ಕಾಡಾನೆಯೊಂದು ಅರಣ್ಯ ಅಧಿಕಾರಿಯೊಂದಿಗೆ ಅಪರೂಪದ ರೀತಿಯಲ್ಲಿ ಸಂವಹನ ನಡೆಸಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಅಧಿಕಾರಿಯ ಸೂಚನೆಗೆ ಆನೆ ವಿಶಿಷ್ಟವಾಗಿ ಪ್ರತಿಕ್ರಿಯಿಸಿದ್ದು, ಈ ಘಟನೆ ಕೇರಳದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಆನೆಗಳು ಬಹಳ ಭಾವ ಜೀವಿಗಳು ಕೆಲವು ಆನೆಗಳು ಕಾಡಾನೆಗಳೆನಿಸಿದರು ಬುದ್ಧಿ ಕಲಿಸಿದ ಆನೆಗಳಂತೆ ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ವರ್ತಿಸುತ್ತವೆ. ಕಾಡಾನೆಗಳು ಆಹಾರ ಅರಸಿ ಕೃಷಿ ಭೂಮಿಗೆ ಬಂದು ಹಾನಿ ಮಾಡುತ್ತವೆಯೇ ಆದರೂ ಕೂಡ ಒಂಟಿಯಾಗಿ ತಿರುಗುವ ಕೆಲ ಒಂಟಿ ಸಲಗಗಳು ಯಾರಿಗೂ ಹಾನಿ ಮಾಡದೆ ತಮ್ಮ ಪಾಡಿಗೆ ತಿರುಗಾಡುತ್ತಾ ಸ್ಥಳೀಯ ಜನರಿಂದ ಮುದ್ದಾದ ಹೆಸರು ಗಿಟ್ಟಿಸಿಕೊಳ್ಳುತ್ತವೆ. ಹೀಗೆ ಕಾಡಿನಲ್ಲಿದ್ದೇ ಜನರ ಪ್ರೀತಿಗೆ ಪಾತ್ರವಾಗಿರುವ ಆನೆಗಳು ಹಲವು, ಉದಾಹರಣೆಗೆ ಬಂಡೀಪುರ ಪ್ರದೇಶ ವ್ಯಾಪ್ತಿಯಲ್ಲಿ ಗೋಪಾಲ ಭಕ್ತ ಹೆಸರಿನ ಕಾಡಾನೆ ತುಂಬಾ ಫೇಮಸ್, ಇದು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಿನವೂ ಭೇಟಿ ಕೊಟ್ಟು ಒಂದು ಸುತ್ತು ಬರುವ ಕಾರಣಕ್ಕೆ ಅಲ್ಲಿನ ಜನ ಇದಕ್ಕೆಗೋಪಾಲಸ್ವಾಮಿ ಎಂಬ ಹೆಸರಿಟ್ಟಿದ್ದಾರೆ. ಹಾಗೆಯೇ ಕಬಿನಿ ಕಿಂಗ್ ಎಂದೇ ಫೇಮಸ್ ಆಗಿ ಜನರಿಂದ ಕರೆಯಲ್ಪಟ್ಟಿರುವ ಮತ್ತೊಂದು ಕಾಡಾನೆ ಈ ಪ್ರದೇಶದಲ್ಲಿ ಓಡಾಡುತ್ತದೆ. ಹೀಗೆ ಕೆಲ ಕಾಡಾನೆಗಳು ಸಾಕಾನೆಗಳಂತೆ ತಮ್ಮ ಗತ್ತು ಗಾಂಭೀರ್ಯಗಳಿಂದಲೇ ಜನರನ್ನು ಸೆಳೆಯುತ್ತವೆ.

ತನಗೆ ಕೈ ತೋರಿಸಿದ ಫಾರೆಸ್ಟ್ ಆಫೀಸರ್‌ಗೆ ಲುಕ್ ಕೊಟ್ಟ ಕಾಡಾನೆ:

ಅದೇ ರೀತಿ ಇಲ್ಲೊಂದು ಕಡೆ ಕಾಡಾನೆಯೊಂದು ಫಾರೆಸ್ಟ್ ಅಧಿಕಾರಿ ಜೊತೆ ವರ್ತಿಸಿದ ರೀತಿ ಭಾರೀ ವೈರಲ್ ಆಗಿದೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ಪೇಜೊಂದರಿಂದ ಪೋಸ್ಟ್ ಮಾಡಲಾಗಿದ್ದು, ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ರಸ್ತೆಗೆ ಇಳಿದು ಬಂದ ಆನೆಯೊಂದಕ್ಕೆ ಫಾರೆಸ್ಟ್ ಅಧಿಕಾರಿಯೊಬ್ಬರು ಕೈ ತೋರಿ ಆ ಕಡೆ ಹೋಗು ಎಂಬುವಂತೆ ಹೇಳಿದ್ದು, ಆನೆಯೂ ಹಾಗೂ ಫಾರೆಸ್ಟ್ ಅಧಿಕಾರಿ ಇಬ್ಬರು ಕದಲದೇ ಗಂಭೀರವಾಗಿ ನಿಂತು ಪರಸ್ಪರ ನೋಡುತ್ತಿದ್ದಾರೆ. ಆನೆ ನಡೆದಿದ್ದೇ ದಾರಿ ಅಂತಾರೆ ಆದರೆ ಈತ ನನಗೆ ಡೈರೆಕ್ಷನ್ ತೋರಿಸ್ತಿದ್ದಾನಲ್ಲ ಎಲಾ ಇವನಾ ಅಂತ ಆನೆ ಕೆಲ ಸೆಕೆಂಡ್ ತನ್ನ ಎದುರು ಅಷ್ಟೇ ಧೈರ್ಯವಾಗಿ ನಿಂತು ಕೈ ತೋರಿಸುತ್ತಿರುವ ಅಧಿಕಾರಿಯನ್ನು ನೋಡುವುದನ್ನು ಕಾಣಬಹುದು, ಆನೆಯ ನೋಟವಂತೂ 'ಏನೋ ನೀನು ನನಗೆ ಹೇಳೋಕೆ ಬರ್ತಿಯಾ ಎಂಬಂತೆ ಲುಕ್ ಕೊಟ್ಟಂತೆ ಕಾಣುತ್ತಿದ್ದು, ಕೆಲ ನಿಮಿಷ ಅಲ್ಲಿ ನಿಂತು ಫಾರೆಸ್ಟ್ ಅಧಿಕಾರಿಯನ್ನು ಗಂಭೀರವಾಗಿ ನೋಡಿ ಮುಂದೆ ಹೋಗಿದ್ದು ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.

ಕಾಡಾನೆಯೆದುರು ಎದೆಯುಬ್ಬಿಸಿ ನಿಂತ ಫಾರೆಸ್ಟ್ ಅಧಿಕಾರಿ:

ನಮ್ಮ ಹಿರಿ ತಲೆಮಾರಿನ ಜನ ನಾಯಿ ಕಂಡ್ರೆ ಓಡ್ಬಾರ್ದು, ಆನೆ ಕಂಡ್ರೆ ನಿಲ್ಬಾರ್ದು ಅಂತ ಹೇಳೋದನ್ನು ನೀವು ಕೇಳಿರಬಹುದು. ಆದರೆ ಇಲ್ಲಿ ಅಧಿಕಾರಿ ಮಾತ್ರ ಈ ಕಾಡಾನೆ ಮುಂದೆ ಎದೆಯುಬ್ಬಿಸಿ ಧೈರ್ಯವಾಗಿ ನಿಂತಿದ್ದು, ಮುಂದೆ ಹೋಗುವಂತೆ ಆನೆಗೆ ಕೈ ತೋರಿಸಿದ್ದನ್ನು ನೋಡಿ ಸ್ವತಃ ಆನೆಯೇ ತುಸು ಅಚ್ಚರಿ ಪಟ್ಟಿದೆ. ಆನೆಯ ಮುಂದೆ ಧೈರ್ಯವಾಗಿ ನಿಂತ ಈ ಫಾರೆಸ್ಟ್ ಅಧಿಕಾರಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕೇರಳದ ತ್ರಿಶ್ಯೂರ್‌ನ ಆನೆ ಇದು:

ವೀಡಿಯೋ ನೋಡಿದ ಒಬ್ಬರು ಇದು ಕೇರಳದ ತ್ರಿಶ್ಯೂರ್ ಜಿಲ್ಲೆಯಲ್ಲಿ ಕಂಡು ಬಂದ ದೃಶ್ಯ ಆನೆಯ ಹೆಸರು ಎಝತುಮುಖಂ ಗಣಪತಿ, ಈ ಆನೆ ಆ ಪ್ರದೇಶದಲ್ಲಿ ಸಾಕಷ್ಟು ಪ್ರಸಿದ್ಧವಾದ ಕಾಡು ಆನೆ. ಅದು ಹಿಂಸಾತ್ಮಕ ಅಥವಾ ಅಪಾಯಕಾರಿಯಲ್ಲ ಮತ್ತು ಅರಣ್ಯ ವೀಕ್ಷಕ ಕೂಡ ಒಬ್ಬ ಅನುಭವಿ ವ್ಯಕ್ತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಕೇರಳದಲ್ಲಿ ನಾವು ನಮ್ಮ ಆನೆಗಳನ್ನು ಪ್ರೀತಿಸುತ್ತೇವೆ. ನಾವು ಕಾಡಿನಲ್ಲಿರುವ ಪ್ರತಿಯೊಂದು ಗಂಡು ಆನೆಗಳಿಗೂ ಹೆಸರಿಟ್ಟಿದ್ದೇವೆ. ಅವುಗಳಿಗೆ ಅಭಿಮಾನಿಗಳ ಗುಂಪೇ ಇದೆ. ಗಂಡು ಆನೆಗಳು ಕಾಡಿನಲ್ಲಿಲ್ಲ, ಹತ್ತಿರದ ಹಳ್ಳಿಗಳಲ್ಲಿ ಸುತ್ತಾಡುತ್ತವೆ. ನೀವು ಅವುಗಳನ್ನು ದಿನವಿಡೀ ನೋಡಬಹುದು. ಅವುಗಳನ್ನು ನಿರಂತರವಾಗಿ ವೀಕ್ಷಿಸಲಾಗುತ್ತದೆ. ಸರಳವಾದ ತೊಂದರೆಗೆ ಸಹ ನಾವು ಅವುಗಳಿಗೆ ಸಹಾಯ ಕಳುಹಿಸುತ್ತೇವೆ. ಕೆಲವು ಅನಗತ್ಯ ಘಟನೆಗಳು ನಡೆದವು ಆದರೆ ಜನರು ಇನ್ನೂ ತಮ್ಮ ಸ್ಥಳೀಯ ಹುಡುಗರನ್ನು ಗೌರವಿಸುತ್ತಾರೆ ಮತ್ತು ಮೆಚ್ಚುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಆನೆ ಜಾಸ್ತಿ ಕಿರುಚ್ಬೇಡ ಹೋಗ್ತಿನಿ ಅಂತ ಆ ಫಾರೆಸ್ಟ್ ಅಧಿಕಾರಿಗೆ ಹೇಳುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಧಾನವಾಗಿ ಹೇಳು ಹೋಗ್ತಿನಿ ಎಂದು ಆನೆ ಹೇಳ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಸಾಹಸವನ್ನು ಅನುಭವಸ್ಥರು ಮಾತ್ರ ಮಾಡಿರ್ತಾರೆ ಆನೆ ಕಂಡರೆ ಎದುರು ನಿಂತು ಈ ರೀತಿ ಸಾಹಸ ಮಾಡಲು ಹೋಗಬೇಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಫಾರೆಸ್ಟ್ ಅಧಿಕಾರಿಯೊಂದಿಗೆ ಬಾಯಿ ಬಾರದ ಆನೆಯ ಈ ಲುಕ್ ಅಂತು ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: ಜಪಾನ್ ಪ್ರಧಾನಿ ಶಿಗೇರು ಇಶಿಬಾ ರಾಜೀನಾಮೆ

ಇದನ್ನೂ ಓದಿ: ಟಾಯ್ಲೆಟ್‌ನಲ್ಲಿ ಕುಳಿತಿದ್ದವನ ಆ ಜಾಗಕ್ಕೆ ಕಚ್ಚಿದ ಹಾವು

View post on Instagram

View post on Instagram