ಮೂರು ಪ್ಯಾಕೆಟ್ ಇನ್ಸ್ಟೆಂಟ್ ನೂಡಲ್ಸ್ ತಿಂದು 13 ವರ್ಷದ ಬಾಲಕನೊಬ್ಬ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನು? ಇದು ಯಾಕಿಷ್ಟು ಡೇಂಜರ್?
ಇನ್ಸ್ಟೆಂಟ್ ನೂಡಲ್ಸ್ ಎನ್ನುವುದು ಬಹಳ ಜನರ ಅಚ್ಚುಮೆಚ್ಚಿನ ಆಹಾರವಾಗಿಬಿಟ್ಟಿದೆ. ಅದರಲ್ಲಿಯೂ ಸೋಮಾರಿಗಳಿಗಾಗಿಯೇ ಹೇಳಿ ಮಾಡಿಸಿದ ಎರಡು ನಿಮಿಷಗಳ ಆಹಾರವಿದು. ಹಸಿವೆ ಆದಾಗ ಹೋಗಿ ಇದನ್ನು ಒಡೆದು ಒಂದೈದು ನಿಮಿಷ ಬೇಯಿಸಿ ತಿಂದರೆ ಮುಗಿಯಿತಲ್ಲ, ಅದೇ ಕಾರಣಕ್ಕೆ ಇದು ಹಲವರಿಗೆ ಅದರಲ್ಲಿಯೂ ಹೆಣ್ಣುಮಕ್ಕಳಿಗೆ ಇಷ್ಟವಾಗ ಆಹಾರವಾಗಿದೆ. ಇದರ ರುಚಿ ಕೂಡ ಹಲವರನ್ನು ಆಕರ್ಷಿಸುತ್ತದೆ. ಇದೇ ಕಾರಣಕ್ಕೆ 5-10 ರೂಪಾಯಿ ನೂಡಲ್ಸ್ ಅನ್ನು ಹೋಟೆಲ್ಗಳಲ್ಲಿ 100-200 ರೂಪಾಯಿಗಳಿಗೂ ಮಾರುವುದು ಇದೆ. ಆದರೂ ಜನ ಅದನ್ನು ಬಾಯಿಚಪ್ಪರಿಸಿ ತಿನ್ನುತ್ತಾರೆ. ಹಿಂದೊಮ್ಮೆ ಮ್ಯಾಗಿ ನೂಡಲ್ಸ್ನಲ್ಲಿ ವಿಷ ಪದಾರ್ಥ ಇರುವುದು ಖಚಿತವಾಗಿ ಅದನ್ನು ಬ್ಯಾನ್ ಮಾಡಿದ್ದು ನೆನಪಿರಬಹುದು. ಆದರೆ ಕೊನೆಗೆ ಅಷ್ಟೊಂದು ವಿಷ ಹಾಕದೇ ಹೊಸ ಪ್ಯಾಕ್ ರೆಡಿ ಮಾಡಿ ಮಾರುಕಟ್ಟೆಗೆ ಬಿಟ್ಟಾಗಿದೆ.
ಅದೇನೇ ಇರಲಿ ಬಿಡಿ. ಆದರೆ ಇದೀಗ ಶಾಕಿಂಗ್ ವಿಷ್ಯವೊಂದು ಬಯಲಿಗೆ ಬಂದಿದೆ. ಅದೇನೆಂದರೆ, ಮೂರು ಪ್ಯಾಕೆಟ್ ನೂಡಲ್ಸ್ ತಿಂದು 13 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಈ ನೂಡಲ್ಸ್ನಲ್ಲಿ ಇರುವ ಟೇಸ್ಟರ್ ವಿಷಕಾರಕ ಎನ್ನುವುದು ಇದಾಗಲೇ ಹಲವು ಬಾರಿ ಸಾಬೀತಾಗಿದ್ದು ಇದೆ. ಆದರೆ ಈ ಪ್ರಕರಣದಲ್ಲಿ ಬಾಲಕ ಮೂರು ಪ್ಯಾಕೆಟ್ ಬೇಯಿಸದ ನೂಡಲ್ಸ್ ತಿಂದಿದ್ದಾನೆ. ಹೀಗೆ ತಿಂದ ಒಂದೇ ಗಂಟೆಯಲ್ಲಿ ಪ್ರಾಣ ಬಿಟ್ಟಿದ್ದಾನೆ. ಈ ಘಟನೆ ನಡೆದಿರುವುದು ಈಜಿಪ್ಟ್‌ನಲ್ಲಿ. ಬಾಲಕ ನೂಡಲ್ಸ್ ತಿಂದ ಒಂದು ಗಂಟೆಯೊಳಗೆ ತೀವ್ರ ಹೊಟ್ಟೆ ನೋವು, ಬೆವರು ಮತ್ತು ವಾಂತಿ ಉಂಟಾಗಿದೆ. ಅವನನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೆ ಅದಾಗಲೇ ಆತ ಮೃತಪಟ್ಟಿದ್ದಾನೆ.
ಆರಂಭದಲ್ಲಿ, ನೂಡಲ್ಸ್ ವಿಷಪೂರಿತವಾಗಿದೆ ಅಥವಾ ಅವಧಿ ಮೀರಿದೆ ಎಂದು ಅಧಿಕಾರಿಗಳು ಶಂಕಿಸಿದರು. ಬಳಿಕ ಅವುಗಳನ್ನು ಮಾರಾಟ ಮಾಡಿದ ಅಂಗಡಿಯನನ್ನು ಪ್ರಶ್ನಿಸಲಾಯಿತು. ಪ್ರಯೋಗಾಲಯ ಪರೀಕ್ಷೆಗಳು ಮತ್ತು ಶವಪರೀಕ್ಷೆಯ ಬಳಿಕ, ಇದನ್ನು ತಿಂದ ಬಳಿಕ ಆ ಕಚ್ಚಾ ನೂಡಲ್ಸ್ ತೀವ್ರವಾದ ಕರುಳಿನ ಅಡಚಣೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಇನ್‌ಸ್ಟಂಟ್ ನೂಡಲ್ಸ್ ಅನ್ನು ಕಚ್ಚಾ ಸೇವಿಸಿದಾಗ, ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ ಮತ್ತು ಜೀರ್ಣಾಂಗದಲ್ಲಿ ನಿರ್ಜಲೀಕರಣ, ಅಡಚಣೆಗಳು ಅಥವಾ ಸೋಂಕುಗಳಿಗೆ ಕಾರಣವಾಗಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.
ಸಾವು ಕೇವಲ ಕಚ್ಚಾ ನೂಡಲ್ಸ್ ಮಾತ್ರವಲ್ಲದೇ ಇದನ್ನು ಪದೇ ಪದೇ ತಿನ್ನುವುದಿಂದ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಇನ್ನು ಭಾರತದ ವಿಷಯ ಹೇಳುವುದಾದರೆ, ಭಾರತವು ವಿಶ್ವದಲ್ಲಿಯೇ ನಾಲ್ಕನೇ ಅತಿದೊಡ್ಡ ಇನ್ಸ್ಟೆಂಟ್ ನೂಡಲ್ಸ್ ಗ್ರಾಹಕ ರಾಷ್ಟ್ರವಾಗಿದೆ. ವಿಶ್ವ ತ್ವರಿತ ನೂಡಲ್ಸ್ ಅಸೋಸಿಯೇಷನ್ (WINA) ಪ್ರಕಾರ, 2023 ರ ವೇಳೆಗೆ ನಮ್ಮ ದೇಶದಲ್ಲಿ ತ್ವರಿತ ನೂಡಲ್ಸ್ ಸೇವನೆಯು 8.7 ಬಿಲಿಯನ್ ನೂಡಲ್ಸ್‌ಗಳನ್ನು ತಲುಪಲಿದೆ.
