ಅಂಗಡಿಗಳಲ್ಲಿ ಬಿಲ್​ ಅಥವಾ ರಸೀತಿ ನೀಡುವುದು ಸಹಜ. ಆದರೆ ಅದನ್ನು 10 ಸೆಕೆಂಡ್​ಗಳಿಗಿಂತ ಹೆಚ್ಚಿಗೆ ಹಿಡಿದುಕೊಂಡರೆ ಭಾರಿ ಅಪಾಯ ಎನ್ನುವ ಆಘಾತಕಾರಿ ವರದಿ ಬಿಡುಗಡೆಯಾಗಿದೆ. ಏನಿದು ನೋಡಿ! 

ಇತ್ತೀಚಿನ ದಿನಗಳಲ್ಲಿ ಮಕ್ಕಳಾಗದ ಸಮಸ್ಯೆ ಹಲವರನ್ನು ಕಾಡುತ್ತಿದೆ. ಇದಕ್ಕೆ ಹಲವಾರು ಕಾರಣಗಳು ಇದ್ದಿರಬಹುದು. ಇದರ ಬಗ್ಗೆ ಸಂಶೋಧನೆ ನಡೆಯುತ್ತಲೇ ಇದೆ. ಆದರೆ ಕುತೂಹಲ ಎಂಬಂತೆ ಇದೀಗ ಸಂತಾನೋತ್ಪತ್ತಿಗೆ ಅಂಗಡಿಗಳ ಬಿಲ್​ಗಳೂ ಸಂಚಕಾರ ತರುತ್ತಿವೆ ಎನ್ನುವ ಆಘಾತಕಾರಿ ವರದಿ ಬಿಡುಗಡೆಯಾಗಿದೆ. ಅಂಗಡಿಗಳ ಬಿಲ್​ ಹೆಚ್ಚು ಬಂದರೆ ಹಾರ್ಟ್​ ಎಟ್ಯಾಕ್​ ಆಗತ್ತೆ ಎಂದು ತಮಾಷೆ ಮಾಡುವುದು ಇದೆ. ಆದರೆ ಸಂತಾನೋತ್ಪತ್ತಿಗೂ, ಅಂಗಡಿಗಳಲ್ಲಿ ಕೊಡುವ ಬಿಲ್​ಗಳಿಗೂ ಎತ್ತಣತ್ತ ಸಂಬಂಧ ಎಂದು ಎನ್ನಿಸುವುದು ಅಲ್ಲವೇ? ಆದರೆ, ಈಗ ನಡೆಸಿರುವ ಅಧ್ಯಯನದ ಪ್ರಕಾರ ಅದು ನಿಜ.

ಅದೇನೆಂದರೆ, ಶಾಪಿಂಗ್ ಬಿಲ್ ಗಳು, ರೆಸ್ಟೋರೆಂಟ್ ರಸೀದಿಗಳು ಮತ್ತು ಎಟಿಎಂ ಸ್ಲಿಪ್ ಇತ್ಯಾದಿಗಳಲ್ಲಿ ಹಾನಿಕಾರಕ ರಾಸಾಯನಿಕ ಇರುತ್ತದೆ. ಇದಕ್ಕೆ ಬಿಸ್ಫೆನಾಲ್-ಎಸ್ (BPS) ಎಂದು ಹೆಸರು. ಇದು ಹಾರ್ಮೋನ್-ಅಡ್ಡಿಪಡಿಸುವ ಗುಣಗಳನ್ನು ಹೊಂದಿದೆ. ಇದು ದೇಹದಲ್ಲಿನ ಈಸ್ಟ್ರೊಜೆನ್ ಹಾರ್ಮೋನ್ ಅನ್ನು ಅನುಕರಿಸುತ್ತದೆ ಮತ್ತು ನೈಸರ್ಗಿಕ ಹಾರ್ಮೋನ್ ಕ್ರಿಯೆಗಳಿಗೆ ಅಡ್ಡಿಪಡಿಸುತ್ತದೆ. ಇದರ ಪರಿಣಾಮವಾಗಿ, ಮಾನವರ ಚಯಾಪಚಯ ಕ್ರಿಯೆ, ಬೆಳವಣಿಗೆ, ಸಂತಾನೋತ್ಪತ್ತಿ ಸಾಮರ್ಥ್ಯ ಮತ್ತು ಇತರ ದೈಹಿಕ ಕಾರ್ಯಗಳು ಬಾಧಿತವಾಗುತ್ತವೆ. ಇಂಥ ಬಿಲ್​ಗಳನ್ನು 10 ಸೆಕೆಂಡ್​ಕ್ಕಿಂತ ಹೆಚ್ಚು ಹಿಡಿದುಕೊಂಡರೆ ಬಿಸ್ಫೆನಾಲ್-ಎಸ್ ರಾಸಾಯನಿಕವು ಚರ್ಮದ ಮೂಲಕ ಹೀರಲ್ಪಡುತ್ತದೆ ಮತ್ತು ಇದು ಮನುಷ್ಯನ ದೇಹದ ಹಾರ್ಮೋನ್ ಸಮತೋಲನವನ್ನು ಗಂಭೀರವಾಗಿ ಬಾಧಿಸುತ್ತದೆ ಎಂದು ಸಂಶೋಧನೆ ಹೇಳಿದೆ.

ಚರ್ಮದ ಮೂಲಕ ಇದು ದೇಹವನ್ನು ಸೇರುವ ಕಾರಣದಿಂದ ಹಾರ್ಮೋನ್ ಅಸಮತೋಲನ ಉಂಟಾಗಿ ಸಂತಾನೋತ್ಪತ್ತಿ ಸಮಸ್ಯೆಗಳು ಉದ್ಭವವಾಗುವ ಸಾಧ್ಯತೆ ಇದೆ. ಮಾತ್ರವಲ್ಲದೇ, ಸ್ತನ ಕ್ಯಾನ್ಸರ್, ಪ್ರೋಸ್ಟೇಟ್ ಕ್ಯಾನ್ಸರ್​ಗಳಿಗೂ ಇದು ಕಾರಣ ಎನ್ನಲಾಗಿದೆ. ಇನ್ನೂ ಶಾಕಿಂಗ್​ ವಿಷಯ ಏನೆಂದರೆ, ಮಕ್ಕಳಲ್ಲಿ ಅರಿವಿನ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಿಗೆ ಇದು ಕಾರಣವಾಗಬಹುದು ಎಂದು ಕೂಡ ಸಂಶೋಧನೆ ಎಚ್ಚರಿಕೆಯನ್ನು ನೀಡಿದೆ.

NYU ಲ್ಯಾಂಗೋನ್ ಮೆಡಿಕಲ್ ಸೆಂಟರ್ ನ ಪರಿಸರ ಆರೋಗ್ಯ ತಜ್ಞ ಡಾ. ಲಿಯೊನಾರ್ಡೊ ಟ್ರಾಸಾಂಡೆ ಅವರು ಇದನ್ನು ದೃಢಪಡಿಸಿದ್ದಾರೆ. ರಸೀದಿಗಳ ಮೇಲಿನ ಹೊಳಪು ಲೇಪನವು ಪ್ಲಾಸ್ಟಿಕ್ ಪಾಲಿಮರ್ ನಿಂದ ಮಾಡಲ್ಪಟ್ಟಿದೆ. ಆದ್ದರಿಂದ ಇದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದಿದ್ದಾರೆ. ಆದ್ದರಿಂದ ರಸೀದಿಗಳನ್ನು ದೀರ್ಘಕಾಲ ಹಿಡಿದಿಡುವುದನ್ನು ತಪ್ಪಿಸಿ ಸಾಧ್ಯವಾದಷ್ಟು ಮಟ್ಟಿಗೆ ಡಿಜಿಟಲ್ ರಸೀದಿಗಳನ್ನು ಬಳಸಿ ಎನ್ನುವುದು ಅವರ ಮಾತು. ರಸೀದಿಗಳನ್ನು ಸ್ಪರ್ಶಿಸಿದ ನಂತರ ಕೈಗಳನ್ನು ಚೆನ್ನಾಗಿ ತೊಳೆಯಬೇಕು ಎನ್ನುವ ತಜ್ಞರು, ಸ್ಟೋರ್ ಕಾರ್ಮಿಕರು ಮತ್ತು ಬಾರ್-ರೆಸ್ಟೋರೆಂಟ್ ನೌಕರರು ಹೆಚ್ಚು ಅಪಾಯದಲ್ಲಿರುವುದರಿಂದ, ಅವರಿಗೆ ಸರಿಯಾದ ಸುರಕ್ಷತಾ ಮಾರ್ಗದರ್ಶನ ನೀಡಬೇಕು ಎನ್ನುತ್ತಾರೆ.