ಸುಳ್ಳು ಕೇಸುಗಳಲ್ಲಿ ತಪ್ಪಾಗಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರುವ ನಿರಪರಾಧಿಗಳಿಗೆ ಪರಿಹಾರ ನೀಡುವ ಕುರಿತು ಸುಪ್ರೀಂ ಕೋರ್ಟ್ ಪರಿಶೀಲನೆ ನಡೆಸುತ್ತಿದೆ. ಈ ಬಗ್ಗೆ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಲು ನ್ಯಾಯಾಲಯ ಮುಂದಾಗಿದೆ.
ನವದೆಹಲಿ: ಹಲವು ವ್ಯಕ್ತಿಗಳು ವ್ಯವಸ್ಥೆಗೆ ಬಲಿಪಶುಗಳಾಗಿ ವಿನಾಕಾರಣ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ತಪ್ಪಾಗಿ ಬಂಧಿತ, ಶಿಕ್ಷೆಗೆ ಗುರಿಯಾದ ವ್ಯಕ್ತಿಗಳಿಗೆ ಪರಿಹಾರ ನೀಡಲು ಸಾಧ್ಯವೇ ಎಂಬ ಕುರಿತು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಈ ಸಂಬಂಧ ನ್ಯಾಯಮೂರ್ತಿ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹ್ತಾ ಅವರು ಈ ವಿಚಾರದಲ್ಲಿ ಅಸಿಸ್ಟೆಂಟ್ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರ ಸಹಾಯವನ್ನು ಕೋರಿದೆ.
ಸೂಕ್ತ ಮಾರ್ಗಸೂಚಿ ರಚನೆಗೆ ಆಗ್ರಹ
ಈ ರೀತಿ ತಪ್ಪಾಗಿ ಶಿಕ್ಷೆಗೆ ಗುರಿಯಾದ ಸಂತ್ರಸ್ತನೊಬ್ಬನ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ ಸುಬ್ರಹ್ಮಣ್ಯಂ ಅವರು, ಹಲವು ವರ್ಷಗಳ ಕಾಲ ತಪ್ಪಾಗಿ ಶಿಕ್ಷೆಗೆ ಗುರಿಯಾದ ವ್ಯಕ್ತಿಗಳಿಗೆ ಪರಿಹಾರ ನೀಡಬೇಕಿದೆ. ಈ ಸಂಬಂಧ ಕಾನೂನು ಆಯೋಗದ ಶಿಫಾರಸ್ಸುಗಳಿಗೆ ಅನುಗುಣವಾಗಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ ಎಂದು ಆಗ್ರಹಿಸಿದರು.
12 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ವ್ಯಕ್ತಿ
ಅಪ್ರಾಪ್ತೆಯ ಅತ್ಯಾ*ಚಾರ ಹಾಗೂ ಕೊ*ಲೆ ಪ್ರಕರಣದಲ್ಲಿ ತಪ್ಪಾಗಿ ದೋಷಿ ಘೋಷಿಸಲ್ಪಟ್ಟು 12 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ವ್ಯಕ್ತಿಯೊಬ್ಬನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣದಲ್ಲಿ ಪೊಲೀಸರು ತಿರುಚಿದ ಸಾಕ್ಷ್ಯಗಳನ್ನು ಸಲ್ಲಿಸಿದ್ದಾರೆ ಎಂದು ಹೇಳಿ ಆರೋಪಿಯನ್ನು ನಿರಪರಾಧಿ ಎಂದು ಘೋಷಿಸಿತ್ತು. ಇದೀಗ ಆತ ಪರಿಹಾರಕ್ಕೆ ಅರ್ಹ, ಆತನ ತನ್ನದಲ್ಲದ ತಪ್ಪಿಗೆ ಭಾರೀ ನೋವು ಅನುಭವಿಸಿದ್ದಾನೆ.
ಇದನ್ನೂ ಓದಿ: ಮದುವೆ ಎಂಬುದು ಮಕ್ಕಳಾಟವಲ್ಲ, ಸಹಕಾರ ಬೇಕು: ವಿಚ್ಛೇದನ ಕೋರಿದ್ದ ಪತಿಗೆ ಹೈಕೋರ್ಟ್ ಹೇಳಿದ್ದೇನು?
ಈ ಸಂಬಂಧ ರಾಜ್ಯ ಸರ್ಕಾರ ತನ್ನ ಅಧಿಕಾರಿಗಳ ದುರ್ನಡತೆಗೂ ಕ್ರಮ ಕೈಗೊಳ್ಳಬೇಕು. ಅರ್ಜಿದಾರನಿಗಾದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ವಕೀಲರು ಆಗ್ರಹಿಸಿದರು. ಈ ರೀತಿ ಇನ್ನೂ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದು, ನ್ಯಾಯಾಲಯ ಅದನ್ನು ಒಟ್ಟಿಗೆ ಸಮಗ್ರವಾಗಿ ವಿಚಾರಣೆ ನಡೆಸಲು ನಿರ್ಧರಿಸಿದೆ.
ಇದನ್ನೂ ಓದಿ: ಆಗಸಕ್ಕೆ ಭಾರತದ ರೆಕ್ಕೆ: ಬೆಂಗಳೂರಿನಎಚ್‌ಎಎಲ್‌ನಿಂದ ರಷ್ಯಾ ಜೊತೆ ಐತಿಹಾಸಿಕ ಮಹತ್ವದ ಒಪ್ಪಂದ
