Dangerous Home Remedies: ಮಕ್ಕಳ ಚರ್ಮ ಸಾಕಷ್ಟು ಮೃದುವಾಗಿರುತ್ತದೆ. ಬಿದ್ದ ಗಾಯ, ಸುಟ್ಟ ಗಾಯವನ್ನು ಸಹಿಸೋದು ಕಷ್ಟ. ಸೂಕ್ತ ಚಿಕಿತ್ಸೆ ನೀಡದೆ ತಪ್ಪು ಮಾಡಿದಾಗ ಅದು ದೊಡ್ಡ ಸಮಸ್ಯೆಯಾಗಿ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಮಗುವಿಗೆ ಸುಟ್ಟ ಗಾಯವಾದ್ರೆ ಏನು ಮಾಡ್ಬೇಕು ಗೊತ್ತಾ?
ಬಿಸಿ ಬಿಸಿ ಟೀ ಅಥವಾ ಯಾವುದೇ ವಸ್ತು ಮೈ ಮೇಲೆ ಬಿದ್ರೆ ಉರಿ ತಡೆಯೋದು ಕಷ್ಟ. ಇನ್ನು ಮಕ್ಕಳ ದೇಹದ ಮೇಲೆ ಬಿದ್ರೆ ಕೇಳೋದೇ ಬೇಡ. ಎಳೆ ಚರ್ಮ ಬೇಗ ಸುಡುತ್ತೆ. ಇಂಥ ಟೈಂನಲ್ಲಿ ಪಾಲಕರಿಗೆ ಏನು ಮಾಡ್ಬೇಕು ತಿಳಿಯೋದಲ್ಲಿ ತಕ್ಷಣ ಮನೆ ಮದ್ದಿಗೆ ಟ್ರೈ ಮಾಡ್ತಾರೆ. ಮನೆ ಮದ್ದು ಕೆಟ್ಟದ್ದಲ್ಲ. ಆದ್ರೆ ತಪ್ಪಾದ ಮನೆ ಮದ್ದು ಅಪಾಯವನ್ನು ಕಡಿಮೆ ಮಾಡುವ ಬದಲು ಹೆಚ್ಚು ಮಾಡುತ್ತದೆ. ಈಗ ಅಂಥಹದ್ದೇ ಘಟನೆಯೊಂದು ನಡೆದಿದೆ. ವೈದ್ಯರೊಬ್ಬರು ತಮ್ಮ ಇನ್ಸ್ಟಾ ಖಾತೆಯಲ್ಲಿ ತಾಯಿ ಮಾಡಿದ ತಪ್ಪೇನು ಎಂಬುದನ್ನು ಹೇಳಿದ್ದಾರೆ.
ಎರಡು ವರ್ಷದ ಮಗು ಎದೆ ಮೇಲೆ ಬಿಸಿ ಟೀ : ಎರಡು ವರ್ಷದ ಮಗುವಿನ ಎದೆ ಮೇಲೆ ಕೈ ತಪ್ಪಿ ಬಿಸಿ ಟೀ ಬಿದ್ದಿದೆ. ಕಂಗಾಲಾದ ತಾಯಿ, ಮನೆ ಮದ್ದು ಮಾಡಿದ್ದಾಳೆ. ಮೊದಲು ಮಗುವಿನ ಬಟ್ಟೆ ತೆಗೆದಿದ್ದಾಳೆ. ನಂತ್ರ ನೇರವಾಗಿ ಸುಟ್ಟ ಗಾಯಕ್ಕೆ ಐಸ್ (Ice) ಇಟ್ಟಿದ್ದಾಳೆ. ಇದ್ರಿಂದ ಸುಟ್ಟ ಗಾಯದಲ್ಲಿ ಊತ ಕಾಣಿಸಿಕೊಂಡಿದೆ. ಮಗು ಸೋಂಕಿ(infected)ಗೆ ಒಳಗಾಗಿದೆ.
ಸುಟ್ಟ ತಕ್ಷಣ ಯಾವೆಲ್ಲ ವಿಷ್ಯ ನೆನಪಿನಲ್ಲಿಟ್ಟುಕೊಳ್ಬೇಕು? : ಮಕ್ಕಳ ವೈದ್ಯರ ಪ್ರಕಾರ, ಇಂಥ ಪರಿಸ್ಥಿತಿ ಯಾರ ಮನೆಯಲ್ಲಾದ್ರೂ ಬರಬಹುದು. ಪಾಲಕರು ಈ ಬಗ್ಗೆ ಜ್ಞಾನ ಹೊಂದಿರಬೇಕು. ಕೆಲ ತಪ್ಪುಗಳನ್ನು ಮಾಡ್ಲೇಬಾರದು.
1.ವೈದ್ಯರ ಪ್ರಕಾರ, ಬಿಸಿಯಾದ ಟೀ, ಸಾಂಬಾರ್ ಸೇರಿದಂತೆ ಯಾವುದೇ ಪದಾರ್ಥ ಬಿದ್ದಾಗ ತಕ್ಷಣ ಬಟ್ಟೆ ಬದಲಿಸಬೇಕು. ಬಟ್ಟೆಯನ್ನು ನೀವು ಒಳಗೆ ಶಾಖ ಇಳಿಯುವುದಿಲ್ಲ. ಇದ್ರಿಂದ ಸುಡುವ ಸಂವೇದನೆ ಕಡಿಮೆ ಆಗುತ್ತದೆ. ಸುಟ್ಟ ಜಾಗಕ್ಕೆ 15-20 ನಿಮಿಷಗಳ ಕಾಲ ನಿರಂತರವಾಗಿ ಸಾಮಾನ್ಯ ನೀರನ್ನು ಸುರಿಯಿರಿ. ಇದು ಸುಡುವ ನೋವನ್ನು ಕಡಿಮೆ ಮಾಡುತ್ತದೆ.
2.ಸುಟ್ಟ ಜಾಗಕ್ಕೆ ಐಸ್ ಇಡಬಾರದು. ಇದು ರಕ್ತ ಪೂರೈಕೆಯನ್ನು ಕಡಿಮೆ ಮಾಡುತ್ತೆ. ಅಲ್ಲದೆ ಗಾಯ ಗುಣಮುಖವಾಗಲು ಸಮಯ ತೆಗೆದುಕೊಳ್ಳುತ್ತದೆ. ಸುಟ್ಟ ಜಾಗದಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಐಸ್ ಹಚ್ಚಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
3.ಗುಳ್ಳೆಗಳನ್ನು ಒಡೆಯಬಾರದು. ಸುಟ್ಟಾಗ ಗುಳ್ಳೆಗಳಾಗುತ್ತವೆ. ಬೇಗ ಗುಣವಾಗುತ್ತೆ ಎನ್ನುವ ಕಾರಣಕ್ಕೆ ಅನೇಕರು ಗುಳ್ಳೆ ಒಡೆಯುತ್ತಾರೆ. ಗುಳ್ಳೆ, ಕೆಳ ಚರ್ಮವನ್ನು ರಕ್ಷಿಸುತ್ತದೆ. ಸರಿಯಾದ ಸಮಯಕ್ಕೆ ಗಾಯ ಗುಣವಾಗಲು ಸಹಕಾರಿ. ನೀವು ಗುಳ್ಳೆಯನ್ನು ಒಡೆದ್ರೆ ಅದು ಚರ್ಮಕ್ಕೆ ಹಾನಿ. ಇದ್ರಿಂದ ಗಾಯ ಗುಣವಾಗಲು ಸಮಯ ಹಿಡಿಯುತ್ತದೆ.
4.ಟೂತ್ ಪೇಸ್ಟ್ ಬಳಕೆ ಬೇಡ ಎಂದು ಮಕ್ಕಳ ತಜ್ಞರು ಸಲಹೆ ನೀಡಿದ್ದಾರೆ. ಸುಟ್ಟ ಗಾಯಕ್ಕೆ ಅನೇಕರು ಟೂತ್ ಪೇಸ್ಟ್ ಹಚ್ಚುತ್ತಾರೆ. ಕೆಲವರು ತುಪ್ಪ ಹಚ್ಚುತ್ತಾರೆ. ತುಪ್ಪ, ಟೂತ್ ಪೇಸ್ಟ್ ಸೇರಿದಂತೆ ಈ ಮನೆಯ ವಸ್ತುಗಳು ಗಾಯಕ್ಕೆ ಹಾನಿಕರ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಸುಟ್ಟು ಗಾಯವಾದ ಸ್ಥಳವನ್ನು ಹಾಗೆ ಇಡಬೇಕು. ಸ್ವಚ್ಛ ಬಟ್ಟೆಯಿಂದ ಅದನ್ನು ಮುಚ್ಚಬಹುದು ಎನ್ನುತ್ತಾರೆ ತಜ್ಞರು.
5.ಸಣ್ಣ ಪ್ರಮಾಣದಲ್ಲಿ ಸುಟ್ಟಿದ್ದರೆ ನೀವು Silver sulfadizing cream ಅಥವಾ ಆಂಟಿಬಯೋಟಿಕ್ (antibiotic) ಕ್ರೀಂ ಬಳಸಿ. ಮುಖ, ಹೃದಯ, ಜನನಾಂಗ ಸೇರಿದಂತೆ ದೇಹದ ಸೂಕ್ಷ್ಮ ಭಾಗದಲ್ಲಿ ಸುಟ್ಟಿದ್ದರೆ ಅಥವಾ ದೊಡ್ಡ ಪ್ರಮಾಣದಲ್ಲಿ ಸುಟ್ಟಿದ್ದರೆ ನೀವು ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕು.
