ಕ್ಷಮಿಸಿ, ನನಗೆ ಬಿಪಾಶಾ ಅವರ ಬಾಡಿ ಶೇಮ್ ಮಾಡುವ ಉದ್ದೇಶ ಇರಲಿಲ್ಲ: ಮೃಣಾಲ್ ಠಾಕೂರ್
ನಟಿ ಮೃಣಾಲ್ ಠಾಕೂರ್ ಕಳೆದ ಕೆಲವು ಸಮಯದಿಂದ ಸಿನಿಮಾವಲ್ಲದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸ್ಟಾರ್ ನಟ, ರಜನಿಕಾಂತ್ ಮಾಜಿ ಅಳಿಯ ಧನುಷ್ ಜೊತೆ ಮೃಣಾಲ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು.

ಖ್ಯಾತ ದಕ್ಷಿಣ ಭಾರತೀಯ ನಟಿ ಮೃಣಾಲ್ ಠಾಕೂರ್ ಕಳೆದ ಕೆಲವು ಸಮಯದಿಂದ ಸಿನಿಮಾವಲ್ಲದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸ್ಟಾರ್ ನಟ, ರಜನಿಕಾಂತ್ ಮಾಜಿ ಅಳಿಯ ಧನುಷ್ ಜೊತೆ ಮೃಣಾಲ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. ಬಳಿಕ ನಾವಿಬ್ಬರೂ ಕೇವಲ ಸ್ನೇಹಿತರು ಎಂಬ ಸ್ಪಷ್ಟನೆಯನ್ನು ಮೃಣಾಲ್ ನೀಡಿದರು.
ಇದಾಗಿ ಸ್ವಲ್ಪ ದಿನಕ್ಕೆ ಬಿಪಾಶಾ ಬಸು ಮೈಕಟ್ಟಿನ ಬಗ್ಗೆ ಮೃಣಾಲ್ ಹಗುರವಾಗಿ ಮಾತನಾಡಿದ್ದ ಹಳೆ ವೀಡಿಯೋವೊಂದು ಸೋಷಲ್ ಮೀಡಿಯಾದಲ್ಲಿ ಮೇಲೆದ್ದು ಬಂದು ಚರ್ಚೆ ಹುಟ್ಟುಹಾಕಿತು.
‘ಸ್ನಾಯುಗಳು ಎದ್ದು ಕಾಣುವ, ಗಂಡಸಿನ ಮೈಕಟ್ಟಿನ ಹೆಣ್ಣನ್ನು ಮದುವೆಯಾಗಲು ಬಯಸುತ್ತೀರಾ? ಹಾಗಿದ್ದರೆ ಬಿಪಾಶಾ ಬಸು ಅವರನ್ನು ಮದುವೆಯಾಗಿ. ಆಕೆಗಿಂತ ನಾನು ಬಹಳ ಚೆಲುವೆ ’ ಎಂಬರ್ಥದಲ್ಲಿ ಮೃಣಾಲ್ ಈ ವೀಡಿಯೋದಲ್ಲಿ ಮಾತನಾಡಿದ್ದರು.
ಇದರಿಂದ ಸಿಡಿಸಿಡಿಯಾದ ಬಿಪಾಶಾ ಬಸು, ‘ಮಹಿಳೆ ಅಬಲೆಯಲ್ಲ, ಸಬಲೆಯಾಗಬೇಕು. ಎಲ್ಲ ಹೆಣ್ಣುಮಕ್ಕಳೂ ಸ್ನಾಯುಗಳನ್ನು ಬಲಪಡಿಸಬೇಕು. ಹೆಚ್ಚೆಚ್ಚು ಬಲಿಷ್ಠರಾಗಬೇಕು.
ಬಲಿಷ್ಠ ಸ್ನಾಯು ಹೆಣ್ಣಿನ ಬಲಹೀನತೆಯಲ್ಲ, ಅದು ಶಕ್ತಿ. ಮಹಿಳೆಯರು ಬಲಿಷ್ಠರಾಗಬಾರದು ಎಂಬ ಹಳೆಯ ಕಲ್ಪನೆಯನ್ನು ಬ್ರೇಕ್ ಮಾಡಿ ಹೊಸತನಕ್ಕೆ ತೆರೆದುಕೊಳ್ಳಿ’ ಎಂದು ಮೃಣಾಲ್ ಹೆಸರು ಹೇಳದೇ ಟಾಂಗ್ ನೀಡಿದ್ದರು.
ಇದರಿಂದ ಮುಜುಗರಕ್ಕೊಳಗಾದ ಮೃಣಾಲ್ ಇದೀಗ ತನ್ನ ಮಾತಿಗೆ ಕ್ಷಮೆ ಕೋರಿದ್ದಾರೆ. ‘ಈ ಸಂದರ್ಶನ ಮಾಡಿದಾಗ ಕೇವಲ 19 ವರ್ಷದವಳಾಗಿದ್ದೆ. ಟೀನೇಜ್ ಹುಡುಗಿಯ ಹುಡುಗಾಟದ ಸಿಲ್ಲಿ ಮಾತುಗಳವು. ಅವು ಇಷ್ಟೆಲ್ಲ ಗಂಭೀರ ಸ್ವರೂಪ ತಾಳಬಹುದು ಎಂಬ ಕಲ್ಪನೆಯೂ ಇರಲಿಲ್ಲ.
ಬಿಪಾಶಾ ಬಸು ಅವರ ಬಾಡಿ ಶೇಮಿಂಗ್ ಮಾಡುವ ಉದ್ದೇಶದಿಂದ ನಾನು ಆ ಮಾತನ್ನು ಹೇಳಲಿಲ್ಲ. ಆದರೆ ನಾನಾಡಿರುವ ಮಾತು ಖಂಡಿತಾ ತಪ್ಪು. ಇದಕ್ಕೆ ಕ್ಷಮೆ ಕೇಳುತ್ತೇನೆ’ ಎಂದು ಕ್ಷಮೆ ಯಾಚಿಸಿದ್ದಾರೆ.