36,000 ಅಡಿ ಎತ್ತರದಲ್ಲಿ ಹಾರುತ್ತಿದ್ದ  ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ವಿಮಾನ ತುರ್ತು ಭೂಸ್ಪರ್ಶ ಮಾಡಲಾಗಿದೆ. ಈ ಘಟನೆಯಲ್ಲಿ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, 140 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.

36,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು

ವಿಮಾನ 36,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗಲೇ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಬಿಟ್ಟ ಕಾರಣ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಘಟನೆಯಲ್ಲಿ ವಿಮಾನ ವಿಂಡ್‌ಶೀಲ್ಡ್‌ಗೆ ತೀವ್ರ ಹಾನಿಯಾಗಿ ವಿಮಾನದ ಪೈಲಟ್ ಗಾಯಗೊಂಡಿದ್ದಾರೆ. ಅಮೆರಿಕಾ ಯುನೈಟೆಡ್ ಏರ್‌ಲೈನ್ಸ್‌ನ ಬೋಯಿಂಗ್ 737 ವಿಮಾನದಲ್ಲಿ ಈ ಘಟನೆ ನಡೆದಿದ್ದು, ಈ ವಿಮಾನವೂ ಡೆನ್ವರ್‌ನಿಂದ ಲಾಸ್ ಏಂಜಲೀಸ್‌ಗೆ ತೆರಳುತ್ತಿತ್ತು. ಈ ವಿಮಾನದಲ್ಲಿ ವಿಮಾನದ ಸಿಬ್ಬಂದಿ ಸೇರಿ 140 ಜನ ಇದ್ದರು. ಆಕ್ಟೋಬರ್ 16ರಂದು ಈ ಘಟನೆ ನಡೆದಿದೆ. ಯುನೈಟೆಡ್ ಏರ್‌ಲೈನ್ಸ್‌ನ UA1093 ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಈ ಅವಘಡ ಸಂಭವಿಸಿದ್ದು, ಪ್ರಯಾಣಿಕರು ಯಾವುದೇ ಹಾನಿ ಇಲ್ಲದೇ ಪಾರಾಗಿದ್ದಾರೆ. ಆದರೆ ವಿಮಾನದ ಪೈಲಟ್‌ಗೆ ಈ ಘಟನೆಯಲ್ಲಿ ಗಾಯವಾಗಿದೆ ಎಂದು ವರದಿಯಾಗಿದೆ.

26 ಸಾವಿರ ಅಡಿಗೆ ಕುಸಿದ ವಿಮಾನ ತುರ್ತು ಭೂಸ್ಪರ್ಶ

ವರದಿಗಳ ಪ್ರಕಾರ, ವಿಮಾನವು ಸಾಲ್ಟ್ ಲೇಕ್ ಸಿಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯುವ ಮೊದಲು 26,000 ಅಡಿಗಳಷ್ಟು ಕೆಳಗೆ ಕುಸಿದಿದೆ. ನಂತರ ಇಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ನಂತರ ಅದರಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ವಿಮಾನವಾದ ಬೋಯಿಂಗ್ 737 MAX 9 ಬುಕ್ ಮಾಡಿ ಲಾಸ್ ಏಂಜಲೀಸ್‌ಗೆ ಕಳುಹಿಸಲಾಯಿತು. ಆರು ಗಂಟೆಗಳ ವಿಳಂಬದ ನಂತರ ಈ ವಿಮಾನ ಲಾಸ್ ಏಂಜಲೀಸ್ ತಲುಪಿತು. ವಿಮಾನವು ಸಾಲ್ಟ್ ಲೇಕ್ ಸಿಟಿಯಿಂದ ಸುಮಾರು 322 ಕಿಲೋಮೀಟರ್ ಆಗ್ನೇಯದಲ್ಲಿದ್ದಾಗ ಈ ಘಟನೆ ನಡೆದಿದೆ. ಇದನ್ನು ಗಮನಿಸಿದ ಸಿಬ್ಬಂದಿ ವಿಮಾನವನ್ನು ಬೇರೆಡೆಗೆ ತಿರುಗಿಸಲು ನಿರ್ಧರಿಸಿದರು. 36 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು 26000 ಅಡಿ ಕೆಳಕ್ಕೆ ಇಳಿಸಿ ನಂತರ ಸುರಕ್ಷಿತವಾಗಿ ಇಳಿಯುವುದಕ್ಕೆ ತುರ್ತು ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸಿದರು.

ವಿಂಡ್ ಶೀಲ್ಡ್‌ನಲ್ಲಿ ಬಿರುಕು ಬಿಡುವುದಕ್ಕೆ ಕಾರಣ ಏನು?

ವಿಮಾನಯಾನದ ವೇಳೆ ವಿಂಡ್‌ಶೀಲ್ಡ್‌ನಲ್ಲಿ ಬಿರುಕುಗಳು ಕಾಣಿಸಿಕೊಳ್ಳುವುದು ಬಹಳ ಅಪರೂಪ. ಆದರೆ ಇಲ್ಲವೇ ಇಲ್ಲವೆಂದಲ್ಲ. ಆದರೆ ಈ ಘಟನೆಯಲ್ಲಿ ಇಲ್ಲಿ ಪೈಲಟ್‌ಗೆ ಗಾಯ ಆಗಿದ್ದು, ಇದರಿಂದ ಈ ಪ್ರಕರಣ ಸ್ವಲ್ಪ ಗಂಭೀರ ಎನಿಸಿದೆ. ಈ ಘಟನೆಯ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಫೋಟೋದಲ್ಲಿ ಬಿರುಕು ಬಿಟ್ಟ ವಿಂಡ್‌ಶೀಲ್ಡ್‌ನಲ್ಲಿ ಸುಟ್ಟ ಗುರುತುಗಳಿರುವುದು ಮತ್ತು ಒಬ್ಬ ಪೈಲಟ್‌ನ ತೋಳಿನಲ್ಲಿ ಗಾಯದಿಂದ ರಕ್ತ ಸುರಿಯುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು. ಇದರರ್ಥ ಇದು ಸಾಮಾನ್ಯ ನಿರ್ಮಾಣ ಸಂಬಂಧಿ ಬಿರುಕು ಅಲ್ಲ ಎಂಬುದು.

ವಿಂಡ್ ಶೀಲ್ಡ್ ಮೇಲಿನ ಸುಟ್ಟ ಗುರುತುಗಳು ಮತ್ತು ಭಾರಿ ಹಾನಿಯ ಮಾದರಿಯನ್ನು ಆಧರಿಸಿ ಈ ಘಟನೆಯು ಬಾಹ್ಯಾಕಾಶ ಭಗ್ನಾವಶೇಷಗಳು ಅಥವಾ ಸಣ್ಣ ಉಲ್ಕಾಶಿಲೆ ಡಿಕ್ಕಿ ಹೊಡೆದಿದ್ದರಿಂದ ಆಗಿರಬಹುದು ಎಂದು ಕೆಲ ತಜ್ಞರು ಊಹಿಸಿದ್ದಾರೆ. ವಿಶಿಷ್ಟವಾಗಿ, ವಿಮಾನದ ವಿಂಡ್‌ಶೀಲ್ಡ್‌ಗಳನ್ನು ಪಕ್ಷಿಗಳ ಡಿಕ್ಕಿ ಮತ್ತು ಪ್ರಮುಖ ಒತ್ತಡ ಬದಲಾವಣೆಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಹೆಚ್ಚಿನ ವೇಗದಲ್ಲಿ ಚಲಿಸುವ ವಸ್ತುವು ಸುಲಭವಾಗಿ ಈ ಮಿತಿಯನ್ನು ಉಲ್ಲಂಘಿಸಿ ಅಪ್ಪಳಿಸಬಹುದು. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಯುನೈಟೆಡ್ ಏರ್‌ಲೈನ್ಸ್ ದೃಢಪಡಿಸಿದ್ದು, ಪೈಲಟ್‌ಗೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಿದೆ. ಆದರೆ ಈ ಬಿರುಕಿಗೆ ಕಾರಣವೇನೆಂದು ವಿಮಾನಯಾನ ಸಂಸ್ಥೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಕ್ಟೋಬರ್ 18 ರಂದು ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಯುನೈಟೆಡ್ ಏರ್‌ಲೈನ್ಸ್‌ ವಿಮಾನವು ಚಿಕಾಗೋದ ಓ'ಹೇರ್ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಯುನೈಟೆಡ್ ವಿಮಾನದ ಬಾಲಕ್ಕೆ ಟಚ್ ಮಾಡಿತ್ತು. ಆದರೆ ಈ ಘಟನೆಯಲ್ಲಿಯೂ ಯಾರಿಗೂ ಗಾಯಗಳಾಗಿರಲಿಲ್ಲ.

ಇದನ್ನೂ ಓದಿ: ಬಾವಿಗೆ ಬಿದ್ದ ತನ್ನ ಮೇಲೆತ್ತಿ ಬದುಕಿಸಿದ ಯುವಕನಿಗೆ ಮುತ್ತಿನ ಮಳೆಗೆರೆದ ಶ್ವಾನ

ಇದನ್ನೂ ಓದಿ: 1990ರಲ್ಲಿ ಇನ್‌ಪೋಸಿಸ್ ಕ್ಯಾಂಪಸ್ ಹೇಗಿತ್ತು ಅಲ್ಲಿ ಉದ್ಯೋಗಿಗಳು ಹೇಗಿದ್ದರು? 35 ವರ್ಷ ಹಳೇ ವಿಡಿಯೋ ವೈರಲ್

Scroll to load tweet…