Best Milk for Tea: ಹಸಿ ಹಾಲು ಅಥವಾ ಬಿಸಿ ಮಾಡಿದ ಹಾಲು; ಟೀ ರುಚಿಯಾಗೋದು ಇದ್ರಿಂದಲೇ ಕಣ್ರೀ
Tea Making Tips: ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವರು ಗಟ್ಟಿ ಹಾಲು ಹಾಕಿ ಟೀ ಮಾಡ್ತಾರೆ. ಹಾಗೆಯೇ ಹಾಲು-ನೀರು ಎರಡೂ ಬೆರೆಸಿ ಟೀ ಮಾಡುತ್ತಾರೆ. ಸರಿ. ಟೀಗೆ ಹಾಲು ಹಾಕುವಾಗ ನೀವು ನೇರವಾಗಿ ತಣ್ಣನೆಯ ಹಾಲು ಹಾಕುತ್ತಿರೋ ಅಥವಾ ಬಿಸಿ ಮಾಡಿದ ಹಾಲು ಹಾಕ್ತೀರೋ. ಯಾಕೆಂದ್ರೆ ರುಚಿ ಇರುವುದೇ ಹಾಲಿನಲ್ಲಿ.

ಹಾಲಿನಲ್ಲಿದೆ ರುಚಿಯ ಗುಟ್ಟು
ಭಾರತದಲ್ಲಿ ಚಹಾ ಪ್ರಿಯರಿಗೇನೂ ಕೊರತೆಯಿಲ್ಲ ಬಿಡಿ. "ಟೀ ಅಥವಾ ಚಹಾ ಇಲ್ಲದೆ ನಮ್ಮ ದಿನವೇ ಆರಂಭವಾಗುವುದಿಲ್ಲ" ಎಂದು ಹೇಳುವವರನ್ನು ನಾವು ಕೇಳುತ್ತಲೇ ಇದ್ದೇವೆ. ಇವ್ರೆಲ್ಲಾ ಬಿಡಿ, ಕೆಲವರು ದಿನಕ್ಕೆ ನಾಲ್ಕು ಅಥವಾ ಐದು ಬಾರಿ ಕುಡಿಯುತ್ತಾರೆ. ಒಟ್ನಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಅಭಿರುಚಿಯನ್ನು ಹೊಂದಿರುತ್ತಾರೆ. ಆದ್ದರಿಂದ ಎಲ್ಲರೂ ತಮ್ಮದೇ ಆದ ಆದ್ಯತೆಗಳಿಗೆ ಅನುಗುಣವಾಗಿ ಟೀ ತಯಾರಿಸುತ್ತಾರೆ. ಕೆಲವರಿಗೆ ಟೀ ಸ್ಟ್ರಾಂಗ್ ಇದ್ದರೆ ಚೆನ್ನ. ಮತ್ತೆ ಕೆಲವರಿಗೆ ಸ್ವೀಟ್ ಆಗಿರಬೇಕು. ಇದೆಲ್ಲಾ ಒಂದೆಡೆಯಾದರೆ, ರುಚಿಯಾದ ಖಡಕ್ ಚಾಯ್‌ನಲ್ಲಿ ಹಾಲು ಎಷ್ಟು ಮುಖ್ಯ ಪಾತ್ರವಹಿಸುತ್ತದೆ ಗೊತ್ತಾ?. ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವರು ಗಟ್ಟಿ ಹಾಲು ಹಾಕಿ ಟೀ ಮಾಡ್ತಾರೆ. ಹಾಗೆಯೇ ಹಾಲು-ನೀರು ಎರಡೂ ಬೆರೆಸಿ ಟೀ ಮಾಡುತ್ತಾರೆ. ಸರಿ. ಟೀಗೆ ಹಾಲು ಹಾಕುವಾಗ ನೀವು ನೇರವಾಗಿ ತಣ್ಣನೆಯ ಹಾಲು ಹಾಕುತ್ತಿರೋ ಅಥವಾ ಬಿಸಿ ಮಾಡಿದ ಹಾಲು ಹಾಕ್ತೀರೋ. ಯಾಕೆಂದ್ರೆ ರುಚಿ ಇರುವುದೇ ಹಾಲಿನಲ್ಲಿ. ಸರಿ, ನಿಮಗೂ ಈ ಬಗ್ಗೆ ಕುತೂಹಲವಿದ್ದರೆ ಇಲ್ಲಿದೆ ನೋಡಿ ಉತ್ತರ..
ಯಾವ ಹಾಲು ಹೆಚ್ಚು ಟೇಸ್ಟ್?
ನಾವೆಲ್ಲಾ ಮನೆಯಲ್ಲಿ ಟೀ ಮಾಡುವಾಗ ಹಾಲನ್ನು ತಕ್ಕ ಮಟ್ಟಿಗೆ ಬಿಸಿ ಮಾಡಿ ಹಾಕುತ್ತೇವೆ. ಇನ್ನು ಟೀ ಶಾಪ್‌ಗಳಲ್ಲಿ ಹಾಲನ್ನು ಬಿಸಿ ಮಾಡದೆ ಹಾಕ್ತಾರೆ. ಹಾಗಾಗಿ ಯಾವ ಹಾಲು ಹೆಚ್ಚು ರುಚಿಕರವಾಗಿರುತ್ತದೆ ಎಂಬುದನ್ನು ನೋಡೋಣ.
ಹೆಚ್ಚು ಕುದಿಸಿದ್ರೆ ಏನಾಗುತ್ತೆ?
ಸಾಮಾನ್ಯವಾಗಿ ಟೀ ಮಾಡುವಾಗ ನೀವು ಬಳಸುವ ಹಾಲಿನ ಪ್ರಕಾರವು ಅದರ ರುಚಿಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು ಪ್ಯಾಕ್ ಮಾಡಿದ ಹಾಲನ್ನು ಬಳಸುತ್ತಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದನ್ನು ಈಗಾಗಲೇ ಕುದಿಸಿ ಪಾಶ್ಚರೀಕರಿಸಲಾಗಿರುತ್ತದೆ. ಆದರೆ ಪ್ಯಾಕ್ ಮಾಡಿದ ಹಾಲು ಮನೆಗೆ ಬಂದಾಗ ಮಹಿಳೆಯರು ಅದನ್ನು ಪುನಃ ಕುದಿಸುವುದಲ್ಲದೆ, ನೀರಿನಿಂದ ಕಲಬೆರಕೆ ಮಾಡುತ್ತಾರೆ. ಆ ನಂತರವೇ ಇದನ್ನು ಚಹಾ ಮತ್ತು ಇತರ ತಯಾರಿಕೆಗಳಲ್ಲಿ ಬಳಸಲಾಗುತ್ತದೆ. ಇದರ ಪರಿಣಾಮವಾಗಿ ಒಟ್ಟಾರೆ ಹಾಲನ್ನು ಎರಡು ಬಾರಿ ಕುದಿಸಲಾಗುತ್ತದೆ. ಇದು ಅದರ ವಿನ್ಯಾಸವನ್ನು ಹಾಳು ಮಾಡುತ್ತದೆ. ಅಂದರೆ ಹಾಲಿಗೆ ನೀರನ್ನು ಸೇರಿಸುವುದರಿಂದ ಅದು ಮತ್ತಷ್ಟು ದುರ್ಬಲಗೊಳ್ಳುತ್ತದೆ.
ಬಿಸಿ ಮಾಡದೆ ಹಾಕಿದ್ರೆ ಏನಾಗುತ್ತೆ?
ಒಂದು ವೇಳೆ ನೀವು ಪ್ಯಾಕ್ ಮಾಡಿದ ಹಾಲನ್ನು ಮತ್ತೆ ಬಿಸಿ ಮಾಡದಿದ್ದರೆ ಅದರ ಗಟ್ಟಿ ವಿನ್ಯಾಸ ಹಾಗೆಯೇ ಉಳಿಯುತ್ತದೆ. ಇದೇ ಹಾಲನ್ನು ಚಹಾ ತಯಾರಿಸಲು ಬಳಸಿದಾಗ ಅದರ ಗಟ್ಟಿ ವಿನ್ಯಾಸವು ಆಹ್ಲಾದಕರ ಬಣ್ಣ, ಸುವಾಸನೆ ಮತ್ತು ವಿನ್ಯಾಸವನ್ನು ನೀಡುತ್ತದೆ.
ಸರಿಯಾದ ಮಾರ್ಗ ಯಾವುದು?
ಜನರು ತಮ್ಮದೇ ಆದ ರೀತಿಯಲ್ಲಿ ಚಹಾ ಮಾಡುತ್ತಾರೆಯಾದರೂ ಇದನ್ನು ತಯಾರಿಸುವ ಸರಿಯಾದ ವಿಧಾನ ಬಹಳ ಕಡಿಮೆ ಜನರಿಗೆ ತಿಳಿದಿದೆ. ಆದರೆ ಬ್ರಿಟಿಷ್ ಸ್ಟ್ಯಾಂಡರ್ಡ್ಸ್ ಇನ್ಸ್ಟಿಟ್ಯೂಷನ್ (ಬಿಎಸ್ಐ) ಚಹಾ ತಯಾರಿಸುವ ಸರಿಯಾದ ವಿಧಾನವನ್ನು ವಿವರಿಸಿದೆ. ಈ ಸಂಶೋಧನೆಯ ಪ್ರಕಾರ, ಚಹಾ ತಯಾರಿಸಲು ನಿಮಗೆ ಎರಡು ಪಾತ್ರೆಗಳು ಬೇಕಾಗುತ್ತವೆ.
ಒಂದು ಪಾತ್ರೆಯಲ್ಲಿ ನೀವು ಹಾಲು ಬಿಸಿ ಮಾಡಬೇಕು. ಇನ್ನೊಂದು ಪಾತ್ರೆಯಲ್ಲಿ, ನೀರು. ನೀವು ಹಾಲು ತೆಗೆದುಕೊಂಡಂತೆಯೇ ನೀರನ್ನು ತೆಗೆದುಕೊಳ್ಳಬೇಕು. ನೀರು ಬಿಸಿಯಾದಾಗ ಅದರಲ್ಲಿ ಟೀ ಪೌಡರ್ ಸೇರಿಸಿ. ಸ್ವಲ್ಪ ಪ್ರಮಾಣದ ಸಕ್ಕರೆ ಸೇರಿಸಿ. ಈಗ ಚೆನ್ನಾಗಿ ಕುದಿಯಲು ಬಿಡಿ. ನಂತರ ನಿಮ್ಮ ರುಚಿಗೆ ಅನುಗುಣವಾಗಿ ಸಕ್ಕರೆಯನ್ನು ಹೆಚ್ಚಿಸಿ. ನೀವು ಬಯಸಿದರೆ, ಅದರಲ್ಲಿ ಶುಂಠಿ, ಲವಂಗ ಅಥವಾ ಏಲಕ್ಕಿಯನ್ನು ಕೂಡ ಸೇರಿಸಬಹುದು. ಈ ಮಧ್ಯೆ ಕುದಿಯಲು ಆರಂಭಿಸಿದ ಹಾಲನ್ನು ಟೀ ಪಾತ್ರೆಗೆ ಸೇರಿಸಿ. ನಂತರ ಸೋಸಿ. ಇದರಿಂದ ನಿಮ್ಮ ಟೀ ಸಖತ್ ಟೇಸ್ಟಿಯಾಗಿರುತ್ತದೆ. ಇನ್ನೊಂದು ಮುಖ್ಯ ವಿಚಾರವೆಂದರೆ ಟೀ ನೀರು ಮತ್ತು ಹಾಲನ್ನು ಹೆಚ್ಚು ಹೊತ್ತು ಒಟ್ಟಿಗೆ ಕುದಿಸಬಾರದು. ನೀವು ಮುಂದಿನ ಬಾರಿ ಟೀ ಮಾಡುವಾಗ ಈ ವಿಧಾನವನ್ನು ಬಳಸಬಹುದು.
ಟೀಯಲ್ಲಿ ಎಷ್ಟು ವಿಧಗಳಿವೆ?
ಬ್ಲಾಕ್ ಟೀ, ಗ್ರೀನ್ ಟೀ, ಊಲಾಂಗ್ ಟೀ, ಹರ್ಬಲ್ ಟೀ, ಮಚ್ಚಾ ಟೀ ಮುಂತಾದ ಹಲವು ವಿಧದ ಟೀಗಳಿವೆ. ಪ್ರತಿಯೊಂದು ಟೀ ತನ್ನದೇ ಆದ ವಿಶಿಷ್ಟ ತಯಾರಿಕೆಯ ವಿಧಾನ ಮತ್ತು ಪದಾರ್ಥಗಳನ್ನು ಹೊಂದಿದೆ. ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿವೆ. ಗ್ರೀನ್ ಟೀಯನ್ನ ತೂಕವನ್ನು ನಿಯಂತ್ರಿಸಲು ಸೇವಿಸಲಾಗುತ್ತದೆ. ಬ್ಲಾಕ್ ಟೀ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ಹೃದಯದ ಆರೋಗ್ಯ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಪ್ರಯೋಜನಕಾರಿಯಾಗಿದೆ. ಮಚ್ಚಾ ಟೀ ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿರುವುದರಿಂದ ಮತ್ತು ದೇಹಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಒದಗಿಸುವುದರಿಂದ ಇದು ಹೆಚ್ಚು ಜನಪ್ರಿಯವಾಗುತ್ತಿದೆ.