ಒಂದಾದ ಮೇಲೊಂದು ರೀಲ್ಸ್ ನೋಡ್ತಾನೆ ಇರ್ತಿರಾ, ಈಗಾಗ್ಲೇ ಆ ಸಮಸ್ಯೆಯೂ ಬಂದಿರ್ಬೋದು ನೋಡಿ
ರೀಲ್ಸ್ ನೋಡೋದು ಎಷ್ಟು ಖುಷಿ ಕೊಡುತ್ತೆ ಅಲ್ವಾ, ಆದ್ರೆ ಅದನ್ನ ನೋಡ್ತನೆ ಇದ್ರೆ..ಏನೆಲ್ಲಾ ಸಮಸ್ಯೆ ಎದುರಾಗ್ಬೋದು ಅಥವಾ ಈಗಾಗಲೇ ಬಂದಿರಬಹುದು ಅನ್ನೋದನ್ನ ಯೋಚಿಸಿದ್ದೀರಾ.

ಇಂದಿನ ಕಾಲದಲ್ಲಿ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಮೊಬೈಲ್ ಫೋನ್‌ನನ್ನ ಹೆಚ್ಚಾಗಿ ಬಳಸ್ತಾರೆ. ಅದರಲ್ಲೂ ರೀಲ್ಸ್ ನೋಡುವುದರಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಾರೆ. ಏಕೆಂದರೆ ಅವು ತುಂಬಾ ಇಂಟ್ರೆಸ್ಟಿಂಗ್ ಆಗಿ ಇರ್ತವೆ. ಅದಕ್ಕೆ ಇರ್ಬೇಕು, ಒಂದು ರೀಲ್ಸ್ ನೋಡಿದ ನಂತರ ವ್ಯಕ್ತಿಯು ಒಂದಾದ ಮೇಲೊಂದರಂತೆ ರೀಲ್ಸ್ ನೋಡ್ತಾರೆ. ಕೊನೆಗೆ ಟೈಂ ಹೋಗೋದು ಗೊತ್ತಾಗಲ್ಲ.
ರೀಲ್ಸ್ ನೋಡುವವರಿಗೆ ಸಮಯದ ಮಿತಿಯೇ ಇರಲ್ಲ, ದಿನವಿಡೀ ತಮ್ಮ ಫೋನ್‌ಗಳನ್ನ ಸ್ಕ್ರಾಲ್ ಮಾಡುತ್ತಲೇ ಇರುತ್ತಾರೆ. ನೋಡುವವರದು ಒಂದು ಕತೆಯಾದರೆ ರೀಲ್ಸ್ ಮಾಡುವವರದು ಇನ್ನೊಂದು ಕಥೆ. ಅವರೂ ವಿಡಿಯೋ ಮಾಡೋದನ್ನೇ ಚಟವಾಗಿರಿಸಿಕೊಂಡಿರ್ತಾರೆ. ಒಂದು ರೀತಿ ವ್ಯಸನಿಯಾಗಿರ್ತಾರೆ ಅಂದ್ರೆ ತಪ್ಪಾಗಲ್ಲ.
ಒಟ್ಟಾರೆ ಇಂದು ಯಾವುದೇ ವ್ಯಕ್ತಿ ಫೋನ್ ಇಲ್ಲದೆ ಬದುಕಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಒಂದು ವಿಷಯದ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ. ಅವರ ಗಮನವು ಮತ್ತೆ ಮತ್ತೆ ಫೋನ್ ಕಡೆಗೆ ಹೋಗುತ್ತದೆ. ಹಾಗಾಗಿ ನೀವು ಸಹ ಗಂಟೆಗಟ್ಟಲೆ ಫೋನ್ ಬಳಸುತ್ತಿದ್ದರೆ, ಅದು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ...
ನಾವು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ ಯಾವುದೇ ವಿಡಿಯೋ ನೋಡಿದಾಗಲೆಲ್ಲಾ ಸ್ವಲ್ಪ ಸಮಯದವರೆಗೆ ಅದನ್ನು ಆನಂದಿಸುತ್ತೇವೆ. ಆದರೆ ಅದರ ನಂತರ ನಾವು ತಕ್ಷಣ ಮುಂದಿನ ವಿಡಿಯೋ ನೋಡ್ತೇವೆ. ಹಿಂದಿನ ವಿಡಿಯೋ ಸಹ ಸರಿಯಾಗಿ ಆನಂದಿಸಲು ಸಾಧ್ಯವಾಗುವುದಿಲ್ಲ ಎಂದು ಮೆದುಳಿನ ಸಂಶೋಧಕರು ಹೇಳಿದ್ದಾರೆ. ಚಲನಚಿತ್ರವನ್ನು ಆನಂದಿಸಿದಂತೆ.
ರೀಲ್ಸ್ ನೋಡೋದ್ರಿಂದ ಆಗುವ ಅನಾನುಕೂಲಗಳು
ಸಂಶೋಧನೆಯ ಪ್ರಕಾರ, ಹೆಚ್ಚಿನ ಜನರು ಸಣ್ಣ ವಿಡಿಯೋ ಅಥವಾ ರೀಲ್ಸ್ ನೋಡುತ್ತಾ ಹೋದಂತೆ ಅವರು ಯಾವುದೇ ವಿಷಯದ ಮೇಲೂ ಗಮನಹರಿಸಲು ಕಷ್ಟಪಡುತ್ತಾರೆ. ಅಂತಹ ಜನರಿಗೆ ಸರಿಯಾದ ನಿದ್ರೆ ಬರುವುದಿಲ್ಲ, ನಿದ್ರಾಹೀನತೆಯಿಂದ ಬಳಲುತ್ತಾರೆ, ನಿರಂತರ ನಿದ್ರೆಯ ಕೊರತೆಯು ಸ್ಮರಣಶಕ್ತಿಯ ಸಮಸ್ಯೆಗಳು, ಕಡಿಮೆ ಶಕ್ತಿ ಮತ್ತು ಉದ್ವೇಗಕ್ಕೆ ಕಾರಣವಾಗುತ್ತದೆ.
ರೀಲ್ಸ್ ನೋಡುವ ಚಟವನ್ನು "ಮೆದುಳಿನ ಕೊಳೆತ"(Brain rot)ಎಂದೂ ಕರೆಯುತ್ತಾರೆ. ಅಂದರೆ ಮೆದುಳು ಕೊಳೆಯುತ್ತದೆ. ರೀಲ್ಸ್ ಅತಿಯಾಗಿ ನೋಡುವ ಚಟವು ದೈಹಿಕ ಚಟುವಟಿಕೆ ಕಡಿಮೆ ಮಾಡುವುದು, ತೂಕ ಹೆಚ್ಚಾಗುವುದು ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು.