ಗಾಯಗೊಂಡ ಕಾಡಾನೆಯೊಂದು ಗುವಾಹಟಿಯ ಬೀದಿಯಲ್ಲಿ ಕಾರೊಂದರ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಮಗುಚಿ ಹಾಕಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನೆಗೆ ಚಿಕಿತ್ಸೆ ನೀಡುವಂತೆ ಜನ ಆಗ್ರಹಿಸಿದ್ದಾರೆ.
ಗಾಯಗೊಂಡಿದ್ದ ಕಾಡಾನೆಯೊಂದು ಬೀದಿಗಳಲ್ಲಿದ್ದ ಕಾರೊಂದರ ಮೇಲೆ ಅಟ್ಟಹಾಸ ಮೆರೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಸ್ಸಾಂನ ರಾಜಧಾನಿ ಗುವಾಹಟಿಯ ರಸ್ತೆಯಲ್ಲಿ ಈ ಗಾಯಗೊಂಡಿದ್ದ ಕಾಡಾನೆ ಓಡಾಡಿದ್ದು, ತನ್ನ ನೋವು ಹಾಗೂ ಸಿಟ್ಟಿನಲ್ಲಿ ರಸ್ತೆಯಲ್ಲಿ ಇದ್ದ ಕಾರೊಂದನ್ನು ಮಗುವಚಿ ಹಾಕಿ ರೋಷ ಹೊರಹಾಕಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಗಾಯಗೊಂಡಿರುವ ಆನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಚಿಕಿತ್ಸೆ ನೀಡುಂತೆ ಆಗ್ರಹಿಸುತ್ತಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ಹಿಂಭಾಗದ ಎಡಗಾಲಿಗೆ ಪೆಟ್ಟಾದಂತೆ ಕಾಣಿಸುತ್ತಿದ್ದು, ಆನೆ ಆ ನೋವನ್ನು ತಡೆದುಕೊಳ್ಳುವ ಭರದಲ್ಲಿ ತನ್ನ ಸಿಟ್ಟು ಹಾಗೂ ಆಕ್ರೋಶವನ್ನು ಕಾರಿನ ಮೇಲೆ ತೋರಿಸಿದೆ. ಕಾರನ್ನು ಮಗುಚಿ ಹಾಕಿ ಸೊಂಡಿಲಿನಿಂದ ಕಾರಿನ ಒಳಗೆ ಹುಡುಕಾಟ ನಡೆಸಿದೆ. ಬಹುಶಃ ಆಹಾರದ ಹುಡುಕಾಟವೂ ಆಗಿದ್ದಿರಬಹುದು. ಕೆಲ ನಿಮಿಷದ ನಂತರ ಆನೆ ಆ ಕಾರಿನಿಂದ ಪಕ್ಕಕ್ಕೆ ಸರಿದಿದ್ದು, ಪಕ್ಕದಲ್ಲಿದ್ದ ಮರದ ಬಳಿ ಹೋಗಿದೆ. ಈ ವೇಳೆ ಆನೆಯನ್ನು ಓಡಿಸುವುದಕ್ಕಾಗಿ ಅಲ್ಲಿ ಜನ ತಮಗೆ ಕೈಗೆ ಸಿಕ್ಕಿದ ವಸ್ತುಗಳನ್ನು ಆನೆಯತ್ತ ಎಸೆಯುವುದನ್ನು ಕಾಣಬಹುದು. ವೀಡಿಯೋ ನೋಡಿದ ಜನ ಆಘಾತ ವ್ಯಕ್ತಪಡಿಸಿದ್ದಾರೆ. ಈ ಘಟನೆ ಆಗಸ್ಟ್ 11ರಂದು ನಡೆದಿದೆ ಎನ್ನಲಾಗುತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.
ಜೋರಾಬತ್ ಮತ್ತು ಸತ್ಗಾಂವ್ ಸೇರಿದಂತೆ ಇತರ ಪ್ರದೇಶಗಳಲ್ಲಿ, ಆನೆಯು ಹಲವು ದಿನಗಳಿಂದ ಅಲೆದಾಡುತ್ತಿದೆ ಮತ್ತು ಅದರ ಕಾಲಿಗೆ ಗಾಯವಾಗಿದ್ದರಿಂದ ಅದು ತೊಂದರೆಗೀಡಾಗಿರುವುದು ಗೋಚರಿಸುತ್ತಿದೆ ಎಂದು ಸ್ಥಳೀಯರು ವರದಿ ಮಾಡಿದ್ದಾರೆ. ಗಾಯಗೊಂಡಿರುವುದರಿಂದ ಸರಿಯಾಗಿ ಮೇವು ಸಿಗದ ಆನೆ ಪದೇ ಪದೇ ನೆರೆಹೊರೆಯ ಜನರಿಗೆ ತೊಂದರೆ ಉಂಟು ಮಾಡುತ್ತಿದೆ ಎಂದು ಅಲ್ಲಿನ ಜನ ಹೇಳಿದ್ದಾರೆ. ಆನೆಯ ಯೋಗಕ್ಷೇಮದ ಬಗ್ಗೆ ಹಲವಾರು ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದು, ಗಾಯವು ಅದರ ಅನಿರೀಕ್ಷಿತ ವರ್ತನೆಗೆ ಕಾರಣವಾಗಿರಬಹುದು ಎಂದು ಅವರು ಹೇಳಿದ್ದಾರೆ. ಸಾರ್ವಜನಿಕ ಸುರಕ್ಷತೆ ಮತ್ತು ಆನೆಗೆ ಚಿಕಿತ್ಸೆ ನೀಡುವ ಅಗತ್ಯವಿರುವುದರಿಂದ ಅರಣ್ಯ ಅಧಿಕಾರಿಗಳು ಮಧ್ಯಪ್ರವೇಶಿಸಬೇಕು ಎಂದು ಅಲ್ಲಿನ ಜನ ಆಗ್ರಹಿಸಿದ್ದಾರೆ.
ಆ ಆನೆ ಸಂಕಷ್ಟದಲ್ಲಿದೆ ಅದಕ್ಕೆ ಚಿಕಿತ್ಸೆ ಅಗತ್ಯವಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದರ ಕಾಲು ಊದಿದಂತೆ ಕಾಣುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಆನೆ ಗಾಯಗೊಂಡಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
