ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಮತ್ತು ರಷ್ಯಾದ ಯುನೈಟೆಡ್‌ ಏರ್‌ಕ್ರಾಫ್ಟ್‌ ಕಾರ್ಪೋರೇಷನ್‌ ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ. ಉಡಾನ್ ಯೋಜನೆಗೆ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ದೊಡ್ಡ ಉತ್ತೇಜನ ನೀಡಲಿದೆ.

ನವದೆಹಲಿ: ನಾಗರಿಕ ವಿಮಾನಗಳನ್ನು ಪೂರ್ಣ ಪ್ರಮಾಣದಲ್ಲಿ ಭಾರತದಲ್ಲೇ ತಯಾರಿಸುವ ಐತಿಹಾಸಿಕ ಒಪ್ಪಂದವೊಂದಕ್ಕೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಮತ್ತು ರಷ್ಯಾದ ಯುನೈಟೆಡ್‌ ಏರ್‌ಕ್ರಾಫ್ಟ್‌ ಕಾರ್ಪೋರೇಷನ್‌ (ಯುಎಸಿ) ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ, ಎಚ್‌ಎಎಲ್‌ ಭಾರತದಲ್ಲೇ ಎಸ್‌ಜೆ-100 ವಿಮಾನಗಳನ್ನು ತಯಾರಿಸಲಿದೆ.

ವಿಮಾನ ಉತ್ಪಾದನೆಯ ಹೊಸ ಕೇಂದ್ರ ಸ್ಥಾನವಾಗಿ ಹೊರಹೊಮ್ಮಲು ಬಯಸುತ್ತಿರುವ ಭಾರತದ ಕನಸಿಗೆ ಈ ಒಪ್ಪಂದ ದೊಡ್ಡ ಮಟ್ಟಿನಲ್ಲಿ ನೀರೆರೆಯಲಿದೆ ಎಂದು ವಿಶ್ಲೇಷಿಸಲಾಗಿದೆ. ಈ ಹಿಂದೆ ಇದೇ ರೀತಿ ಏವ್ರೋ ಎಚ್‌ಎಸ್‌-748 ಪ್ರಾಜೆಕ್ಟ್‌ ಅನ್ನು 1961ರಲ್ಲಿ ಆರಂಭಿಸಲಾಗಿತ್ತಾದರೂ 1988ರಲ್ಲಿ ಅದು ಮುಕ್ತಾಯಗೊಂಡಿತ್ತು. ಆ ವಿಮಾನಗಳನ್ನು ಕೇವಲ ಭಾರತೀಯ ಸೇನೆ ಬಳಸುತ್ತಿತ್ತು.

ಒಪ್ಪಂದ:

ರಷ್ಯಾ ಕಂಪನಿಗಾಗಿ ಇನ್ನು ಮುಂದೆ ಎಚ್‌ಎಎಲ್‌ ಎಸ್‌ಜೆ-100 ವಿಮಾನಗಳನ್ನು ಉತ್ಪಾದಿಸಲಿದೆ. ಇದರೆ ಜೊತೆಗೆ ಭಾರತಕ್ಕೆ ಬೇಕಾದ ವಿಮಾನಗಳನ್ನು ಉತ್ಪಾದಿಸುವ ಪೂರ್ಣ ಅಧಿಕಾರ ಹೊಂದಿರಲಿದೆ.

ವಿಮಾನ ಹೇಗಿರಲಿದೆ?:

ಎಚ್‌ಜೆ -100 ವಿಮಾನಗಳು ಒಂದು ಟ್ವಿನ್‌ ಎಂಜಿನ್‌ ಹಾಗೂ ಕಿರಿದಾದ ಗಾತ್ರ ಹೊಂದಿರುವ ಸಣ್ಣ ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದ ವಿಮಾನಗಳಾಗಿವೆ. ಇವು ಗರಿಷ್ಠ 3500 ಕಿ.ಮೀ ಸಾಗುವ ಸಾಮರ್ಥ ಹೊಂದಿರಲಿದ್ದು, 100-103 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲದಾಗಿದೆ. ಹಾಲಿ ವಿಶ್ವದ 16 ವಿಮಾನಯಾನ ಕಂಪನಿಗಳು ಈ ವಿಮಾನ ಬಳಸುತ್ತಿವೆ. ಈಗಾಗಲೇ ಇಂಥ 200ಕ್ಕೂ ಹೆಚ್ಚು ವಿಮಾನಗಳು ಬಳಕೆಯಲ್ಲಿವೆ. ಕೇಂದ್ರದ ಉಡಾನ್‌ ಯೋಜನೆಯಡಿ ಪ್ರಾದೇಶಿಕ ವಿಮಾನ ಸಂಪರ್ಕಕ್ಕೆ ಈ ಒಪ್ಪಂದಿಂದ ನೆರವಾಗಲಿದೆ.

ಇದನ್ನೂ ಓದಿ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; 50 ಲಕ್ಷ ನೌಕರರು ಮತ್ತು 69 ಲಕ್ಷ ಪಿಂಚಣಿದಾರರಿಗೆ ಶುಭ ಸುದ್ದಿ

ಪ್ರಾದೇಶಿಕವಾಗಿ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ವಿಮಾನಯಾನ ಉದ್ದಿಮೆಯ ಅಂದಾಜಿನ ಪ್ರಕಾರ ಮುಂದಿನ ಹತ್ತು ವರ್ಷಗಳಲ್ಲಿ ಭಾರತಕ್ಕೆ 200 ಜೆಟ್‌ಗಳ ಅಗತ್ಯವಿದೆ. ಇದರ ಜತೆಗೆ 350 ವಿಮಾನಗಳು ಹಿಂದೂಮಹಾಸಾಗರ ಭಾಗದಲ್ಲಿ ಸಮೀಪದ ಅಂತಾರಾಷ್ಟ್ರೀಯ ಪ್ರದೇಶಗಳ ನಡುವೆ ಓಡಾಡಲಿದೆ. ಎಸ್‌ಜೆ-100 ಅನ್ನು ಎಚ್‌ಎಎಲ್‌ ನಿರ್ಮಿಸುವುದು ಭಾರತೀಯ ವಾಯುಯಾನ ಉದ್ಯಮದಲ್ಲಿ ಹೊಸ ಮನ್ವಂತರಕ್ಕೆ ಕಾರಣ‍ಾಗಲಿದೆ. ಈ ಯೋಜನೆಯಿಂದ ಸಾಕಷ್ಟು ಉದ್ಯೋಗ ಕೂಡ ಸೃಷ್ಟಿಯಾಗಲಿದೆ. ಯುದ್ಧವಿಮಾನಗಳ ಜತೆಗೆ ವಾಣಿಜ್ಯ ಹಾಗೂ ಪ್ರಾದೇಶಿಕ ಬಳಕೆಯ ಉದ್ದೇಶದ ಯುದ್ಧವಿಮಾನಗಳ ಉತ್ಪಾದನೆಗೂ ಭಾರತದ ಆಸಕ್ತಿಯ ಭಾಗವಾಗಿ ಈ ಒಪ್ಪದ ಏರ್ಪಟ್ಟಿದೆ.

ಇದನ್ನೂ ಓದಿ: ಮೋಂಥಾ ಚಂಡಮಾರುತ: ಕರಾವಳಿ ಭಾಗದಲ್ಲಿ ಕರಾಳ ರಾತ್ರಿ, 90 ರಿಂದ 100 ಕಿ.ಮೀ. ವೇಗದಲ್ಲಿ ಗಾಳಿ