ಆಫ್ರಿಕಾದ ಎಸ್ವಾಟಿನಿ ರಾಜ ಎಂಸ್ವತಿ III, ತನ್ನ 15 ಪತ್ನಿಯರು ಮತ್ತು 100 ಸೇವಕರೊಂದಿಗೆ ಖಾಸಗಿ ಜೆಟ್‌ನಲ್ಲಿ ಅಬುಧಾಬಿಗೆ ಭೇಟಿ ನೀಡಿದ ವೀಡಿಯೋ ವೈರಲ್ ಆಗಿದೆ. ದೇಶದಲ್ಲಿ ಬಡತನ ತಾಂಡವವಾಡುತ್ತಿದ್ದರೂ, ರಾಜನ ಈ ಐಷಾರಾಮಿ ಜೀವನಶೈಲಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಆಫ್ರಿಕನ್ ರಾಜನ ಹೈ-ಫೈ ಲೈಫ್‌:

ಆಫ್ರಿಕನ್ ದೇಶ ಬಡತನದಿಂದ ಬಳಲ್ತಿದೆ. ಆದರೆ ಅಲ್ಲಿನ ರಾಜನೋರ್ವನ ಲೈಫ್‌ಸ್ಟೈಲ್ ಮಾತ್ರ ಜನರ ಹುಬ್ಬೇರುವಂತೆ ಮಾಡಿದೆ. ತನ್ನ 15 ಪತ್ನಿಯರು ಹಾಗೂ 100 ಸೇವಕರ ಜೊತೆಗೆ ಯುಎಇಗೆ ಖಾಸಗಿ ವಿಮಾನದಲ್ಲಿ ಭೇಟಿ ನೀಡಿದ ಹಳೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗ್ತಿದೆ. ವೈರಲ್ ಆದ ವೀಡಿಯೋದಲ್ಲಿ ಸಿಂಪಲ್ ಆಗಿರುವ ಸಂಪ್ರದಾಯಿಕ ಧಿರಿಸು ಧರಿಸಿರುವ ರಾಜ ತನ್ನ ಖಾಸಗಿ ಜೆಟ್‌ನಿಂದ 15 ಪತ್ನಿಯರ ಜೊತೆಗೆ ವಿಮಾನವಿಳಿದು ಬರುತ್ತಿರುವುದನ್ನು ಕಾಣಬಹುದು, ಪತ್ನಿಯರು ಒಬ್ಬರ ಹಿಂದೆ ಒಬ್ಬರಂತೆ ಅವರನ್ನು ಫಾಲೋ ಮಾಡ್ತಿದ್ದಾರೆ. ಆಫ್ರಿಕನ್ ದೇಶದ ಎಸ್ವಾಟಿನಿಯ ರಾಜ ಎಂಸ್ವತಿ III ಅಬುಧಾಬಿಗೆ ಆಗಮಿಸುತ್ತಿರುವ ವೀಡಿಯೋ ಇದಾಗಿದೆ.

ಸ್ವಾಜಿಲ್ಯಾಂಡ್ ರಾಜನಿಗೆ 15 ಹೆಂಡ್ತಿರು 30 ಮಕ್ಕಳು

ಸೊಗಸಾಗಿ ಆಧುನಿಕ ಬಟ್ಟೆ ಧರಿಸಿದ ರಾಜನ ಪತ್ನಿಯರು ಕೂಡ ಈ ವೀಡಿಯೋದಲ್ಲಿ ಕಾಣಿಸುತ್ತಿದ್ದಾರೆ. ಫನ್ ಫ್ಯಾಕ್ಟರ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಮತ್ತೆ ಪೋಸ್ಟ್ ಮಾಡಲಾಗಿದ್ದು, ಸ್ವಾಜಿಲ್ಯಾಂಡ್ ರಾಜ 15 ಹೆಂಡತಿಯರು ಮತ್ತು 100 ಸೇವಕರೊಂದಿಗೆ ಅಬುಧಾಬಿಗೆ ಬಂದಿದ್ದಾರೆ. ಇವರ ತಂದೆ ರಾಜ ಸೋಬುಜಾ II ಗೆ 125 ಹೆಂಡತಿಯರಿದ್ದರು ಎಂದು ವೀಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಸೆರೆಯಾದ ದೃಶ್ಯ ಇದಾಗಿದೆ. ಅಬುಧಾಬಿ ಪ್ರವಾಸದ ಸಮಯದಲ್ಲಿ ರಾಜ ಎಂಸ್ವತಿ III ಅವರ 30 ಮಕ್ಕಳು ಕೂಡ ಇದ್ದರು ಎಂದು ವರದಿಗಳು ಸೂಚಿಸುತ್ತವೆ. ಇವರ ಈ ದೊಡ್ಡ ನಿಯೋಗವು ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕ ಅಡಚಣೆಯನ್ನು ಉಂಟು ಮಾಡಿತು. ಭದ್ರತಾ ಅಧಿಕಾರಿಗಳು ರಾಜಮನೆತನದ ಕುಟುಂಬಕ್ಕೆ ಸ್ಥಳಾವಕಾಶ ಕಲ್ಪಿಸಲು ಬಹು ಟರ್ಮಿನಲ್‌ಗಳನ್ನು ಮುಚ್ಚಬೇಕಾಯಿತು ಎಂದು ವರದಿಯಾಗಿದೆ.

ಆದರೆ ಆಫ್ರಿಕನ್ ರಾಜ ಹೀಗಿದ್ದರೆ ಅಲ್ಲಿನ ಪ್ರಜೆಗಳ ಜೀವನಶೈಲಿ ಇದಕ್ಕೆ ತದ್ವಿರುದ್ಧವಾಗಿದೆ. ಹೀಗಾಗಿ ಇವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿ ಟೀಕೆಗೆ ಗುರಿಯಾಯ್ತು. ರಾಜನ ಈ ಐಷಾರಾಮಿ ಜೀವನಶೈಲಿಯ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದರು. ಒಬ್ಬರು ಅಲ್ಲಿನ ಜನರಿಗೆ ತಿನ್ನಲು ಆಹಾರವಿಲ್ಲ, ಮನೆಯಲ್ಲಿ ಕರೆಂಟ್ ಇಲ್ಲ ಹೀಗಿರುವಾಗ ರಾಜ ಮಾತ್ರ ತನ್ನ ಕುಟುಂಬದೊಂದಿಗೆ ವಿದೇಶಿ ಪ್ರವಾಸ ಮಾಡ್ತಿದ್ದಾನೆ ಎಂದು ಟೀಕೆ ವ್ಯಕ್ತಪಡಿಸಿದರು. ಇನ್ನೂ ಕೆಲವರು ಈ ದೇಶ ಖಾಸಗಿ ಜೆಟ್ ಖರೀದಿಸುವಷ್ಟು ಶ್ರೀಮಂತ ದೇಶವೇ? ಎಂದು ಪ್ರಶ್ನಿಸಿದರು.

ಇವರಿಲ್ಲಿ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುತ್ತಾರೆ. ಅಲ್ಲಿ ಜನರಿಗೆ ತಿನ್ನಲು ಆಹಾರವಿಲ್ಲದೇ ಸಾಯ್ತಿದ್ದಾರೆ ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಪತ್ನಿಯರನ್ನು ನಿಭಾಯಿಸಲು ಅಲ್ಲಿ ಯಾರಾದರು ಕೋ ಆರ್ಡಿನೇಟರ್‌ಗಳು ಇದ್ದಾರ ಎಂದು ಒಬ್ಬರು ತಮಾಷೆಯಾಗಿ ಪ್ರಶ್ನೆ ಮಾಡಿದ್ದಾರೆ. ಕಿಂಗ್ ಮಸ್ವತಿ ಆಫ್ರಿಕಾದ ಕೊನೆಯ ಸಂಪೂರ್ಣ ರಾಜ ಎಂಸ್ವತಿ III, 1986 ರಿಂದಲೂ ದಕ್ಷಿಣ ಆಫ್ರಿಕಾದ ಸಣ್ಣ ರಾಷ್ಟ್ರವನ್ನು ಆಳುತ್ತಿದ್ದಾರೆ. ಕೆಲ ವರದಿಗಳ ಪ್ರಕಾರ ಈತ $1 ಬಿಲಿಯನ್‌ಗಿಂತ ಹೆಚ್ಚಿನ ವೈಯಕ್ತಿಕ ಸಂಪತ್ತನ್ನು ಹೊಂದಿದ್ದಾನೆ.

ಈ ರಾಜನ ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಸರಿಯಾಗಿಲ್ಲ, ಶಿಕ್ಷಣ ವ್ಯವಸ್ಥೆ ಇಲ್ಲ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇದೆ. ದೇಣಿಗೆಗಳನ್ನು ಅವಲಂಬಿಸಿರುವುದರಿಂದ ವಿಶ್ವವಿದ್ಯಾಲಯಗಳಿಂದ ಹೊರಗುಳಿಯುವ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಮೂಲಭೂತ ಸರಕುಗಳ ಬೆಲೆಗಳು ಹೆಚ್ಚುತ್ತಿರುವುದರ ಜೊತೆಗೆ 2021 ರಲ್ಲಿ ನಿರುದ್ಯೋಗವು 23% ರಿಂದ 33.3% ಕ್ಕೆ ಏರಿದೆ ಎಂದು ವಿಶ್ವ ಬ್ಯಾಂಕ್ ವರದಿ ಮಾಡಿದೆ. ಆದರೆ ಅಲ್ಲಿನ ವರದಿಗಳ ಪ್ರಕಾರ ರಾಜ ಮಾತ್ರ ಶ್ರೀಮಂತನಾಗಿದ್ದು, ನಿರ್ಮಾಣ, ಪ್ರವಾಸೋದ್ಯಮ, ಕೃಷಿ, ದೂರಸಂಪರ್ಕ ಮತ್ತು ಅರಣ್ಯಕ್ಕೆ ಸಂಬಂಧಿಸಿದ ಕಂಪನಿಗಳಲ್ಲಿ ಈತ ಷೇರುಗಳನ್ನು ಹೊಂದಿದ್ದಾನೆ.

ತನ್ನ ಅತಿರಂಜಿತ ಜೀವನಶೈಲಿ ಮತ್ತು ಸಾಂಪ್ರದಾಯಿಕ ರಾಜಮನೆತನದ ಪದ್ಧತಿಗಳಿಗೆ ಹೆಸರುವಾಸಿಯಾದ ರಾಜ ಎಂಸ್ವತಿ, ಪ್ರತಿ ವರ್ಷ ರೀಡ್ ನೃತ್ಯ ಸಮಾರಂಭದ ಸಮಯದಲ್ಲಿ ಹೊಸ ವಧುವನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ, ಇದು ಶತಮಾನಗಳಷ್ಟು ಹಳೆಯದಾದ ಆಚರಣೆಯಾಗಿದ್ದು, ಇದು ಮೆಚ್ಚುಗೆ ಮತ್ತು ಟೀಕೆ ಎರಡಕ್ಕೂ ಕಾರಣವಾಗಿದೆ. ಇಲ್ಲಿನ ರಾಜಮನೆತನ ಅಪಾರ ಸಂಪತ್ತನ್ನು ಅನುಭವಿಸುತ್ತಿದ್ದರೂ, ಹೆಚ್ಚಿನ ನಾಗರಿಕರ ಜೀವನವು ಸಂಕಷ್ಟದಿಂದ ಕೂಡಿದೆ. ಈಸ್ವತಿನಿ ರಾಜ್ಯದ ಜನಸಂಖ್ಯೆಯ ಸುಮಾರು 60% ಜನರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.

ಇದನ್ನೂ ಓದಿ: ಕಸ ಹಾಕಿದ ಪ್ರವಾಸಿಗರಿಂದಲೇ ಕಸ ಎತ್ತಿಸಿದ ಸ್ಥಳೀಯರು: ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ಕಳ್ಳರ ಪ್ಲಾನ್ ಫೇಲ್ ಆಗಿದ್ದು ಹೇಗೆ? ವೀಡಿಯೋ ಭಾರಿ ವೈರಲ್

View post on Instagram