Soften Old Chapatis: ಈ ವಿಧಾನವು ನಿಮ್ಮ ತಣ್ಣನೆಯ ಚಪಾತಿಯನ್ನ ಕೆಲವೇ ನಿಮಿಷಗಳಲ್ಲಿ ತುಂಬಾ ಫ್ರೆಶ್ ಆಗಿ ಮಾಡುವುದಲ್ಲದೆ, ಸಾಫ್ಟ್ ಆಗಿರಿಸುತ್ತದೆ. ಅಷ್ಟೇ ಅಲ್ಲ, ಚಪಾತಿ ಸುಡುವುದಿಲ್ಲ ಅಥವಾ ಗಟ್ಟಿಯಾಗುವುದಿಲ್ಲ. 

ನೀವು ಕೂಡ ಒಣಗಿದ, ತಣ್ಣನೆಯ ಚಪಾತಿ ತಿನ್ನಲು ಇಷ್ಟಪಡೋದಿಲ್ವಾ?. ಹಾಗೆ ಚಪಾತಿ ತಣ್ಣಗಾದಲೆಲ್ಲಾ ಪ್ರತಿ ಬಾರಿಯೂ ಅದನ್ನು ಪ್ಯಾನ್‌ನಲ್ಲಿ ಅಥವಾ ಮೈಕ್ರೋವೇವ್‌ನಲ್ಲಿ ಒಂದೊಂದೆ ಚಪಾತಿ ಬಿಸಿ ಮಾಡಲು ಬೇಜಾರಾ?. ಒಂದು ವೇಳೆ ಈ ರೀತಿ ಚಪಾತಿ ಬಿಸಿ ಮಾಡಿದ್ರೂ ಅದು ಗಟ್ಟಿಯಾಗುತ್ತದೆ ಅಥವಾ ಸುಟ್ಟಿ ಹೋಗುತ್ತದೆ ಎಂಬ ಭಯಾನಾ?. ಹಾಗಿದ್ದಲ್ಲಿ, ಪೂನಂ ದೇವ್ನಾನಿ ಎಂಬುವವರು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಚಪಾತಿ ಬಿಸಿ ಮಾಡುವ ಬಗ್ಗೆ ವಿಶಿಷ್ಟ ಮತ್ತು ಪರಿಣಾಮಕಾರಿ ಟ್ರಿಕ್ ತಿಳಿಸಿದ್ದಾರೆ ನೋಡಿ. ಅದು ನಿಮಗೆ ಖಂಡಿತವಾಗಿಯೂ ಉಪಯೋಗಕ್ಕೆ ಬರುತ್ತದೆ.

ಇದೇ ನೋಡಿ ಮುಖ್ಯವಾದ ಹಂತ

ಅಂದಹಾಗೆ ಪೂನಂ ದೇವ್ನಾನಿಯವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಆಗಾಗ್ಗೆ ಅಡುಗೆ ಮನೆಗೆ ಸಂಬಂಧಿಸಿದ ಇಂತಹ ಉಪಯುಕ್ತ ವಿಡಿಯೋಗಳನ್ನ ಶೇರ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ಚಪಾತಿ ಬಿಸಿ ಮಾಡುವ ವಿಧಾನ ತಿಳಿಸಿದ್ದು, ಈ ವಿಧಾನವು ನಿಮ್ಮ ತಣ್ಣನೆಯ ಚಪಾತಿಯನ್ನ ಕೆಲವೇ ನಿಮಿಷಗಳಲ್ಲಿ ತುಂಬಾ ಫ್ರೆಶ್ ಆಗಿ ಮಾಡುವುದಲ್ಲದೆ, ಸಾಫ್ಟ್ ಆಗಿರಿಸುತ್ತದೆ. ಅಷ್ಟೇ ಅಲ್ಲ, ಚಪಾತಿ ಸುಡುವುದಿಲ್ಲ ಅಥವಾ ಗಟ್ಟಿಯಾಗುವುದಿಲ್ಲ, ಕೇವಲ ಅದು ಹಬೆಯ ಸಹಾಯದಿಂದ ಬಿಸಿಯಾಗುತ್ತದೆ, ಥೇಟ್ ಪ್ಯಾನ್‌ನಿಂದ ತೆಗೆದಂತೆ.

ನೀವು ಮಾಡಬೇಕಾಗಿರುವುದು ಇಷ್ಟೇ...ಮೊದಲನೆಯದಾಗಿ ನೀವು ಬಿಸಿಮಾಡಲು ಬಯಸುವ ಎಲ್ಲಾ ಹಳೆಯ ಅಥವಾ ತಣ್ಣನೆಯ ಚಪಾತಿಯನ್ನ ಸ್ವಚ್ಛ ಮತ್ತು ಮೃದುವಾದ ಕಾಟನ್ ಬಟ್ಟೆಯಲ್ಲಿ ಸುತ್ತಿ. ಬಟ್ಟೆಯಲ್ಲಿ ಸುತ್ತುವುದರಿಂದ ರೊಟ್ಟಿ ತೇವಾಂಶದಿಂದ ಕೂಡಿರುತ್ತದೆ ಮತ್ತು ಅದು ಹಬೆಯ ನೇರ ಸಂಪರ್ಕಕ್ಕೆ ಬರುವುದಿಲ್ಲ. ಇದು ಬಹಳ ಮುಖ್ಯವಾದ ಹಂತವಾಗಿದೆ. ಏಕೆಂದರೆ ಇದು ರೊಟ್ಟಿ ಗಟ್ಟಿಯಾಗುವುದನ್ನು ತಡೆಯುತ್ತದೆ.

ಕುಕ್ಕರ್ ಒಳಗೆ ಇಡಿ

ಕುಕ್ಕರ್ ಒಳಗೆ ಸುಲಭವಾಗಿ ಹೊಂದಿಕೊಳ್ಳುವಂತಹ ಟಿಫಿನ್ ಬಾಕ್ಸ್‌ ತೆಗೆದುಕೊಂಡು ಬಟ್ಟೆಯಲ್ಲಿ ಸುತ್ತಿದ ರೊಟ್ಟಿಗಳನ್ನು ಬಾಕ್ಸ್‌ನಲ್ಲಿ ಇರಿಸಿ. ಉಗಿ ನೇರವಾಗಿ ಒಳಗೆ ಹೋಗದಂತೆ ಟಿಫಿನ್ ಮುಚ್ಚಳವನ್ನು ಸರಿಯಾಗಿ ಮುಚ್ಚಿ. ಈಗ ಪ್ರೆಶರ್ ಕುಕ್ಕರ್ ತೆಗೆದುಕೊಂಡು ಅದರಲ್ಲಿ ಸುಮಾರು ಒಂದು ಲೋಟ ನೀರು ಸುರಿಯಿರಿ. ಟಿಫಿನ್ ಬಾಕ್ಸ್ ಅನ್ನು ಅದರಲ್ಲಿ ಇರಿಸಿದಾಗ ಅದು ನೀರಿನಲ್ಲಿ ಮುಳುಗದಂತೆ, ಅದರ ಮೇಲೆ ಉಳಿಯುವಂತೆ ನೀರಿನ ಪ್ರಮಾಣ ಇರಬೇಕು ಎಂಬುದನ್ನು ನೆನಪಿನಲ್ಲಿಡಿ.

ಈಗ ಕುಕ್ಕರ್ ಮುಚ್ಚಳ ಹಾಕಿ ಗ್ಯಾಸ್ ಮೇಲೆ ಇರಿಸಿ. ಕುಕ್ಕರ್ ನಲ್ಲಿ ವಿಶಲ್ ಹೊಡೆಯುವವರೆಗೆ ಗ್ಯಾಸ್ ಆನ್ ಆಗಿಯೇ ಇರಬೇಕು ಎಂಬುದನ್ನು ಗಮನಿಸುವುದು ಮುಖ್ಯ. ಮೊದಲ ಸೀಟಿಯ ಸಿಗ್ನಲ್ ಬಂದ ತಕ್ಷಣ, ಅಂದರೆ ಕುಕ್ಕರ್ ನಲ್ಲಿ ಒತ್ತಡ ರೂಪುಗೊಳ್ಳುವ ಶಬ್ದ ಬಂದ ತಕ್ಷಣ, ನೀವು ಗ್ಯಾಸ್ ಆಫ್ ಮಾಡಬೇಕು.

ಬಿಸಿ ಬಿಸಿ ಚಪಾತಿ ರೆಡಿ
ಗ್ಯಾಸ್ ಆಫ್ ಮಾಡಿದ ನಂತರ, ಕುಕ್ಕರ್ ನ ಒಳಗಿನ ಉಗಿ ಸಂಪೂರ್ಣವಾಗಿ ಹೊರಬರುವಂತೆ ಕೆಲವು ನಿಮಿಷಗಳ ಕಾಲ ಕುಕ್ಕರ್ ಅನ್ನು ಬಿಡಿ. ನಂತರ ಕುಕ್ಕರ್ ನ ಮುಚ್ಚಳವನ್ನು ಎಚ್ಚರಿಕೆಯಿಂದ ತೆರೆಯಿರಿ. ಈಗ ಬಿಸಿ ಟಿಫಿನ್ ಬಾಕ್ಸ್ ಅನ್ನು ಹೊರತೆಗೆಯಿರಿ. ತಣ್ಣಗಾದ ಮತ್ತು ಒಣಗಿದ ರೊಟ್ಟಿಗಳು ಈಗಷ್ಟೇ ತಯಾರಿಸಿದ ಚಪಾತಿಯಂತೆ ತುಂಬಾ ಮೃದುವಾಗಿ ಬಿಸಿಯಾಗಿರುವುದನ್ನು ನೀವು ನೋಡಬಹುದು.

ವಾಸ್ತವವಾಗಿ ಚಪಾತಿಯನ್ನ ಟಿಫಿನ್‌ ಬಾಕ್ಸ್‌ನಲ್ಲಿ ಹಾಕಿ ಕುಕ್ಕರ್‌ನೊಳಗೆ ಹಬೆಯಲ್ಲಿ ಇಟ್ಟಾಗ, ಟಿಫಿನ್‌ನ ಒಳಗಿನ ಗಾಳಿ ಬಿಸಿಯಾಗುತ್ತದೆ ಮತ್ತು ಈ ಬಿಸಿ ಗಾಳಿಯು ನಿಧಾನವಾಗಿ ಚಪಾತಿಯನ್ನ ಬಿಸಿ ಮಾಡುತ್ತದೆ. ಅವುಗಳನ್ನು ಬಟ್ಟೆಯಲ್ಲಿ ಸುತ್ತುವ ಮೂಲಕ, ಚಪಾತಿ ತಮ್ಮ ತೇವಾಂಶವನ್ನು ಉಳಿಸಿಕೊಳ್ಳುತ್ತವೆ ಮತ್ತು ಗಟ್ಟಿಯಾಗುವುದಿಲ್ಲ. ಆದರೆ ಮೈಕ್ರೋವೇವ್‌ನಲ್ಲಿ, ಚಪಾತಿ ಹೆಚ್ಚಾಗಿ ಗಟ್ಟಿಯಾಗುತ್ತವೆ ಮತ್ತು ಪ್ಯಾನ್‌ನಲ್ಲಿ ಬಿಸಿ ಮಾಡಿದರೆ ಸುಡುವ ಭಯವಿರುತ್ತದೆ.

ಇಲ್ಲಿದೆ ನೋಡಿ ವಿಡಿಯೋ

View post on Instagram