chicken gun test: ಸಾಮಾನ್ಯವಾಗಿ ಮನೆ ಕಟ್ಟಿದಾಗ ಕೆಲವೊಂದು ಪ್ರಾಜೆಕ್ಟ್‌ಗಳನ್ನು ಹೊಸದಾಗಿ ಶುರು ಮಾಡುವಾಗ ಕೆಲವರು ಪ್ರಾಣಿಗಳ ಬಲಿ ನೀಡುವುದನ್ನು ನೀವು ನೋಡಿರಬಹುದು  ಆದರೆ ವಿಮಾನವೊಂದು ಮೊದಲು ಹಾರಾಟ ಆರಂಭಿಸಲು ಶುರು ಮಾಡಿದಾಗ ಅದರ ಮೇಲೆ ಕೋಳಿಗಳನ್ನು ಎಸೆಯಲಾಗುತ್ತದೆ ಎಂಬ ವಿಚಾರ ನಿಮಗೆ ಗೊತ್ತಾ?

ವಿಮಾನ ಹಾರಾಟ ಆರಂಭಿಸುವ ಮೊದಲು ವಿಮಾನದ ಮೇಲೇಕೆ ಸತ್ತ ಕೋಳಿ ಎಸೆಯಲಾಗುತ್ತದೆ.

ಸಾಮಾನ್ಯವಾಗಿ ಮನೆ ಕಟ್ಟಿದಾಗ ಕೆಲವೊಂದು ಪ್ರಾಜೆಕ್ಟ್‌ಗಳನ್ನು ಹೊಸದಾಗಿ ಶುರು ಮಾಡುವಾಗ ಕೆಲವರು ಪ್ರಾಣಿಗಳ ಬಲಿ ನೀಡುವುದನ್ನು ನೀವು ನೋಡಿರಬಹುದು ಅಥವಾ ನಿಮಗೆ ಈ ವಿಚಾರ ತಿಳಿದಿರಬಹುದು. ಆದರೆ ವಿಮಾನವೊಂದು ಮೊದಲು ಹಾರಾಟ ಆರಂಭಿಸಲು ಶುರು ಮಾಡಿದಾಗ ಅದರ ಮೇಲೆ ಕೋಳಿಗಳನ್ನು ಎಸೆಯಲಾಗುತ್ತದೆ ಎಂಬ ವಿಚಾರ ನಿಮಗೆ ಗೊತ್ತಾ?

ಕೇಳುವುದಕ್ಕೆ ವಿಚಿತ್ರ ಎನಿಸಿದರು ಇದು ಸತ್ಯ. ಜಗತ್ತಿನಲ್ಲಿ ನಡೆಯುವ ಕೆಲವೊಂದು ಆಚರಣೆಗಳು ಕೇಳುವುದಕ್ಕೆ ವಿಚಿತ್ರ ಎನಿಸಿದರು. ಅದರ ಹಿಂದೆ ಕೆಲ ವೈಜ್ಞಾನಿಕ ಕಾರಣಗಳಿರುತ್ತವೆ. ಅದೇ ರೀತಿ ಬಹುತೇಕ ವಿಮಾನಗಳು ಹಾರಾಟಕ್ಕೆ ಸಿದ್ಧವಾಗುವ ಮೊದಲು ಸತ್ತ ಕೋಳಿಗಳನ್ನು ವಿಮಾನಗಳ ಮೇಲೆ ಎಸೆಯಲಾಗುತ್ತದೆ ? ಈ ಆಚರಣೆಗೆ ಕಾರಣ ಏನು ಹಾಗೂ ಯಾಕೆ ಎಂಬ ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ...

ಹೌದು ವಾಣಿಜ್ಯ ವಿಮಾನ ಮೊದಲ ಬಾರಿ ಹಾರಾಟ ಆರಂಭಿಸುವುದಕ್ಕೆ ಅನುಮತಿ ನೀಡುವ ಮೊದಲು, ಅದು ವಾಯುಯಾನದ ಸಾಮಾನ್ಯ ಅಪಾಯಗಳಲ್ಲಿ ಒಂದಾದ ಬರ್ಡ್‌ ಸ್ಟ್ರೈಕ್‌ಗಳನ್ನು ಅಂದರೆ ವಿಮಾನಕ್ಕೆ ಎದುರಾಗುವ ಹಕ್ಕಿಗಳ ಡಿಕ್ಕಿಎದುರಿಸಬಲ್ಲ ಸಾಮರ್ಥ್ಯವನ್ನು ಹೊಂದಿರಬೇಕು. ಅದನ್ನು ಪರೀಕ್ಷಿಸಲು, ಎಂಜಿನಿಯರ್‌ಗಳು ಚಿಕನ್ ಗನ್ ಪರೀಕ್ಷೆ ಎಂಬ ಅಸಾಮಾನ್ಯ ಆದರೆ ಸಂಪೂರ್ಣವಾಗಿ ವೈಜ್ಞಾನಿಕ ವಿಧಾನವನ್ನು ಬಳಸುತ್ತಾರೆ. ವಿಮಾನವು ಹಾರಾಟದ ಸಮಯದಲ್ಲಿ ಪಕ್ಷಿಗಳ ಡಿಕ್ಕಿಯ ಪರಿಣಾಮವನ್ನು ತಡೆದುಕೊಳ್ಳುತ್ತದೆಯೇ ಎಂದು ಪರೀಕ್ಷಿಸಲು ಈ ಚಿಕನ್ ಗನ್ ಪರೀಕ್ಷೆ ನಡೆಸಲಾಗುತ್ತದೆ. 500 ಕಿ.ಮೀ. ವೇಗದಲ್ಲಿ ವಿಮಾನಗಳು ಹಾರುತ್ತಿರುವಾಗ ಈ ಸತ್ತ ಕೋಳಿಗಳನ್ನು ಅವುಗಳ ಮೇಲೆ ಎಸೆಯಲಾಗುತ್ತದೆ.

ಚಿಕನ್ ಗನ್ ಪರೀಕ್ಷೆ ಹೇಗೆ ನಡೆಯುತ್ತದೆ.

ಈ ಪರೀಕ್ಷೆಯ ಸಮಯದಲ್ಲಿ ಚಿಕನ್ ಗನ್ ಎಂದು ಕರೆಯಲ್ಪಡುವ ಸಂಕುಚಿತ ವಾಯು ಫಿರಂಗಿಯಿಂದ ಸತ್ತ ಕೋಳಿಗಳನ್ನು ವಿಮಾನದ ಎಂಜಿನ್‌ಗಳು, ವಿಂಡ್‌ಶೀಲ್ಡ್‌ಗಳು ಅಥವಾ ರೆಕ್ಕೆಗಳಂತಹ ವಿಮಾನದ ಭಾಗಗಳ ಕಡೆಗೆ ಹೆಚ್ಚಿನ ವೇಗದಲ್ಲಿ ಗುಂಡಿನಂತೆ ಹಾರಿಸಲಾಗುತ್ತದೆ. ಈ ಪರೀಕ್ಷೆಯನ್ನು ನಿಯಂತ್ರಿತ ಸೆಟ್ಟಿಂಗ್‌ ಮೂಲಕ ನಡೆಸಲಾಗುತ್ತದೆ. ಹೆಚ್ಚಿನ ವೇಗದ ಕ್ಯಾಮೆರಾಗಳು ಇದರಿಂದಾಗುವ ಪರಿಣಾಮವನ್ನು ಸೆರೆಹಿಡಿಯುತ್ತವೆ. ನಂತರ ಎಂಜಿನಿಯರ್‌ಗಳು ವಿಮಾನದ ಘಟಕಗಳಿಗೆ ಆಗಿರುವ ಹಾನಿಯನ್ನು ವಿಶ್ಲೇಷಿಸುತ್ತಾರೆ. ಹಾಗೂ ಹಾನಿಯಾಗಿದ್ದಲ್ಲಿ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಅವರಿಗೆ ನಿರ್ದಿಷ್ಟವಾದ ಐಡಿಯಾ ಸಿಗುತ್ತದೆ.

ಕೋಳಿಗಳನ್ನು ಏಕೆ ಬಳಸಲಾಗುತ್ತದೆ

ಸಾಮಾನ್ಯವಾಗಿ ಈ ಪ್ರಕ್ರಿಯೆಗೆ ಸತ್ತ ಕೋಳಿಗಳನ್ನು ಬಳಸಲಾಗುತ್ತದೆ ಏಕೆಂದರೆ ಅವುಗಳ ಗಾತ್ರ ಮತ್ತು ತೂಕವು ಹದ್ದುಗಳು, ಸೀಗಲ್‌ಗಳಂತಹ ವಿಮಾನಗಳು ಸಾಮಾನ್ಯವಾಗಿ ಎದುರಿಸುವ ಪಕ್ಷಿಗಳಿಗೆ ನಿಕಟವಾಗಿ ಹೊಂದಿಕೆಯಾಗುತ್ತದೆ. ಇದು ಹಕ್ಕಿಯ ಡಿಕ್ಕಿಯ ವಾಸ್ತವಿಕ ಸ್ಥಿತಿಯನ್ನು ಒದಗಿಸುತ್ತದೆ.

ಚಿಕನ್ ಗನ್ ಪರೀಕ್ಷೆ ಏಕೆ ಮುಖ್ಯ

ವಿಮಾನಗಳು ಹೆಚ್ಚಿನ ವೇಗದಲ್ಲಿದ್ದಾಗ ಒಂದು ಸಣ್ಣ ಹಕ್ಕಿ ಕೂಡ ವಿಮಾನಕ್ಕೆ ಗಂಭೀರ ಹಾನಿಯನ್ನುಂಟು ಮಾಡಬಹುದು. ಕಾಕ್‌ಪಿಟ್ ವಿಂಡ್‌ಶೀಲ್ಡ್‌ಗೆ ಹಕ್ಕಿ ಡಿಕ್ಕಿ ಹೊಡೆದರೆ ಗಾಜು ಒಡೆದು ಪೈಲಟ್‌ಗೆ ಗಾಯವಾಗಬಹುದು. ಒಂದು ಹಕ್ಕಿ ಎಂಜಿನ್‌ಗೆ ಸಿಲುಕಿದರೆ, ಅದು ವಿಮಾನದ ಟರ್ಬೈನ್ ಬ್ಲೇಡ್‌ಗಳನ್ನು ಹಾನಿಗೊಳಿಸಬಹುದು, ಬೆಂಕಿಯನ್ನು ಹೊತ್ತಿಸಬಹುದು ಅಥವಾ ಇದರಿಂದ ಸಂಪೂರ್ಣ ಎಂಜಿನ್ ಸ್ಥಗಿತಗೊಳ್ಳಬಹುದು.

ಇಂತಹ ಹಕ್ಕಿ ಡಿಕ್ಕಿಯಿಂದಾಗುವ ಅನಾಹುತವನ್ನು ಎದುರಿಸಲು ವಿಮಾನಗಳು ಬರ್ಡ್‌ ಸ್ಟ್ರೈಕ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಹಕ್ಕಿ ಡಿಕ್ಕಿ ಹೊಡೆದ ರಭಸಕ್ಕೆ ಎಂಜಿನ್‌ನೊಳಗೆ ಹಕ್ಕಿಯನ್ನು ಎಳೆದುಕೊಂಡರೂ ಸಹ, ಎಂಜಿನ್ ಕನಿಷ್ಠ ಎರಡು ನಿಮಿಷಗಳ ಕಾಲವಾದರೂ 75% ಒತ್ತಡದಲ್ಲಿ ಚಲಿಸಬೇಕು. ಇದು ಸುರಕ್ಷಿತ ತುರ್ತು ಲ್ಯಾಂಡಿಂಗ್‌ಗೆ ಸಾಕಷ್ಟು ಸಮಯ ನೀಡುತ್ತದೆ.

ಜಾಗತಿಕ ಮಾನದಂಡ

ಪ್ರಪಂಚದ ಪ್ರತಿಯೊಂದು ವಿಮಾನ ತಯಾರಕರು ವಿಮಾನ ಹಾರಾಟಕ್ಕೆ ಪ್ರಮಾಣೀಕರಣ ನೀಡುವ ಮೊದಲು ಈ ಪ್ರಕ್ರಿಯೆಯನ್ನು ಅನುಸರಿಸುತ್ತಾರೆ. ಕೆಲವು ಸಂಸ್ಥೆಗಳು ಪರೀಕ್ಷೆಗಳು ಸಿಂಥೆಟಿಕ್‌ ಪಕ್ಷಿಗಳು ಅಥವಾ ಜಿಲೆಟಿನ್ ಆಧಾರಿತ ಸ್ಪೋಟಕಗಳನ್ನು ಬಳಸಬಹುದು, ಆದರೆ ಹೆಚ್ಚಿನ ವಿಮಾನ ಯಾನ ಸಂಸ್ಥೆಗಳು ನಿಖರವಾದ ತೂಕ ಮತ್ತು ಸಾಂದ್ರತೆಗಾಗಿ ನಿಜವಾದ ಕೋಳಿಗಳನ್ನೇ ಬಳಸುತ್ತವೆ.

ಇದನ್ನೂ ಓದಿ: ಮಗಳ ಮೇಲೆ ಬಲತ್ಕಾರ: ಸಲಿಂಗಿ ಸಂಗಾತಿಯ ಮರ್ಮಾಂಗಕ್ಕೆ ಇರಿದ ವ್ಯಕ್ತಿ

ಇದನ್ನೂ ಓದಿ: ಸಂದರ್ಶನದ ವೇಳೆ ಒಳ್ಳೆಯ ಅಭ್ಯರ್ಥಿಯಾಗಿದ್ರೂ ತಿರಸ್ಕರಿಸಿದ್ದಕ್ಕೆ ಕಾರಣ ಹೇಳಿದ ಮ್ಯಾನೇಜರ್‌ ಪೋಸ್ಟ್ ವೈರಲ್