ಅಮೆರಿಕದಲ್ಲಿ ತನ್ನೊಂದಿಗೆ ನೆಲೆಸಲು ಪತ್ನಿ ನಿರಾಕರಿಸಿದ್ದನ್ನು 'ಹಿಂಸೆ' ಎಂದು ಪರಿಗಣಿಸಿ ವಿಚ್ಛೇದನ ಕೋರಿದ್ದ ಪತಿಯ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಮದುವೆ ಎಂಬುದು ಮಕ್ಕಳಾಟವಲ್ಲ, ಅದೊಂದು ಪವಿತ್ರ ಬಂಧವಾಗಿದ್ದು, ಕ್ಷುಲ್ಲಕ ಕಾರಣಗಳಿಗೆ ದಾಂಪತ್ಯವನ್ನು ಮುರಿಯಲಾಗದು ಎಂದ ನ್ಯಾಯಾಲಯ.

ಬೆಂಗಳೂರು (ಅ.24): ಹಿಂದೂ ಧರ್ಮ ಮತ್ತು ಸಂಪ್ರದಾಯ, ಆಚರಣೆ ಪ್ರಕಾರ ಮದುವೆ ಎಂದರೆ ಪತಿ-ಪತ್ನಿ ನಡುವಿನ ಪವಿತ್ರ ಬಂಧ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದಲ್ಲಿ ಪತಿ-ಪತ್ನಿ ಪರಸ್ಪರ ಸಹಕಾರ ಹೊಂದಿರಬೇಕು. ದಂಪತಿ ಮಾಡುವ ಆರೋಪ-ಪ್ರತ್ಯಾರೋಪ ಪರಿಗಣಿಸಿ ಮದುವೆ ಅನೂರ್ಜಿತಗೊಳಿಸಲಾಗದು ಎಂದು ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಮೆರಿಕದಲ್ಲಿ ತನ್ನೊದಿಗೆ ನೆಲೆಸಲು ನಿರಾಕರಿಸುವ ಮೂಲಕ ಪತ್ನಿ ಹಿಂಸೆ ನೀಡುತ್ತಿದ್ದು, ವಿವಾಹ ವಿಚ್ಛೇದನ ಮಂಜೂರು ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ರವಿ (ಹೆಸರು ಬದಲಿಸಲಾಗಿದೆ) ಎಂಬುವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮದುವೆ ಎಂಬುದು ಮಕ್ಕಳಾಟವಲ್ಲ: ಹೈಕೋರ್ಟ್

ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್‌ ಬ್ಯಾನರ್ಜಿ ಅವರ ನೇತೃತ್ವದ ವಿಭಾಗೀಯ ಪೀಠ, ಮದುವೆ ಎಂಬುದು ಮಕ್ಕಳಾಟವಲ್ಲ. ಅದೊಂದು ಪವಿತ್ರ ಬಂಧ. ವೈವಾಹಿಕ ಜೀವನದಲ್ಲಿ ಪತಿ-ಪತ್ನಿ ಪರಸ್ಪರ ರಾಜಿ ಮತ್ತು ಹೊಂದಾಣಿಕೆ ಮಾಡಿಕೊಂಡು ಜೀವನ ಮುನ್ನಡೆಸಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಪತ್ನಿ ಕಿರುಕುಳ ನೀಡುತ್ತಿದ್ದಾರೆ. ಆಕೆಯೊಂದಿಗೆ ರಾಜಿ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ ಎಂದು ಮೇಲ್ಮನವಿದಾರ ಹೇಳುತ್ತಿದ್ದಾರೆ. ಆದರೆ ದಾಖಲೆ ಪರಿಶೀಲಿಸಿದರೆ, ಆತನ ಸಮಸ್ಯೆ ಕ್ಷುಲ್ಲಕವಾಗಿವೆ. ಪರಸ್ಪರ ಚರ್ಚೆ ಮತ್ತು ಮಾತುಕತೆಯಿಂದ ಬಗೆಹರಿಸಿಕೊಳ್ಳಬಹುದಾಗಿದೆ. ಪತ್ನಿ ವಿರುದ್ಧ ಆರೋಪ ಮಾಡಿ ವಿಚ್ಛೇದನ ಕೋರಿದ ಮಾತ್ರಕ್ಕೆ ಅದನ್ನು ಪುರಸ್ಕರಿಸಲಾಗದು ಎಂದು ತಿಳಿಸಿ ಮೇಲ್ಮನವಿ ವಜಾಗೊಳಿಸಿದೆ.

ಪ್ರಕರಣ ಹಿನ್ನೆಲೆ:

ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಮೇಲ್ಮನವಿದಾರ 2015ರಲ್ಲಿ ಸಿಂಗಾಪುರಲ್ಲಿ ನೆಲೆಸಿರುವ ಮಹಿಳೆಯನ್ನು ಆನ್‌ಲೈನ್‌ ಮೂಲಕ ಪರಿಚಯ ಮಾಡಿಕೊಂಡಿದ್ದರು. ನಂತರ ಹಿಂದೂ ಸಂಪ್ರದಾಯದಂತೆ ಆಕೆಯನ್ನು ಮದುವೆಯಾಗಿದ್ದರು. ಭಾರತದಲ್ಲಿ ಹತ್ತು ದಿನ ವಾಸವಿದ್ದ ದಂಪತಿ ಬಳಿಕ ಸಿಂಗಾಪುರಕ್ಕೆ ತೆರಳಿದ್ದರು.

ಕೆಲ ಸಮಯದಲ್ಲೇ ವಿಚ್ಛೇದನ ಕೋರಿ ಅಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ರವಿ, ಅಮೆರಿಕದಲ್ಲಿರುವ ತನ್ನೊಂದಿಗೆ ನೆಲೆಸಲು ಪತ್ನಿ ಒಪ್ಪಲಿಲ್ಲ. ಹಲವು ಬಾರಿ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಆ ಮೂಲಕ ಪತ್ನಿ ನನಗೆ ಹಿಂಸೆ ನೀಡುತ್ತಿದ್ದು, ವಿಚ್ಛೇದನ ನೀಡಬೇಕು ಎಂದು ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪತಿ ಮಾಡಿರುವ ಆರೋಪದಲ್ಲಿ ಪತ್ನಿ ಹಿಂಸೆ ನೀಡಿರುವ ಬಗ್ಗೆ ಯಾವುದೇ ಪುರಾವೆ ನೀಡಿಲ್ಲ. ದಾಂಪತ್ಯ ಸರಿಪಡಿಸಿಕೊಳ್ಳಲು ಮುಂದಾಗದೆ ನೇರವಾಗಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತ್ತು. ಇದರಿಂದ ರವಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.