ನು, ಲವ್-ಜಿಹಾದ್ ಮತ್ತು ಮತಾಂತರದಂತಹ ವಿವಾದಾತ್ಮಕ ವಿಷಯಗಳನ್ನು ಅನಾವರಣಗೊಳಿಸುತ್ತದೆ.
ಸಾಹಿತ್ಯ ಲೋಕ ಕಂಡ ಅಪರೂಪದ ಸಾಹಿತಿ, ಕಾದಂಬರಿಕಾರ ಎಸ್.ಎಲ್.ಭೈರಪ್ಪ (S. L. Bhyrappa) ಅವರು ಇಂದು ತಮ್ಮ 94ನೇ ವಯಸ್ಸಿನಲ್ಲಿ ಕಣ್ಮರೆಯಾಗಿದ್ದಾರೆ. ತಮ್ಮ ಹಲವಾರು ಕೃತಿಗಳ ಮೂಲಕ ಸದಾ ಸುದ್ದಿಯಲ್ಲಿಯೇ ಇರುತ್ತಿದ್ದ ಸಾಹಿತಿ ಇವರು. ಕನ್ನಡ ಭಾಷೆಯೊಂದರ ಕಾದಂಬರಿ ಪ್ಯಾನ್ ಇಂಡಿಯಾ ಮಟ್ಟದ ವಿವಿಧ ಭಾಷೆಗಳಲ್ಲಿಯೂ ತರ್ಜುಮೆಗೊಳ್ಳಬಹುದು ಎಂದು ತೋರಿಸಿಕೊಟ್ಟವರಲ್ಲಿ ಭೈರಪ್ಪನವರೂ ಒಬ್ಬರು. ಇವರ ಆವರಣ, ಪರ್ವ ಸೇರಿದಂತೆ ಕೆಲವು ಕಾದಂಬರಿಗಳು ಹಿಂದಿ, ಮರಾಠಿ ಭಾಷೆಗಳಲ್ಲಿಯೂ ಬಿಡುಗಡೆಯಾಗಿದೆ. ಇಂಗ್ಲಿಷ್ನಲ್ಲಿಯೂ ಇವರ ಕೃತಿಗಳು ತರ್ಜುಮೆಗೊಂಡಿದೆ. ಯಾವುದೇ ಒಂದು ಕಾದಂಬರಿ ಬರೆಯುವಾಗಲೂ ಅದರ ಆಳಕ್ಕೆ ಹೋಗಿ, ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ, ಅದರ ಅಧ್ಯಯನವನ್ನು ವರ್ಷಗಟ್ಟಲೆ ನಡೆಸಿ, ಇತಿಹಾಸದ ಆಳಕ್ಕೂ ಇಳಿದು ಬರೆಯುತ್ತಿದ್ದವರು ಭೈರಪ್ಪನವರು. ಇವರ ಕಾದಂಬರಿಗಳಲ್ಲಿ ಇತಿಹಾಸದ ಕಹಿಯೂ ಇರುತ್ತಿದ್ದುದರಿಂದ ಇದನ್ನು ಸಹಿಸದ ವರ್ಗವೂ ಸಾಕಷ್ಟು ಇತ್ತು ಎನ್ನಿ.
ಬಿಡುಗಡೆಗೂ ಮುನ್ನವೇ Sold Out
ಆದರೆ, ಇದೀಗ ಭಾರತದ ಸಾಹಿತ್ಯ ಲೋಕದಲ್ಲಿ ದಾಖಲೆ ಎಸ್. ಎಲ್. ಭೈರಪ್ಪ ಅವರ ಕಾದಂಬರಿಯ ಕುರಿತು ಇಲ್ಲಿ ವಿವರಿಸಲಾಗಿದೆ. ಸಾಮಾನ್ಯವಾಗಿ ಸಿನಿಮಾ ಟಿಕೆಟ್ಗಳು ಬಿಡುಗಡೆಗೆ ಮುನ್ನವೇ Sold Out ಆಗುವುದು ಇದೆ. ಆದರೆ ಪುಸ್ತಕವೊಂದು ಅದರಲ್ಲಿಯೂ ಪ್ರಾದೇಶಿಕ ಪುಸ್ತಕವೊಂದು ಬಿಡುಗಡೆಗೂ ಮುನ್ನವೇ ಖಾಲಿಯಾಗುತ್ತದೆ ಎಂದು ನಂಬುವುದೂ ಕಷ್ಟ ಎನ್ನುವಂಥ ಕಾಲದಲ್ಲಿಯೂ ಭೈರಪ್ಪನವರ ಕೃತಿಯೊಂದು ಈ ದಾಖಲೆ ಬರೆದಿದೆ. ಅದು ಅವರ ಆವರಣ ( S. L. Bhyrappa's Aavarana) ಕಾದಂಬರಿ. ಈ ಕಾದಂಬರಿಯನ್ನು ಲೇಖಕ ಸಂದೀಪ್ ಬಾಲಕೃಷ್ಣ ಅವರು ಇಂಗ್ಲಿಷ್ನಲ್ಲಿ ಕೂಡ ಟ್ರಾನ್ಸ್ಲೇಟ್ ಮಾಡಿದ್ದು, ಅಲ್ಲಿ ಕೂಡ ಇದು ದಾಖಲೆ ಬರೆದಿರುವುದು ವಿಶೇಷವೇ.
ದಾಖಲೆ ಬರೆದ ಭೈರಪ್ಪನವರ 'ಆವರಣ'
2007ರಲ್ಲಿ ಬಿಡುಗಡೆ ಮಾಡಲಾಗಿದ್ದ ಆವರಣ ಪುಸ್ತಕವು ಬಿಡುಗಡೆಯಾಗುತ್ತದೆ ಎಂದು ತಿಳಿದಾಗಲೇ ಫುಲ್ ಬುಕ್ ಆಗಿ ಹೋಗಿತ್ತು. ಮಾತ್ರವಲ್ಲದೇ ಬಿಡುಗಡೆಯಾದ ಐದು ತಿಂಗಳಿನಲ್ಲಿಯೇ 10 ಬಾರಿ ರೀಪ್ರಿಂಟ್ ಆಗಿದ್ದು ಮತ್ತೂ ವಿಶೇಷ. ಇದು ಬಳಿಕ 50ಕ್ಕೂ ಅಧಿಕ ರೀಪ್ರಿಂಟ್ ಕಂಡಿದೆ. ಹಾಗೆಂದು ಭೈರಪ್ಪನವರ ಹಲವು ಕೃತಿಗಳು ಬಿಡುಗಡೆಯಾದ ಕೆಲವೇ ತಿಂಗಳುಗಳಿಂದ ಹತ್ತಾರು ಬಾರಿ ರೀಪ್ರಿಂಟ್ ಆಗಿರುವುದು ಇದೆ. ಅಂಥ ತಾಕತ್ತು ಭೈರಪ್ಪನವರ ಕಾದಂಬರಿಗಳಿಗಿದೆ.
'ಆವರಣ' ಎಂದರೇನು? ಕಾದಂಬರಿಯ ವಸ್ತುವೇನು?
ಇನ್ನು ಇತಿಹಾಸ ಸೃಷ್ಟಿಸಿದ್ದ ಆವರಣ ಕಾದಂಬರಿ ಕುರಿತು ಹೇಳುವುದಾದರೆ, ಸಂಸ್ಕೃತದಲ್ಲಿ 'ఆవృ' ಎಂದರೆ 'ಮರೆಮಾಡುವುದು'. ಇದನ್ನು 'ಮುಸುಕು' ಎಂದು ಅನುವಾದಿಸಬಹುದು, ಇದು ಮರೆಮಾಡುವ, ಆವರಿಸುವ ಅಥವಾ ಮರೆಮಾಡುವ ವಿಷಯಗಳನ್ನು ಸೂಚಿಸುತ್ತದೆ. ಇದರ ಅರ್ಥ, ಈ ಕಾದಂಬರಿಯ ಕಥೆಯು ಮೊಘಲ್ ಸಾಮ್ರಾಜ್ಯದ ಕಾಲಘಟ್ಟದಲ್ಲಿ ನಡೆಯುವ ವಿಷಯಗಳನ್ನು ಒಳಗೊಂಡಿದೆ. ಇತಿಹಾಸದ ಹೆಸರಿನಲ್ಲಿ ಪ್ರಚಲಿತದಲ್ಲಿರುವ ಸುಳ್ಳುಗಳ ಬಗ್ಗೆ 'ಆವರಣ' ಅನಾವರಣಗೊಳಿಸಿದೆ. ಈ ಕಾದಂಬರಿಯು ಲವ್-ಜಿಹಾದ್, ಜಾತ್ಯತೀತತೆ ಮತ್ತು ಹಿಂದೂ ಹುಡುಗಿಯರ ಬಲವಂತದ ಮತಾಂತರದ ಬಗ್ಗೆಯೂ ತಿಳಿಸುತ್ತದೆ. ಈ ಕಾದಂಬರಿಯು ಇತಿಹಾಸದ ಬಗ್ಗೆ, ಇತಿಹಾಸದ ಹೆಸರಿನಲ್ಲಿ ಚಲಾವಣೆಯಲ್ಲಿರುವ ಸುಳ್ಳುಗಳ ಬಗ್ಗೆ ಮತ್ತು ಅವುಗಳ ಪರಿಣಾಮಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ. ಇದೇ ಕಾರಣಕ್ಕೆ, ಈ ಕಾದಂಬರಿ ಬಿಡುಗಡೆಯಾಗುವ ಮೊದಲೇ ದೊಡ್ಡ ಸಂಚಲನ ಸೃಷ್ಟಿಸಿತ್ತು. ಜೊತೆಗೆ ಭಾರತೀಯ ಸಾಹಿತ್ಯದಲ್ಲಿ ಹೊಸ ದಾಖಲೆಯನ್ನೂ ಬರೆಯಿತು.
ಅಲ್ಲಿ ನಡೆದಿತ್ತು 'ಲವ್ ಜಿಹಾದ್!'
ಈ ಕಾದಂಬರಿಯ ಮುಖ್ಯ ಪಾತ್ರ ಲಕ್ಷ್ಮಿ ತನ್ನ ಇಷ್ಟಕ್ಕೆ ವಿರುದ್ಧವಾಗಿ ಮುಸ್ಲಿಂ ಪುರುಷನನ್ನು ಮದುವೆಯಾಗಿ 'ರಜಿಯಾ' ಎಂದು ಮತಾಂತರಗೊಳ್ಳುತ್ತಾಳೆ, ಇದು ಧರ್ಮ, ಗುರುತು ಮತ್ತು ಸುಳ್ಳು ಜ್ಞಾನದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ. ಈ ಕಾರಣದಿಂದಲೇ ಭೈರಪ್ಪನವರ ಇತರ ಕಾದಂಬರಿಗಳಂತೆ ಇದು ಕೂಡ ವಿವಾದಾಸ್ಪದವಾಗಿದೆ ಮತ್ತು ಕೆಲವರು ಇದನ್ನು ಹಿಂದೂ-ಪರ, ಮುಸ್ಲಿಂ ವಿರೋಧಿ ರಾಜಕೀಯ ಪ್ರವಾಹಗಳಿಗೆ ಸಂಬಂಧಿಸಿದ್ದೆಂದು ಭಾವಿಸುತ್ತಾರೆ. ಈ ಕಾದಂಬರಿಯು ದೊಡ್ಡ ಪ್ರಮಾಣದ ಚರ್ಚೆಯನ್ನು ಹುಟ್ಟುಹಾಕಿತು. ಕೆಲವು ಪ್ರಮುಖ ಚಿಂತಕರು ಮತ್ತು ಲೇಖಕರು ಇದು ಕೋಮುವಾದವನ್ನು ಉತ್ತೇಜಿಸುತ್ತದೆ ಎಂದು ಟೀಕಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಲವ್ ಜಿಹಾದ್ನ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದಾಗ ಭೈರಪ್ಪನವರ ಈ ಕಾದಂಬರಿ ಮತ್ತೆ ಮುನ್ನೆಲೆಗೆ ಬಂದಿತ್ತು.
ಇದನ್ನೂ ಓದಿ: ಎಸ್ ಎಲ್ ಭೈರಪ್ಪ ನಿಧನ, ಮೇರು ಸಾಹಿತಿಯ ಕಾದಂಬರಿ ಆಧಾರಿತ ಪರ್ವ ಸಿನಿಮಾ ಏನಾಯ್ತು?
