ದೇಶದ ಹಲವು ಭಾಗದಲ್ಲಿ ಭಾರಿ ಮಳೆ, ಮೇಘಸ್ಫೋಟ, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರ ಪರಿಣಾಮ ಎರಡು ರಾಜ್ಯಗಳ ಶಾಲಾ ಕಾಲೇಜಿಗೆ ಸೆಪ್ಟೆಂಬರ್ 7ರ ವರೆಗೆ ರಜೆ ಘೋಷಿಸಲಾಗಿದೆ.

ನವದೆಹಲಿ (ಸೆ.03) ದೇಶದ ಹಲವು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಈ ಪೈಕಿ ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆತಂಕ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಎರಡು ರಾಜ್ಯಗಳ ಶಾಲಾ ಕಾಲೇಜಿಗೆ ಸೆಪ್ಟೆಬಂರ್ 7ರ ವರೆಗೆ ರಜೆ ಘೋಷಿಸಲಾಗಿದೆ. ಪ್ರಮುಖವಾಗಿ ಪಂಜಾಬ್, ಚಂಡೀಘಡ ಹಾಗೂ ಹಿಮಾಚಲ ಪ್ರದೇಶದ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

ಪಂಜಾಬ್‌ನಲ್ಲಿ ಪರಿಸ್ಥಿತಿ ಗಂಭೀರ, 7ರ ವರೆಗೆ ಶಾಲಾ ಕಾಲೇಜಿಗೆ ರಜೆ

ಪಂಜಾಬ್ ಪರಿಸ್ಥಿತಿ ಗಂಭೀರವಾಗಿದೆ. ಭಾರಿ ಮಳೆಗೆ ಪಂಜಾಬ್‌ನ 23 ಜಿಲ್ಲೆಗಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಬರೋಬ್ಬರಿ 3.5 ಲಕ್ಷ ಮಂದಿಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವರು ಮನೆ ಕಳೆದುಕೊಂಡಿದ್ದಾರೆ. 20,000ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಸ್ಥಿತಿ ಕೈಮೀರಿರುವ ಕಾರಣ ಸೆಪ್ಟೆಂಬರ್ 7ರ ವರೆಗೆ ಪಂಜಾಬ್‌ನಲ್ಲಾ ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಇದೇ ವೇಳೆ ಚಂಡೀಘಡದಲ್ಲೂ ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

ಸೆಪ್ಟೆಂಬರ್‌ನಲ್ಲಿ ಪರಿಸ್ಥಿತಿ ಘನಘೋರ; ಹವಾಮಾನ ಇಲಾಖೆಯಿಂದ ಭೂಕುಸಿತ, ಪ್ರವಾಹ ಎಚ್ಚರಿಕೆ

ಹಿಮಾಚಲ ಪ್ರದೇಶದಲ್ಲೂ ಶಾಲಾ ಕಾಲೇಜಿಗೆ ರಜೆ

ಹಿಮಾಲಚ ಪ್ರದೇಶದಲ್ಲಿ ಮೇಘಸ್ಫೋಟ, ಭೂಕುಸಿತದಿಂದ ಬಹುತೇಕ ರಸ್ತೆಗಳು ಬಂದ್ ಆಗಿದೆ. ಬೆಟ್ಟ ಗುಡ್ಡಗಳು ಕುಸಿದು ಬಿದ್ದಿದೆ. ಪ್ರವಾಸಿ ತಾಣಗಳು ಭೂಕುಸಿತದಲ್ಲಿ ಕೊಚ್ಚಿ ಹೋಗಿದೆ. ಹಲವು ರಸ್ತೆಗಳ ಕುಸಿತ ಕಂಡಿರುವ ಕಾರಣ ಸಂಪರ್ಕ ಕಡಿತಗೊಂಡಿದೆ. ಪರಿಸ್ಥಿತಿ ಗಂಭೀರವಾಗಿದೆ. ಇತ್ತ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿದೆ. ಹೀಗಾಗಿ ಶಾಲಾ ಕಾಲೇಜುಗಳಿಗೆ ಸೆಪ್ಟೆಂಬರ್ 7ರ ವರೆಗೆ ರಜೆ ಘೋಷಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶ ಹಾಗೂ ಪಂಜಾಬ್ ಮುಖ್ಯಮಂತ್ರಿ ಜೊತೆಗೆ ಮಾತನಾಡಿದ್ದಾರೆ. ಕೇಂದ್ರದಿಂದ ಎಲ್ಲಾ ನೆರವಿನ ಭರವಸೆ ನೀಡಿದ್ದಾರೆ. ರಕ್ಷಣ ಕಾರ್ಯಾಚರಣೆ, ಪರಿಹಾರ ಸಾಮಾಗ್ರಿಗಳ ಕುರಿತು ಚರ್ಚಿಸಿದ್ದಾರೆ. ಇತ್ತ ಉತ್ತರಖಂಡ, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಭಾರಿ ಮಳೆ ಆತಂಕ ಹೆಚ್ಚಿಸಿದೆ.

ಕರ್ನಾಟಕದಲ್ಲೂ ಭಾರಿ ಮಳೆ

ಕರ್ನಾಟಕ ಸೇರದಂತೆ ದಕ್ಷಿಣ ರಾಜ್ಯಗಳಲ್ಲೂ ಭಾರಿ ಮಳೆಯಾಗುತ್ತಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡದಲ್ಲೂ ಮಳೆಯಾಗುತ್ತಿದೆ. ಇತ್ತ ಕೊಡಗು, ಚಿಕ್ಕಮಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲೂ ಮಳೆಯಾಗುತ್ತಿದೆ.